An unconventional News Portal.

‘ರಜನೀಕಾಂತ್ ರಾಜಕೀಯ ಎಂಟ್ರಿ’: ತಮಿಳುನಾಡು ಪಾಲಿಟಿಕ್ಸ್‌ ಮತ್ತು ಬಸ್‌ ಕಂಡಕ್ಟರ್‌ ಗಾಯಕ್‌ವಾಡ್

‘ರಜನೀಕಾಂತ್ ರಾಜಕೀಯ ಎಂಟ್ರಿ’: ತಮಿಳುನಾಡು ಪಾಲಿಟಿಕ್ಸ್‌ ಮತ್ತು ಬಸ್‌ ಕಂಡಕ್ಟರ್‌ ಗಾಯಕ್‌ವಾಡ್

ನಟ ರಜನೀಕಾಂತ್ ಏನು ಮಾಡಿದರೂ ಸುದ್ದಿಯಲ್ಲಿರುತ್ತಾರೆ.ಅವರೊಂದು ಸಿನಿಮಾ ಮಾಡುತ್ತಾರೆಂದರೆ ಇನ್ನಿಲ್ಲದ ಪ್ರಚಾರ ಸಿಗುತ್ತದೆ. ತಮ್ಮ ವಿಚಿತ್ರ ಮ್ಯಾನರಿಸಂನ ಮೂಲಕವೇ ಚಿತ್ರರಂಗದಲ್ಲಿ ಮನೆಮಾತಾಗಿರುವ ರಜನೀಕಾಂತ್‍ಗಿರುವಷ್ಟು ದಂತಕತೆಗಳೂ ಮತ್ತೊಬ್ಬ ನಟನಿಗೆ ಇಲ್ಲ. ನಟ, ಪಂಚಿಂಗ್ ಡೈಲಾಗ್, ವಿಚಿತ್ರ ಸ್ಟೈಲ್‌ಗಳ ಮೂಲಕ ತಮಿಳುನಾಡು ಮಾತ್ರವಲ್ಲದೇ, ಇಡೀ ಭಾರತೀಯ ಚಿತ್ರರಂಗದಲ್ಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರ ಲೇಟೆಸ್ಟ್ ನ್ಯೂಸ್ ರಾಜಕೀಯ ಪ್ರವೇಶ.

ಬಹುದಿನಗಳ ವದಂತಿಯನ್ನು ನಿಜ ಮಾಡಿದ ರಜನೀಕಾಂತ್, ಯಾಕಾಗಿ ತಾನು ರಾಜಕೀಯ ಪ್ರವೇಶ ಮಾಡುತ್ತಿದ್ದೇನೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ತಮಿಳುನಾಡಿದ ರಾಜಕೀಯ ತೀರ ಹದಗೆಟ್ಟು ಹೋಗಿದೆ. ತನಗೆ ದುಡ್ಡು, ಅಧಿಕಾರ, ಯಾವುದೂ ಇದರಿಂದ ಬೇಕಾಗಿಲ್ಲ. ಜನರ ಒಳಿತು ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ತಾನು ರಾಜಕೀಯಕ್ಕೆ ಬರುತ್ತಿದ್ದೇನೆ,” ಎಂದು ಹೇಳಿದ್ದಾರೆ. ಅವರ ಈ ಮಾತುಗಳು ಖಂಡಿತ ಸಿನಿಮಾ ಡೈಲಾಗ್ ರೀತಿಯದ್ದಲ್ಲ. ಬದಲಿಗೆ ವಾಸ್ತವದ ನೆಲೆಯಲ್ಲಿ ರಾಜಕೀಯ ಅಖಾಡದ ಪುರ ಪ್ರವೇಶವನ್ನು ಅವರು ಮಾಡಿದ್ದಾರೆ.

