An unconventional News Portal.

ರಾಹುಲ್ ಗಾಂಧಿ ‘ಟೆಂಪಲ್ ರನ್’ ಮೊದಲ ದಿನ: ಕಾಂಗ್ರೆಸ್ ಪಾಲಿಗೆ ಹೈದ್ರಾಬಾದ್ ಕರ್ನಾಟಕವೇ ಕದನ ಕಣ!

ರಾಹುಲ್ ಗಾಂಧಿ ‘ಟೆಂಪಲ್ ರನ್’ ಮೊದಲ ದಿನ: ಕಾಂಗ್ರೆಸ್ ಪಾಲಿಗೆ ಹೈದ್ರಾಬಾದ್ ಕರ್ನಾಟಕವೇ ಕದನ ಕಣ!

ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿರುವ ರಾಹುಲ್ ಗಾಂಧಿ ನಾಲ್ಕು ದಿನಗಳ ಹೈದರಾಬಾದ್‌ ಕರ್ನಾಟಕ ಪ್ರವಾಸ ನಡೆಸುತ್ತಿದ್ದಾರೆ. ಹೊಸಪೇಟೆಯಲ್ಲಿ ಆರಂಭವಾಗಿರುವ ರಾಹುಲ್‌ ಚುನಾವಣಾ ಯಾತ್ರೆ ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್‌ ಮೂಲಕ ಬಸವಕಲ್ಯಾಣ ತಲುಪಲಿದೆ. ಈ ಪ್ರವಾಸದಲ್ಲಿ ರಾಹುಲ್‌ ಜನಸಂಪರ್ಕ ಸಭೆಗಳ ಜತೆಗೆ ಹುಲಿಗಿಯ ಹುಲಿಗೆಮ್ಮ ದೇವಸ್ಥಾನ, ಗವಿಸಿದ್ದೇಶ್ವರ ಮಠ, ಕಲಬುರಗಿಯ ಖ್ವಾಜಾ ಬಂದೇ ನವಾಜ್‌ ದರ್ಗಾ ಮತ್ತು ಬಸವಕಲ್ಯಾಣಕ್ಕೆ ಭೇಟಿ ನೀಡುತ್ತಿದ್ದಾರೆ. 

ಚುನಾವಣೆ ಹೊಸ್ತಿಲಲ್ಲಿ ಇದೆ. ರಾಜ್ಯದಲ್ಲಿ ಅಧಿಕಾರಕ್ಕೆ ಮರಳುವುದು ಕಾಂಗ್ರೆಸ್‌ ಪಕ್ಷಕ್ಕೆ ಆದ್ಯತೆಯಾಗಿದೆ. ಅದು ಕೇವಲ ರಾಜ್ಯ ರಾಜಕಾರಣಕ್ಕೆ ಮಾತ್ರವಲ್ಲ, ದೇಶದ ರಾಜಕಾರಣದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಪೂರ್ವ ಪ್ರಚಾರವನ್ನು ನಡೆಸುತ್ತಿದ್ದಾರೆ. ಅವರ ಈ ಹೈದ್ರಬಾದ್ ಕರ್ನಾಟಕ ಭಾಗದ ಭೇಟಿ ಸಹಜವಾಗಿಯೇ ಗಮನ ಸೆಳೆಯುತ್ತಿದೆ. ಇದು ಎಷ್ಟರ ಮಟ್ಟಿಗೆ ರಾಜ್ಯ ಕಾಂಗ್ರೆಸ್‌ಗೆ ಚುನಾವಣಾ ವೇಳೆಯಲ್ಲಿ ಮತಗಳನ್ನು ತಂದುಕೊಡುತ್ತದೆ ಎಂಬ ಲೆಕ್ಕಾಚಾರಗಳೂ ಕೂಡ ಸಹಜವಾಗಿಯೇ ಆರಂಭವಾಗಿವೆ.

