An unconventional News Portal.

ಕಾವೇರಿಗಾಗಿ ರಾಜಕಾರಣಿಗಳ ‘ಜೈಲ್ ಭರೋ’: ತಮಿಳುನಾಡಿಗೆ ಈಗಾಗಲೇ ಹರಿದ ನೀರೆಷ್ಟು?

ಕಾವೇರಿಗಾಗಿ ರಾಜಕಾರಣಿಗಳ ‘ಜೈಲ್ ಭರೋ’: ತಮಿಳುನಾಡಿಗೆ ಈಗಾಗಲೇ ಹರಿದ ನೀರೆಷ್ಟು?

ಕಾವೇರಿ ವಿಚಾರದಲ್ಲಿ ‘ಕಾವೇರಿದ ರಾಜಕಾರಣ’ ರಾಜ್ಯದ ರಾಜಕಾರಣಿಗಳ ಜೈಲ್ ಭರೋದಲ್ಲಿ ಕೊನೆಗೊಳ್ಳುತ್ತಾ?

ಹೀಗೊಂದು ಪ್ರಶ್ನೆ ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಒಳಗಾಗಿದೆ. ಶುಕ್ರವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಿರಲು ಶಾಸಕಾಂಗದ ತೀರ್ಮಾನ ತೆಗೆದುಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ನೀಡಿದ ರಾಜ್ಯದ ಜನರ ಉತ್ತರದಾಯಿಯಾಗುವ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ಆದೇಶವನ್ನು ಧಿಕ್ಕರಿಸುವ ನಿರ್ಣಯವನ್ನು ಮಂಡಿಸಲಿದ್ದಾರೆ. ಅದಕ್ಕೆ ಉಳಿದವರು (ಬಿಜೆಪಿ ಹೊರತುಪಡಿಸಿ?) ಅನುಮೋದನೆ ನೀಡಲಿದ್ದಾರೆ. ನಂತರ ‘ಕಾವೇರಿದ ಚಂಡು’ ಸುಪ್ರಿಂ ಅಂಗಳಕ್ಕೆ ಬೀಳಲಿದೆ. ನ್ಯಾಯಾಲಯ ಇದನ್ನು ತನ್ನ ನಿಂದನೆ ಎಂದು ಭಾವಿಸಿದರೆ, ಬೆಳವಣಿಗೆಗಳು ಸಹಜವಾಗಿಯೇ ಕುತೂಹಲ ಮೂಡಿಸಲಿವೆ. “ಒಂದು ಹಂತದಲ್ಲಿ ಇದು ಸಿಎಂ ಸಿದ್ದರಾಮಯ್ಯ ಅವರ ಬಂಧನಕ್ಕೂ ಎಡೆಮಾಡಿಕೊಡಲಿದೆ. ಹಾಗಾದರೆ ನಾವೆಲ್ಲರೂ ಜೈಲ್ ಭರೋಗೆ ತಯಾರಾಗಿದ್ದೇವೆ,” ಎಂದು ಜೆಡಿಎಸ್ ಹಿರಿಯ ನಾಯಕರೊಬ್ಬರು ಹೇಳುತ್ತಾರೆ.

ಕಾವೇರಿ ವಿಚಾರ ಆ ಹಂತಕ್ಕೆ ತಲುಪಲಿದೆಯಾ? ಎಂಬುದು ಮುಂದಿನ 24 ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಅದಕ್ಕೂ ಮೊದಲು ಕಾವೇರಿ ವಿಚಾರದಲ್ಲಿ ಕಳೆದ 15 ದಿನಗಳ ಅಂತರದಲ್ಲಿ ನಡೆದ ಬೆಳವಣಿಗೆಗಳನ್ನು ಗಮನಿಸಿದರೆ, ನ್ಯಾಯಾಂಗ ಹೋರಾಟದಿಂದ ಶುರುವಾಗಿ, ಕಾವೇರಿ ನೀರು ಬಿಡಲು ರಾಜ್ಯ ಸರಕಾರ ತೀರ್ಮಾನ, ಜನರ ಪ್ರತಿಭಟನೆ, ಬೆಂಗಳೂರಿನಲ್ಲಿ ನಡೆದ ಹಿಂಸಾಚಾರ, ಎರಡು ಸಾವುಗಳು ಮತ್ತು ಕ್ಲೈಮ್ಯಾಕ್ಸ್ ಹಂತದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಎಂಟ್ರಿ ಎಲ್ಲವೂ ಒಂದು ತಾರ್ಕಿಕವಾದ ರಾಜಕೀಯ ದಾಳಕ್ಕೆ ಪೂರಕವಾಗಿಯೇ ನಡೆದುಕೊಂಡು ಬರುತ್ತಿವೆ.

