An unconventional News Portal.

68ನೇ ಗಣರಾಜ್ಯೋತ್ಸವ ಭಾಷಣ: ಅನಾಣ್ಯೀಕರಣದ ಬಗ್ಗೆ ಉಲ್ಟಾ ಹೊಡೆದ ರಾಷ್ಟ್ರಪತಿ

68ನೇ ಗಣರಾಜ್ಯೋತ್ಸವ ಭಾಷಣ: ಅನಾಣ್ಯೀಕರಣದ ಬಗ್ಗೆ ಉಲ್ಟಾ ಹೊಡೆದ ರಾಷ್ಟ್ರಪತಿ

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಅನಾಣ್ಯೀಕರಣ, ಮಹಿಳೆಯರ ಸುರಕ್ಷತೆ ಮತ್ತು ಒಳಗೊಳ್ಳುವಿಕೆಯ ರಾಜಕೀಯದ ವಿಚಾರಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಸಿದರು.

ಸಂಪ್ರದಾಯದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ, ಈ ಹಿಂದೆ ಅನಾಣ್ಯೀಕರಣದ ಬಗ್ಗೆ ತಾವು ತೆಗೆದುಕೊಂಡು ನಿಲುವುಗಳಿಗೆ ವ್ಯತಿರಿಕ್ತ ಮಾತುಗಳನ್ನು ಆಡಿದರು.

“ಅನಾಣ್ಯೀಕರಣದಿಂದ ಕಪ್ಪು ಹಣವನ್ನು ತಡೆಯಲು ಹೊರಟ ಪ್ರಕ್ರಿಯೆ ತಾತ್ಕಾಲಿಕವಾಗಿ ಆರ್ಥಿಕ ವ್ಯವಹಾರಗಳನ್ನು ನಿಧಾನಗತಿಗೆ ತಳ್ಳಲಿದೆ. ಆದರೆ ಹೆಚ್ಚು ಹೆಚ್ಚು ನಗದು ವ್ಯವಹಾರ ಬೆಳೆದಂತೆ ದೇಶದ ಆರ್ಥಿಕತೆಯಲ್ಲಿ ಪಾರದರ್ಶಕತೆಯನ್ನು ತರಲಿದೆ,” ಎಂದು ಅವರು ಭಾಷಣದಲ್ಲಿ ಅಭಿಪ್ರಾಯಪಟ್ಟರು.

ಅನಾಣ್ಯೀಕರಣ ಘೋಷಣೆ ನಂತರ ಪ್ರಧಾನಿ ಮೋದಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರಕಾರ ತೆಗೆದುಕೊಂಡ ತೀರ್ಮಾನದ ಬಗ್ಗೆ ಮಾಹಿತಿ ನೀಡಿದ್ದರು. ಈ ಸಮಯದಲ್ಲಿ ಸರಕಾರದ ದಿಟ್ಟ ನಡೆಯನ್ನು ಅವರು ಶ್ಲಾಘಿಸಿದ್ದರು. ಆದರೆ, ಜನವರಿ ಮೊದಲ ವಾರದಲ್ಲಿ ಪ್ರಣವ್ ಮುಖರ್ಜಿ, “ಅನಾಣ್ಯೀಕರಣದಿಂದ ದೇಶದ ಬಡ ಜನರಿಗಾಗುತ್ತಿರುವ ಅನಾನುಕೂಲತೆಗಳ ಬಗ್ಗೆ ಕೇಂದ್ರ ಸರಕಾರ ಮುತುವರ್ಜಿ ತೋರಿಸಬೇಕು. ಆರ್ಥಿಕ ಪರಿಸ್ಥಿತಿ ನಿಧಾನಗತಿಯಲ್ಲಿ ಸಾಗುತ್ತಿದೆ,” ಎಂದು ಎಚ್ಚರಿಸಿದ್ದರು.