ಗುಜರಾತ್‌ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ್ದ ರಾಹುಲ್ ‘ಸಾಫ್ಟ್‌ ಹಿಂದುತ್ವ’ದ ಮೂಲಕ ಬಿಜೆಪಿಗೆ ಗಮನ ಸೆಳೆಯುವಂತಹ ಪೈಪೋಟಿ ನೀಡಿದ್ದರು. ಹೀನಾಯ ಸ್ಥಿತಿಗೆ ತಲುಪಿದ್ದ ಗುಜರಾತ್‌ನಲ್ಲಿ ಕಾಂಗ್ರೆಸ್‌ 77 ಸ್ಥಾನಗಳನ್ನು ಗೆದ್ದಿತ್ತು. ಈಗ ರಾಜ್ಯಕ್ಕೆ ಭೇಟಿ ನೀಡಿರುವ ರಾಹುಲ್ ‘ಟೆಂಪಲ್ ರನ್‌’ ಆರಂಭಿಸಿದ್ದಾರೆ. ಆದರೆ ಅದು  ಗುಜರಾತ್‌ ಮಾದರಿಗಿಂತ ಭಿನ್ನವಾಗಿದೆ.

“ರಾಹುಲ್ ಗಾಂಧಿ ದರ್ಗಾ- ದೇಗುಲ ಭೇಟಿಯು ಕಾಂಗ್ರೆಸ್ ಪಾಲಿಗೆ ಭಾರೀ ಮತ ಗಳಿಸಿಕೊಡುತ್ತದೆ ಎಂಬ ನಿರೀಕ್ಷೆಗಳೇನೂ ಇಲ್ಲ. ಗುಜರಾತ್‌ನಲ್ಲಿ ಬಿಜೆಪಿಯ ಕಟ್ಟಾ ಹಿಂದುತ್ವಕ್ಕೆ ಮುಖಾಮುಖಿಯಾಗಲು ರಾಹುಲ್ ಅವರಿಗೆ ಮಂದಿರ ಭೇಟಿ ಅಗತ್ಯವಾಗಿತ್ತು. ಆದರೆ, ರಾಜ್ಯದಲ್ಲಿ ಅವರ ಮಂದಿರ, ಮಠ, ದರ್ಗಾ ಭೇಟಿಯಿಂದ ಪಕ್ಷಕ್ಕೆ ಹೆಚ್ಚಿನ ಲಾಭವೇನೂ ಆಗಲಾರದು. ಇಂತಹ ಭೇಟಿಯಿಂದ ಜಾತ್ಯತೀತ ಪಕ್ಷ ಎನಿಸಿರುವ ಕಾಂಗ್ರೆಸ್‌ ಕೂಡಾ ನಮ್ಮೊಂದಿಗಿದೆ ಎಂಬ ಭಾವನೆ ಕೆಲ ಹಿಂದೂಗಳಲ್ಲಿ ಮೂಡಬಹುದು. ನೇರವಾಗಿ ಹಿಂದುತ್ವದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಸಂದರ್ಭದಲ್ಲಿ ಇಂತಹ ಭೇಟಿ ಸ್ವಲ್ಪ ಮಟ್ಟಿಗೆ ಪಕ್ಷಕ್ಕೆ ಅನುಕೂಲವಾಗಬಹುದು” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಡಾ. ಹರೀಶ್ ರಾಮಸ್ವಾಮಿ.

ಅದು ಹುಲಿಗೆಮ್ಮ ದೇವಸ್ಥಾನ: 

‘ಜನಾಶೀರ್ವಾದ ಯಾತ್ರೆ’ಯಲ್ಲಿ ಪಾಲ್ಗೊಂಡಿರುವ ರಾಹುಲ್ ಗಾಂಧಿ, ಮೊದಲ ದಿನ  ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದು ಹೈದರಾಬಾದ್‌ ಕರ್ನಾಟಕ ಭಾಗದ ಸ್ಥಳೀಯ ಸಮುದಾಯಗಳ ಜನರ ಒಲವು ಕಾಂಗ್ರೆಸ್‌ ಕಡೆಗೆ ಸೆಳೆಯುವಂತೆ ಮಾಡುವ ಪ್ರಯತ್ನವಾಗಿಯೂ ಕಾಣುತ್ತಿದೆ. ರಾಹುಲ್‌ ಗವಿಸಿದ್ದೇಶ್ವರ ಮಠ ಮತ್ತು ಬಸವಕಲ್ಯಾಣಕ್ಕೆ ಭೇಟಿ ನೀಡುವುದರ ಹಿಂದೆಯೂ ಲಿಂಗಾಯತ ಮತಗಳನ್ನು ಕಾಂಗ್ರೆಸ್‌ ಕಡೆಗೆ ಎಳೆತರುವ ಲೆಕ್ಕಾಚಾರ ಇದೆ. ರಾಜಕೀಯ ಅದರಲ್ಲೂ ಚುನಾವಣೆ ಹತ್ತಿರದಲ್ಲಿರುವಾಗ ಜಾತೀವಾರು ಮತಗಳ ಲೆಕ್ಕಾಚಾರ ಸಹಜವಾಗಿಯೇ ರಾಹುಲ್ ಭೇಟಿ ಹಿಂದೆ ಎದ್ದು ಕಾಣಿಸುತ್ತಿದೆ.

