An unconventional News Portal.

ಪಾಕಿಸ್ತಾನ ಮಾಧ್ಯಮಗಳಲ್ಲಿ ‘ರಮ್ಯಾ ವಿವಾದ ದರ್ಶನ’; Thanks to ಸಂಘಪರಿವಾರ!

ಪಾಕಿಸ್ತಾನ ಮಾಧ್ಯಮಗಳಲ್ಲಿ ‘ರಮ್ಯಾ ವಿವಾದ ದರ್ಶನ’; Thanks to ಸಂಘಪರಿವಾರ!

ಪ್ರಚಾರ; ಅದು ನೆಗೆಟಿವ್ ಅಥವಾ ಪಾಸಿಟಿವ್, ಯಾವುದೇ ಇರಲಿ. ಪ್ರಚಾರ ಪ್ರಚಾರನೇ ಎಂದುಕೊಳ್ಳುವವರು ರಾಜಕಾರಣಿಗಳು.

ಇತ್ತೀಚೆಗೆ ಸಿನೆಮಾ ರಂಗದಿಂದ ರಾಜಕೀಯ ಅಖಾಡಕ್ಕಿಳಿದ ರಮ್ಯಾ ಅಲಿಯಾಸ್ ದಿವ್ಯಾ ಸ್ಪಂದನ ಹಲವು ದಿನಗಳ ನಂತರ ಜಾಗತಿಕ ಸುದ್ದಿಕೇಂದ್ರಕ್ಕೆ ಬಂದು ನಿಂತಿದ್ದಾರೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಹೇಳಿಕೆ ನೀಡುವ ಮೂಲಕ ಅವರ ನಿರೀಕ್ಷೆ ಮೀರಿ ಪಬ್ಲಿಸಿಟಿ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಮಾಧ್ಯಮಗಳಲ್ಲೂ ಕಳೆದ ಎರಡು ದಿನಗಳಿಂದ ರಮ್ಯಾ ಸುತ್ತ ವರದಿಗಳು ಅಚ್ಚಾಗುವ ಮೂಲಕ, ಕರ್ನಾಟಕದ ಮಾಜಿ ಸಿನೆಮಾ ತಾರೆ ಕಮ್ ರಾಜಕಾರಣಿ ನೆರೆಯ ದೇಶದಲ್ಲಿ ಮಿಂಚುತ್ತಿದ್ದಾರೆ. ಪಾಕಿಸ್ತಾನದ ಕುರಿತಾದ ಒಂದು ಹೇಳಿಕೆ ಅವರನ್ನು ರಾಷ್ಟ್ರನಾಯಕರ ಪಕ್ಕದಲ್ಲಿ ತಂದು ನಿಲ್ಲಿಸಿದೆ. ಇವೆಲ್ಲಕ್ಕೂ ಕಾರಣ, ರಮ್ಯಾ ಹೇಳಿಕೆಯನ್ನು ಇಟ್ಟುಕೊಂಡು, ‘ರಾಜದ್ರೋಹ’ದ ಪ್ರಕರಣ ದಾಖಲಿಸಲು ಮುಂದಾದ ಸಂಘಪರಿವಾರದ ಸಂಘಟನೆಗಳು ಮತ್ತು ಕಾರ್ಯಕರ್ತರ ‘ಶ್ರಮ’ ಎಂಬುದನ್ನು ಈ ಸಮಯದಲ್ಲಿ ಗಮನಿಸಬೇಕಿದೆ.

ಹೇಗಿದೆ ಪಾಕ್ ಕವರೇಜ್?:

ಪಾಕಿಸ್ತಾನದ ನಂಬರ್ ವನ್ ಟಿವಿ ಚಾನಲ್ ‘ಜಿಯೋ ನ್ಯೂಸ್’ ರಮ್ಯಾ ಪಾಕಿಸ್ತಾನ ಕುರಿತಾದ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸದ್ದನ್ನೇ ಕೇಂದ್ರವಾಗಿಟ್ಟುಕೊಂಡು ತನ್ನ ವೆಬ್ ತಾಣದಲ್ಲಿ ವರದಿ ಮಾಡಿದೆ. ಅಷ್ಟೇ ಅಲ್ಲ ತನ್ನ ಸುದ್ದಿ ವಾಹಿನಿಯಲ್ಲಿಯೂ ಇದರ ಕುರಿತು ಪ್ಯಾಕೇಜ್ ಪ್ರಸಾರ ಮಾಡಿದೆ.

