An unconventional News Portal.

ಪಿಯು ಮೌಲ್ಯಮಾಪನ ಪರ್ಯಾಯದ ಸುತ್ತ ಅಪಸ್ವರ: ಮುಂದುವರಿದ ಬಿಕ್ಕಟ್ಟು

ಪಿಯು ಮೌಲ್ಯಮಾಪನ ಪರ್ಯಾಯದ ಸುತ್ತ ಅಪಸ್ವರ: ಮುಂದುವರಿದ ಬಿಕ್ಕಟ್ಟು

ಕಳೆದ 16 ದಿನಗಳಿಂದ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಪಿಯುಸಿ ಮೌಲ್ಯಮಾಪನ ಸುತ್ತ ಅತಂತ್ರ ಪರಿಸ್ಥಿತಿ ಮುಂದುವರಿದಿದೆ.

ಒಂದೆಡೆ ಪ್ರತಿಭಟನಾಕಾರರ ಬೇಡಿಕೆಗೆ ಮಣಿಯದ ಸರಕಾರ ಪರ್ಯಾಯ ವ್ಯವಸ್ಥೆಯ ಮಾತುಗಳನ್ನು ಜಪಿಸಲು ಶುರುಮಾಡಿ ವಾರದ ಮೇಲಾಗಿದೆ. ಆದರೆ, ಈವರೆಗೂ ಪಿಯುಸಿ ಮೌಲ್ಯ ಮಾಪನ ಪ್ರಕ್ರಿಯೆಗೆ ಚಾಲನೆ ನೀಡಲು ಸಾಧ್ಯವಾಗಲಿಲ್ಲ. ಭಾನುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, “ಅನುದಾನ ರಹಿತ ಕಾಲೇಜುಗಳ 7 ಸಾವಿರ ಉಪನ್ಯಾಸಕರಿಗೆ ಮೌಲ್ಯಮಾಪನಕ್ಕೆ ಹಾಜರಾಗಿವಂತೆ ಆದೇಶ ನೀಡಲಾಗಿದೆ. 4 ಸಾವಿರ ಪ್ರೌಢಶಾಲೆ ಶಿಕ್ಷಕರನ್ನೂ ಬಳಸಿಕೊಳ್ಳಲಾಗುವುದು. ಅವರಿಗೆ ಮಾದರಿ ಉತ್ತರ ಪತ್ರಿಕೆಗಳನ್ನು ನೀಡಿ, ಅದರಂತೆ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಿಸಲಾಗುವುದು,” ಎಂದು ಪ್ರಕಟಿಸಿದ್ದಾರೆ.

 

ಭತ್ಯೆ ಭಕ್ಷೀಸು: 

“ಏಪ್ರಿಲ್ 15 ರಂದು ಪದವಿಪೂರ್ವ ಪ್ರಾಂಶುಪಾಲರು, ಉಪನ್ಯಾಸಕರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಹ ಶಿಕ್ಷಕರುಗಳಿಗೆ ಹೆಚ್ಚುವರಿ ವೇತನ ಬಡ್ತಿಯನ್ನು ಮಂಜೂರು ಮಾಡಿದೆ. ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಮಾಸಿಕ 1000ರೂ. ಗಳ ವಿಶೇಷ ಭತ್ಯೆಯನ್ನು ಮಂಜೂರು ಮಾಡಿದೆ. ಇದರ ಜೊತೆಗೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ನೀಡುತ್ತಿರುವ ರೂ.500 ಮತ್ತು 400 ಗಳ ವಿಶೇಷ ಭತ್ಯೆಯನ್ನು ಮುಂದುವರಿಸಲಾಗಿದೆ. ಸರಕಾರವು ರಾಜ್ಯದಲ್ಲಿ ಬರಪರಿಹಾರ, ಕುಡಿಯುವ ನೀರಿನ ಮತ್ತು ಮೂಲಭೂತ ಸೌಲಭ್ಯಗಳ ಅವಶ್ಯಕತೆಗಳ ನಡುವೆಯೂ ಭತ್ಯೆ ಸೌಲಭ್ಯಗಳನ್ನ ಕಲ್ಪಿಸಿದೆ. ಇದನ್ನು ಗಮನದಲ್ಲಿರಿಸಿಕೊಂಡು ಮೌಲ್ಯಮಾಪನಕ್ಕೆ ಹಾಜರಾಗಬೇಕು. ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸದೆ ಮುಷ್ಕರದಲ್ಲಿ ಮುಂದುವರೆಯುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಶಿಕ್ಷಣ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಮೌಲ್ಯಮಾಪನಕ್ಕೆ ಹಾಜರಾಗುವವರಿಗೆ ಬೆದರಿಕೆ ಹಾಕಿದರೆ ಅಂತಹವರ ವಿರುದ್ಧ ಸಹ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು,” ಎಂದು ಸಚಿವರು ತಿಳಿಸಿದ್ದಾರೆ.