ಚುನಾವಣೆ ಕುರಿತು:

ದೇಶದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆಸುವ ಕುರಿತು ಮುಖರ್ಜಿ ಭಾಷಣದಲ್ಲಿ ಪ್ರಸ್ತಾಪಿಸಿದರು. ಚುನಾವಣಾ ಆಯೋಗ ಈ ಕುರಿತು ರಾಜಕೀಯ ಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಿಸಿ ತೀರ್ಮಾನ ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದರು.

ಆರೋಗ್ಯಕರ ಪ್ರಜಾಪ್ರಭುತ್ವವನ್ನು ಉಳಿಸಲು ‘ಸಹಿಷ್ಣತೆ, ತಾಳ್ಮೆ ಮತ್ತು ಇನ್ನೊಬ್ಬರನ್ನು ಗೌರವಿಸುವ’ ಗುಣಗಳನ್ನು ಬೆಳೆಸಿಕೊಳ್ಳಬೇಕು. “ಬಹುತ್ವ, ಸಾಮಾಜಿಕ, ಸಾಂಸ್ಕೃತಿಕ, ಭಾಷೆ ಮತ್ತು ಧಾರ್ಮಿಕ ವಿವಿಧತೆಯೇ ಭಾರತದ ಶಕ್ತಿ. ನಮ್ಮ ಸಂಸ್ಕೃತಿ, ಚರ್ಚೆ ಮಾಡುವ ಭಾರತೀಯರನ್ನು ಮೆಚ್ಚಿದೆಯೇ ಹೊರತು, ಅಸಹಿಷ್ಣು ಭಾರತೀಯನನ್ನು ಅಲ್ಲ.” ಎಂದು ಹೇಳಿದರು.

ಸಂಸತ್ ಕಲಾಪಗಳು ಹಾಳಾಗುವ ಕುರಿತು ಈ ಹಿಂದೆ ಪ್ರಣವ್ ಮುಖರ್ಜಿ ದನಿ ಎತ್ತಿದ್ದರು. ಇಂದೂ ಕೂಡ ತಮ್ಮ ಭಾಷಣದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಚರ್ಚೆ, ಸಂವಾದ ಮತ್ತು ತೀರ್ಮಾನ’ಗಳನ್ನು ತೆಗೆದುಕೊಳ್ಳಲು ಎಲ್ಲರೂ ಆಲೋಚನೆ ಮಾಡಬೇಕಿದೆ. “ನಮ್ಮ ಸಂಸದರು ಶಾಸನಗಳ ಕುರಿತು ಪ್ರಮುಖ ಚರ್ಚೆ ನಡೆಸುವ ಬದಲಿಗೆ ಸದನಸ ಕಲಾಪವನ್ನು ಹಾಳುಗೆಡವುತ್ತಿದ್ದಾರೆ,” ಎಂದರು.

ಬಡತನದ ನಿರ್ಮೂಲನೆ ಕುರಿತು ಮಾತನಾಡಿದ ಅವರು, “ಪ್ರತಿಯೊಬ್ಬರ ಕಣ್ಣೀರು ಒರೆಸುವ ಗಾಂಧಿಜಿಯ ಕನಸು ಕನಸಾಗಿಯೇ ಉಳಿದಿದೆ. ಬಡತನದ ವಿರುದ್ಧದ ನಮ್ಮ ಹೋರಾಟ ಇನ್ನೂ ಜಾರಿಯಲ್ಲಿರುವುದರಿಂದ ನಾವು ಶ್ರಮವಹಿಸಿ ಕೆಲಸ ಮಾಡಬೇಕಿದೆ,” ಎಂದು ಹೇಳಿದರು.

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಕುರಿತು ಪ್ರತಿಯೊಬ್ಬ ಭಾರತೀಯ ಕೆಲಸ ಮಾಡಬೇಕಿದೆ. ಮಹಿಳೆಯರು ತಮ್ಮ ಬದುಕನ್ನು ಘನತೆಯಿಂದ ಬದುಕಲು ಅವಕಾಶ ಮಾಡಿಕೊಡಬೇಕಿದೆ ಎಂದು ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು.

ಗುರುವಾರ ಭಾರತ ತನ್ನ 68ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

 

Top