ಇವುಗಳ ಜತೆಗೆ, ರಾಜ್ಯ ಈ ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಪ್ರಾಬಲ್ಯವನ್ನು ತಗ್ಗಿಸುವ ಕಸರತ್ತಿಗೆ ರಾಹುಲ್‌ ಮುಂದಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ತಮ್ಮ ಸ್ಪರ್ಧೆಯ ಎರಡನೇ ಆಯ್ಕೆಯಾಗಿ ಬಸವಕಲ್ಯಾಣ ಕ್ಷೇತ್ರವನ್ನು ಗುರುತಿಸಿದ್ದಾರೆ ಎಂಬ ಮಾತುಗಳು ಅವರ ಆಪ್ತ ವಲಯದಿಂದ ಕೇಳಿಬಂದಿವೆ. ತಮ್ಮ ತವರು ಕ್ಷೇತ್ರ ವರುಣಾವನ್ನು ಮಗ ಡಾ. ಯತೀಂದ್ರರಿಗೆ ಬಿಟ್ಟುಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಜತೆಗೆ, ಬಸವಕಲ್ಯಾಣ ಅವರ ಎರಡನೇ ಅಯ್ಕೆಯಾಗಿರಲಿದೆ. ಒಂದು ವೇಳೆ, ಹಳೇ ಮೈಸೂರು ಭಾಗದ ಸ್ಥಳೀಯರು ತಮ್ಮ ಕೈ ಹಿಡಿಯದೇ ಹೋದರೆ, ಹೈದ್ರಾಬಾದ್ ಕರ್ನಾಟಕದ ಜನ ‘ಆಶೀರ್ವಾದ’ ಮಾಡಬಹುದು ಎಂಬ ಲೆಕ್ಕಾಚಾರಗಳೂ ನಡೆಯುತ್ತಿವೆ. ಹೀಗಾಗಿಯೇ, ರಾಹುಲ್ ಈ ಪ್ರವಾಸ ನಾನಾ ಕಾರಣಗಳಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರಿಗೆ ಮುಖ್ಯ ಅಂತ ಅನ್ನಿಸುತ್ತಿದೆ.

ಆದರೆ ರಾಹುಲ್ ಗಾಂಧಿ ದೇವಸ್ಥಾನ, ದರ್ಗಾ, ಮಠ ಹಾಗೂ ಅನುಭವ ಮಂಟಪಗಳ ಭೇಟಿಯ ಹಿಂದೆ ‘ವಿಶೇಷ ರಾಜಕೀಯ ಉದ್ದೇಶ’ಗಳಿಲ್ಲ ಎಂಬುದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಹೇಳಿಕೆ. ‘ಸಮಾಚಾರ’ದ ಜತೆ ಮಾತನಾಡಿದ ಅವರು, “ಚುನಾವಣೆಗೆ ಮುನ್ನಾ ರಾಜ್ಯದಲ್ಲಿ ಹಂತ ಹಂತವಾಗಿ ಪ್ರಚಾರ ಮಾಡಲು ರಾಹುಲ್‌ ಗಾಂಧಿ ಮುಂದಾಗಿದ್ದಾರೆ. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿ ರಾಜ್ಯದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಧ್ಯ ಕರ್ನಾಟಕ ಪ್ರವಾಸ ಮಾಡಲಿದ್ದಾರೆ. ಅವರ ದೇಗುಲ, ದರ್ಗಾ ಭೇಟಿಯ ಹಿಂದೆ ವಿಶೇಷ ರಾಜಕೀಯ ಉದ್ದೇಶವೇನಿಲ್ಲ. ಹಿಂದೆ ರಾಜ್ಯಕ್ಕೆ ಬಂದಾಗಲೂ ಅವರು ಕೆಲವು ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ಬಾರಿಯೂ ಭೇಟಿ ನೀಡುತ್ತಿದ್ದಾರೆ. ದೇವಾಲಯ ಭೇಟಿ ಹಿಂದೆ ಮತಗಳಿಕೆಯ ಉದ್ದೇಶವಿಲ್ಲ. ಹಿಂದುತ್ವದ ವಾರಸುದಾರರಂತೆ ವರ್ತಿಸುತ್ತಿರುವ ಬಿಜೆಪಿಯವರು ಈ ವಿಷಯದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ,” ಎಂದರು.

