An unconventional News Portal.

ಪತಂಜಲಿ ಮೇಲೆ 11 ಲಕ್ಷ ದಂಡ; ಬಿಜೆಪಿ ಜತೆಗಿನ ಸಂಬಂಧ ‘ಮುಗಿದ ಅಧ್ಯಾಯ’ ಎಂದ ರಾಮ್‍ದೇವ್

ಪತಂಜಲಿ ಮೇಲೆ 11 ಲಕ್ಷ ದಂಡ; ಬಿಜೆಪಿ ಜತೆಗಿನ ಸಂಬಂಧ ‘ಮುಗಿದ ಅಧ್ಯಾಯ’ ಎಂದ ರಾಮ್‍ದೇವ್

ದಾರಿ ತಪ್ಪಿಸುವ ಜಾಹೀರಾತು ನೀಡಿದ್ದಕ್ಕಾಗಿ ಸ್ವದೇಶಿ ಉತ್ಪನ್ನಗಳ ಸ್ವಘೋಷಿತ ಪ್ರವರ್ತಕ ಬಾಬಾ ರಾಮ್‍ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ ಕಂಪೆನಿಗೆ 11 ಲಕ್ಷ ದಂಡ ವಿಧಿಸಲಾಗಿದೆ.

ರಾಮ್‍ದೇವ್ ಗೆ ಸೇರಿದ ಪತಂಜಲಿ ಆರ್ಯುವೇದ ಸಂಸ್ಥೆ ಬೇರೆಯವರು ತಯಾರಿಸಿದ ಉತ್ಪನ್ನವನ್ನು ತಾನೇ ತಯಾರಿಸಿದ್ದು ಎಂದು ಸುಳ್ಳು ಜಾಹೀರಾತು ನೀಡಿತ್ತು. ಹರಿದ್ವಾರದ ಸ್ಥಳೀಯ ನ್ಯಾಯಾಲಯ ಪತಂಜಲಿ ಆಯುರ್ವೇದಕ್ಕೆ ಸೇರಿದ 5 ಘಟಕಗಳಿಗೆ 11 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ. ಸಂಸ್ಥೆಯು ತನ್ನ ಉತ್ಪನ್ನಗಳ ಬಗ್ಗೆ “ಸುಳ್ಳು ಬ್ರಾಂಡಿಂಗ್ ಮತ್ತು ದಾರಿ ತಪ್ಪಿಸುವ ಜಾಹೀರಾತು” ಪ್ರಕಟಿಸಿದ್ದಕ್ಕಾಗಿ ನ್ಯಾಯಮೂರ್ತಿ ಲಲಿತ್ ನಾರಾಯಣ್ ಮಿಶ್ರಾ ತಿಂಗಳೊಳಗೆ ದಂಡ ಪಾವತಿಸುವಂತೆ ಆದೇಶ ನೀಡಿದ್ದಾರೆ.

ಪತಂಜಲಿ ಆಯುರ್ವೇದ ಕಂಪೆನಿ ತನ್ನ ಉತ್ಪನ್ನಗಳನ್ನು ತಾನೇ ತಯಾರಿಸುತ್ತಿರುವುದಾಗಿ ಜಾಹೀರಾತಿನಲ್ಲಿ ಹೇಳಿಕೊಂಡಿತ್ತು. ಆದರೆ ವಾಸ್ತವದಲ್ಲಿ ಉತ್ಪನ್ನ ಬೇರೊಂದು ಕಡೆ ತಯಾರಾಗುತ್ತಿತ್ತು ಎಂದು ಕೋರ್ಟ್ ಹೇಳಿದೆ.

ನಡೆದಿದ್ದೇನು?

ಕಂಪೆನಿ ವಿರುದ್ಧ 2012ರಲ್ಲಿ ಈ ಪ್ರಕರಣ ದಾಖಲಾಗಿತ್ತು. ಸರಕಾರಿ ಸಂಸ್ಥೆಯಾದ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ ಪತಂಜಲಿ ತಯಾರಿಸಿದ ಸಾಸಿವೆ ಎಣ್ಣೆ, ಉಪ್ಪು, ಅನನಾಸು ಜ್ಯಾಮ್, ಕಡಲೆ ಹಿಟ್ಟು ಮತ್ತು ಜೇನುತುಪ್ಪದ ಸ್ಯಾಂಪಲನ್ನು ರುದ್ರಪುರ ಲ್ಯಾಬಿನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಸದರಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿದ್ದವು.