ರಜನಿಯ ಮಾತೆಂದರೆ ಅದು ಸತ್ಯ ಎಂಬಷ್ಟು ನಂಬಿಕೆ ಅವರ ಅಭಿಮಾನಿಗಳಿಗೆ. ಯಾಕೆಂದರೆ ರಜನಿ ಚಿತ್ರರಂಗಕ್ಕೆ ಬಂದ ಬಗೆ, ಅವರ ಪರಿಶ್ರಮ, ಪಟ್ಟ ಕಷ್ಟ ಇವೆಲ್ಲ ಅವರನ್ನು ನಂಬುವಂತೆ ಮಾಡುತ್ತವೆ.

ರಜನೀಕಾಂತ್ ಅವರ ಚಿತ್ರರಂಗದ ಈ ಯಶಸ್ಸಿನ ಹಿಂದೆ ಒಂದು ಕಠಿಣ ಪರಿಶ್ರಮವಿದೆ. ನಮ್ಮ-ನಿಮ್ಮಂತೆ ಇದ್ದ ಸಾಧಾರಣ ವ್ಯಕ್ತಿಯೊಬ್ಬ ಭಾರತೀಯ ಚಿತ್ರರಂಗದ ದಂತಕತೆ ಎಂದೆನಿಸಿಕೊಳ್ಳುತ್ತಾರೆಂದರೆ ಅದು ಸಾಮಾನ್ಯದ ಮಾತಲ್ಲ. ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ತಳವೂರಿದ ಈ ನಟ ಅಪ್ಪಟ ಕನ್ನಡಿಗ. ಇದೇ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಶ್ರಮಪಟ್ಟವರು, ಚಿತ್ರರಂಗದಲ್ಲಿ ಚಾನ್ಸ್‌ಗಾಗಿ ಅಲೆದಾಡಿದವರು.

ರೂಟ್ ನಂ.34:

ರಜನೀಕಾಂತ್ ಒಂದು ಕಾಲದಲ್ಲಿ ಬೆಂಗಳೂರು ನಗರ ಸಾರಿಗೆಯಲ್ಲಿ ಬಸ್ ಕಂಡಕ್ಟರ್ ಆಗಿ ಜೀವನ ಸಾಗಿಸುತ್ತಿದ್ದರು. ಬಸ್‍ಲ್ಲಿ ಕಂಡಕ್ಟರ್ ಆಗಿದ್ದು, ಜನರಿಗೆ ಟಿಕೆಟ್ ಕೊಡೋವಾಗ್ಲೂ ಸ್ಟೈಲ್. ಟಿಕೆಟ್ ಹರಿಯೋದು, ಕನ್ನಡಕ ಹಾಕುವಾಗಲೆಲ್ಲ ವಿಚಿತ್ರ ಸ್ಟೈಲ್ ಮಾಡ್ತಾ ಇದ್ದದ್ದನ್ನು ಇಂದಿಗೂ ಅವರ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ರಜನೀಕಾಂತ್ ಬೆಂಗಳೂರಿನ ಮರಾಠಿ ಕುಟುಂಬವೊಂದರಲ್ಲಿ ಡಿಸೆಂಬರ್ 12, 1949ರಲ್ಲಿ ಹುಟ್ಟಿದರು. ರಜನೀಕಾಂತ್ ಅವರ ಮೊದಲ ಹೆಸರು ಶಿವಾಜಿರಾವ್ ಗಾಯಕ್‍ವಾಡ್. ದುರುದೃಷ್ಟವೆಂದರೆ ಮಗು ಹುಟ್ಟಿ 5 ವರ್ಷ ಇರೋವಾಗಲೇ ಅವರ ತಾಯಿ ತೀರಿಕೊಂಡರು.ಇವರ ತಂದೆ ರಾಮೋಜಿ ರಾವ್ ಗಾಯಕ್‍ವಾಡ್ ಪೊಲೀಸ್ ಕಾನ್‍ಸ್ಟೇಬಲ್ ಆಗಿದ್ದರು. ತಾಯಿಯ ಪ್ರೀತಿಯೇ ಇಲ್ಲದೆ ಬೆಳೆದ ಶಿವಾಜಿರಾವ್, ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪ್ರಾರಂಭಿಸಿದರು. ಮುಂದೆ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ಓದಿದರು. ಆದರೆ ಬಡತನದ ಕಾರಣ ಅವರಿಗೆ ಮುಂದಕ್ಕೆ ಓದಲು ಸಾಧ್ಯವಾಗಲಿಲ್ಲ. ಬದುಕಿನ ಬಂಡಿ ಸಾಗಿಸಲು ಹುಡುಗ ಒಂದಷ್ಟು ಕೂಲಿ ಕೆಲಸ ಮಾಡಿದ್ದೂ ಇದೆ. 1968 ರಿಂದ 1973 ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರು, ಎಲ್ಲೋ ಒಂದು ಕಡೆ ನೆಲೆ ಸಿಗಲಿ ಎಂದು ಅತ್ತಿಂದಿತ್ತ ಅಲೆದಾಡುತ್ತಲೇ ಕಾಲ ತಳ್ಳಿದ ಹುಡುಗ. ಕೊನೆಗೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಕೆಲಸ ಸಿಕ್ಕಿತು.ಶಿವಾಜಿರಾವ್ ಅವರು ಕಂಡಕ್ಟರ್ ಆಗಿ ಹೋಗುತ್ತಿದ್ದ ಬಸ್‍ ರೂಟ್‍ ನಂಬರ್ 34.

