An unconventional News Portal.

ಪಾಠ ಒಂದು; ಅವಕಾಶವಾದಿ ನಾಯಕರಿಂದ ರಾಜಕೀಯ ಪರ್ಯಾಯ ನಿರೀಕ್ಷಿಸುವುದು ಮೂರ್ಖತನ!

ಪಾಠ ಒಂದು; ಅವಕಾಶವಾದಿ ನಾಯಕರಿಂದ ರಾಜಕೀಯ ಪರ್ಯಾಯ ನಿರೀಕ್ಷಿಸುವುದು ಮೂರ್ಖತನ!

‘ಬಿಮಾರು ರಾಜ್ಯ’ ಎಂದು ಗುರುತಿಸಿಕೊಂಡಿರುವ ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬದಲಾವಣೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ.

2015ರಲ್ಲಿ ಅವರು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಗಾಧಿ ಏರುತ್ತಿದ್ದಾರೆ. ಹಾಗೆ ನೋಡಿದರೆ, ಬಿಹಾರದ ಸದ್ಯದ ರಾಜಕೀಯ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ.

ಬಿಜೆಪಿಯ ಪ್ರಭಾವಳಿಯಿಂದ ಹೊರತಾದ, ರಾಜಕೀಯ ಪರ್ಯಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ 2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆ ವೇಳೆ ‘ಮಹಾ ಘಟ್ಬಂಧನ’ದ ಹೆಸರಿನಲ್ಲಿ ಆರ್‌ಜೆಡಿ, ಜೆಡಿ-ಯು ಹಾಗೂ ಕಾಂಗ್ರೆಸ್ ಮೈತ್ರಿಕೂಟವೊಂದನ್ನು ನಿರ್ಮಿಸಿಕೊಂಡಿದ್ದವು. ಆದರೆ ಅದಕ್ಕೆ ಭದ್ರವಾದ ತಳಹದಿಗಳನ್ನು, ಚೌಕಟ್ಟುಗಳನ್ನು ಅವು ನಿರ್ಮಿಸಿಕೊಂಡಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ದಶಕಗಳ ಕಾಲ ಪರಸ್ಪರ ಕತ್ತಿ ಮಸೆಯುತ್ತಲೇ ಬಂದಿದ್ದ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್‌ ಒಟ್ಟಾಗಿ ಅಧಿಕಾರದ ಕನಸು ಕಂಡಿದ್ದು ಅಚ್ಚರಿಗೂ ಕಾರಣವಾಗಿತ್ತು.

ಮೋದಿ ಪ್ರಧಾನಿ ಗಾಧಿಗೆ ಏರಿದ ನಂತರ ದೇಶದಲ್ಲಿ ಬಿಜೆಪಿಗೆ ಪರ್ಯಾಯವೊಂದನ್ನು ಹುಟ್ಟು ಹಾಕುವ ಅಗತ್ಯವಿದ್ದ ಹಿನ್ನೆಲೆಯಲ್ಲಿ, ಬಿಹಾರದ ರಾಜಕೀಯ ಮೈತ್ರಿಯನ್ನು, ಬಿಹಾರದ ಆಚೆಗೂ ಆಸಕ್ತಿ ಮೂಡಿಸಿತ್ತು. ಚುನಾವಣೆಯಲ್ಲಿ ನಿತೀಶ್- ಲಾಲೂ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಬಿಜೆಪಿ ಸೋಲಿಸಿ, ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಮಹಾ ಘಟ್ಬಂಧನದ ನೆರಳಿನಲ್ಲಿ ಪರ್ಯಾಯ ರಾಜಕೀಯದ ಸಾಧ್ಯತೆ ಗರಿಗೆದರಿತ್ತು.

ರಾಜಕೀಯ ಲೆಕ್ಕಾಚಾರಗಳು:

ಅಧಿಕಾರಕ್ಕೇರಿದ ನಿತೀಶ್ ಕುಮಾರ್‌ ರಾಜ್ಯಾದ್ಯಂತ ಮದ್ಯಪಾನ ನಿಷೇಧ ಕಾನೂನು ಜಾರಿಗೊಳಿಸುವ ಮೂಲಕ ಸುದ್ದಿಕೇಂದ್ರಕ್ಕೆ ಬಂದಿದ್ದರು. ಆರಂಭದಲ್ಲಿ ಇದಕ್ಕೆ ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿ ವಿರೋಧ ವ್ಯಕ್ತಪಡಿಸಿತಾದರೂ, ಗ್ರಾಮೀಣ ಬಿಹಾರದಲ್ಲಿ ನಿತೀಶ್ ನಡೆಗೆ ಭರ್ಜರಿ ಬೆಂಬಲ ವ್ಯಕ್ತವಾಗಿತ್ತು. ಮಹಿಳೆಯರು ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡು ಬೀದಿಗೆ ಇಳಿದರು. ಹೀಗೆ, ನಿತೀಶ್ ಕುಮಾರ್ ಒಂದಾದ ಮೇಲೊಂದು ಅಧಿಕಾರದ ಅಸ್ತ್ರಗಳನ್ನು ಬಳಸುವ ಮೂಲಕ ಜನಪ್ರಿಯತೆಯನ್ನು ಗಳಿಸತೊಡಗಿದರು. ಅದೇ ವೇಳೆಗೆ, ಲಾಲೂ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪಗಳ ಅಸ್ತ್ರವನ್ನು ಕೇಂದ್ರ ಸರಕಾರ ಬಳಸಲಾರಂಭಿಸಿತು.

