An unconventional News Portal.

ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

ನಿರೂಪಕ ವರ್ಸಸ್ ಮಾಜಿ ಮುಖ್ಯಮಂತ್ರಿ: ಬ್ಲಾಕ್‌ಮೇಲ್ ಆರೋಪ; ವಿಶ್ವಾಸಾರ್ಹತೆಯ ಲೋಪ!

ರಾಜ್ಯ ವಿಧಾನಸಭೆ ಚುನಾವಣೆ ಹಾಗೂ ನಂತರದ ದಿನಗಳಲ್ಲಿ ಕನ್ನಡ ಸುದ್ದಿವಾಹಿನಿಗಳು ವಿಶ್ವಾಸಾರ್ಹತೆಯ ಕೊರತೆಯನ್ನು ಎದುರಿಸಲಿವೆಯಾ? ಸದ್ಯ, ಈ ಕುರಿತು ಮುನ್ಸೂಚನೆಯೊಂದು ಸಿಕ್ಕಿದೆ.

ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ, ಟಿವಿ9 ಕರ್ನಾಟಕ ವಾಹಿನಿಯ ನಿರೂಪಕ ರಂಗನಾಥ್ ಭಾರದ್ವಾಜ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನು ನಡೆಸಿರುವ ಅವರು, “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಪಕ್ಷದ ಅಭ್ಯರ್ಥಿಯೊಬ್ಬರಿಗೆ ರಂಗನಾಥ್ ಭಾರದ್ವಾಜ್ ಬೆದರಿಕೆ ಹಾಕಿರುವ ವಿಡಿಯೋ ಇದೆ,” ಎಂಬ ಬಾಂಬ್‌ ಹಾಕಿದ್ದಾರೆ.

ಹೀಗೆ, ಮುಖ್ಯವಾಹಿನಿಯ ಮಾಧ್ಯಮವೊಂದರ ಪ್ರಮುಖ ನಿರೂಪಕರ ವಿರುದ್ಧ ಮಾಜಿ ಮುಖ್ಯಮುಂತ್ರಿ ಮಾಡಿರುವ ಗಂಭೀರ ಆರೋಪ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತಿದೆ.

ಕನ್ನಡದ ಮಾಧ್ಯಮ ಲೋಕ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಅದರಲ್ಲೂ ದೃಶ್ಯ ಮಾಧ್ಯಮ, ವಿಶೇಷವಾಗಿ ಸುದ್ದಿ ಮಾಧ್ಯಮಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ 13 ಚಾನಲ್‌ಗಳಿವೆ. ಇವುಗಳಲ್ಲಿ ಕೆಲವು ಕಾರ್ಯಚರಣೆ ಸ್ಥಗಿತಗೊಳಿಸಿವೆ. ಚುನಾವಣೆ ವೇಳೆಗೆ ಇನ್ನೂ ಕನಿಷ್ಟ ಮೂರು ಹೊಸ ವಾಹಿನಿಗಳು ಸೇರ್ಪಡೆಯಾಗುವ ಸಾಧ್ಯತೆ ಇವೆ. ಆದರೆ ಸಾಂದ್ರತೆ ಹೆಚ್ಚುತ್ತಿರುವ ಹೊತ್ತಿಗೆ ವಿಶ್ವಾಸಾರ್ಹತೆಯ ಕೊರತೆಯೂ ಕಾಡಲಾರಂಭಿಸಿದೆ.

ಸಾಂಸ್ಥಿಕವಾಗಿ ವಾಹಿನಿಗಳು ವಿಶ್ವಾಸಾರ್ಹತೆಯನ್ನು, ವಸ್ತುನಿಷ್ಟತೆಯನ್ನು ಕಳೆದುಕೊಳ್ಳುತ್ತಿರುವ ಹಿಂದೆ ಅವುಗಳ ಔದ್ಯಮಿಕ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಇನ್ನೊಂದೆಡೆ, ಮಾಧ್ಯಮಗಳಲ್ಲಿ ಕೆಲಸ ಮಾಡುವವರ ವೈಯಕ್ತಿಕ ಕ್ರೆಡಿಬಿಲಿಟಿ ಕೂಡ ಪರೀಕ್ಷೆಗೆ ಒಳಗಾಗುತ್ತಿರುವ ಸಮಯ ಇದು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಗಂಭೀರವಾದ ಆರೋಪ ಮಾಡಿದ್ದಾರೆ. ನಿರೂಪಕ ರಂಗನಾಥ್ ಭಾರದ್ವಾಜ್ ಅವರ ಮೇಲೆ ಮಾಡಿರುವ ಬ್ಲಾಕ್‌ಮೇಲ್ ಆರೋಪ ಚರ್ಚೆಗೆ ಗ್ರಾಸವಾಗಿದೆ.