ಹಳೇ ನೋಟ:

2013ರ ವಿಧಾನಸಭಾ ಚುನಾವಣೆಯಲ್ಲಿ ಹೈದ್ರಾಬಾದ್ ಕರ್ನಾಟಕದ 41 ಕ್ಷೇತ್ರಗಳಲ್ಲಿ ಕಾಂಗ್ರೆಸ್ 23 ಸ್ಥಾನಗಳಲ್ಲಿ ಗೆದ್ದಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್‌ ಹೊಂದಿದೆ. ಇವತ್ತು ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಬಳ್ಳಾರಿ ಜಿಲ್ಲೆಯ ಒಂಭತ್ತೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಬರಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರ ಭಾಗವಾಗಿಯೇ, ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್‌ ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಅ ಮೂಲಕ ಕಾಂಗ್ರೆಸ್ ಮೊದಲ ಸುತ್ತಿನಲ್ಲಿ ತನ್ನ ಬಲ ಪ್ರದರ್ಶನಕ್ಕೆ ಉತ್ತರ ಕರ್ನಾಟಕ- ಹೈದ್ರಾಬಾದ್ ಕರ್ನಾಟಕವನ್ನು ವೇದಿಕೆಯನ್ನಾಗಿ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ರಾಹುಲ್‌ ಗಾಂಧಿ ಭೇಟಿ ನೀಡುತ್ತಿರುವ ಕ್ಷೇತ್ರಗಳ ಪೈಕಿ ಸದ್ಯ ಕೆಲವು ಕಾಂಗ್ರೆಸ್‌ನ ವಶದಲ್ಲಿದ್ದರೆ ಮತ್ತೆ ಕೆಲವು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌, ಕೆಜೆಪಿ ಪಾಲಾದಂತಹವು. ಕೆಲವು ಹಳೆಯ ಅಂಕಿ ಅಂಶಗಳು ಹೀಗಿವೆ;

