An unconventional News Portal.

ಚರ್ಚೆಯ 7ನೇ ನಿಮಿಷಕ್ಕೆ ವಿವಾದಾತ್ಮಕ ಹೇಳಿಕೆ: ಆರ್‌ಎಸ್‌ಎಸ್‌ ‘ಥಿಂಕ್ ಟ್ಯಾಂಕ್’ ಹೇಳಿದ್ದೇನು?

ಚರ್ಚೆಯ 7ನೇ ನಿಮಿಷಕ್ಕೆ ವಿವಾದಾತ್ಮಕ ಹೇಳಿಕೆ: ಆರ್‌ಎಸ್‌ಎಸ್‌ ‘ಥಿಂಕ್ ಟ್ಯಾಂಕ್’ ಹೇಳಿದ್ದೇನು?

ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಒಂದು ವೇಳೆ ಆಗಿದ್ದರೆ, ದಕ್ಷಿಣ ಭಾರತದ ಕಪ್ಪು ಜನರ ಜತೆ ಅವರೇಕೆ ಬದುಕುತ್ತಿದ್ದರು?

ಹೀಗಂತ ಪ್ರಶ್ನಿಸುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಥಿಂಕ್ ಟ್ಯಾಂಕ್’ ತರುಣ್ ವಿಜಯ್. ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ದ ಸಂಪಾದಕರಾಗಿದ್ದ ತರುಣ್, ಬಿಜೆಪಿಯಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸದ್ಯ ಅವರು ‘ಇಂಡಿಯಾ ಆಫ್ರಿಕಾ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್‌’ನ ಅಧ್ಯಕ್ಷರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ  ಕತಾರ್ ಮೂಲದ ‘ಆಲ್‌ ಜಝೀರಾ’ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಹ್ವಾನಿಸಲಾಗಿತ್ತು. ‘Racism against Africans in India’ ಎಂಬ ಕಾರ್ಯಕ್ರಮದ ಚರ್ಚೆ ಆರಂಭಗೊಂಡ 7ನೇ ನಿಮಿಷಯಕ್ಕೆ ಸ್ಟುಡಿಯೋದಲ್ಲಿದ್ದ ಅತಿಥಿ, ಬೆಂಗಳೂರು ಮೂಲಕ ಫೊಟೋಗ್ರಾಫರ್ ಮಹೇಶ್ ಶಾಂತರಾಮ್‌ ಅವರ ಪ್ರಶ್ನೆಯೊಂದಕ್ಕೆ ಕೆರಳಿದ ತರುಣ್ ವಿಜಯ್, “ನಾವು (ಭಾರತೀಯರು) ಜನಾಂಗೀಯ ದ್ವೇಷಿಗಳಾಗಿದ್ದರೆ ದಕ್ಷಿಣ ಭಾರತದವರ ಜತೆ ಹೇಗೆ ಬದುಕುತ್ತಿದ್ದೆವು. ನಿಮಗೆ ಗೊತ್ತಲ್ಲಾ, ತಮಿಳರು, ಕೇರಳಿಗರು, ಕರ್ನಾಟಕ ಮತ್ತು ಆಂಧ್ರದವರ ಜತೆ ನಾವೇಕೆ ಬದುಕುತ್ತಿದ್ದೆವು?” ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ದಕ್ಷಿಣ ಭಾರತದ ಕಪ್ಪು ಚರ್ಮದ ಜನರೊಂದಿಗೆ ಬದುಕುತ್ತಿರುವ ಬಿಳಿ ಬಣ್ಣದ  ಭಾರತೀಯರು ಆಫ್ರಿಕದವರನ್ನು ಅವರ ಚರ್ಮದ ಕಾರಣಕ್ಕೆ ದ್ವೇಷಿಸಲು ಸಾಧ್ಯವಿಲ್ಲ ಎಂದು ಸಾಧಿಸಲು ಹೊರಟರು. ಈ ಮೂಲಕ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ.

