An unconventional News Portal.

ಜೈಲು ಸೇರ್ತಾರಾ ರವಿ ಬೆಳೆಗೆರೆ?: ಹಕ್ಕುಚ್ಯುತಿ ಕಾನೂನಿನ ಬಗ್ಗೆ ಒಂದಿಷ್ಟು ಮಾಹಿತಿ…

ಜೈಲು ಸೇರ್ತಾರಾ ರವಿ ಬೆಳೆಗೆರೆ?: ಹಕ್ಕುಚ್ಯುತಿ ಕಾನೂನಿನ ಬಗ್ಗೆ ಒಂದಿಷ್ಟು ಮಾಹಿತಿ…

ಪತ್ರಕರ್ತ, ಖ್ಯಾತ ಲೇಖಕ ರವಿ ಬೆಳೆಗೆರೆ ಜೈಲಿಗೆ ಹೋಗಲಿದ್ದಾರಾ? ಹೀಗೊಂದು ಸುದ್ದಿ ಸೋಮವಾರವಿಡೀ ಓಡಾಡಿತು. ಸಚಿವ ಜಾರ್ಜ್ ರಾಜೀನಾಮೆ ಸುದ್ದಿ ಹೊರಬೀಳುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ, ಒಂದೆರಡು ನ್ಯೂಸ್ ಪೋರ್ಟಲ್ಗಳಲ್ಲಿ ರವಿ ಬೆಳೆಗರೆ ವಿರುದ್ಧ ಹಕ್ಕು ಬಾಧ್ಯತಾ ಸಮಿತಿ ಜೈಲು ಶಿಕ್ಷೆಯನ್ನು ಆದೇಶಿಸಿದೆ ಎಂದು ಸುದ್ದಿಯಾಯಿತು. ಆದೇಶ ನೀಡಲು ಹಕ್ಕು ಬಾಧ್ಯತಾ ಸಮಿತಿ ಏನು ನ್ಯಾಯಾಲಯನಾ? ಸರಕಾರನಾ? ಅದಕ್ಕೆ ಹಕ್ಕಿದೆಯಾ? ಇಷ್ಟಕ್ಕೂ ಹಕ್ಕು ಚ್ಯುತಿ ಅಂದರೇನು? ಈ ಎಲ್ಲಾ ಪ್ರಶ್ನೆಗಳಿಗಿಲ್ಲಿ ಉತ್ತರ ಇದೆ.

ಶಾಸಕರೊಬ್ಬರ ವಿರುದ್ದ ರವಿ ಬೆಳೆಗೆರೆ ತಮ್ಮ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಇದರಿಂದ ತನ್ನ ಹಕ್ಕಿಗೆ ಚ್ಯುತಿಯಾಗಿದೆ ಎಂದು ಆರೋಪಿಸಿ ಅವರು ಸ್ಫಿಕರ್ ಗೆ ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆಯನ್ನು ಸ್ಪೀಕರ್ ‘ಹಕ್ಕು ಭಾಧ್ಯತಾ ಸಮಿತಿ’ಗೆ ವರ್ಗಾಯಿಸಿದರು. ಪ್ರಕರಣದ ತನಿಖೆ ನಡೆಸಿದ ಕೆ. ಬಿ. ಕೋಳಿವಾಡ್ ನೇತೃತ್ವದ ಸಮಿತಿ, ಶಿಫಾರಸ್ಸು ಪ್ರತಿಯನ್ನು ಸ್ಪೀಕರ್ಗೆ (ಸದ್ಯ ಕೋಳಿವಾಡ್ ಅವರೇ ಆ ಸ್ಥಾನದಲ್ಲಿದ್ದಾರೆ) ಸಲ್ಲಿಸಿದೆ. ‘ಹಕ್ಕು ಬಾಧ್ಯತಾ ಸಮಿತಿ’ ರವಿ ಬೆಳಗೆರೆಗೆ 10 ಸಾವಿರ ರೂಪಾಯಿ ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆಗೆ ಶಿಫಾರಸ್ಸು ಮಾಡಿದೆ. ದಂಡ ಕಟ್ಟಲು ವಿಫಲವಾದಲ್ಲಿ ಆರು ತಿಂಗಳ ಹೆಚ್ಚುವರಿ ಸಜೆ ವಿಧಿಸುವಂತೆ ಸಮಿತಿ ಶೀಫಾರಸ್ಸಿನಲ್ಲಿ ತಿಳಿಸಿದೆ. ಇದೀಗ ಸಮಿತಿಯ ತೀರ್ಮಾನವನ್ನು ಸ್ಪೀಕರ್ ಬಳಿ ವಿನಂತಿ ಮಾಡಿಕೊಳ್ಳುವ ಅವಕಾಶ ರವಿ ಬೆಳೆಗೆರೆಗಿದೆ. ಇದಕ್ಕಿಂತ ಹೆಚ್ಚಾಗಿ ಇದು ಸದನದಲ್ಲಿ ತೀರ್ಮಾನವಾಗಬೇಕಷ್ಟೆ.  ಹಾಗಾದರೆ ರವಿ ಬೆಳೆಗೆರೆ ಜೈಲು ಪಾಲೋಗೋದು ಖಚಿತನಾ? ಇಲ್ಲ ಎನ್ನುತ್ತಾರೆ ಕಾನೂನು ಪರಿಣತರು.

