An unconventional News Portal.

ರಾಮಚಂದ್ರಪುರ ಮಠದ ನಿಯಂತ್ರಣಕ್ಕೆ ಅರ್ಜಿ: ಬೇಸಿಗೆ ರಜೆಯ ನಂತರ ವಿಚಾರಣೆ ಶುರು

ರಾಮಚಂದ್ರಪುರ ಮಠದ ನಿಯಂತ್ರಣಕ್ಕೆ ಅರ್ಜಿ: ಬೇಸಿಗೆ ರಜೆಯ ನಂತರ ವಿಚಾರಣೆ ಶುರು

ರಾಮಚಂದ್ರಾಪುರ ಮಠದ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದೇ ವಿಚಾರಣೆ ನಡೆಸುವಂತೆ ರಾಘವೇಶ್ವರ ಸ್ವಾಮಿ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ತಿರಸ್ಕರಿಸಿದೆ.

ಹೊಸನಗರದಲ್ಲಿರುವ ರಾಮಚಂದ್ರಪುರ ಮಠವನ್ನು ಸರಕಾರದ ಸುಪರ್ದಿಗೆ ತರುವಂತೆ ಕೋರಿ ಪಿಐಎಲ್ ಸಲ್ಲಿಸಲಾಗಿತ್ತು. ಇದನ್ನು ತ್ವರಿತವಾಗಿ, ಇಂದೇ ವಿಚಾರಣೆ ನಡೆಸಬೇಕು ಎಂದು ಮಠದ ಪರವಾಗಿ ವಕೀಲರು ನ್ಯಾಯಾಲಯಕ್ಕೆ ಕೋರಿಗೆ ಸಲ್ಲಿಸಿದ್ದರು.

ರಾಘವೇಶ್ವರ ಸ್ವಾಮಿ ಮೇಲೆ ಎರಡು ಅತ್ಯಾಚಾರ ಆರೋಪ ಇರುವುದರಿಂದ, ಮಠದ ಆವರಣ ಪ್ರವೇಶಕ್ಕೆ ನಿಷೇಧ ಹೇರುವಂತೆಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಗುರುವಾರದ ವಿಚಾರಣೆಯ ವೇಳೆ ಹೈಕೋರ್ಟ್ ಮಠ ನಿಯಂತ್ರಣ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ನಿರ್ದೇಶಿಸಿತ್ತು.

ಮುಖ್ಯ ಕಾರ್ಯದರ್ಶಿಗಳಿಗೆ ಕಡೆಯಿಂದ ಮನವಿ ಸಲ್ಲಿಸಲು ನೀಡಿದ್ದ ನಿರ್ದೇಶನ ಹಿಂಪಡೆಯುವಂತೆ ಸ್ವಾಮಿ ಪರ ವಕೀಲರು ಶುಕ್ರವಾರ ಹೈಕೋರ್ಟ್‍ನಲ್ಲಿ ಮನವಿ ಮಾಡಿದ್ದರು. ಈ ವೇಳೆ ನಿರ್ದೇಶನ ಹಿಂಪಡೆಯಲು ನಿರಾಕರಿಸಿದ ಕೋರ್ಟ್ ಬೇಸಿಗೆ ರಜೆಯ ಬಳಿಕವೇ ಅರ್ಜಿ ವಿಚಾರಣೆ ಕೈಗೆತ್ತುಕೊಳ್ಳುವುದಾಗಿ ತಿಳಿಸಿದೆ.

ಪಿಐಎಲ್ ಸಲ್ಲಿಸಿದ್ದು ಯಾಕೆ?

ರಾಮಚಂದ್ರಾಪುರ ಮಠದ ಮೇಲೆ ನಿಯಂತ್ರಣ ಹೇರಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ, ಹೈಕೋರ್ಟ್‍ಗೆ ಗುರುವಾರ ಎದುರ್ಕಳ ಈಶ್ವರ್ ಭಟ್, ಶಂಕರ್ ಭಟ್ ಹಾಗೂ ಇತರ 6 ಮಂದಿ ಪಿಐಎಲ್ ಸಲ್ಲಿಸಿದ್ದರು. ರಾಘವೇಶ್ವರ ಸ್ವಾಮಿ ಮೇಲೆ 2 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 4 ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ. ಅಧಿಕಾರ ದುರುಪಯೋಗ, ತೆರಿಗೆ ವಂಚನೆ ಹಾಗೂ ಅತ್ಯಾಚಾರ ಆರೋಪ ಇರುವ ಮಠಾಧಿಪತಿಗಳು ದೈನಂದಿನ ಧಾರ್ಮಿಕ ಚಟುವಟಿಕೆ ನಡೆಸುವುದು ಸರಿಯಲ್ಲ. ಇದರಿಂದ ಭಕ್ತಾಧಿಕಾದಿಗಳ ಮನಸ್ಸಿಗೆ ನೋವುಂಟಾಗಿದೆ.

ಹಾಗಾಗಿ ಮಠದ ಮೇಲೆ ನಿಯಂತ್ರಣ ಹೇರಿ ಆಡಳಿತಾಧಿಕಾರಿಯನ್ನು ನೇಮಿಸಬೇಕು. ಹೊಸ ಮಠಾಧಿಪತಿ ಆಯ್ಕೆಗೆ ಸಮಿತಿ ರಚನೆ ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಸಂಬಂಧ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ರಾಮಚಂದ್ರಾಪುರ ಮಠ, ರಾಘವೇಶ್ವರ ಸ್ವಾಮಿ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳಿಗೆ ನೋಟಿಸ್ ನೀಡಲಾಗಿದೆ.

Top