ತರುಣ್ ಚರ್ಚೆ ಆರಂಭದಲ್ಲಿಯೇ ಹೀಗೊಂದು ಹೇಳಿಕೆ ನೀಡದರಾದರೂ, ಅದು ಕಾರ್ಯಕ್ರಮದಲ್ಲಿ ಮತ್ತೆ ಎಲ್ಲಿಯೂ ಪ್ರಸ್ತಾಪವಾಗುವುದಿಲ್ಲ. ಬದಲಿಗೆ ತರುಣ್ ವಿಜಯ್ ಬಾಯಲ್ಲಿ, ಪದೇ ಪದೇ ಕರ್ನಾಟಕ ಮತ್ತು ಬೆಂಗಳೂರಿನ ಹೆಸರುಗಳು ಪ್ರಸ್ತಾಪವಾಗುತ್ತವೆ. ಚರ್ಚೆಯ 17ನೇ ನಿಮಿಷದಲ್ಲಿ ಮತ್ತೆ ಮಹೇಶ್ ಶಾಂತರಾಮ್‌ ಅವರ ಮಾತಿಗೆ ಪ್ರತಿಕ್ರಿಯೆ ನೀಡುವ ತರುಣ್ ವಿಜಯ್, “ಕರ್ನಾಟಕದಲ್ಲಿ ನಡೆದ ಈಶಾನ್ಯ ಭಾರತದ ಪ್ರಜೆಗಳ ಮೇಲೆ ನಡೆದ ದಾಳಿಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ” ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಹಾಗೆಯೇ ದೇಶದ ನಾನಾ ರಾಜ್ಯಗಳಲ್ಲಿ ಮುಖ್ಯವಾಗಿ ಕರ್ನಾಟಕ ಮತ್ತು ದಿಲ್ಲಿಯಲ್ಲಿ ಬಿಹಾರಿಗಳ ಮೇಲೆ, ಈಶಾನ್ಯ ಭಾರತೀಯರ ಮೇಲೆ ನಡೆಯುವ ಹಲ್ಲೆಗಳನ್ನು ಅವರು ನೆನಪು ಮಾಡಿಕೊಡುತ್ತಾರೆ.

ದ್ವಂದ್ವ ನಿಲುವು:

ತರುಣ್ ವಿಜಯ್ ಪಾಲ್ಗೊಂಡ ಚರ್ಚೆ ಕಾರ್ಯಕ್ರಮದ ಸ್ಟಿಲ್.

ತರುಣ್ ವಿಜಯ್ ಪಾಲ್ಗೊಂಡ ಚರ್ಚೆ ಕಾರ್ಯಕ್ರಮದ ಸ್ಟಿಲ್.