ಹನುಮಂತ ನಗರ ಟು ಶಿವಾಜಿನಗರಕ್ಕೆ ರೂಟ್ ನಂ. 34 ಬಸ್‍ನಲ್ಲಿ ಕಂಡಕ್ಟರ್ ಆಗಿದ್ದರು ಅವರು. ವಿಧಾಸನೌಧದ ಮುಂದೆ ದಿನಾ ಹೋಗ್ತಾ ಇದ್ದ ಆ ಬಸ್‌ನ್ನು ಈಗಲೂ ಜನ ರಜನಿ ವಿಷಯ ಬಂದಾಗ್ಲೆಲ್ಲ ನೆನಪಿಸಿಕೊಳ್ತಾರೆ. ಬಸ್‍ಕಂಡಕ್ಟರ್‌ ಆಗಿ ತಮ್ಮ ಸ್ಟೈಲ್‍ನಿಂದಲೇ ಗಮನ ಸೆಳೆಯುತ್ತಿದ್ದ ಶಿವಾಜಿರಾವ್‍ಗೆ ನಾಟಕದ ಖಯಾಲು. ಆಗೆಲ್ಲ ಹವ್ಯಾಸಿ ನಾಟಕ ಕಂಪೆನಿಗಳಿಗೆ, ಕೆ.ಎಸ್.ಆರ್‍ಟಿಸಿ ಡಿಪೋ ಸಂಘದ ನಾಟಕ, ಡ್ರೈವರ್ಸ್‍ಗಳ ಸಂಘದ ನಾಟಕಗಳಲ್ಲಿ ನಟಿಸುತ್ತಿದ್ದರು.ನಂತರ ಗಾಂಧಿನಗರದ ಅನೇಕ ನಿರ್ದೇಶಕರ ಮನೆಯ ಬಾಗಿಲು ತಟ್ಟಿದರು ಕೂಡ. ಆದರೆ ಶಿವಾಜಿರಾವ್‍ಗೆ ಯಾರೊಬ್ಬರೂ ಚಾನ್ಸ್ ಕೊಡಲಿಲ್ಲ.

