An unconventional News Portal.

ಪಿಯುಸಿ ಮೌಲ್ಯಮಾಪನಕ್ಕೆ ಪರ್ಯಾಯದ ಆಟ: ಎಂಎಲ್ಸಿಗಳ ಮೇಲೆ ಚಪ್ಪಲಿ ತೂರಾಟ

ಪಿಯುಸಿ ಮೌಲ್ಯಮಾಪನಕ್ಕೆ ಪರ್ಯಾಯದ ಆಟ: ಎಂಎಲ್ಸಿಗಳ ಮೇಲೆ ಚಪ್ಪಲಿ ತೂರಾಟ

ಪಿಯುಸಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿಳಂಬವಾಗಿದ್ದ ಪಿಯು ಮೌಲ್ಯಮಾಪನ ಪ್ರಕ್ರಿಯೆ ಏ.16 ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಪಿಯು ಮಂಡಳಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮೇ ಮೊದಲ ವಾರ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದರ ನಡುವೆ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ’ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಹಿಷ್ಕಾರಕ್ಕೆ ಬಗ್ಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, “ನಾಳೆಯಿಂದ ಮೌಲ್ಯ ಮಾಪನ ಆರಂಭಿಸುವುದಾಗಿ.” ಗುರುವಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಪ್ರಿಲ್ ಅಂತ್ಯದೊಳಗೆ ಮೌಲ್ಯಮಾಪನ ಪೂರ್ಣಗೊಳ್ಳಲಿದ್ದು, ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು,” ಎಂದು ಸಚಿವ ಕಿಮ್ಮನೆ ತಿಳಿಸಿದ್ದಾರೆ. “ಮೌಲ್ಯಮಾಪನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಬೇರೆ ಉಪನ್ಯಾಸಕರಿದ್ದಾರೆ. ಅನಕ್ಷರಸ್ಥರ ಕೈಯಲ್ಲಿ ಮೌಲ್ಯಮಾಪನ ಮಾಡಿಸುವುದಿಲ್ಲ,” ಎಂದರು.

ನಾಳೆಯಿಂದ ಪಿಯುಸಿ ಮೌಲ್ಯ ಮಾಪನ ನಡೆಯಲಿದೆ. ಖಾಸಗಿ ಉಪನ್ಯಾಸಕರನ್ನು ಬಳಸಿ ಮೌಲ್ಯಮಾಪನ ನಡೆಸಲಾಗುತ್ತಿದೆ. ಏಪ್ರಿಲ್ 30 ರ ಒಳಗೆ ಮೌಲ್ಯ ಮಾಪನ ಪೂರ್ಣಗೊಳಿಸಿ, ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ.

ಪಿಯುಸಿ ಉಪನ್ಯಾಸಕರ ಮನವೊಲಿಕೆ ಕಷ್ಟ ಸಾಧ್ಯವಾಗುತ್ತಿರುವುದರಿಂದ ಪ್ರಶ್ನೆ ಪತ್ರಿಕೆ ಮೌಲ್ಯಮಾಪನಕ್ಕೆ ಖಾಸಗಿ ಅನುದಾನರಹಿತ ಏಳು ಸಾವಿರ ಉಪನ್ಯಾಸಕರನ್ನು ಬಳಸಿಕೊಳ್ಳಲು ಪಿಯು ಮಂಡಳಿ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಇದೆ. ಪ್ರಶ್ನೆ ಪತ್ರಿಕೆ ಮೌಲ್ಯಮಾಪನಕ್ಕೆ 10 ಸಾವಿರ ಉಪನ್ಯಾಸಕರ ಅಗತ್ಯವಿದೆ. ಶುಕ್ರವಾರದಿಂದಲೇ ಉತ್ತರ ಪತ್ರಿಕೆಗಳ ಕೋಡಿಂಗ್ ಡಿ ಕೋಡಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಪ್ರತಿಭಟನೆ ಬದಲು ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪದವಿ ಪೂರ್ವ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಇದೀಗ ಅಹೋರಾತ್ರಿ ಉಪವಾಸ ಮುಂದುವರೆಸಲು ನಿರ್ಧರಿಸಿದ್ದಾರೆ.

ಮುಷ್ಕರ ನಿರತ ಸರ್ಕಾರಿ ಉಪನ್ಯಾಸಕರನ್ನು ದೂರವಿಟ್ಟ ಸರ್ಕಾರ ನಾಳೆಯಿಂದಲೇ ಪಿಯು ಮೌಲ್ಯಮಾಪನ ಪ್ರಕ್ರಿಯೆ ಶುರು ಮಾಡಲಿದೆ ಎನ್ನುವ ನೋವಿನಲ್ಲಿದ್ದ ಪಿಯುಸಿ ಉಪನ್ಯಾಸಕರು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ವಿಧಾನಪರಿಷತ್ ಸದಸ್ಯರತ್ತ ಚಪ್ಪಲಿ ತೂರಿರುವ ಘಟನೆ ನಡೆದಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪರಿಷತ್ ಸದಸ್ಯರಿಗೆ ಧಿಕ್ಕಾರ ಕೂಗಿದ ಪ್ರತಿಭಟನಾ ನಿರತರು, ಸ್ಥಳದಿಂದ ಎಂಎಲ್ಸಿಗಳನ್ನು ಹೊರ ಹೊಗುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಹೊರಗೆ ಹೋಗುತ್ತಿದ್ದ ಗಣೇಶ್ ಕಾರ್ಣಿಕ್, ಅರುಣ್ ಶಹಾಪೂರ ಮೇಲೆ ಉಪನ್ಯಾಸಕರು ಚಪ್ಪಲಿ ತೂರಿದ್ದಾರೆ.

Top