An unconventional News Portal.

ಶುರುವಾದ ಪಿಯುಸಿ ಮೌಲ್ಯಮಾಪನ: ಮೇ ಮಧ್ಯದಲ್ಲಿ ಫಲಿತಾಂಶ ನಿರೀಕ್ಷೆ

ಶುರುವಾದ ಪಿಯುಸಿ ಮೌಲ್ಯಮಾಪನ: ಮೇ ಮಧ್ಯದಲ್ಲಿ ಫಲಿತಾಂಶ ನಿರೀಕ್ಷೆ

ಹಲವು ತೊಡಕುಗಳ ನಡುವೆ ಬುಧವಾರದಿಂದ ರಾಜ್ಯದ ಎಲ್ಲ ಕಡೆ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ ಮೌಲ್ಯಮಾಪನ ಅಧಿಕೃತವಾಗಿ ಆರಂಭಗೊಂಡಿದೆ.

ಮಂಗಳವಾರ ಸಂಜೆ ಉಪನ್ಯಾಸಕರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡು, “ವಿದ್ಯಾರ್ಥಿಗಳ ಹಿತಕ್ಕೋಸ್ಕರ ಮೌಲ್ಯಮಾಪನದಲ್ಲಿ ಪಾಲ್ಗೊಳ್ಳುವುದಾಗಿ,” ಹೇಳಿದ್ದರು.

“ಬುಧವಾರ ಬೆಳಗ್ಗೆಯೇ ಬೆಂಗಳೂರು, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನ ಪ್ರಾರಂಭಿಸಲಾಗಿದೆ,” ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ರಾಮೇಗೌಡ ತಿಳಿಸಿದ್ದಾರೆ.

“ಮೊದಲ ದಿನ ಪ್ರಶ್ನೆ ಪತ್ರಿಕೆಗಳ ಡಿಕೋಡಿಂಗ್ ಪ್ರಾರಂಭವಾಗಿದೆ. ಇದು ಶನಿವಾರದವರೆಗೂ ನಡೆಯಲಿದ್ದು, ಸೋಮವಾರದಿಂದ ಅಧಿಕೃತವಾಗಿ ಮೌಲ್ಯಮಾಪನ ಪ್ರಾರಂಭವಾಗಲಿದೆ,” ಎಂದು ಹೇಳಿದರು.

ಕೆಲವು ಕೇಂದ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಹೊರತುಪಡಿಸಿದರೆ ಬಹುತೇಕ ಕಡೆ ಮೊದಲ ದಿನ ಡಿಕೋಡಿಂಗ್ ವ್ಯವಸ್ಥೆ ಸಮರ್ಪಕವಾಗಿ ನಡೆದಿದೆ. ಪ್ರತಿಯೊಂದು ಮೌಲ್ಯಮಾಪನ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.

“ಈಗಾಗಲೇ ಉಪನ್ಯಾಸಕರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿರುವುದರಿಂದ ಮೌಲ್ಯಮಾಪನ ಸರಾಗವಾಗಿ ನಡೆಯಲಿದೆ. ಮೊದಲೇ ನಿಗದಿಪಡಿಸಿರುವಂತೆ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಒಂದು ವಾರ ವಿಳಂಬವಾದರೂ ಫಲಿತಾಂಶ ಪ್ರಕಟಣೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಪ್ರತಿದಿನ ಉಪನ್ಯಾಸಕರು ಒಂದು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರೆ ನಿಗದಿಯಾಗಿರುವ ದಿನಾಂಕದಂದೇ ಫಲಿತಾಂಶ ಪ್ರಕಟ ಮಾಡಲಿದ್ದೇವೆ,” ಎಂದು ತಿಳಿಸಿದರು.

ಮೇ ಎರಡನೇ ವಾರದಲ್ಲಿ ಪಿಯುಸಿ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

Top