An unconventional News Portal.

ರೋಡ್‌ ಶೋ, ಜನಸಂಪರ್ಕ ಸಭೆ & ದಲಿತರ ಪ್ರತಿಭಟನೆ; ಎರಡನೇ ದಿನವೂ ಮುಂದುವರಿದ ರಾಹುಲ್ ‘ಟೆಂಪಲ್ ರನ್’

ರೋಡ್‌ ಶೋ, ಜನಸಂಪರ್ಕ ಸಭೆ & ದಲಿತರ ಪ್ರತಿಭಟನೆ; ಎರಡನೇ ದಿನವೂ ಮುಂದುವರಿದ ರಾಹುಲ್ ‘ಟೆಂಪಲ್ ರನ್’

ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ತಮ್ಮ ಜನಾಶೀರ್ವಾದ ಯಾತ್ರೆಯ ಎರಡನೇ ದಿನವಾದ ಭಾನುವಾರ ಕುಷ್ಟಗಿ, ತಾವರಗೇರಾ ಮಾರ್ಗದಲ್ಲಿ ರೋಡ್‌ ಶೋ ನಡೆಸಿದ್ದಾರೆ. ಯಾತ್ರೆಯ ಅಲ್ಲಲ್ಲಿ ತಮ್ಮ ವಿಶೇಷ ಬಸ್‌ನಿಂದ ಇಳಿದು ಜನರ ಕೈಕುಲುಕುವುದು, ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮುಂದುವರಿಸಿದ್ದಾರೆ. ತಮ್ಮ ಯಾತ್ರೆಯ ಮಾರ್ಗ ಮಧ್ಯೆ ಹೆಚ್ಚು ಜನ ಸೇರಿರುವ ಕಡೆಗಳಲ್ಲಿ ಬಸ್‌ನಿಂದ ಇಳಿದು ಜನರತ್ತ ಕೈ ಬೀಸುವುದು ಹಾಗೂ ಜನರೊಂದಿಗೆ ಬೆರೆಯುವ ಮೂಲಕ ರಾಹುಲ್ ಆಯಾ ಭಾಗದ ಜನರ ಒಲವು ಕಾಂಗ್ರೆಸ್‌ ಕಡೆಗೆ ಹರಿಸುವ ಕಸರತ್ತು ನಡೆಸಿದ್ದಾರೆ…

 

ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆಗೆ ಎರಡನೇ ದಿನವೇ ದಲಿತರ ಪ್ರತಿಭಟನೆಯ ಬಿಸಿ ತಟ್ಟಿದೆ. ಕುಷ್ಟಗಿಯಲ್ಲಿ ರಾಹುಲ್‌ ಭಾಷಣದ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ರಾಹುಲ್ ಭಾಷಣ ಮಾಡುತ್ತಿದ್ದ ವೇದಿಕೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ವೇಳೆ ಗದ್ದಲ ಉಂಟಾದ ಕಾರಣ ರಾಹುಲ್ ಅವಸರದಲ್ಲಿ ಭಾಷಣ ಮುಗಿಸಿ ಹೊರಟರು. ಆದರೆ, ಗಂಗಾವತಿಯಲ್ಲಿ ರಾಹುಲ್ ಮತ್ತೆ ಪ್ರತಿಭಟನೆ ಎದುರಿಸಬೇಕಾಯಿತು. ಗಂಗಾವತಿಯಲ್ಲಿ ರಾಹುಲ್ ಗಾಂಧಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ದಲಿತ ಸಂಘಟನೆಗಳ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. “ಸದಾಶಿವ ಆಯೋಗದ ವರದಿಯನ್ನು ಆದಷ್ಟು ಬೇಗ ಜಾರಿಗೆ ತರಬೇಕು” ಎಂದು ದಲಿತ ಸಂಘಟನೆಗಳ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಆದರೆ, ಈ ಪ್ರತಿಭಟನೆಗಳಿಗೆ ರಾಹುಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕುಷ್ಟಗಿಯಿಂದ ರೋಡ್ ಶೋ ನಡೆಸಿದ ರಾಹುಲ್ ಕನಕಗಿರಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ರಾಹುಲ್‌ ಅವರ ‘ಟೆಂಪಲ್‌ ರನ್’ ಎರಡನೇ ದಿನವೂ ಮುಂದುವರಿದಿದೆ. ಕುಷ್ಟಗಿಯಲ್ಲಿ ಅವಸರದಲ್ಲಿ ಜನಸಂಪರ್ಕ ಸಭೆ ಮುಗಿಸಿದ್ದ ರಾಹುಲ್ ಕನಕಗಿರಿಯಿಂದ ಕಾರಟಗಿವರೆಗೆ ಅಲ್ಲಲ್ಲಿ ರೋಡ್‌ ಶೋ ಮುಂದುವರಿಸಿದ್ದಾರೆ. ಈ ವೇಳೆ ಅಲ್ಲಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಸಿಂಧನೂರಿನಲ್ಲಿ ಸಂಜೆ ರೈತ ಸಂಘದ ಮುಖಂಡರೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ. ಈ ಭಾಗದಲ್ಲಿ ರೋಡ್‌ ಶೋ, ಜನಸಂಪರ್ಕ ಸಭೆ, ದೇವಸ್ಥಾನ ಭೇಟಿ ಮತ್ತು ರೈತ ಪ್ರಮುಖರೊಂದಿಗೆ ಸಭೆ ನಡೆಸುವ ಮೂಲಕ ಕಾಂಗ್ರೆಸ್‌ ಹಿಡಿತವನ್ನು ಬಲಗೊಳಿಸಿಕೊಳ್ಳುವ ಪ್ರಯತ್ನವನ್ನು ರಾಹುಲ್ ನಡೆಸಿದ್ದಾರೆ.