  • 2013ರ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಯ ಆನಂದ್ ಸಿಂಗ್‌ 69,995 ಮತಗಳಿಂದ ಗೆದ್ದಿದ್ದರು. ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಅಬ್ದುಲ್‌ ವಹಾಬ್ 39,358 ಮತಗಳನ್ನು ಪಡೆಯಲು ಮಾತ್ರ ಸಾಧ್ಯವಾಗಿತ್ತು. ಈ ಬಾರಿ ಆನಂದ್‌ ಸಿಂಗ್ ಕಾಂಗ್ರೆಸ್‌ ಪಾಳಯದಲ್ಲೇ ಇರುವುದರಿಂದ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಂತಾಗಿದೆ.
  • ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಬಸವರಾಜ್‌ ಹಿಟ್ನಾಳ್ 81,062 ಮತಗಳಿಂದ ಗೆಲುವು ಸಾಧಿಸಿದ್ದರು. ಬಿಜೆಪಿಯ ಕರಡಿ ಸಂಗಣ್ಣ 54,274 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಎನಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಸಡಿಲಗೊಂಡರೆ ಅದು ಬಿಜೆಪಿಗೆ ವರವಾಗುವ ಸಾಧ್ಯತೆಯೂ ಇದೆ.
  • ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ತಿಪ್ಪರಾಜು 50,497 ಮತಗಳೊಂದಿಗೆ ಗೆದ್ದಿದ್ದರು. ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ರಾಜಾ ರಾಯಪ್ಪ ನಾಯಕ 47,227 ಮತಗಳನ್ನು ಗಳಿಸಿದ್ದರು. ರಾಯಚೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಡಾ. ಶಿವರಾಜ್ ಪಾಟೀಲ್ 45,263 ಮತಗಳೊಂದಿಗೆ ಗೆದಿದ್ದರೆ, ಕಾಂಗ್ರೆಸ್‌ನ ಸಯ್ಯದ್‌ ಯಾಸೀನ್‌ 37,392 ಮತಗಳೊಂದಿಗೆ ಸಮೀಪ ಸ್ಪರ್ಧಿ ಎನಿಸಿದ್ದರು. ರಾಯಚೂರಿನ ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಬಾರಿ ಗೆಲುವಿನ ಹತ್ತಿರಕ್ಕೆ ಹೋಗಿದ್ದ ಕಾಂಗ್ರೆಸ್‌ ಈ ಬಾರಿ ಗೆಲುವನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿದೆ.
  • ಕಲಬುರಗಿಯ ಮೂರು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಎರಡರಲ್ಲಿ ಗೆಲುವು ಸಾಧಿಸಿದ್ದರೆ ಕಲಬುರಗಿ ದಕ್ಷಿಣ ಕ್ಷೇತ್ರವನ್ನು ಬಿಜೆಪಿ ತನ್ನದಾಗಿಸಿಕೊಂಡಿತ್ತು. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ. ರಾಮಕೃಷ್ಣ 40,075 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ಬಿಜೆಪಿಯ ರೇವೂ ನಾಯಕ್‌ ಬೆಳಮಗಿ 32,866 ಮತಗೊಂದಿಗೆ ಸಮೀಪ ಸ್ಪರ್ಧಿಯಾಗಿದ್ದರು. ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಖಮರುಲ್‌ ಇಸ್ಲಾಂ 50.498 ಮತಗಳೊಂದಿಗೆ ಗೆದ್ದಿದ್ದರು. ಕೆಜೆಪಿಯ ನಾಸಿರ್‌ ಹುಸೇನ್ ಉಸ್ತಾದ್ 30,377 ಮತಗಳ ಮೂಲಕ ಸಮೀಪ ಸ್ಪರ್ಧಿಯಾಗಿದ್ದರು. ಕಲಬುರ್ಗಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ದತ್ತಾತ್ರೇಯ ಪಾಟೀಲ್‌ 36,850 ಮತಗೊಂದಿಗೆ ಗೆಲುವು ಕಂಡಿದ್ದರೆ ಜೆಡಿಎಸ್‌ನ ಶಶೀಲ್ ನಮೋಶಿ 26,880 ಮತಗಳೊಂದಿಗೆ ಸಮೀಪ ಸ್ಪರ್ಧಿಯಾಗಿದ್ದರು. ಈ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್‌ನ ಕೈಲಾಸ್‌ ವೀರೇಂದ್ರ ಪಾಟೀಲ್ ಪಡೆದಿದ್ದ ಮತಗಳ ಸಂಖ್ಯೆ 22,074. ಖಮರುಲ್‌ ಇಸ್ಲಾಂ ಅವರ ನಿಧನದಿಂದ ಈ ಬಾರಿಯ ಕಾಂಗ್ರೆಸ್‌ ಪರ ಅನುಕಂಪವಿದೆ. ಈ ಅನುಕಂಪವನ್ನು ಕಲಬುರ್ಗಿಯ ಮೂರೂ ಕ್ಷೇತ್ರಗಳ ಮೇಲೆ ಪ್ರಯೋಗಿಸಲು ಕಾಂಗ್ರೆಸ್ ಕಸರತ್ತು ನಡೆಸಿದೆ.
  • ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿ ಕರ್ನಾಟಕ ಮಕ್ಕಳ ಪಕ್ಷದ (ಕೆಎಂಪಿ) ಮೂಲಕ ನೈಸ್‌ ಕಂಪೆನಿ ಮುಖ್ಯಸ್ಥ ಅಶೋಕ್‌ ಖೇಣಿ 47,763 ಮತಗಳೊಂದಿಗೆ ಗೆದಿದ್ದರೆ, ಜೆಡಿಎಸ್‌ನ ಬಂಡೆಪ್ಪ ಕಾಂಶಪುರ 31,975 ಮತಗಳೊಂದಿಗೆ ಸಮೀಪ ಸ್ಪರ್ಧಿ ಎನಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮೀನಾಕ್ಷಿ ಸಂಗ್ರಾಮ್‌ 5,105 ಮತಗಳನ್ನು ಮಾತ್ರ ಪಡೆದಿದ್ದರು. ಬೀದರ್‌ ಕ್ಷೇತ್ರದಲ್ಲಿ ಕೆಜೆಪಿಯ ಗುರುಪಾದಪ್ಪ ನಾಗಮಾರಪಳ್ಳಿ 50,718 ಮತಗಳೊಂದಿಗೆ ಗೆಲುವು ಕಂಡಿದ್ದರು. ಕಾಂಗ್ರೆಸ್‌ನ ರಹೀಮ್ ಖಾನ್ 48,147 ಮತಗಳೊಂದಿಗೆ ಸಮೀಪ ಸ್ಪರ್ಧಿಯಾಗಿದ್ದರು. ಬಸವಕಲ್ಯಾಣದಲ್ಲಿ ಜೆಡಿಎಸ್‌ನ ಮಲ್ಲಿಕಾರ್ಜುನ ಖೂಬಾ 37,494 ಮತಗಳನ್ನು ಗಳಿಸಿ ಜಯ ಸಾಧಿಸಿದ್ದರೆ ಕಾಂಗ್ರೆಸ್‌ನ ಬಿ. ನಾರಾಯಣರಾವ್‌ 21,601 ಮತಗಳೊಂದಿಗೆ ಸಮೀಪ ಸ್ಪರ್ಧಿಯಾಗಿದ್ದರು. ಬಿಜೆಪಿಯ ಸಂಜಯ್‌ ಪಟ್ವಾರಿ 17,431 ಮತಗಳನ್ನು ಗಳಿಸಲು ಮಾತ್ರ ಸಾಧ್ಯವಾಗಿತ್ತು. ಈ ಕ್ಷೇತ್ರಗಳಲ್ಲಿ ಈ ಬಾರಿ ರಾಹುಲ್‌ ಪ್ರವಾಸ ಕಾಂಗ್ರೆಸ್‌ಗೆ ಅನುಕೂಲಕರ ಮತ ಗಳಿಸಿಕೊಡುವ ನಿರೀಕ್ಷೆ ಕಾಂಗ್ರೆಸ್‌ ಪಾಳಯದಲ್ಲಿದೆ.