ನಡೆದಿದ್ದೇನು?: 

ಕುಮಾರಸ್ವಾಮಿ ಆರೋಪ ಮಾಡಲು ಪ್ರಮುಖ ಕಾರಣವಾಗಿದ್ದು ಎರಡು ದಿನಗಳ ಹಿಂದೆ ಟಿವಿ9 ಕರ್ನಾಟಕದಲ್ಲಿ ನಡೆದ ಒಂದು ಪ್ಯಾನಲ್ ಚರ್ಚೆ. ಇದನ್ನು ನಡೆಸಿಕೊಟ್ಟವರು ರಂಗನಾಥ್ ಭಾರದ್ವಾಜ್. ಉತ್ತರ ಕನ್ನಡದಲ್ಲಿ ನಡೆದ ಕೋಮು ಘರ್ಷಣೆ ಹಿನ್ನೆಲೆಯಲ್ಲಿ ನಡೆದ ಚರ್ಚೆಯನ್ನು ಕುಮಾರಸ್ವಾಮಿ ಕಾರಣಕ್ಕೆ ಅರ್ಧ ಗಂಟೆ ಹೆಚ್ಚಿಗೆ ನಡೆಸಲಾಯಿತು ಎಂದು ವಾಹಿನಿ ಮೂಲಗಳು ಹೇಳುತ್ತವೆ.  ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ, ಗಲಭೆಯ ಆಚೆಗೆ ಪ್ರತ್ಯೇಕ ವಿಚಾರವೊಂದನ್ನು ಪ್ರಸ್ತಾಪಿಸಲಾಗಿದೆ. ಇದು ಲೈವ್‌ನಲ್ಲಿದ್ದ ಕುಮಾರಸ್ವಾಮಿ ಅವರಿಗೆ ಇರುಸು ಮುರುಸು ತಂದಿದೆ. ಅವರು ಕಿವಿಗೆ ಹಾಕಿದ್ದ ಇಯರ್‌ ಫೋನ್‌ ಹಾಗೂ ಮೈಕ್‌ ಕಳಚಿ ಬಿಸಾಕಿದ್ದಾರೆ. ಈ ಸಮಯದಲ್ಲಿ ಅವರು ಅವ್ಯಾಚ್ಯ ಶಬ್ಧವೊಂದನ್ನು ಬಳಸಿ, ವಾಹಿನಿಯನ್ನೂ ಹಾಗೂ ನಿರೂಪಕ ರಂಗನಾಥ್ ಅವರನ್ನು ಟೀಕಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.

“ಸಂವಾದಲ್ಲಿ ಅರ್ಧಕ್ಕೆ ಹೊರಬಂದೆ. ಈ ಸಂದರ್ಭದಲ್ಲಿ ನಾನಾಡಿದ ಆಕ್ಷೇಪಾರ್ಹ ಮಾತನ್ನು ರೆಕಾರ್ಡ್‌ ಮಾಡಿಕೊಂಡು ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಮಾಡಿದ್ದಾರೆ. ಇದರಿಂದ ನನ್ನ ಘನತೆಗೆ ಕುಂದುಂಟಾಗಿದೆ. ನನ್ನನ್ನು ಸರ್ವನಾಶ ಮಾಡುವ ಉದ್ದೇಶ ಇದರ ಹಿಂದಿತ್ತು,” ಎಂದು ನಂತರ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಇದಕ್ಕಾಗಿ ಕ್ರಿಮಿನಲ್ ಮೊಕದ್ದಮೆಯನ್ನೂ ದಾಖಲಿಸುವುದಾಗಿ ಅವರು ಹೇಳಿದ್ದಾರೆ.