ಇವುಗಳಲ್ಲಿ ಆಹಾರ ಸುರಕ್ಷತೆ ಮಾನದಂಡದ ಸೆಕ್ಷನ್ 52 ಮತ್ತು 53ರ ಉಲ್ಲಂಘನೆಯಾಗಿತ್ತು. ಮಾತ್ರವಲ್ಲ ಆಹಾರ ಭದ್ರತೆ ಮತ್ತು ಗುಣಮಟ್ಟ (ಪ್ಯಾಕೇಜ್ ಮತ್ತು ಲೇಬಲಿಂಗ್) ಸೆಕ್ಷನ್ 23.1 (5)ರ ಉಲ್ಲಂಘನೆಯೂ ನಡೆದಿತ್ತು. ಈ ಕಾರಣಕ್ಕೆ ಕಂಪೆನಿಯ ವಿರುದ್ಧ ದೂರು ದಾಖಲಾಗಿತ್ತು. ಕೊನೆಗೆ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ನ್ಯಾಯಾಲಯ ಈಗ ದಂಡದ ಆದೇಶ ನೀಡಿದೆ.


baba-ramdev-patanjali

ಬಾಬಾ ರಾಮ್‍ದೇವ್ ‘ಸ್ವದೇಶಿ ಉತ್ಪನ್ನ’ಗಳ ವಿವಾದ ಪರ್ವ:

ಬಾಬಾ ರಾಮ್‍ದೇವ್ ಸ್ವದೇಶಿ ಉತ್ಪನ್ನಗಳ ಜತೆ ಜತೆಗೇ ತಳುಕು ಹಾಕಿಕೊಂಡಿದ್ದ ಅಂದರೆ ಅದು ವಿವಾದಗಳು. ಯಾವಾಗ ರಾಮ್‍ದೇವ್ ಮತ್ತು ಬಾಲಕೃಷ್ಣ ಸೇರಿಕೊಂಡು ಬಹುರಾಷ್ಟ್ರೀಯ ಕಂಪೆನಿಗಳಂತೆ ಒಂದೊಂದೇ ಉತ್ಪನ್ನಗಳನ್ನು ಮಾರುಕಟ್ಟೆಗೆ ಸೇರಿಸುತ್ತಾ ಹೋದರೋ ಅಲ್ಲಿಂದ ವಿವಾದಗಳೂ ಅವರ ಬೆನ್ನು ಬೀಳಲು ಆರಂಭಿಸಿದವು. ಮುಖ್ಯವಾಗಿ ದಾರಿ ತಪ್ಪಿಸುವ ಜಾಹೀರಾತು ಮತ್ತು ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿದ ವಿಚಾರದಲ್ಲಿ ಪತಂಜಲಿಯ ಉತ್ಪನ್ನಗಳು ನಿರಂತರವಾಗಿ ಋಣಾತ್ಮಕ ಪ್ರಚಾರಕ್ಕೆ ಈಡಾಗಿವೆ ಮತ್ತು ಈಡಾಗುತ್ತಿವೆ.

‘ಎಫ್ಎಸ್ಎಸ್ಎಐ’ ಮಾನ್ಯತೆ ಇಲ್ಲದೆ ಮಾರುಕಟ್ಟೆಗೆ ಬಂದಿದ್ದ ನ್ಯೂಡಲ್ಸ್: ನವೆಂಬರ್ 2015ರ ಹೊತ್ತಿಗೆ ಮ್ಯಾಗಿ ನ್ಯೂಡಲ್ಸ್ ದೇಶದ ಮಾರುಕಟ್ಟೆಯಿಂದ ಬ್ಯಾನ್ ಆಗಿತ್ತು. ಅದೇ ಹೊತ್ತಿಗೆ ಸರಿಯಾಗಿ ಪತಂಜಲಿಯ ನ್ಯೂಡಲ್ಸ್ ಬಿಡುಗಡೆಯಾಗಿತ್ತು. ಈ ಸಂದರ್ಭ ಮಾತನಾಡಿದ್ದ ‘ಆಹಾರ ಸುರಕ್ಷೆ ಹಾಗೂ ಮಾನದಂಡ ಪ್ರಾಧಿಕಾರ (ಎಫ್‌ಎಸ್ಎಸ್‌ಎಐ)’ ಅಧ್ಯಕ್ಷರ ಆಶಿಶ್ ಬಹುಗುಣ ಪತಂಜಲಿ ನ್ಯೂಡಲ್ಸ್ ಸಂಸ್ಥೆಯಿಂದ ಅನುಮತಿ ಪಡೆದಿಲ್ಲ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ನ್ಯೂಡಲ್ಸ್ ನಂಥ ಆಹಾರ ವಸ್ತುಗಳು ಸಂಸ್ಥೆಯಿಂದ ಪೂರ್ವಾನುಮತಿ ಪಡೆಯಬೇಕು. ಆದರೆ ಪಡೆದಿರಲಿಲ್ಲ ಎಂದು ಬಹುಗುಣ ಹೇಳಿದ್ದರು.