ನಿತೀಶ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಲಾಲೂ ಪುತ್ರ, ತೇಜಸ್ವಿ ಪ್ರಸಾದ್‌ ಯಾದವ್‌ ಮೇಲೆ ರೈಲ್ವೆ ಟೆಂಡರ್‌ ಅಕ್ರಮ ಪ್ರಕರಣದಲ್ಲಿ ಸಿಬಿಐ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿತು. ಈ ಸಮಯದಲ್ಲಿ ತೇಜಸ್ವಿ ರಾಜೀನಾಮೆ ನೀಡಬೇಕು ಎಂದು ಜೆಡಿಯು ಬೀದಿಗೆ ಇಳಿಯಿತು. ಒಂದು ಕಡೆ ಮೈತ್ರಿ ಸರಕಾರ, ಮತ್ತೊಂದು ಕಡೆ ಮೈತ್ರಿ ಒಡೆಯುವ ಪ್ರಯತ್ನಗಳು ಶುರುವಾದವು. ಇಷ್ಟಾದರೂ ಲಾಲೂ ಪ್ರಸಾದ್ ಯಾದವ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಕಾಂಗ್ರೆಸ್ ಕೂಡ ಮಧ್ಯ ಪ್ರವೇಶ ಮಾಡಲಿಲ್ಲ. ಅಂತಿಮವಾಗಿ ನಿತೀಶ್ ಕುಮಾರ್, ‘ಭ್ರಷ್ಟಾಚಾರ’ದ ವಿರುದ್ಧ ದನಿ ಎತ್ತಿ ರಾಜೀನಾಮೆ ನೀಡಿದರು. ಆ ಮೂಲಕ ಮಹಾಘಟ್ಬಂಧನ ಮುರಿದು ಬಿತ್ತು.

ಅವಕಾಶವಾದಿ ನಿತೀಶ್:

2015ರ ಚುನಾವಣೆ ವೇಳೆಯಲ್ಲಿ ನಿತೀಶ್ ಕುಮಾರ್ ಬಿಜೆಪಿಯನ್ನು ನಾನಾ ಆಯಾಮಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ‘ಕೋಮುವಾದಿ ರಾಜಕಾರಣ’ ದೇಶದಲ್ಲಿ ವಿಷ ಭಿತ್ತುವ ಕೆಲಸ ಎಂದು ಜರಿದಿದ್ದರು. ಆದರೆ, ಅವರು ಬುಧವಾರ ರಾಜೀನಾಮೆ ನೀಡುತ್ತಿದ್ದಂತೆ ತಮ್ಮ ನಿವಾಸದಲ್ಲಿ ಬಿಜೆಪಿ ಶಾಸಕರ ಜತೆ ಮಾತುಕತೆ ನಡೆಸಿದರು. ಸದ್ಯ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಹುದ್ದೆಗೆ ಮರಳುವ ತಯಾರಿಯಲ್ಲಿದ್ದಾರೆ.

ನಿತೀಶ್ ಕುಮಾರ್‌ 2015ರಲ್ಲಿ ಆರ್‌ಜೆಡಿ ಜತೆ ಮೈತ್ರಿ ಮಾತುಕತೆ ನಡೆಸುವ ಹೊತ್ತಿಗಾಗಲೇ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್‌ ತಪ್ಪಿತಸ್ಥ ಎಂದು ನ್ಯಾಯಾಲಯ ತೀರ್ಪು ನೀಡಿ ಆಗಿತ್ತು. ಕ್ರಿಮಿನಲ್ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಲಾಲೂ ನೇತೃತ್ವದ ಆರ್‌ಜೆಡಿ ಜತೆ ನಿತೀಶ್ ಚುನಾವಣೆಗೆ ಇಳಿಯುವ ಹೊತ್ತಿಗೆ ‘ಭ್ರಷ್ಟಾಚಾರ’ದ ವಿಚಾರ ಯಾಕೆ ಮುಖ್ಯವಾಗಿ ಕಾಣಲಿಲ್ಲ ಎಂಬುದು ಊಹೆಗೆ ಬಿಟ್ಟ ವಿಚಾರ.

ಇನ್ನೊಂದು ಕಡೆಯಲ್ಲಿ, ಪುತ್ರ ತೇಜಸ್ವಿ ಪ್ರಸಾದ್‌ ಯಾದವ್‌ ಮೇಲೆ ಗುರುತರ ಆರೋಪ ಕೇಳಿ ಬಂದರೂ, ಲಾಲೂ ಆಗಲಿ, ಕಾಂಗ್ರೆಸ್ ಆಗಲಿ ಅವರನ್ನು ಕೆಳಗಿಳಿಸುವ ಆಲೋಚನೆ ಮಾಡಲಿಲ್ಲ. ಎರಡೂ ಕಡೆಯಿಂದಲೂ ಅವಕಾಶವಾದಿ ರಾಜಕೀಯದ ನಡೆಗಳು ಸ್ಪಷ್ಟವಾಗಿ ಕಾಣಿಸುತ್ತಿದೆ.

ಅಂತಿಮವಾಗಿ, ಬಿಹಾರದಲ್ಲಿ ಮುರಿದು ಬಿದ್ದ ಮೈತ್ರಿಕೂಟ, ಬಿಹಾರದ ಆಚೆಗೆ ರಾಷ್ಟ್ರೀಯ ಮಟ್ಟದಲ್ಲಿ ಮುಂದಿನ ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಪರ್ಯಾಯ ರಾಜಕೀಯ ಮೈತ್ರಿಕೂಡ ನಿರ್ಮಿಸುವ ನಡೆಗಳಿಗೆ ತೊಡಕು ತಂದೊಡ್ಡಿದೆ. ವೈಯಕ್ತಿಕ ಲಾಲಾಸೆಯ ರಾಜಕೀಯ ಮಾಡುವವರಿಂದ ಪರ್ಯಾಯ ರಾಜಕೀಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.

Leave a comment

Top