ಏನಿದು ಹಕ್ಕುಚ್ಯುತಿ?:

ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿ ತಮ್ಮ ಹಕ್ಕಿಗೆ ಚ್ಯುತಿ ಬಂದಿದೆ ಎಂದು ಆರೋಪಿಸಿ ವಿಧಾನಸಭೆಯಲ್ಲಿ ನ್ಯಾಯ ಒದಗಿಸುವಂತೆ ಕೋರಿಕೊಳ್ಳುವುದೇ ಹಕ್ಕುಚ್ಯುತಿ. ಸುಳ್ಳು ಆರೋಪ ಮಾಡಿದಾಗ, ತಪ್ಪು ಮಾಹಿತಿ ನೀಡಿದಾಗ ಹಕ್ಕುಚ್ಯುತಿ ಮಂಡಿಸಬಹುದು. ಇದಕ್ಕಾಗಿ ಕಲಾಪ ಆರಂಭಕ್ಕೆ ಮುನ್ನ ಕಾರ್ಯದರ್ಶಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಬೇಕು. ಇದನ್ನು ಕಲಾಪದ ವೇಳೆ ಗಮನಿಸಿದ ನಂತರ ಅಗತ್ಯ ಅನಿಸಿದರೆ ಸ್ಪಿಕರ್ ಅದ್ನು ‘ಹಕ್ಕು ಭಾಧ್ಯತಾ ಸಮಿತಿ’ಗೆ ಕಳುಹಿಸಿಕೊಡುತ್ತಾರೆ.

ಶಾಸಕರೊಬ್ಬರ ನೇತೃತ್ವದಲ್ಲಿ ಹಕ್ಕು ಬಾಧ್ಯತಾ ಸಮಿತಿ ನೇಮಕ ಮಾಡಲಾಗಿರುತ್ತದೆ. ಇದರಲ್ಲಿ ಶಾಸಕರೊಬ್ಬರು ಅಧ್ಯಕ್ಷರಾದರೆ ಉಳಿದ 8-12 ಜನ ಶಾಸಕರು ಸದಸ್ಯರಾಗಿರುತ್ತಾರೆ. ಹಕ್ಕುಚ್ಯುತಿ ಪ್ರಕರಣಗಳಲ್ಲಿ ತನಿಖೆ ನಡೆಸುವುದು ಇದೇ ಸಮಿತಿ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಹಕ್ಕು ಭಾಧ್ಯತಾ ಸಮಿತಿ ಅಂತಿಮ ವರದಿಯನ್ನು ಸ್ಪೀಕರ್ಗೆ ಸಲ್ಲಿಸುತ್ತದೆ. ವರದಿಯಲ್ಲಿ ಶಿಫಾರಸು ಮಾಡುವುದು ಒಂದು ಪ್ರಮುಖ ಭಾಗ. ಕೊನೆಗೆ ಅದನ್ನು ಸದನದ ಮುಂದೆ ಇಟ್ಟು ಒಪ್ಪಿಗೆ ಪಡೆಯಬೇಕು.

ಕ್ರಮಗಳೇನು?

ಹಕ್ಕು ಚ್ಯುತಿ ಮಾಡಿದ ಹೆಚ್ಚಿನ ಪ್ರಕರಣದಲ್ಲಿ ಕರೆಸಿ ವಾಗ್ದಂಡನೆ ನೀಡಲಾಗುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಸ್ಪೀಕರ್ ಕಚೇರಿಗೆ ಕರೆಸಿ ಎಚ್ಚರಿಕೆ ನೀಡಲೂಬಹುದು. ಇಲ್ಲವೇ ಮುಂದೆ ಅಂಥ ತಪ್ಪಾಗದಂತೆ ಎಚ್ಚರ ವಹಿಸುತ್ತೇನೆ ಎಂದು ಸದನದ ಮುಂದೆ ಕ್ಷಮೆಯನ್ನೂ ಕೋರಬಹುದು. ಇದನ್ನು ಧ್ವನಿ ಮುದ್ರಿಸಲಾಗುತ್ತದೆ.