ಇನ್ನು, ಪಾಕಿಸ್ತಾನದ ನಂಬರ್ ವನ್ ಪತ್ರಿಕೆ ‘ಡಾನ್’ ಕೂಡಾ ರಮ್ಯ ಕ್ಷಮೆ ಕೇಳಲು ನಿರಾಕರಿಸಿದ್ದನ್ನೇ ಪ್ರಮುಖವಾಗಿ ತೆಗೆದುಕೊಂಡಿದೆ. ‘ಪಾಕಿಸ್ತಾನ ನರಕ’ ಎಂದಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ, ರಮ್ಯ ವಿರೋಧ ವ್ಯಕ್ತಡಿಸಿದ್ದಾರೆ. ಈ ಕುರಿತು ಅವರ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಕೇಸು ಕೂಡಾ ದಾಖಲಾಗಿದೆ ಎಂಬುದನ್ನು ‘ಡಾನ್’ ಉಲ್ಲೇಖಿಸಿ ವರದಿ ಮಾಡಿದೆ. ತನ್ನ ‘ಅಂತರಾಷ್ಟ್ರೀಯ ಪುಟ’ದಲ್ಲಿ ರಮ್ಯಾ ಹೇಳಿಕೆಗೆ ಜಾಗ ಕಲ್ಪಿಸಿದೆ.

Dawn

‘ಡಾನ್’ ಪತ್ರಿಕೆಯ ಅಂತರಾಷ್ಟ್ರೀಯ ಪುಟದಲ್ಲಿ ರಮ್ಯಾ ಕುರಿತಾದ ವರದಿ.

ರಮ್ಯಾ ಹೇಳಿಕೆ ವಿರುದ್ದ ‘ಬಲಪಂಥೀಯ’ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕದ ಮಂಡ್ಯ ಮೂಲದವರಾದ ರಮ್ಯ ವಿರುದ್ಧ ಐಪಿಸಿ ಸೆಕ್ಷನ್ 124(ಎ), ಮತ್ತು 511ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದನ್ನು ‘ಡಾನ್’ ವರದಿಯಲ್ಲಿ ವಿವರಿಸಿದೆ.

‘ಜಿಯೋ ನ್ಯೂಸ್’ ರಮ್ಯಾ ಮೂಲ ಹೆಸರು ‘ದಿವ್ಯ ಸ್ಪಂದನ’ವನ್ನು ವರದಿಯಲ್ಲಿ ಪ್ರಸ್ತಾಪಿಸಿದೆ. ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ “ನರಕಕ್ಕೆ ಹೋಗುವುದೂ ಒಂದೇ ಪಾಕಿಸ್ತಾನಕ್ಕೆ ಹೋಗುವುದೂ ಒಂದೇ,” ಎಂಬ ಹೇಳಿಕೆಗೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ ಎಂದು ಅದು ತನ್ನ ವೆಬ್ಸೈಟಿನಲ್ಲಿ ಬರೆದುಕೊಂಡಿದೆ. “ನಾನು ಗೌರವಯುತವಾಗಿ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ, ಪಾಕಿಸ್ತಾನ ನರಕವಲ್ಲ, ಅಲ್ಲಿರುವ ಜನರು ನಮ್ಮಂತೆಯೇ,” ಎಂಬ ರಮ್ಯಾ ಹೇಳಿಕೆಯನ್ನು ಅದು ದಾಖಲಿಸಿದೆ.

ರಮ್ಯಾ ಹೇಳಿಕೆಯ ನಂತರ ಆಕೆಯ ವಿರುದ್ಧ ಕರ್ನಾಟಕದಲ್ಲಿ ವಕೀಲರೊಬ್ಬರು ‘ರಾಷ್ಟ್ರದ್ರೋಹ’ದ ಪ್ರಕರಣ ದಾಖಲಿಸಿದ್ದಾರೆ ಎಂದೂ ಅದು ತನ್ನ ವರದಿಯಲ್ಲಿ ಹೇಳಿದೆ. ಸ್ಪಂದನ ಕಾಂಗ್ರೆಸಿನ ಮಾಜಿ ಸಂಸತ್ ಸದಸ್ಯರಾಗಿದ್ದು ಸಾರ್ಕ್ ಸಮ್ಮೇಳನಕ್ಕೆ ಪಾಕಿಸ್ತಾನಕ್ಕೆ ಬಂದಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನದ ಪ್ರಮುಖ ಟಿವಿ ಚಾನಲ್, ‘ಪಿಟಿವಿ ನ್ಯೂಸ್’ ಕೂಡ ಇದೇ ರೀತಿಯಲ್ಲಿ ವರದಿ ಮಾಡಿದೆ. ‘33 ವರ್ಷದ ಕನ್ನಡ ಫಿಲ್ಮ್ ಸ್ಟಾರ್ ರಮ್ಯಾ’ ಇತ್ತೀಚೆಗೆ ಇಸ್ಲಾಮಾಬಾದಿನಲ್ಲಿ ನಡೆದ ಸಾರ್ಕ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ಅದು ಹೇಳಿದೆ.