ಆಗೆಲ್ಲ ನಟ ಎಂದರೆ ಬೆಳ್ಳಗೆ, ಎತ್ತರಕ್ಕೆ ನೋಡಲು ಚೆನ್ನಾಗಿರಬೇಕು ಎಂದು ನೋಡೋ ಕಾಲ ಆಗ.ನೋಡೋಕೆ ಕಪ್ಪಗೆ, ಸಣ್ಣಗೆ ಎತ್ತರವಿದ್ದ ಇವರು ಸಿನಿಮಾ ಹೀರೋ ಆಗ್ತಾರಾ ಎಂದೇ ಹುಬ್ಬೇರಿಸುತ್ತಿದ್ದರು. ರಾಜ್ ಬಹದ್ದೂರ್ ಎಂಬ ಗೆಳೆಯ ನೀನು ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡಿ ಎಂದು ಸಲಹೆ ನೀಡಿದರು. ಶಿವಾಜಿರಾವ್ 1973ರಲ್ಲಿ ಅಭಿನಯದಲ್ಲಿ ಡಿಪ್ಲೊಮೊ ಪಡೆಯಲು ಮದ್ರಾಸ್ ಚಲನಚಿತ್ರ ಸಂಸ್ಥೆಗೆ ಹೋದರು. ಇಲ್ಲಿ ಇನ್ನೊಂದು ಆಸಕ್ತಿ ವಿಷಯವೆಂದರೆ ಅವರು ಮದ್ರಾಸ್‍ನಲ್ಲಿ ನಟನೆ ಕುರಿತು ತರಬೇತಿ ಪಡೆಯುವಾಗ, ಅವರೊಂದಿಗೆ ಕಲಿಯುತ್ತಿದ್ದವರು ಕನ್ನಡದ ಮತ್ತೊಬ್ಬ ಪ್ರತಿಭಾವಂತ ನಟ ಅಶೋಕ್ ಮತ್ತು ನಟಿ ಹೇಮಾಚೌಧರಿ.

ಶಿವಾಜಿರಾವ್ ಟು ರಜನೀಕಾಂತ್:

ಅಲ್ಲಿಂದ ಬಂದ ಮೇಲೆ, ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕಥಾ ಸಂಗಮ ಸಿನಿಮಾದಲ್ಲಿ ವಿಲನ್ ಪಾತ್ರ ನೀಡಿದರು. ಹೀಗೆ ಮೊದಮೊದಲು ಒಂದಷ್ಟು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ನಂತರ ಅವರು ತಮಿಳಿನ ಖ್ಯಾತ ನಿರ್ದೇಶಕರಾದ ಕೆ. ಬಾಲಚಂದರ್ ಅವರಿಗೆ ಒಂದು ಅವಕಾಶ ಕೊಟ್ಟರು. ಆಗ ಅವರ ಹೆಸರನ್ನು ರಜನೀಕಾಂತ್ ಎಂದು ಬದಲಾಯಿಸಲಾಯಿತು. ಅಷ್ಟಲ್ಲದೆ ಬಾಲಚಂದರ್, “ನಿನಗೆ ಸಾಮರ್ಥ್ಯ ಇದೆ, ಚಿತ್ರರಂಗದಲ್ಲಿ ಬೆಳೀತೀಯಾ’ ಅಂತ ಇವರಿಗೆ ಆಶೀರ್ವಾದ ಮಾಡಿ ಕಳುಹಿಸಿದರು.