ಸ್ವತಃ ಸುದ್ದಿವಾಹಿನಿಯೊಂದರ ಮಾಲೀಕರು ಆಗಿರುವ ಕುಮಾರಸ್ವಾಮಿ ಹೀಗೆ ಖಾಸಗಿ ವಾಹಿನಿ ಚರ್ಚೆಯಿಂದ ಹೊರಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಮೂರು ವರ್ಷಗಳ ಹಿಂದೆ, ಕೆಪಿಎಸ್‌ಸಿ ವಿಚಾರದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ‘ಸುವರ್ಣ ವಾಹಿನಿ’ಯಿಂದ ಅವರು ಅರ್ಧಕ್ಕೆ ಹೊರಬಂದಿದ್ದರು. ಆ ಸಮಯದಲ್ಲಿ ವಾಹಿನಿಯ ಸಂಪಾದಕರಾಗಿದ್ದ ಅನಂತ ಚಿನಿವಾರ್ ಹಾಗೂ ಚರ್ಚೆಯನ್ನು ನಡೆಸಿಕೊಟ್ಟಿದ್ದ ಹಿರಿಯ ಪತ್ರಕರ್ತ ಲಕ್ಷ್ಮಣ್ ಹೂಗಾರ್ ನಂತರದ ದಿನಗಳಲ್ಲಿ ವಾಹಿನಿಯಿಂದ ಹೊರಬಿದ್ದಿದ್ದರು. ಇದಕ್ಕೆ ಪ್ಯಾನಲ್ ಚರ್ಚೆಯೇ ಕಾರಣವಾಗಿತ್ತು ಎಂದು ಸುದ್ದಿ ಹರಡಿತ್ತು.

ಪರಿಣಾಮಗಳೇನು?:

ಈ ಬಾರಿಯೂ ಕುಮಾರಸ್ವಾಮಿ ಚರ್ಚೆಯನ್ನು ಅರ್ಧಕ್ಕೆ ನಿಲ್ಲಿಸಿ ಹೊರನಡೆದಿದ್ದಾರೆ. ಅಷ್ಟೆ ಅಲ್ಲ, ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಗಂಭೀರ ಆರೋಪವನ್ನು ನಿರೂಪಕರ ಮೇಲೆ ಮಾಡಿದ್ದಾರೆ. ರಂಗನಾಥ್ ಭಾರದ್ವಾಜ್ ಕೆಲವು ತಿಂಗಳ ಹಿಂದೆ ನ್ಯೂಸ್‌ 18 ಕನ್ನಡದಿಂದ ಹೊರಬಿದ್ದವರು. ನಂತರ ಅವರೇ ಹೊಸ ವಾಹಿನಿಯೊಂದನ್ನು ನಿರ್ಮಿಸಲಿದ್ದಾರೆ ಎಂಬ ಸುದ್ದಿಯಾಗಿತ್ತು. ಆದರೆ, ಟಿವಿ 9 ಕರ್ನಾಟದಲ್ಲಿ ನಡೆದ ಬದಲಾವಣೆಗಳ ನಂತರ ಅವರು ಟಿವಿ9 ಕರ್ನಾಟಕಕ್ಕೆ ಮರಳಿದ್ದಾರೆ.

ಕುಮಾರಸ್ವಾಮಿ ಆರೋಪದ ಹಿನ್ನೆಲೆಯಲ್ಲಿ ರಂಗನಾಥ್ ಅವರನ್ನು ಸಂಪರ್ಕಿಸಲು ‘ಸಮಾಚಾರ’ ಪ್ರಯತ್ನಿಸಿತಾದರೂ, ಸಂಪರ್ಕ ಸಾಧ್ಯವಾಗಲಿಲ್ಲ.

ಮುಂಬರುವ ವಿಧಾನಸಭೆ ಚುನಾವಣೆ ಹಿಂದೆಂದಿಗಿಂತೂ ಹೆಚ್ಚು ಮಾಧ್ಯಮ ಕೇಂದ್ರಿತವಾಗುವುವ ಸಾಧ್ಯತೆಗಳಿವೆ. ಸಾಮಾಜಿಕ ಜಾಲತಾಣಗಳ ಬೆಳವಣಿಗೆ ಹಿನ್ನೆಲೆಯಲ್ಲಿ ಪರ್ಯಾಯ ಮಾಧ್ಯಮಗಳ ಪ್ರಭಾವವೂ ಹೆಚ್ಚಿರಲಿದೆ. ಇಂತಹ ಸಮಯದಲ್ಲಿ ಮುಖ್ಯವಾಹಿನಿಯ ನಿರೂಪಕರೊಬ್ಬರ ಮೇಲೆ ಮಾಜಿ ಮುಖ್ಯಮಂತ್ರಿಯೊಬ್ಬರು ಮಾಡಿರುವ ಗಂಭೀರ ಆರೋಪ ಸಹಜವಾಗಿಯೇ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುತ್ತಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯ ಸುದ್ದಿ ಮಾಧ್ಯಮಗಳು ಎದುರಿಸುವ ಟೀಕೆಗಳಿಗೆ ಮುನ್ನಡಿಯಂತೆ ಕಾಣಿಸುತ್ತಿದೆ.

Leave a comment

Top