ಪ್ರಚಂಡ ರಾಜಕಾರಣಿ:

ಕಳೆದ ಮೂರು ದಶಕಗಳ ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ, ದೇವೇಗೌಡರನ್ನು ಬಿಟ್ಟು ರಾಜ್ಯ ರಾಜಕಾರಣ ನಡೆದ ಉದಾಹರಣೆಗಳು ಸಿಗುವುದಿಲ್ಲ. ಇಲ್ಲಿ ನಡೆದ ಪ್ರಮುಖ ರಾಜಕೀಯ ಸ್ಥಿತ್ಯಂತರ ಹಿಂದೆ ಇರುವವರು ದೇವೇಗೌಡ, ದೇವೇಗೌಡ ಮತ್ತು ದೇವೇಗೌಡ ಒಬ್ಬರೇ. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ತಮ್ಮ ಮಗ ಕುಮಾರಸ್ವಾಮಿಯನ್ನು ರಾತ್ರೋರಾತ್ರಿ ಮುಖ್ಯಮಂತ್ರಿ ಮಾಡಿದವರು ದೇವೇಗೌಡ. ನಂತರ, ರಾಜ್ಯದಲ್ಲಿ ಬಿಜೆಪಿ ತನ್ನ ಅಧಿಕಾರದ ಸವಿ ಅನುಭವಿಸಲು ಕಾರಣವಾಗಿದ್ದವರೂ ಕೂಡ ಅವರೇ. ಅವರ ರಾಜಕೀಯ ನಡೆಗಳು ಹೇಗೆಲ್ಲಾ ಇರುತ್ತವೆ ಎಂಬುದಕ್ಕೆ ಸದ್ಯ ಕಾವೇರಿ ವಿಚಾರದಲ್ಲಿ ತೆಗೆದುಕೊಂಡು ನಿಲುವು ಈಗ ಕಣ್ಣೆದುರಿಗೆ ಇದೆ.

ಕಾವೇರಿ ವಿಚಾರದಲ್ಲಿ ಸೆ. 5ರಂದು ಸುಪ್ರಿಂ ಕೋರ್ಟ್ 15 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸುತ್ತಿದ್ದಂತೆ ದೇವೇಗೌಡರು ಚುರುಕಾದರು. ತಮ್ಮ ಇಳೀ ವಯಸ್ಸಿನಲ್ಲಿಯೂ ಕಾವೇರಿ ಕಣಿವೆಯ ಜಿಲ್ಲೆಗಳಿಗೆ ಭೇಟಿ ನೀಡಿ ಬಂದರು. ಅಣೆಕಟ್ಟುಗಳಲ್ಲಿ ನೀರಿನ ಮಟ್ಟವನ್ನು ಸಾಕ್ಷೀಕರಿಸಿಕೊಂಡರು. ಅವೆಲ್ಲವನ್ನೂ ಪ್ರಧಾನಿ ಮೋದಿ ಅವರಿಗೆ ಹಾಗೆಯೇ ಮಾಧ್ಯಮಗಳಿಗೆ ತಲುಪುವಂತೆ ನೋಡಿಕೊಂಡರು. ಇನ್ನೊಂದು ಕಡೆ, ತಮ್ಮ ರಾಜಕೀಯ ಶತ್ರು ಎಂದು ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಮಾತುಕತೆ ಶುರುಮಾಡಿದರು. ಅಂತಿಮವಾಗಿ 26 ವರ್ಷಗಳ ನಂತರ ಸರ್ವ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ರಾಜಕೀಯ ಪ್ರಬುದ್ಧತೆಯನ್ನು ಜನಸಾಮಾನ್ಯರೂ ಹಾಡಿಹೊಗಳುವಂತೆ ಮಾಡಿಕೊಂಡರು ದೇವೇಗೌಡರು. ಇದೇ ಸಭೆಯ ಅರ್ಧದಲ್ಲಿಯೇ ಎದ್ದು ಹೋದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಚಾರ ಚರ್ಚೆಗೆ ಬಾರದೇ ಹೋಯಿತು.

