An unconventional News Portal.

ರಾಘವೇಶ್ವರ ಸ್ವಾಮಿ ಅತ್ಯಾಚಾರ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಸಿಐಡಿ

ರಾಘವೇಶ್ವರ ಸ್ವಾಮಿ ಅತ್ಯಾಚಾರ ಆರೋಪ: ಹೈಕೋರ್ಟ್ ಮೆಟ್ಟಿಲೇರಿದ ಸಿಐಡಿ

ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಗುರುವಾರ ಅಂಗೀಕರಿಸಿದೆ.

ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾ. ಎ.ವಿ. ಚಂದ್ರಶೇಖರ ನೇತೃತ್ವದ ಏಕಸದಸ್ಯ ಪೀಠ, ರಾಘವೇಶ್ವರ ಸ್ವಾಮಿಗೆ ನೋಟಿಸ್ ಜಾರಿ ಮಾಡಿ ಬೇಸಿಗೆ ರಜೆಯ ನಂತರ ಅರ್ಜಿ ವಿಚಾರಣೆ ಮಾಡುವುದಾಗಿ ತಿಳಿಸಿದೆ.

ಏನಿದು ಪ್ರಕರಣ?

ತಮ್ಮ ತಾಯಿಯ ಮೇಲೆ ಶ್ರೀಗಳು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಂಶುಮತಿ ಶಾಸ್ತ್ರಿ ಗಿರಿನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಸಿಐಡಿ ಪೊಲೀಸರು ತನಿಖೆ ನಡೆಸಿ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನಂತರ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ಮಧ್ಯೆ ರಾಘವೇಶ್ವರ ಸ್ವಾಮಿ ತಮ್ಮ ವಿರುದ್ಧದ ಪ್ರಕರಣ ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ತನಿಖೆಗೆ ಸಹಕರಿಸದ ಕಾರಣ ಅವರಿಗೆ ಜಾಮೀನು ರದ್ದು ಕೋರಿ ಸಿಐಡಿ ಕೂಡಾ ಅರ್ಜಿ ಸಲ್ಲಿಸಿತ್ತು.

ಈ ಎರಡೂ ಅರ್ಜಿಗಳು ವಿಚಾರಣಾ ಹಂತದಲ್ಲಿದ್ದಾಗಲೇ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾ.ಮುದಿಗೌಡರ್ ಅವರಿಂದ ಬೇರೊಬ್ಬ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಕೋರಿ ಪ್ರೇಮಲತಾ ಶಾಸ್ತ್ರಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾ ಮಾಡಿತ್ತು.

ಜತೆಗೆ ಸೆಷನ್ಸ್ ನ್ಯಾಯಾಲಯದಲ್ಲಿ ಬಾಕಿ ಇರುವ ಎರಡೂ ಅರ್ಜಿಗಳನ್ನು ಒಂದು ತಿಂಗಳಿನಲ್ಲಿ ಇತ್ಯರ್ಥಪಡಿಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಅರ್ಜಿಗಳ ವಿಚಾರಣೆ ಮುಗಿಸಿದ ಸೆಷನ್ಸ್ ನ್ಯಾಯಾಲಯ ಮಾ.31ರಂದು ಪ್ರಕರಣ ಮುಂದುವರಿಸಲು ಬೇಕಾದ ಅಗತ್ಯ ಸಾಕ್ಷಾಧಾರಗಳು ಇಲ್ಲ ಎಂದು ಹೇಳಿ ರಾಘವೇಶ್ವರ ಸ್ವಾಮಿ ಮೇಲಿದ್ದ ಆರೋಪವನ್ನು  ಕೈ ಬಿಟ್ಟಿತ್ತು. ಸೆಷನ್ಸ್ ಕೋರ್ಟ್‍ನ ಬಿಡುಗಡೆ ಆದೇಶವನ್ನು ಸಿಐಡಿ ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Leave a comment

Top