An unconventional News Portal.

‘ಮಹದಾಯಿ ಹೋರಾಟ’ದ ವರದಿಗೆ ಮೇಲ್ಪಂಕ್ತಿ ಹಾಕಿದ ಪಬ್ಲಿಕ್ ಟಿವಿ: ‘ಚಾಂಪಿಯನ್ ಡಾನ್ಸ್’ ಮಾಡುತ್ತಿದ್ದವರು ಎಚ್ಚರಾದರು!

‘ಮಹದಾಯಿ ಹೋರಾಟ’ದ ವರದಿಗೆ ಮೇಲ್ಪಂಕ್ತಿ ಹಾಕಿದ ಪಬ್ಲಿಕ್ ಟಿವಿ: ‘ಚಾಂಪಿಯನ್ ಡಾನ್ಸ್’ ಮಾಡುತ್ತಿದ್ದವರು ಎಚ್ಚರಾದರು!

ಉತ್ತರ ಕರ್ನಾಟಕದ ವಾತಾವರಣ ಬಿಗಿಯಾಗಿದೆ. ಜನ ಮತ್ತು ಪೊಲೀಸರ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ಹತೋಟಿಗೆ ತರುವ ಪ್ರಯತ್ನ ಎಂದು ಹೇಳಿಕೊಂಡು ನರಗುಂದ-ನವಲಗುಂದ ಸುತ್ತ ಮುತ್ತ ಪೊಲೀಸರು ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ, ಊರಿನ ಪುರುಷರನ್ನೆಲ್ಲಾ ಬಂಧಿಸುತ್ತಿದ್ದಾರೆ. ಹೆಂಗಸರು ಮೈ ಮೇಲೆ ಲಾಠಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ತಳಮಟ್ಟಕ್ಕೆ ಇಳಿದು, ಪ್ರತ್ಯಕ್ಷ ವರದಿಯನ್ನು ನೀಡುವ ಮೂಲಕ ‘ಪಬ್ಲಿಕ್ ಟಿವಿ’ ಒಟ್ಟಾರೆ ಮಹದಾಯಿ ಹೋರಾಟದ ವರದಿಗಳಿಗಳಿಗೆ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ.

ಶುಕ್ರವಾರ ನವಲಗುಂದದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಯಮನೂರಿನಲ್ಲಿ ಸಂಚರಿಸುತ್ತಿದ್ದ ಪೊಲೀಸ್ ಜೀಪ್ ಮೇಲೆ 35ಕ್ಕೂ ಹೆಚ್ಚು ಜನ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಜೀಪಿನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಅಲಗನ್ನವರ್ ಸಣ್ಣ ಪುಟ್ಟ ಗಾಯಕ್ಕೆ ಒಳಗಾಗಿದ್ದರು. ಘಟನೆ ನಂತರ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕರೆಸಿಕೊಂಡು ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.

ಈ ಸಂದರ್ಭ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಬಂಧಿಸುವ ನೆಪದಲ್ಲಿ ಮನೆಯಲ್ಲಿದ್ದ ವೃದ್ಧರು, ಗರ್ಭಿಣಿಯರ ಮೇಲೆ ಮನಬಂದಂತೆ ಪೊಲೀಸರು ಹಲ್ಲೆ ನಡೆಸಿದ್ದನ್ನು ‘ಪಬ್ಲಿಕ್ ಟಿವಿ’ ಗುರುವಾರ ಮಧ್ಯಾಹ್ನದಿಂದ ನಿರಂತರ ವರದಿಯ ಮೂಲಕ ರಾಜ್ಯದ ಮುಂದಿಟ್ಟಿದೆ. ಕಲ್ಲು ತೂರಲು ಸಾಧ್ಯವೇ ಇಲ್ಲದ, ವಯಸ್ಸಾದ ವೃದ್ಧ-ವೃದ್ಧೆಯರು, ಗರ್ಭಿಣಿಯೊಬ್ಬರ ಮೇಲೆ ಮನ ಬಂದಂತೆ ಲಾಠಿ ಬೀಸಿರುವ ಪೊಲೀಸರ ಕೃತ್ಯವನ್ನು ದೃಶ್ಯ ಸಹಿತ ಸ್ಥಳದಿಂದ ವರದಿ ಮಾಡುತ್ತಿದೆ.