ವಿಧಾನ ಮಂಡಲದ ಇತಿಹಾಸ ತೆಗೆದು ನೋಡಿದರೆ ಕ್ಷಮೆ ಕೇಳಿದ,  ತಲೆ ತಗ್ಗಿಸಿದ ಪತ್ರಕರ್ತರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಆದರೆ ಯಾರನ್ನೂ ಇವತ್ತಿನವರೆಗೆ ಜೈಲಿಗೆ ಕಳುಹಿಸಿದ ಉದಾಹರಣೆಗಳಿಲ್ಲ. ಎಷ್ಟೋ ಬಾರಿ ‘ಹಕ್ಕುಚ್ಯುತಿ’ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಮಾಧ್ಯಮಗಳನ್ನು ಶಾಸಕರು ಹೆದರಿಸುತ್ತಾ ತಮ್ಮ ರಕ್ಷಣೆಗಾಗಿ ಬಳಸುವುದಿದೆ.

ಅಂದಹಾಗೆ ಹಕ್ಕುಚ್ಯುತಿ ಕಾನೂನು ಕೇವಲ ಶಾಸಕರ ವಿರುದ್ಧ ಬರೆದ ಪತ್ರಿಕೆಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ವಿರೋಧ ಪಕ್ಷದ ನಾಯಕರಿಂದ ಹಿಡಿದು ಸ್ವಪಕ್ಷ ನಾಯಕರವರಗೆ ಎಲ್ಲರಿಗೂ ಅನ್ವಿಸುತ್ತದೆ.

ಹಕ್ಕುಚ್ಯುತಿಯ ಬಗ್ಗೆ ಉದಾಹರಣೆ ನೀಡುವುದಾದರೆ, 2004ರ ಜುಲೈ 20ರ ಕರಾವಳಿಯಿಂದ ಪ್ರಕಟವಾಗುವ ಪತ್ರಿಕೆಯೊಂದು ಹೀಗೆ ಬರೆದಿತ್ತು. “40 ಲಕ್ಷ ರು ಹಣ ಪಡೆದು ಬ್ರಹ್ಮಾವರ ಶಾಸಕ ಕೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ಗೆ ಮತ,” ಎಂಬುದಾಗಿ ಅದು ಪ್ರಕಟಿಸಿತ್ತು. ಇದರ ವಿರುದ್ಧ ಹಕ್ಕು ಚ್ಯುತಿಯನ್ನು ಮಂಡಿಸಲಾಗಿತ್ತು. ಕೊನೆಗೆ ಪತ್ರಿಕೆ ಸಂಪಾದಕರು ಹಾಜರಾಗಿ ಕ್ಷಮೆ ಕೋರಿದ್ದರು.

ಸದ್ಯ ಬೆಳಗೆರೆ ಪ್ರಕರಣ ಕೂಡ ಅಷ್ಟೆ. ಹಕ್ಕಿಗೆ ಚ್ಯುತಿ ಆಗಿದೆ ಎಂದು ದೂರು ನೀಡಲಾಗಿದೆ. ಅದನ್ನು ಸಮಿತಿ ಪರಿಶೀಲನೆ ನಡೆಸಿದೆ. ಜತೆಗೆ ಜೈಲು ಶಿಕ್ಷ ಹಾಗೂ ದಂಡವನ್ನು ಶಿಫಾರಸು ಮಾಡಿದೆ. ಇದರ ಬಗ್ಗೆ ಅಧಿವೇಶನಲ್ಲಿ ಶಾಸಕರು ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ, ಎಂಬುದರ ಮೇಲೆ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕರ ಭವಿಷ್ಯ ನಿಂತಿದೆ. ಈ ವರೆಗೆ ಹಕ್ಕು ಚ್ಯುತಿ ವಿಚಾರವಾಗಿ ಯಾರನ್ನೂ ಬಂಧಿಸಲಾಗಿಲ್ಲ ಎಂಬ ಇತಿಹಾಸ ನಮ್ಮಲ್ಲಿರುವುದರಿಂದ ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಂತೂ ಕಾಣಿಸುತ್ತಿಲ್ಲ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top