ಇವರ ಚೊಚ್ಚಲ ಚಿತ್ರ ‘ಅಪೂರ್ವ ರಾಗಂಗಳ್’. ನಂತರ ಕೆಲ ಸಮಯ ತಮಿಳು ಚಿತ್ರಗಳಲ್ಲಿ ಇವರ ವೃತ್ತಿ ಖಳನಾಯಕನ ಪಾತ್ರಗಳಿಂದ ಶುರುವಾಯಿತು. ಅವರು ಹೀರೋ ಆಗಿ ಅಭಿನಯಿಸಿದ ಮೊದಲ ಸಿನಿಮಾ ಪದನಾರು ವೈದಿನಿಲೆ. ಅದು ಹಿಟ್ ಆಯ್ತು. ಕನ್ನಡದಲ್ಲಿ ಸಹೋದರರ ಸವಾಲ್, ಪ್ರಿಯಾ ಸಿನಿಮಾಗಳು ಸೂಪರ್ ಹಿಟ್ ಆದವು. ಕನ್ನಡದಲ್ಲಿ 4-5 ಸಿನಿಮಾ ಮಾಡಿದರೂ ಅವರಿಗೆ ತಮಿಳು ಸಿನಿಮಾಗಳಲ್ಲೇ ಹೆಚ್ಚು ಅವಕಾಶಗಳು ತೆರೆದುಕೊಳ್ಳುತ್ತಾ ಹೋಯಿತು.

‘ಇಳಮೈ ಉಂಜಲಾಡಿಗಿರದು’ ಎಂಬ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಕಮಲಹಾಸನ್ ಇಬ್ಬರೂ ನಾಯಕರು. ಈ ಸಿನಿಮಾದಲ್ಲಂತೂ ರಜನಿ ಅವರ ಮ್ಯಾನರಿಸಂ, ಸ್ಟೈಲ್ ಅಸಾಧಾರಣವಾಗಿ ಕ್ಲಿಕ್ ಆಗಿ ಹೋಯ್ತು. ಇದರ ನಂತರ ಸೋಲೋ ನಾಯಕನಟನಾಗಿ ಭಡ್ತಿ ಪಡೆದರು ರಜನಿ. ಈ ಸಿನಿಮಾ ರಜನಿಕಾಂತ್ ಒಬ್ಬರಿಗೇ ಅಲ್ಲ, ಕಮಲಹಾಸನ್‍ಗೂ ಜೀವಕೊಟ್ಟ ಚಿತ್ರವಿದು. ಈ ಸಿನಿಮಾದ ನಂತರ ನಡೆದದ್ದೆಲ್ಲವೂ ಇತಿಹಾಸ.  ಒಂದರಮೇಲೊಂದರಂತೆ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗ್ತಾ ಹೋದವು. ಏಕಕಾಲಕ್ಕೆ ಮೂರು ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ರಜನಿ ಪಾಲಿಗೆ. 1978ರಲ್ಲಿ ರಜನಿಕಾಂತ್ ಸೂಪರ್‍ಸ್ಟಾರ್ ಆಗಿ 20 ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡರು. 80ರ ದಶಕದಲ್ಲಿ ದಕ್ಷಿಣ ಭಾರತೀಯ ಜನಪ್ರಿಯ ನಟನಾಗಿ ಬೆಳೆದರು ರಜನಿಕಾಂತ್. 1983ರಲ್ಲಿ ಅಂಧಾಕಾನೂನು ಸಿನಿಮಾದ ಮೂಲಕ ಬಾಲಿವುಡ್‍ಗೆ ಪ್ರವೇಶಿಸಿದರು. ಅದೂ ಬಿಗ್ ಬಿ ಅಮಿತಾಬ್‍ ಬಚ್ಚನ್, ಹೇಮಾಮಾಲಿನಿ ಜತೆಗೆ. ಇದು ಹಿಟ್ ಆಯ್ತು. ‘ಜಾನ್ ಜಾನಿ ಜನಾರ್ಧನ್’ ಸಿನಿಮಾದಲ್ಲಿ 3 ಪಾತ್ರ ನಿಭಾಯಿಸಿದರು.

ಅಂದರೆ ರಜನಿಕಾಂತ್ ಬದುಕಿನಲ್ಲಿ ಯಾವುದು ಅಸಾಧ್ಯ ಎಂದುಕೊಂಡರೋ ಅದೆಲ್ಲವೂ ಸಲೀಸಾಗುತ್ತಾ ಹೋಯಿತು.