ಇದೇ ಸಂದರ್ಭ ಧಾರವಾಡದ ಅಳಗವಾಡಿಯಲ್ಲೂ ಪೊಲೀಸರು ಮನೆಗಳಿಗೆ ನುಗ್ಗಿ ಬಂಧನ ನಡೆಸುತ್ತಿದ್ದ ದೃಶ್ಯಗಳು, ಮನೆ ಬಾಗಿಲನ್ನು ಪೊಲೀಸರು ಮುರಿದಿರುವ ವೀಡಿಯೋಗಳನ್ನು ಪ್ರಸಾರ ಮಾಡಿ ಸ್ಥಳದಿಂದ ವರದಿಗಾರರ ಮೂಲಕ ಪರಿಸ್ಥಿಯ ಸಾಕ್ಷಾತ್ ಚಿತ್ರಣ ಮುಂದಿಡುತ್ತಿದೆ. ಬಂದ್, ಪ್ರತಿಭಟನೆ, ಕಲ್ಲು ತೂರಾಟದ ಮಧ್ಯೆ ಮರೆಯಾದ ಮಾನವೀಯ ಮುಖ, ಅಮಾಯಕರಿಗಾಗುತ್ತಿರುವ ತೊಂದರೆಯನ್ನು ಸಚಿವರು, ಅಧಿಕಾರಿಗಳಿಗೆ ತೋರಿಸುತ್ತಾ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದೆ. ಮಧ್ಯದಲ್ಲಿ ಸ್ಟುಡಿಯೋದಲ್ಲಿ ಕುಳಿತುಕೊಂಡು, “ಇವರೇನು ಪಾಕಿಸ್ತಾನದಿಂದ ಬಂದವರಾ?” ಎಂಬ ಅತಿರೇಕದ, ಅಸೂಕ್ಷ್ಮ ಪ್ರಶ್ನೆಗಳನ್ನು ಹೊರತು ಪಡಿಸಿದರೆ ‘ಪಬ್ಲಿಕ್ ಟಿವಿ’ ದೃಶ್ಯ ಮಾಧ್ಯಮದ ಹೊಣೆಗಾರಿಕೆಯಲ್ಲಿ ಮಹದಾಯಿ ವಿಚಾರದಲ್ಲಿ ನಿರ್ವಹಣೆ ಮಾಡುತ್ತಿದೆ. ಆದರೆ ‘ಸಂಖ್ಯಾ ಶಾಸ್ತ್ರ’ದಲ್ಲಿ ಮುಂದಿರುವವರು ಮಾತ್ರ ಎಂಜಿ ರೋಡಿನ ಚಾಂಪಿಯನ್ ಡಾನ್ಸ್, ಬ್ರಿಗೇಡ್ ರೋಡಿನ ವಿರಳ ಜನಸಂಚಾರವನ್ನೇ ಕವರ್ ಮಾಡುತ್ತಾ ಉತ್ತರ ಕರ್ನಾಟಕದ ಕವರೇಜ್ನಿಂದ ದೂರ ಉಳಿದಿದ್ದರು.

ಟಿವಿಗಳಲ್ಲಿ ಉತ್ತರ ಕರ್ನಾಟಕ ನಿರ್ಲಿಕ್ಷಿತ ವಲಯ ಎಂಬ ಆಪಾದನೆ ಹಿಂದಿನಿಂದಲೂ ಇದೆ; ಮತ್ತದು ನಿಜವೂ ಹೌದು. ಆದರೆ ಉತ್ತರ ಕರ್ನಾಟಕದ ನೆಲದ ವರದಿಗಳಿಗೆ ಈ ಬಾರಿ ಕ್ಯಾಮೆರಾ ಹಿಡಿಯುವ ಮೂಲಕ ‘ಪಬ್ಲಿಕ್ ಟಿವಿ’ ದೃಶ್ಯ ಮಾಧ್ಯಮಗಳ ಬಂದ್ ಕವರೇಜ್ಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಈ ವರದಿ ಸಿದ್ಧಪಡಿಸುತ್ತಿರುವ ಹೊತ್ತಿಗೆ ಕನ್ನಡದ ಒಂದೊಂದೆ ವಾಹಿನಿಗಳು ಯಮನೂರು ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರ ಮೇಲೆ ಪೊಲೀಸರು ನಡೆಸಿದ ಕೃತ್ಯಗಳ ವರದಿ ಮಾಡಲು ಶುರುಮಾಡಿವೆ. ಒಂದು ದಿನ ಕಳೆದ ನಂತರವಾದರೂ ಅವುಗಳು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿನ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡಿರುವುದು ಆಶಾದಾಯಕ ಬೆಳವಣಿಗೆ.

Leave a comment

Top