ಅಡುಗೆ ಎಣ್ಣೆ ಪ್ರಕರಣದಲ್ಲಿ ಪತಂಜಲಿಗೆ ‘ಎಫ್ಎಸ್ಎಸ್ಎಐ’ನಿಂದ ಶೋಕಾಸ್ ನೊಟೀಸ್: ಹಿಂದೊಮ್ಮೆ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ಹಾಕಿದ ಕಾರಣಕ್ಕೆ ‘ಎಫ್ಎಸ್ಎಸ್ಎಐ’ ತನ್ನ ಕೇಂದ್ರೀಯ ಅನುಮತಿ ಪ್ರಾಧಿಕಾರಕ್ಕೆ ಪತಂಜಲಿ ಸಂಸ್ಥೆಗೆ ಶೋಕಾಸ್ ನೋಟಿಸ್ ನೀಡುವಂತೆ ಹೇಳಿತ್ತು. ತನ್ನ ಸಾಸಿವೆ ಎಣ್ಣೆ (Kacchi Ghani Oil) ಜಾಹೀರಾತಿನಲ್ಲಿ ಪತಂಜಲಿಯು ಕಚ್ಛಾ ವಿಧಾನದಲ್ಲಿ ಸಾಸಿವೆ ಎಣ್ಣೆ ತಯಾರಿಸುತ್ತೇವೆ ಎಂದು ಹೇಳಿಕೊಂಡಿತ್ತು. ಆದರೆ ಸಾಮಾನ್ಯವಾಗಿ ಉಳಿದ ಕಂಪೆನಿಗಳು ನ್ಯೂರೋಟಾಕ್ಸಿನ್ ಹೆಕ್ಸಾಗಾನ್ ವಿಧಾನದಿಂದ ಎಣ್ಣೆ ಹೊರತೆಗೆಯುತ್ತವೆ. ಇದರ ವಿರುದ್ಧ ಅಡುಗೆ ಎಣ್ಣೆ ಉತ್ಪಾದಕರ ಒಕ್ಕೂಟ ( Solvent Extractors’ Association of India -SEA) ದೂರು ದಾಖಲಿಸಿತ್ತು. ಇದರ ಆಧಾರದಲ್ಲಿ ಪತಂಜಲಿಗೆ ನೊಟೀಸ್ ಜಾರಿ ಮಾಡಲಾಗಿತ್ತು.

ಕ್ರೈಸ್ತರ ಭಾವನೆಗಳಿಗೆ ಧಕ್ಕೆ ತಂದಿದ್ದ ಪತಂಜಲಿ: ಜಾಹೀರಾತೊಂದರಲ್ಲಿ ವಿದೇಶಿ ಕಂಪೆನಿಗಳನ್ನು ಭಾರತವನ್ನು ಸೂರೆ ಮಾಡುತ್ತಿವೆ ಎಂದು ದೂರುವ ಸಾಲುಗಳನ್ನು ಪತಂಜಲಿಯ ಜಾಹೀರಾತಿನಲ್ಲಿತ್ತು. ಇದಕ್ಕೆ ಕ್ರೈಸ್ತರ ಪ್ಲಸ್ ಚಿಹ್ನೆಯನ್ನು ಅದು ವಿದೇಶಿಗೆ ಪರ್ಯಾಯವಾಗಿ ಬಳಸಿಕೊಂಡಿತ್ತು. ಇದರ ವಿರುದ್ಧ ಕ್ರೈಸ್ತ ಸಂಘಟನೆಗಳು ಧ್ವನಿ ಎತ್ತಿದ್ದವು. ಮಾತ್ರವಲ್ಲ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದವು.

ಕಾರ್ಮಿಕರ ಕಾನೂನುಗಳಿಗೆ ಎಳ್ಳು ನೀರಿ ಬಿಟ್ಟ ರಾಮ್‍ದೇವ್: ಈ ಘಟನೆ ನಡೆದಿದ್ದು 2005-06ರಲ್ಲಿ. ಬಾಬಾ ರಾಮ್‍ದೇವ್ ಒಡೆತನಕ್ಕೆ ಸೇರಿದ ‘ದಿವ್ಯ ಯೋಗ್ ಫಾರ್ಮಸಿ’ಯ ಹರಿದ್ವಾರ ಘಟಕದಲ್ಲಿ 115 ಸಿಬ್ಬಂದಿಗಳನ್ನು ಏಕಾಏಕಿ ಕೆಲಸದಿಂದ ಕಿತ್ತು ಹಾಕಲಾಗಿತ್ತು. ಹೆಚ್ಚಿನ ಸಂಬಳ ಮತ್ತು ಸವಲತ್ತುಗಳಿಗೆ ಒತ್ತಾಯಿಸಿ ಇವರೆಲ್ಲಾ ಪ್ರತಿಭಟನೆಗೆ ಇಳಿದಿದ್ದೇ ಇದಕ್ಕೆ ಕಾರಣವಾಗಿತ್ತು. ಜೂನ್ 21, 2005ರಲ್ಲಿ ಜಿಲ್ಲಾಡಳಿತ, ಉತ್ಪಾದನ ಘಟಕ ಮತ್ತು ಸಿಬ್ಬಂದಿಗಳ ನಡುವೆ ಒಪ್ಪಂದ ನಡೆದಿತ್ತು. ಆದರೆ ಒಪ್ಪಂದದಂತೆ ರಾಮ್‍ದೇವ್ ಸಂಸ್ಥೆ ನಡೆದುಕೊಂಡಿರಲಿಲ್ಲ. ಇದಕ್ಕೆ ವಿರುದ್ಧವಾಗಿ ಸಿಬ್ಬಂದಿಗಳ ಮೇಲೆ ಸುಳ್ಳು ಕೇಸುಗಳನ್ನೂ ಹಾಕುತ್ತಿತ್ತು ಎಂದು ಸುದ್ದಿಯಾಗಿತ್ತು.