ಪಾಕಿಸ್ತಾನದ ಇನ್ನೊಂದು ಪ್ರಮುಖ ಪತ್ರಿಕೆ ‘ದಿ ನೇಷನ್’ ಮೊದಲ ಪುಟದಲ್ಲೇ ರಮ್ಯ ಚಿತ್ರ ಸಹಿತ ವರದಿ ಪ್ರಕಟಿಸಿದೆ. ‘ಪಾಕಿಸ್ತಾನವನ್ನು ಮೆಚ್ಚಿಕೊಂಡಿದ್ದಕ್ಕೆ ಭಾರತೀಯ ನಟಿ ವಿರುದ್ಧ ದೇಶದ್ರೋಹ ಪ್ರಕರಣ,’ ಎಂಬ ತಲೆಬರಹದಲ್ಲಿ ನೇಷನ್ ಸುದ್ದಿ ಪ್ರಕಟಿಸಿದೆ. ‘ಪಾಕಿಸ್ತಾನವನ್ನು  ಹೊಗಳಿದ್ದಕ್ಕೆ’ ಮತ್ತು ‘ಭಾರತೀಯ ಸೈನಿಕರನ್ನು ಅವಮಾನಿಸಿದ್ದಕ್ಕೆ’ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತನ್ನ ಮುಖಪುಟದ ವರದಿಯಲ್ಲಿ ಬರೆದುಕೊಂಡಿದೆ.

'ದಿ ನೇಷನ್'ನಲ್ಲಿ ರಮ್ಯಾ ಬಗ್ಗೆ ಬಂದ ವರದಿ.

‘ದಿ ನೇಷನ್’ನಲ್ಲಿ ರಮ್ಯಾ ಬಗ್ಗೆ ಬಂದ ವರದಿ.

ಕರ್ನಾಟಕದ ಸೋಮವಾರಪೇಟೆ ಕೋರ್ಟಿನಲ್ಲಿ ಕಟ್ನಮನೆ ವಿಠ್ಠಲ ಗೌಡ ಪ್ರಕರಣ ದಾಖಲಿಸಿದ್ದು ಆಗಸ್ಟ್ 27ರಿಂದ ವಿಚಾರಣೆ ಆರಂಭವಾಗಲಿದೆ ಎಂಬ ವಿವರಗಳು ವರದಿಯಲ್ಲಿವೆ.

ಮಾನವ ಹಕ್ಕುಗಳ ಸಂಘಟನೆ ‘ಅಮ್ನೆಸ್ಟಿ ಇಂಟರ್ನ್ಯಾಷನಲ್’ ವಿರುದ್ಧ ‘ದೇಶದ್ರೋಹ’ದ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆಗಳು ಕೇಳಿ ಬರುತ್ತಿವೆ. ಕಳೆದ ವಾರ ಅಮ್ನೆಸ್ಟಿ ಆಯೋಜಿಸಿದ್ದ ಕಾಶ್ಮೀರ ಸಂಬಂಧಿತ ಕಾರ್ಯಕ್ರಮದಲ್ಲಿ’ಆಜಾದಿ’ (ಸ್ವಾತಂತ್ರ್ಯ) ಘೋಷಣೆ ಕೂಗಲಾಗಿತ್ತು ಎಂಬುದನ್ನೂ ಅದು ವರದಿಯ ಕೊನೆಯಲ್ಲಿ ಪ್ರಸ್ತಾಪಿಸಿದೆ.

ಸರಿ ಸುಮಾರು ಇದೇ ರೀತಿಯ ವರದಿಗಳು ಡೈಲಿ ಪಾಕಿಸ್ತಾನ್ ಗ್ಲೋಬಲ್, ಎಆರ್’ವೈ ನ್ಯೂಸ್, ಸಾಮಾ ನ್ಯೂಸ್, ದಿ ನೇಷನ್ ಗಳಲ್ಲಿ ಪ್ರಸಾರವಾಗಿವೆ. ಎಲ್ಲೂ ಯಾವ ಮಾಧ್ಯಮಗಳೂ ಸುದ್ದಿಯಾಚೆಗಿನ ಸಾಲುಗಳನ್ನು ಸೇರಿಸಿಲ್ಲ. ಭಾವನಾತ್ಮಕವಾಗಿಯೂ ಸುದ್ದಿ ಕೊಟ್ಟಿಲ್ಲ ಎಂಬುದು ಗಮನಾರ್ಹ.

ENTER YOUR E-MAIL

Name
Email *
August 2017
M T W T F S S
« Jul    
 123456
78910111213
14151617181920
21222324252627
28293031  

Top