ಸದ್ಯ ಬಿಜೆಪಿ ಹಿಡಿತದಲ್ಲಿರುವ ಕುಷ್ಟಗಿಯನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನವಾಗಿ ರಾಹುಲ್ ಎರಡನೇ ದಿನದ ಜನಾಶೀರ್ವಾದ ಯಾತ್ರೆಯನ್ನು ಕುಷ್ಟಗಿಯಿಂದ ಆರಂಭಿಸಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕುಷ್ಟಗಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುಮಾರು 3 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಬಾರಿ ಈ ಕ್ಷೇತ್ರದಲ್ಲಿ ಗೆಲುವು ಕಾಂಗ್ರೆಸ್‌ಗೆ ಒಲಿಯಬೇಕೆಂಬ ಕಸರತ್ತು ಜನಾಶೀರ್ವಾದ ಯಾತ್ರೆಯ ಮೂಲಕ ನಡೆದಿದೆ.

ರಾಹುಲ್ ಗಾಂಧಿ ಅವರ ರೋಡ್ ಶೋ ನಡೆದ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು. ಭದ್ರತೆಯ ನಡುವೆಯೂ ರಾಹುಲ್‌ ಜನರ ಕೈ ಕುಲುಕುವ ಮೂಲಕ ಜನರೊಂದಿಗೆ ಬೆರೆಯುವ ಪ್ರಯತ್ನ ಮಾಡಿದರು.

ರಾಯಚೂರಿನಲ್ಲಿ ರೋಡ್ ಶೋ ಮತ್ತು ಜನಸಂಪರ್ಕ ಸಭೆ ಮುಗಿಸುವ ರಾಹುಲ್ ಸೋಮವಾರ ಕಲಬುರಗಿಗೆ ಭೇಟಿ ನೀಡಲಿದ್ದಾರೆ. “ರಾಹುಲ್‌ ಗಾಂಧಿ ಅವರು ಸೋಮವಾರ ಜೇವರ್ಗಿಯಿಂದ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಅಗಲಿದ ಕಾಂಗ್ರೆಸ್‌ ಮುಖಂಡರಾದ ಧರ್ಮಸಿಂಗ್ ಮತ್ತು ಖಮರುಲ್ ಇಸ್ಲಾಂ ಅವರ ಮನೆಗೆ ಭೇಟಿ ನೀಡಲಿದ್ದಾರೆ. ಸಂಜೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ವೃತ್ತಿಪರರೊಂದಿಗೆ ಸಂವಾದ ನಡೆಸಲಿದ್ದಾರೆ” ಎಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ್ ತಿಳಿಸಿದರು.

“ರಾಹುಲ್‌ ಗಾಂಧಿ ಅವರ ಈ ಭೇಟಿ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಈ ಬಾರಿ ಕಲಬುರಗಿಯ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ. ಅಲ್ಲದೆ ಹೈದ್ರಾಬಾದ್‌ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಭದ್ರಕೋಟೆ ನಿರ್ಮಿಸಿಕೊಳ್ಳಲು ರಾಹುಲ್‌ ಅವರ ಜನಾಶೀರ್ವಾದ ಯಾತ್ರೆ ಅಡಿಪಾಯವಾಗಲಿದೆ” ಎಂಬ ವಿಶ್ವಾಸ ಅವರದ್ದು.

“ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ ಪರವಾದ ಜನಾಭಿಪ್ರಾಯವಿದೆ. ಈಗ ರಾಹುಲ್‌ ಗಾಂಧಿ ಅವರು ಈ ಭಾಗದಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಜನರು ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡುವ ವಿಶ್ವಾಸವಿದೆ. ಮಾರ್ಗ ಮಧ್ಯೆ ಹಲವು ದೇವಾಲಯಗಳಿಗೆ ರಾಹುಲ್‌ ಭೇಟಿ ನೀಡಿದ್ದಾರೆ. ಅದೇ ರೀತಿ ಕಲಬುರಗಿಯಲ್ಲೂ ಕ್ವಾಜಾ ಬಂದೇ ನವಾಜ್ ದರ್ಗಾ ಮತ್ತು ಮಾರ್ಗ ಮಧ್ಯದ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಈ ಭೇಟಿಯ ಹಿಂದೆ ರಾಜಕೀಯವಿಲ್ಲ” ಎನ್ನುತ್ತಾರೆ ಅವರು.

“ಬರದಿಂದ ಕಂಗೆಟ್ಟಿರುವ ರೈತರ ಸಾಲ ಮನ್ನಾ ಮಾಡುವ ಬದಲು ತಮ್ಮ ಶ್ರೀಮಂತ ಉದ್ಯಮಿ ಸ್ನೇಹಿತರ ಸಾಲವನ್ನು ದೇಶದ ಪ್ರಧಾನಮಂತ್ರಿ ಮನ್ನಾ ಮಾಡುತ್ತಿದ್ದಾರೆ”
– ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

Leave a comment

Top