ರಜನಿ – ಲತಾ ಜೋಡಿ:

ನಟನಾಗಿ ಉತ್ತುಂಗಕ್ಕೆ ಏರಿರುವಾಗಲೇ ಅವರು ಚೆನೈನ ಎಥಿರಾಜ್ ಮಹಿಳಾ ಕಾಲೇಜ್‍ನಲ್ಲಿ ಓದುತ್ತಿದ್ದ ಲತಾ ರಂಗಾಚಾರಿ ಅವರನ್ನು ಮದುವೆಯಾದರು. ಲತಾ ಅವರು ತಮ್ಮ ಕಾಲೇಜ್ ಮ್ಯಾಗಜೈನ್‍ಗೆ ರಜನೀಕಾಂತ್ ಅವರನ್ನು ಸಂದರ್ಶನ ಮಾಡಲು ಬಂದಾಗ ಇಬ್ಬರ ನಡುವೆ ಪ್ರೀತಿ ಬೆಳೆದು, 1982, ಫೆಬ್ರವರಿ 26ರಂದು ತಿರುಪತಿಯಲ್ಲಿ ರಜನೀಕಾಂತ್, ಲತಾ ಮದುವೆಯಾದರು.ಲತಾ ಅವರು ಹಿನ್ನೆಲೆ ಗಾಯಕಿ ಕೂಡ. ಈಗ ನಿರ್ಮಾಪಕಿ ಕೂಡ.

ರಜನಿಕಾಂತ್ ಲತಾ ದಂಪತಿಗೆ ಐಶ್ವರ್ಯಾ ಮತ್ತು ಸೌಂದರ್ಯ ಎಂಬ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಲತಾ ಅವರು ಆಶ್ರಮ್ ಎಂಬ ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. ಮಗಳು ಐಶ್ವರ್ಯಾ ನಟ ಧನುಶ್‍ರನ್ನು ಮದುವೆಯಾಗಿದ್ದಾರೆ. ಸೌಂದರ್ಯ ಸಿನಿಮಾ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.