ನಾಳೆ, ವಿಶೇಷ ಅಧಿವೇಶನದಲ್ಲಿ ಸಿಎಂ ಏನೇ ತೀರ್ಮಾನ ತೆಗೆದುಕೊಂಡರೂ, ರಾಜ್ಯ ಜನ ನೋಡುವುದು ದೇವೇಗೌಡ ಕಡೆಗೆ ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ. ಇದಕ್ಕೆ ಪೂರಕ ಎಂಬಂತೆ, ಗೌಡರು ಈಗಾಗಲೇ ಬಿಜೆಪಿ ನಾಯಕರಾದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಜತೆ ಮಾತುಕತೆ ನಡೆಸಿದ್ದಾರೆ. ಅವರ ಸಂಧಾನ ಫಲಕೊಟ್ಟು, ನಾಳೆ ಬಿಜೆಪಿ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡರೂ, ಅದರ ಕ್ರೆಡಿಟ್ ಹೋಗುವುದು ದೇವೇಗೌಡರಿಗೇ.

ನಿಜಕ್ಕೂ ನೀರು ಬಿಡೋದಿಲ್ವಾ?:

2012ರಲ್ಲಿ ಕೆಆರ್ಎಸ್ಗೆ ಎಸ್ಎಂಕೆ ಪಾದಯಾತ್ರೆ. (ಚಿತ್ರ: ಫ್ರಂಟ್ ಲೈನ್).

2012ರಲ್ಲಿ ಕೆಆರ್ಎಸ್ಗೆ ಎಸ್ಎಂಕೆ ಪಾದಯಾತ್ರೆ. (ಚಿತ್ರ: ಫ್ರಂಟ್ ಲೈನ್).

ಇಷ್ಟೆಲ್ಲಾ ರಾಜಕೀಯ ನಡೆಗಳ ಆಚೆಗೆ ಇರುವ ಬಹುದೊಡ್ಡ ಪ್ರಶ್ನೆ, ವಿಶೇಷ ಅಧಿವೇಶನದ ನಂತರ ಕಾವೇರಿ ನೀರು ತಮಿಳುನಾಡಿಗೆ ಹರಿಯುವುದು ನಿಂತು ಹೋಗುತ್ತಾ ಅನ್ನೋದು. ಹಿಂದೆ 1991ರಲ್ಲಿ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೂ ಹೀಗೆಯೇ ಒಂದು ‘ಹೈಡ್ರಾಮಾ’ ನಡೆದಿತ್ತು ಎಂಬುದನ್ನು ಮರೆಯಬಾರದು. (ಈ ಕುರಿತು ‘ಸಮಾಚಾರ’ ಬರೆದ ವಿಸ್ತೃತ ವರದಿ ಇಲ್ಲಿದೆ.) ಎಸ್. ಎಂ. ಕೃಷ್ಣ ಕೂಡ ತಮ್ಮ ಅವಧಿಯಲ್ಲಿ ಕಾಲಿಗೆ ಸ್ಫೋರ್ಟ್ಸ್ ಶೂ ಹಾಕಿಕೊಂಡು ಮದ್ದೂರಿನಲ್ಲಿ ಪಾದಯಾತ್ರೆ ನಡೆಸಿದ್ದರು. ಅವತ್ತೂ ಕೂಡ ಕೊನೆಗೆ ಸುಪ್ರಿಂ ಕೋರ್ಟ್ ನ್ಯಾಯಾಂಗ ನಿಂದನೆಯ ಅಸ್ತ್ರ ಝಳಪಿಸುತ್ತಿದ್ದಂತೆ ಕಾವೇರಿ ನೀರು ತಣ್ಣಗೆ ತಮಿಳುನಾಡಿಗೆ ಹರಿದು ಹೋಗಿತ್ತು. ಬಿಜೆಪಿಯ ಅವಧಿಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ರಾತ್ರೋ ರಾತ್ರಿ ತಮಿಳುನಾಡಿಗೆ ನೀರು ಹರಿಸಿದ ಅನುಭವ ಹೊಂದಿದವರೇ. ಹೀಗಿರುವಾಗ, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರದಿ.