ಮೌಲ್ಯಮಾಪನ ಕಗ್ಗಂಟು: 

“ಇದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರು ಹಾಗೂ ಮೌಲ್ಯ ಮಾಪನ ಮಾಡುವವರಿಗೆ ನೆರವಾಗಲು ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆಯ ಕೋಡಿಂಗ್ ಕಾರ್ಯವನ್ನು ನಿರ್ವಹಿಸಲು 46 ಮೌಲ್ಯಮಾಪನ ಕೇಂದ್ರಗಳಿಗೆ ರಾಜ್ಯದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳು ಹಾಗೂ ಶಿಕ್ಷಕ ತರಬೇತಿ ಸಂಸ್ಥೆಗಳಿಂದ 600 ಉಪನ್ಯಾಸಕರನ್ನು ನಿಯೋಜಿಸಲಾಗಿದೆ,” ಎಂದು ಸ್ಪಷ್ಟಪಡಿಸಿದರು.

“ಮೌಲ್ಯಮಾಪನ ಕಾರ್ಯಕ್ಕಾಗಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಹಾಗೂ ಶಿಕ್ಷಕ ತರಬೇತಿ ಸಂಸ್ಥೆಗಳ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರುವ 500 ಉಪನ್ಯಾಸಕರಿಗೆ ನೇಮಕಾತಿ ಆದೇಶವನ್ನು ಹೊರಡಿಸಲಾಗಿದೆ. ಮೌಲ್ಯಮಾಪನಕ್ಕಾಗಿ ಖಾಸಗಿ ಪದವಿಪೂರ್ವ ಕಾಲೇಜುಗಳ ಸುಮಾರು 7 ಸಾವಿರ ಉಪನ್ಯಾಸಕರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ಒಂದು ಪಕ್ಷ ಆದೇಶ ಹೊರಡಿಸುವ ಉಪನ್ಯಾಸಕರು ಗೈರು ಹಾಜರಾದರೆ, ಅವರಿಗೆ ನೋಟಿಸ್ ಕಳುಹಿಸಲು ನಿರ್ದರಿಸಲಾಗಿದೆ. ಅಲ್ಲದೆ, ಕಳೆದ 8 ವರ್ಷಗಳಿಂದ ಸೇವೆಯಲ್ಲಿ ನಿವೃತ್ತಿ ಹೊಂದಿದ 4 ಸಾವಿರ ಉಪನ್ಯಾಸಕರನ್ನು ಈಗಾಗಲೇ ಮೌಲ್ಯಮಾಪನ ಮಾಡಲು ಆಯ್ಕೆ ಮಾಡಿ ಸಿದ್ದತೆ ನಡೆಸಲಾಗಿದೆ. ಒಟ್ಟು 11 ಸಾವಿರ ಉಪನ್ಯಾಸಕರು ಮೌಲ್ಯಮಾಪನ ಮಾಡುತ್ತಿದಾರೆ. ಮೌಲ್ಯಮಾಪನ ಮಾಡಲು ಅರ್ಹರಿರುವ ಸ್ನಾತ್ತಕೋತ್ತರ ಪದವಿ ಪೂರೈಸಿದ ಪ್ರೌಢಶಾಲಾ ಶಿಕ್ಷಕರನ್ನು ಈಗಾಗಲೆ ಆಯ್ಕೆ ಮಾಡಲಾಗಿದ್ದು, ಅನಿವಾರ್ಯ ಸ್ಥಿತಿ ಬಂದರೆ ಅವರಿಂದ ಮೌಲ್ಯಮಾಪನ ಮಾಡಿಸಲಾಗುವುದು,” ಎಂದು ಸರಕಾರ ಅಂದುಕೊಂಡಿರುವ ಪರ್ಯಾಯ ವ್ಯವಸ್ಥೆಯನ್ನು ಬಿಚ್ಚಿಟ್ಟರು.

 

Top