1995ರಲ್ಲಿ ಬಂದ ಭಾಷಾ ಸಿನಿಮಾ ಸೂಪರ್‍ಡೂಪರ್ ಹಿಟ್ ಸಿನಿಮಾ.ಇವತ್ತಿಗೂ ಭಾರತೀಯ ಚಿತ್ರರಂಗದಲ್ಲಿ ಭಾಷಾ ಅತಿಹೆಚ್ಚು ಹಣ ಮಾಡಿದ ಸಿನಿಮಾ ಎಂಬ ಖ್ಯಾತಿ ಪಡೆದಿದೆ. ಅದರ ನಂತರ ಸೂಪರ್ ಹಿಟ್ ಆದ ಸಿನಿಮಾ ಡಾನ್. ಭೂಗತ ದೊರೆಗಳ ಕತೆಯನ್ನು ಆಧರಿಸಿ ತೆಗೆದ ಇದು ಭಾರತೀಯ ಸಿನಿಮಾಕ್ಕೇ ಒಂದು ಸ್ಟೈಲ್ ಕ್ರಿಯೇಟ್ ಮಾಡಿದ ಸಿನಿಮಾವಿದು. ಈ ಸಿನಿಮಾದ ಒಂದು ಡೈಲಾಗ್ ಇಂದಿಗೂ ಪ್ರಸಿದ್ಧ.”ನಾನ್ ಒರಿದರಂ ಸೊನ್ನಾಲ್ ನೂರು ದರಂ ಸೊನ್ನಪಡಿ'(ಅಂದರೆ ನಾನು ಒಂದು ಸಲ ಹೇಳಿದರೆ ನೂರು ಸಲ ಹೇಳಿದಂಗೆ…) ಎಂದು. ಈ ಡೈಲಾಗ್‍ನ್ನು ಇಂದಿಗೂ ತಮಿಳುನಾಡಲ್ಲಿ ಮನೋ ಆ್ಯಕ್ಟಿಂಗ್‍ಗೆ , ನಾಟಕಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ನಂತರ ಬಂದ ಕಬಾಲಿ ಸಿನಿಮಾ ಸೂಪರ್ ಹಿಟ್ ಆಯ್ತು.ಇದು ಜಗತ್ತಿನಲ್ಲೇ ಬಿಗ್ ಹಿಟ್ ಸಿನಿಮಾ ಎಂಬ ಹೆಸರಾಗಿ ಹೋಯ್ತು. 450 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಎಂದಿರನ್ ಸಿನಿಮಾದ ರೋಬೋ ಪಾತ್ರ ಇತಿಹಾಸವನ್ನೇ ನಿರ್ಮಿಸಿತು. ಕನ್ನಡದ ಆಪ್ತಮಿತ್ರ, ತಮಿಳಿನಲ್ಲಿ ಚಂದ್ರಮುಖಿಯಾಗಿ ನಿರ್ಮಾಣವಾಯಿತು.ಅದರಲ್ಲಿ ರಜನೀಕಾಂತ್ ಅವರ ಲಕಲಕ…ಎಂಬುದು ಹಿಟ್ ಡೈಲಾಗ್. ಪಡಿಯಪ್ಪ, ಮುತ್ತು ಹೀಗೆ ಸಾಲು ಸಾಲು ಯಶಸ್ವೀ ಚಿತ್ರಗಳು ರಜನಿಪಾಲಿಗೆ ಬಂದವು. ಇವತ್ತು ರಜನಿಯನ್ನು ಹಾಕಿಕೊಂಡು ಯಾವುದೇ ಸಿನಿಮಾ ಮಾಡಿದರೂ ಅದು 400 ಕೋಟಿ ರೂ. ಬ್ಯುಸಿನೆಸ್ ಆಗುತ್ತೆ ಎಂಬುದು ಗ್ಯಾರಂಟಿ. ಹಾಗಾಗಿ ಇಡೀ ಭಾರತೀಯ ಚಿತ್ರರಂಗ ಹಾಗೂ ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆವ ನಟನಾಗಿ ಬಸ್‍ಕಂಡಕ್ಟರ್ ಶಿವಾಜಿರಾವ್ ಉರುಫ್ ರಜನೀಕಾಂತ್ ಬೆಳೆದಿದ್ದಾರೆ. ಹೀಗೆ ಮುಟ್ಟಿದ್ದೆಲ್ಲವೂ ಚಿನ್ನವಾಗ್ತಾ ಹೋಯ್ತು. ಸದಾಕಾಲ ಹೊಸತನಕ್ಕೆ ಒಡ್ಡಿಕೊಳ್ಳುವ ಅವರೀಗ ರಾಜಕೀಯ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಅಧ್ಯಾತ್ಮದ ಬಗ್ಗೆ ಒಲವು ಹೆಚ್ಚಿರುವ ರಜನೀಕಾಂತ್ ರಾಘವೇಂದ್ರ ಸ್ವಾಮಿಯ ಪರಮ ಭಕ್ತ. ಹಾಗಾಗಿ ತಮ್ಮ 100ನೇ ಚಿತ್ರವಾಗಿ ರಾಘವೇಂದ್ರರ್ ಎಂಬ ತಮಿಳು ಚಿತ್ರವನ್ನು ತಾವೇ ನಿರ್ಮಿಸಿ, ಅದರಲ್ಲಿ ರಾಘವೇಂದ್ರ ಸ್ವಾಮಿಯ ಪಾತ್ರವನ್ನೂ ಮಾಡಿದರು. ಚೆನ್ನೈನಲ್ಲಿ ರಾಘವೇಂದ್ರ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಎಸಿಯಿಂದ ಕೂಡಿದ ಈ ಕಲ್ಯಾಣಮಂಟಪವನ್ನು ಬಡವರಿಗೋಸ್ಕರವಾಗಿ ಉಚಿತವಾಗಿ ಕೊಟ್ಟಿದ್ದಾರೆ.