‘ಆಲ್‌ ಜಝೀರಾ’ ವಾಹಿನಿ ಸಾಮಾಜಿಕ ಜಾಲತಾಣಗಳ ಜತೆ ಸಂಪರ್ಕ ಬೆಸೆಯುವ ನಿಟ್ಟಿನಲ್ಲಿ ‘ದಿ ಸ್ಟ್ರೀಮ್’ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಇಲ್ಲಿ ನಿರ್ದಿಷ್ಟ ವಿಚಾರದ ಮೇಲೆ ಚರ್ಚೆಯನ್ನು ಆರಂಭಿಸುತ್ತಿದ್ದ ಹಾಗೆಯೇ ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತು ಬರುವ ಪ್ರತಿಕ್ರಿಯೆಗಳನ್ನು ವೀಕ್ಷಕರ ಮುಂದಿಡಲಾಗುತ್ತದೆ.  ಭಾರತದಲ್ಲಿ ನಡೆಯುತ್ತಿರುವ ಆಫ್ರಿಕನ್ನರ ಮೇಲಿನ ದಾಳಿಗಳ ಹಿನ್ನೆಲೆಯಲ್ಲಿ  ನಡೆದ ಈ ಚರ್ಚೆಯಲ್ಲಿಯೂ ಮಹೇಶ್ ಶಾಂತರಾಮ್, ತರುಣ್ ವಿಜಯ್ ಜತೆಗೆ ಇನ್ನಿಬ್ಬರು ಭಾರತದಲ್ಲಿರುವ ಆಫ್ರಿಕನ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚರ್ಚೆಯ ಉದ್ದಕ್ಕೂ, ಭಾರತದ ಒಳಗೆ ನಡೆಯುವ ಹಲ್ಲೆಗಳನ್ನು ಪ್ರಸ್ತಾಪಿಸುತ್ತಲೇ ಬಂದ ತರುಣ್ ವಿಜಯ್, ಆಫ್ರಿಕನ್ನರ ಮೇಲಿನ ದಾಳಿಗಳನ್ನು ‘ಜನಾಂಗೀಯ ದ್ವೇಷ’ದ ಹಿನ್ನೆಲೆಯಲ್ಲಿ ನಡೆದ ಹಲ್ಲೆಗಳು ಎಂದು ಒಪ್ಪಿಕೊಳ್ಳಲಿಲ್ಲ. ಬದಲಿಗೆ, ಈ ಬಗ್ಗೆ ಚರ್ಚಿಸುವುದೇ ಸಮಾಜಕ್ಕೆ ವಿಷವನ್ನು ಬಡಿಸುವ ಕೆಲಸ ಎಂದು ಕಿಡಿ ಕಾರಿದರು.  ಮಾತ್ರವಲ್ಲ, ‘ಇದು ದೇಶ ವಿರೋಧಿ’ ಕೃತ್ಯ ಎಂದು ಜರಿದರು. ಅವರ ದ್ವಂದ್ವ ನಿಲುವು ಚರ್ಚೆಯ ಉದ್ದಕ್ಕೂ ಕಂಡು ಬಂತು.

ಯಾರಿದು ತುರುಣ್ ವಿಜಯ್?:

ಒಂದು ಕಾಲದಲ್ಲಿ ಹವ್ಯಾಸಿ ಬರಹಗಾರನಾಗಿ ವೃತ್ತಿ ಜೀವನ ಆರಂಭಿಸಿದ ತರುಣ್ ವಿಜಯ್ ರಾಷ್ಟ್ರೀಯ ‘ಸ್ವಯಂ ಸೇವಕ ಸಂಘ’ದ ಮುಖವಾಣಿ ಪತ್ರಿಕೆ ‘ಪಾಂಚಜನ್ಯ’ದ ದೀರ್ಘಕಾಲದ ಸಂಪಾದಕರು ಎನ್ನಿಸಿಕೊಂಡರು. ನಂತರ ಬಿಜೆಪಿಯಿಂದ ರಾಜ್ಯ ಸಭೆಯನ್ನು ಪ್ರತಿನಿಧಿಸಿದವರು. ಸದ್ಯ ಆರ್‌ಎಸ್‌ಎಸ್‌ನ ಬೌದ್ಧಿಕ ಕಸರತ್ತುಗಳನ್ನು ನಡೆಸಲು ಸ್ಥಾಪಿಸಿರುವ ಡಾ. ಶಾಮ್‌ಪ್ರಸಾದ್ ಮುಖರ್ಜಿ ಸಂಶೋಧನಾ ಸಂಸ್ಥೆಯ ನಿರ್ದೇಶಕರೂ ಆಗಿದ್ದರು. ಜಲ್ಲಿಕಟ್ಟು ವಿಚಾರ ಮುನ್ನೆಲೆಗೆ ಬಂದಾಗ ತರುಣ್ ವಿಜಯ್ ತಮುಳುನಾಡಿಗರ ಪರವಾಗಿ ಪ್ರತಿಕ್ರಿಯೆ ನೀಡಿದ್ದರು.

ಚರ್ಚೆಯ ಸಂಪೂರ್ಣ ವಿಡಿಯೋ ಇಲ್ಲಿದೆ:

Top