An unconventional News Portal.

ನೈನಿತಾಲ್ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸುಪ್ರಿಂ ತಡೆಯಾಜ್ಞೆ

ನೈನಿತಾಲ್ ಕೋರ್ಟ್ ಐತಿಹಾಸಿಕ ತೀರ್ಪಿಗೆ ಸುಪ್ರಿಂ ತಡೆಯಾಜ್ಞೆ

ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಗೊಳಿಸಿ ನೈನಿತಾಲ್ ಹೈಕೋರ್ಟ್ ಗುರುವಾರ ನೀಡಿದ ಆದೇಶಕ್ಕೆ ಸುಪ್ರಿಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ರದ್ಧುಗೊಳಿಸಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು. ಅದರಿಂದ ತೀವ್ರ ಮುಖಭಂಗಕ್ಕೊಳಗಾಗಿದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಕೇಂದ್ರದ ಪರ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ನೈನಿತಾಲ್ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ಕೋರಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎಸ್.ಕೆ ಸಿಂಗ್ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಪುರಸ್ಕರಿಸಿರುವ ಸುಪ್ರಿಂ ಕೋರ್ಟ್, ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಮುಂದಿನ ವಿಚಾರಣೆಯನ್ನು ಏ. 27ಕ್ಕೆ ಮುಂದೂಡಿದೆ.

ಜತೆಗೆ, ನೈನಿತಾಲ್ ಹೈಕೋರ್ಟ್ ಆದೇಶದ ಪ್ರತಿ ಸಲ್ಲಿಸುವಂತೆಯೂ ಸೂಚಿಸಿದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿರುವ ಹಿನ್ನೆಲೆಯಲ್ಲಿ ಈಗ ಮತ್ತೆ ಉತ್ತರಾಖಂಡ್ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಮತ್ತೆ ಜಾರಿಗೆ ಬಂದಿದೆ.

ಉತ್ತರಾಖಂಡ್ ರಾಷ್ಟ್ರಪತಿ ಆಡಳಿತವನ್ನು ವಜಾಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದ ನೈನಿತಾಲ್ ಹೈಕೋರ್ಟ್, ಏಪ್ರಿಲ್ 29ರಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸುವಂತೆ ನಿರ್ಗಮಿತ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸೂಚಿಸಿತ್ತು.

ರಾಷ್ಟ್ರಪತಿ ಆಡಳಿತ ಪ್ರಶ್ನಿಸಿ ಹರೀಶ್ ರಾವತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾಯಮೂರ್ತಿ ವಿ.ಕೆ.ಬಿಸ್ತ್ ಅವರನ್ನೊಳಗೊಂಡ ನ್ಯಾಯಪೀಠ, ರಾಷ್ಟ್ರಪತಿ ಆಡಳಿತಕ್ಕೆ ಬ್ರೇಕ್ ಹಾಕಿತ್ತು. ಕೇಂದ್ರವನ್ನು ಕಟು ಶಬ್ಧಗಳಲ್ಲಿ ಟೀಕಿಸಿತ್ತು.

 

Leave a comment

Top