ಗಂಡು ಮಕ್ಕಳಿಗಾಗಿ ‘ಪುತ್ರ ಜೀವಕ ಬೀಜ’ ವಿವಾದ: ಪತಂಜಲಿ ಯೋಗಪೀಠ  ದೇಶದಾದ್ಯಂತ ‘ಪುತ್ರ ಜೀವಕ ಬೀಜ’ ಔಷಧಿ ಮಾರಾಟ ಮಾರಾಟ ಆರಂಭಿಸಿತ್ತು. ಇದು ಗಂಡು ಸಂತಾನ ಪಡೆಯಲು ಸಹಾಯ ಮಾಡುತ್ತದೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಸದರಿ ಔಷಧಿಯನ್ನು ಸರಾಗ ಋತುಸ್ರಾವಕ್ಕೆ ಬಳಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಸ್ಪಷ್ಟಪಡಿಸಿತ್ತು.

ಈ ಉತ್ಪನ್ನವನ್ನು ನಿಷೇಧಿಸಬೇಕು, ಇದು ಲಿಂಗ ತಾರತಮ್ಯವನ್ನು ಪ್ರೇರೇಪಿಸುತ್ತದೆ ಎಂದು ಹೇಳಿ ಹಲವು ಕಡೆಗಳಲ್ಲಿ ದೂರುಗಳು ದಾಖಲಾಗಿದ್ದವು. ಮುಂದೆ ಉತ್ಪನ್ನವನ್ನು ಸಂಸ್ಥೆ ವಾಪಸ್ಸು ಪಡೆದಿತ್ತು.

ಹೀಗೆ ಹಲವು ಜಾಹೀರಾತುಗಳಲ್ಲಿ ಪತಂಜಲಿಯು ಪ್ರತಿಸ್ಪರ್ಧಿಗಳ ಜಾಹೀರಾತಿಗೆ ಪೈಪೋಟಿ ನೀಡಲು ಪತಂಜಲಿಯ ಉತ್ಪನ್ನಗಳು ನೈಸರ್ಗಿಕವಾಗಿದ್ದು, ಆಯುರ್ವೇದಿಕ್ ಎಂದು ಹೇಳುತ್ತಾ ಬಂದಿದೆ. ಆದರೆ ಹಲವು ಸಂದರ್ಭಗಳಲ್ಲಿ ಇದು ನೈಸರ್ಗಿಕ ಅಲ್ಲ ಎಂಬುದು ಸಾಬೀತಾಗಿದೆ.

ಅನಾಣ್ಯೀಕರಣ 3-5 ಲಕ್ಷ ಕೋಟಿ ಹಗರಣ; ಬಿಜೆಪಿ ಜತೆಗಿನ ‘ಸಂಬಂಧ ಮುಗಿದ ಅಧ್ಯಾಯ’:

ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ, 2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದ ಬಾಬಾ ರಾಮ್‍ದೇವ್ ಅನಾಣ್ಯೀಕರಣ ವಿಚಾರದಲ್ಲಿ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ. ಅನಾಣ್ಯೀಕರಣ 3-5 ಲಕ್ಷ ಕೋಟಿಯ ಹಗರಣ ಎಂದಿರುವ ರಾಮ್‍ದೇವ್ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದಾರೆ. ಮಾತ್ರವಲ್ಲ ಬಿಜೆಪಿ ಜತೆಗಿನ ಸಂಬಂಧವೆಲ್ಲಾ ಹಳೆಯದು ಎಂದಿರುವ ಯೋಗಗುರು, ಪರೋಕ್ಷವಾಗಿ ಅವೆಲ್ಲಾ ‘ಮುಗಿದ ಅಧ್ಯಾಯ’ ಎಂದಿದ್ದಾರೆ.

ಚಿತ್ರ ಕೃಪೆ: ದಿ ಕ್ವಿಂಟ್

Top