ಈಗಾಗಲೇ ಸೆ. 5ರಿಂದ ಈಚೆಗೆ ಕೆಆರ್ಎಸ್ ಅಣೆಕಟ್ಟಿನಿಂದ 10 ರಿಂದ 11 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಕಬಿನಿ ಜಲಾಶಯದಿಂದ 3. 5 ನೀರು ಗಡಿ ದಾಟಿ ಹರಿದಿದೆ. ಅಂದರೆ, ಕಳೆದ 17 ದಿನಗಳಲ್ಲಿ ಕಾವೇರಿಯಿಂದ ತಮಿಳುನಾಡಿಗೆ ಹರಿದ ನೀರಿನ ಪ್ರಮಾಣ 13 ರಿಂದ 14 ಟಿಎಂಸಿ ನೀರು. ಈಗ ನ್ಯಾಯಾಲಯ ಆದೇಶದಂತೆ ಬಿಡಬೇಕಿರುವ ನೀರು ಪ್ರತಿ ದಿನ 3 ಸಾವಿರ ಕ್ಯೂಸೆಕ್ಸ್ ಇದಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆ. ಈ ಸಮಯದಲ್ಲಿ ಶಾಸಕಾಂಗ ವರ್ಸಸ್ ನ್ಯಾಯಾಂಗ ಎಂಬ ದೊಡ್ಡ ಯುದ್ಧವೊಂದಕ್ಕೆ ರಾಜ್ಯ ಸರಕಾರ ಅಣಿಯಾಗಿದೆ. ಆದರೆ ಫಲಿತಾಂಶ ಮಾತ್ರ ಶೂನ್ಯ ಎಂಬುದು ಅನುಭವಿಗಳ ಮಾತು.

ಬಿಜೆಪಿಗೆ ಕಾವೇರಿ ಬರ್ಗರ್:

ಈ ಎಲ್ಲಾ ಬೆಳವಣಿಗೆಗಳಲ್ಲಿ ಮಧ್ಯದಲ್ಲಿ ಸಿಲುಕಿ ಅಪ್ಪಚ್ಚಿಯಾಗಿರುವುದು ರಾಜ್ಯದ ಬಿಜೆಪಿ. ಒಂದು ಕಡೆ ಮಹದಾಯಿ ವಿಚಾರದಲ್ಲಿ, ಈಗ ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಕ್ಕೆ ಒಪ್ಪದೇ ಹೊರಗುಳಿದಿದ್ದು ಪಕ್ಷಕ್ಕೆ ಬಿಸಿ ತುಪ್ಪವಾಗಿದೆ. ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿಯಾಗುವ ಕನಸು ಕಟ್ಟಿಕೊಂಡು ‘ಮಿಶನ್ 150’ ಯೋಜನೆಯ ಜತೆಗೆ ಹೊರಟಿದ್ದ ಯಡಿಯೂರಪ್ಪ ತಮ್ಮ ಯೋಚನೆಗಳಿಗೆ ಎಳ್ಳು ನೀರು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಬಿಜೆಪಿ ಸಂಸದರೂ ಜನರಿಗೆ ಉತ್ತರ ನೀಡಲಾಗದ ಸ್ಥಿತಿ ತಲುಪಿದ್ದಾರೆ. ಕಾವೇರಿ ವಿಚಾರದಲ್ಲಿ ಪಕ್ಷದ ಅನಿವಾರ್ಯತೆಗಳು ಏನೇ ಇರಲಿ; ರಾಜಕೀಯವಾಗಿ ಬಿಜೆಪಿ ಅಂಚಿಗೆ ತಳ್ಳಲ್ಪಟ್ಟಿದೆ. ಇದು ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಕನಸು ಇಟ್ಟುಕೊಂಡಿದ್ದ ಯಡಿಯೂರಪ್ಪ ಹಾಗೂ ಅವರ ಬಿಜೆಪಿ ಪಾಲಿಗೆ ಒಳ್ಳೆಯ ಲಕ್ಷಣವಲ್ಲ.

ಒಟ್ಟಾರೆ, ಕಾವೇರಿ ಸುತ್ತಲಿನ ರಾಜಕೀಯ ದಾಳಗಳ ಆಚೆಗೂ ಕಾವೇರಿ ಹರಿಯುವಿಕೆ ವಿಶೇಷ ಅಧಿವೇಶನ ನಂತರ ನಿಲ್ಲುತ್ತಾ? ಅನುಮಾನ ಇದೆ.

ಚಿತ್ರ: ಚುರುಮುರಿ ಬ್ಲಾಗ್

Leave a comment

Top