An unconventional News Portal.

ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ಸಿಎಂ ಪ್ರೀತಿಯ ಪುತ್ರನಿಗೆ ಏನಾಯಿತು?

ಬೆಲ್ಜಿಯಂನಲ್ಲಿ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: ಸಿಎಂ ಪ್ರೀತಿಯ ಪುತ್ರನಿಗೆ ಏನಾಯಿತು?

ಸಿಎಂ ಸಿದ್ದರಾಮಯ್ಯ ಪುತ್ರ ರಾಕೇಶ್ ವಿದೇಶದಲ್ಲಿ ಅನಾರೋಗ್ಯಕ್ಕೆ ತುತ್ತಾಗಿರುವ ಮಾಹಿತಿ ಹೊರಬಿದ್ದಿದೆ.
ಸದ್ಯದ ಮಾಹಿತಿ ಪ್ರಕಾರ ರಾಕೇಶ್ ಬೆಲ್ಜಿಯಂಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಈಗಾಗಲೇ ಇಬ್ಬರು ವೈದ್ಯರ ಜತೆ ಸಿಎಂ ಪತ್ನಿ ಪಾರ್ವತಮ್ಮ ಬೆಲ್ಜಿಯಂ ತಲುಪಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಆತಂಕ್ಕೆ ಒಳಗಾಗಿದ್ದು, ತಮ್ಮ ಪ್ರೀತಿಯ ಪುತ್ರನ ಅನಾರೋಗ್ಯದ ಬಗ್ಗೆ ಕಳವಳಕ್ಕೆ ಈಡಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಅವರೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕರೆ ಮಾಡಿ ಸಹಾಯ ಯಾಚಿಸಿದ್ದಾರೆ. ನಂತರ, ಬೆಲ್ಜಿಯಂನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
“ಸದ್ಯ ಈವರೆಗೆ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ,” ಎಂದು ಬೆಂಗಳೂರಿನ ಕೋರಮಂಗಲದಲ್ಲಿರುವ ಕಚೇರಿ ಮೂಲಗಳು ‘ಸಮಾಚಾರ’ಕ್ಕೆ ತಿಳಿಸಿವೆ. ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ವಿದೇಶಾಂಗ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತದೆ.
ಪ್ರೀತಿಯ ಪುತ್ರ:
ಸಿಎಂ ಸಿದ್ದರಾಮಯ್ಯ ಅವರ ಇಬ್ಬರು ಪುತ್ರರ ಪೈಕಿ ಪ್ರೀತಿಯ ಮಗ ರಾಕೇಶ್. ಓದಿನ ವಿಚಾರದಲ್ಲಿ ಸಹೋದರ ಡಾ. ಯತೀಂದ್ರ ಅವರಂತೆ ಬುದ್ಧಿವಂತರಲ್ಲ. ತಂದೆಗೆ ರಾಕೇಶ್ ಕಂಡರೆ ಮೊದಲಿನಿಂದಲೂ ಪ್ರೀತಿ ಜಾಸ್ತಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ತಂದೆಯ ಪ್ರಚಾರ ಹೊಣೆಯನ್ನು ಸಂಪೂರ್ಣವಾಗಿ ಹೊತ್ತುಕೊಂಡವರು ರಾಕೇಶ್. ತಂದೆ ಗೆದ್ದು ಮುಖ್ಯಮಂತ್ರಿಯಾದ ನಂತರ, ವರುಣಾ ಕ್ಷೇತ್ರದ ಉಸ್ತುವಾರಿಕೆಯನ್ನು ನೋಡಿಕೊಳ್ಳುತ್ತಿರುವವರು ಅವರು.
15 ದಿನಗಳ ಹಿಂದಷ್ಟೆ ಮಂಡ್ಯದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದ ರಾಕೇಶ್, “ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ,” ಹೇಳಿದ್ದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ರಾಕೇಶ್ ವೇಗ ಮತ್ತು ಚಟುವಟಿಕೆಗಳನ್ನು ನೋಡುತ್ತಿದ್ದ ಆಪ್ತ ವಲಯ ಒಂದು ಹಂತದಲ್ಲಿ ಆತಂಕಕ್ಕೆ ಒಳಗಾಗಿತ್ತು. ಇವತ್ತಲ್ಲ ನಾಳೆ ರಾಕೇಶ್ ತಂದೆಗೆ ಕೆಟ್ಟು ಹೆಸರು ತರಬಹುದು ಎಂಬುದು ಆತಂಕದ ಹಿಂದಿದ್ದ ವಿಚಾರವಾಗಿತ್ತು. ಆದರೆ, ಯಾವತ್ತೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಡಾ. ಯತೀಂದ್ರ ಸುದ್ದಿಗೆ ಗ್ರಾಸವಾಗಿದ್ದರು.
ಗೆಳೆಯರ ಬಳಗ:
ರಾಕೇಶ್ ಗೆಳೆಯದ ಬಳಗ ದೊಡ್ಡದಿದೆ. ಹೀಗಾಗಿಯೇ ಸಿದ್ದರಾಮಯ್ಯ ಮಗನನ್ನು ಬೆಂಗಳೂರಿನಿಂದ ದೂರು ಇಡಲು ಪ್ರಯತ್ನ ಪಡುತ್ತಿದ್ದರು ಎಂಬುದನ್ನು ಅವರ ಕುಟುಂಬವನ್ನು ಬಲ್ಲ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಾರೆ. “ರಾಕೇಶ್ ಮೈಸೂರಿನಲ್ಲಿಯೇ ಉಳಿದುಕೊಳ್ಳಲು ಸಿದ್ದರಾಮಯ್ಯ ಬಯಸಿದ್ದರು. ಹೀಗಾಗಿ ವರುಣಾ ಕ್ಷೇತ್ರವನ್ನು ಅವನಿಗೇ ನೋಡಿಕೊಳ್ಳಲು ಹೇಳಿದ್ದರು,” ಎನ್ನುತ್ತಾರೆ ಅವರು.
ವರುಣಾದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ರಾಕೇಶ್ ಮುಂದಿನ ಚುನಾವಣಾ ತಯಾರಿಯಲ್ಲಿಯೂ ಇದ್ದರು. ಹೀಗಿರುವಾಗಲೇ ಅವರು ಬೆಲ್ಜಿಯಂ ಪ್ರವಾಸಕ್ಕೆ ಹೋದವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಕುರಿತು ಇನ್ನಷ್ಟು ಸ್ಪಷ್ಟತೆ ಸಿಗಬೇಕಿದೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂ ಪ್ರವಾಸದ ಸಮಯದಲ್ಲಿ ಅನಾರೋಗ್ಯಕ್ಕೆ ಈಡಾಗಿ, ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ವರ್ಗ ಅಲ್ಲಿನ ವೈದ್ಯರ ಜತೆ ಸಂಪರ್ಕದಲ್ಲಿದೆ,” ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ.

Leave a comment

Top