 

ಜನಾಶೀರ್ವಾದದಲ್ಲಿ ಮೊದಲ ದರ್ಶನ:

ಚಿತ್ರಕೃಪೆ: ಕರ್ನಾಟಕ ಕಾಂಗ್ರೆಸ್ ಟ್ವಿಟರ್

ರಾಜ್ಯ ಪ್ರವಾಸದ ಆರಂಭದ ದಿನವಾದ ಶನಿವಾರ ಹೊಸಪೇಟೆಯ ಸಮಾವೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, “ಮೋದಿ ಸರ್ಕಾರ ಎಸ್‌ಸಿ ಎಸ್‌ಟಿ ಕಲ್ಯಾಣಕ್ಕೆ ಬಿಡುಗಡೆ ಮಾಡಿರುವ ಹಣ ರೂ. 55 ಸಾವಿರ ಕೋಟಿ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಎಸ್‌ಸಿ ಎಸ್‌ಟಿ ಕಲ್ಯಾಣ ಯೋಜನೆಗಳಿಗೆ ರೂ. 27 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಬಡವರು ಮತ್ತು ದಲಿತರ ಉದ್ಧಾರದ ಬಗ್ಗೆ ಕೇವಲ ಮಾತನಾಡುವುದಷ್ಟೇ ನರೇಂದ್ರ ಮೋದಿ ಅವರ ಕೆಲಸವಾಗಿದೆ. ಆದರೆ, ಉದ್ಧಾರ ಮಾಡುತ್ತಿರುವುದು ದೊಡ್ಡ ದೊಡ್ಡ ಉದ್ಯಮಿಗಳನ್ನು ಮಾತ್ರ” ಎಂದು ಟೀಕಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಮೋದಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ನಂಬರ್‌ 1 ಭ್ರಷ್ಟಾಚಾರದ ಸರ್ಕಾರ ಎಂದಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರಕ್ಕೂ ಮುಂಚೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿ. ಎಸ್. ಯಡಿಯೂರಪ್ಪ ಅವರ ಸರಕಾರ ಭ್ರಷ್ಟಾಚಾರದಲ್ಲಿ ಜಗತ್ತಿನಲ್ಲೇ ನಂಬರ್‌ 1 ಆಗಿತ್ತು. ಮೋದಿಜೀ, ಬಿಜೆಪಿ ಯಡಿಯೂರಪ್ಪ ಅವರನ್ನು ಪಕ್ಷದಿಂದ ಹೊರ ಹಾಕಿತ್ತು- ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

Leave a comment

Top