ಹೀಗೆ ಅಪರೂಪದ ನಟನಾಗಿ ಭಾರತೀಯ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ನಿಂತ ರಜನೀಕಾಂತ್ ಅವರು ಈಗ ರಾಜಕೀಯವನ್ನು ಪ್ರವೇಶಿಸುತ್ತಿದ್ದಾರೆ. ಹಾಗೆ ನೋಡಿದರೆ ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ನಟ-ನಟಿಯರು ರಾಜಕೀಯಕ್ಕೆ ಬಂದದ್ದು ವಿಶೇಷವೇನಲ್ಲ. ಆದರೆ ಸಿನಿಮಾ ನಟರನ್ನು ರಾಜಕೀಯ ತುಂಬ ಯಶಸ್ವಿಯಾಗಿ ಕೈಹಿಡಿದದ್ದು ಮಾತ್ರ ತಮಿಳುನಾಡು ಮತ್ತು ಆಂಧ್ರಗಳಲ್ಲಿ ಮಾತ್ರ.
ತಮಿಳು ನಾಡಿನ ಜನತೆಯ ನಾಡಿಮಿಡಿತ ತುಂಬ ವಿಚಿತ್ರವಾದದ್ದು. ಅಲ್ಲಿನ ಜನ ಸಿನಿಮಾ ಮತ್ತು ಸಮಾಜವನ್ನು ಬೇರೆಬೇರೆಯಾಗಿ ನೋಡಲಾರರು. ನಟರನ್ನು ಆರಾಧ್ಯ ದೈವ ಎಂದು ಬಗೆದಂತೆಯೇ ರಾಜಕೀಯದಲ್ಲೂ ಇಂಥ ಆರಾದ್ಯ ದೈವಗಳನ್ನು ಗೆಲ್ಲಿಸಿದ ಇತಿಹಾಸ ಈ ರಾಜ್ಯಕ್ಕಿದೆ. ಹಿಂದೆ ಎಂಜಿಆರ್, ನಂತರ ಜಯಲಲಿತಾ ಎಲ್ಲರೂ ಇಲ್ಲಿ ಚಿತ್ರರಂಗದಲ್ಲಿ ಮಿಂಚಿದ ಹಾಗೆಯೇ ರಾಜಕೀಯದಲ್ಲೂ ಮಿಂಚಿದ್ದಾರೆ. ಹಾಗಾಗಿ ರಜನಿ ಕೂಡ, ಚಿತ್ರರಂಗದಲ್ಲಿ ಉತ್ತುಂಗಕ್ಕೆ ಹೋದ ಹಾಗೆಯೇ ರಾಜಕೀಯದಲ್ಲೂ ಉತ್ತುಂಗಕ್ಕೆ ಹೋಗಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ತಮಿಳುನಾಡಿನ ಇಂದಿನ ಪರಿಸ್ಥಿತಿಯಲ್ಲಿ ಅವರಿಗೆ ಪ್ರತಿಸ್ಪರ್ಧಿಯಾಗಿ ಕಮಲ್‌ ಹಾಸನ್‌ ಕೂಡ ರಾಜಕೀಯ ಪ್ರವೇಶಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಸಮರ್ಥ ನಾಯಕತ್ವ ಇಲ್ಲದೆ ಕಳೆಗುಂದಿರುವ ತಮಿಳುನಾಡಿನ ರಾಜಕೀಯ ಈ ಇಬ್ಬರು ಮೇರು ನಟದ ಪ್ರವೇಶದಿಂದ ಹೊಸ ಮೈಲಿಗಲ್ಲುಗಳ ಸ್ಥಾಪನೆಗೆ ಅವಕಾಶ ಮಾಡಿಕೊಡುತ್ತಾ? ಕಾದು ನೋಡಬೇಕಿದೆ.

Leave a comment

Top