An unconventional News Portal.

‘ಪರ್ಯಾಯದ ಹುಡುಕಾಟ’: ಪೊಲೀಸ್ ಇಲಾಖೆಯಿಂದ ಬೇಸತ್ತು ಚುನಾವಣೆ ನಿಂತಾತ ಈಗ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ!

‘ಪರ್ಯಾಯದ ಹುಡುಕಾಟ’: ಪೊಲೀಸ್ ಇಲಾಖೆಯಿಂದ ಬೇಸತ್ತು ಚುನಾವಣೆ ನಿಂತಾತ ಈಗ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ!

  • ಅರಕಲಗೂಡು ಜಯಕುಮಾರ್

ಪೊಲೀಸ್ ಇಲಾಖೆಯಲ್ಲಿ ಕೆಳ ಹಂತದ ಸಿಬ್ಬಂದಿಗಳು ಪ್ರತಿಭಟನೆಗೆ ಮುಂದಾದ ಬೆಳವಣಿಗೆ ಹಸಿರಾಗಿದೆ. ಇದರ ನಡುವೆಯೇ, ಅದೇ ಪೊಲೀಸ್ ಇಲಾಖೆಯ ಒತ್ತಡದ ಕೆಲಸ, ಅಗೌರವಯುತ ಜೀವನದಿಂದ ಬೇಸತ್ತು ಹೊರಬಂದು ರಾಜಕೀಯ ಅಖಾಡಕ್ಕೆ ಇಳಿದವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಇವರು ರಾಜಕೀಯ ಅಖಾಡಕ್ಕೆ ಇಳಿದದ್ದು ಮಾತ್ರವಲ್ಲ, ಪ್ರಾಮಾಣಿಕರು ಎಂಬ ಹೆಸರನ್ನು ಉಳಿಸಿಕೊಂಡಿರುವ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಅವರ ಮಾರ್ಗದರ್ಶನದಲ್ಲಿ ಚುನಾವಣೆಯನ್ನೂ ಗೆದ್ದು ಬಂದಿದ್ದಾರೆ.

ಹಾಸನ ಜಿಲ್ಲಾ ಪಂಚಾಯ್ತಿಯ ಹಾಲಿ ಉಪಾಧ್ಯಕ್ಷ ಶ್ರೀನಿವಾಸ್ ಹಿಂದೊಮ್ಮೆ ಪೊಲೀಸ್ ಸಿಬ್ಬಂದಿಯಾಗಿದ್ದವರು. 17 ವರ್ಷಗಳ ಕಾಲ ಕೆಲಸ ಮಾಡಿ, ಈಗ್ಗೆ ಆರು ತಿಂಗಳ ಹಿಂದೆ ಕೆಲಸ ಬಿಟ್ಟು ರಾಜಕೀಯ ಪ್ರವೇಶಿಸಿದರು. ಮೊದಲ ಪ್ರಯತ್ನದಲ್ಲಿಯೇ ಚುನಾವಣೆಯನ್ನೂ ಗೆದ್ದು ಬಂದರು. ಇಲ್ಲಿನ ಅರಕಲಗೂಡು ತಾಲೂಕಿನ ಜಿ. ಪಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರ ಪೊಲೀಸ್ ಇಲಾಖೆಯ ಅನುಭವಗಳು, ರಾಜಕೀಯದ ಬಗೆಗಿನ ಆಸಕ್ತಿ ಹಾಗೂ ಮುಂದಿನ ಗುರಿಗಳ ಕುರಿತು ನಡೆಸಿದ ಮಾತುಕತೆ ಇಲ್ಲಿದೆ.

• ಕನಿಷ್ಟ ಭದ್ರತೆ ಇದ್ದ ಸರಕಾರಿ ಉದ್ಯೋಗ ಬಿಟ್ಟಿರಿ, ಅಂತಹ ಕಾರಣಗಳೇನಿತ್ತು?

ಸಮಾಜ ಸೇವೆ ಮಾಡಬೇಕೆಂಬ ತುಡಿತ ಮೊದಲಿನಿಂದಲೂ ಇತ್ತು. ನೌಕ್ರಿಯಲ್ಲಿದ್ರು ಜನರ ಸಹಾಯಕ್ಕೆ ನಿಲ್ತಿದ್ದೆ. ಮಕ್ಕಳಿಗೆ ನೋಟ್ ಪುಸ್ತಕ ಕೊಡಿಸ್ತಿದ್ದೆ. ಗ್ರಾಮದ ಮನರಂಜನಾ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡ್ತಿದ್ದೆ. ಎರಡನೇ ಪಾಯಿಂಟು ಪೋಲೀಸ್ ಇಲಾಖೆಯಲ್ಲಿ ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು ಮರ್ಯಾದೆ ಇರ್ಲಿಲ್ಲ. ಕೆಲಸದ ಒತ್ತಡ, ಸೌಲಭ್ಯ ಇಲ್ಲ. ಮೇಲಾಧಿಕಾರಿಗಳ ದುಂಡಾವರ್ತನೆ ನೋಡಿ ಬೇಸತ್ತು ಹೋಗಿದ್ದೆ. ಇನ್ನು ಇದು ನನಗೆ ಸರಿ ಹೋಗಲ್ಲ ಅನಿಸಿದಾಗ 6 ತಿಂಗಳ ಹಿಂದೆ ಜನವರಿ ತಿಂಗಳಲ್ಲಿ ರಾಜೀನಾಮೆ ಒಗೆದು ಬಂದೆ.

• ಇದಕ್ಕೆ ಮೊದಲಿನಿಂದಲೂ ಸಿದ್ಧತೆ ಮಾಡಿಕೊಂಡಿದ್ದೀರಿ ಅನ್ನಿಸುತ್ತದೆ. ಮನೆಯವರ ಬೆಂಬಲ ಇತ್ತಾ?

ಕೆಲಸ ಬಿಡೋವಾಗ ಅವಕಾಶ ಸಿಕ್ಕಿದ್ರೆ ರಾಜಕೀಯಕ್ಕೆ ಹೋಗಬೇಕು ಅನ್ನೋ ಅಪೇಕ್ಷೆ ಇದ್ದೇ ಇತ್ತು. ಅದೇ ಸಮಯಕ್ಕೆ ಜಿಲ್ಲಾ ಪಂಚಾಯ್ತಿ ಚುನಾವಣೆ ಬಂತು. ಮಾಜಿ ಶಾಸಕ ಎ. ಟಿ. ರಾಮಸ್ವಾಮಿಯವರ ಚುನಾವಣೆಯಲ್ಲಿ ಕೆಲಸ ಮಾಡಿದ ಅನುಭವ ಇತ್ತು. ಅವರ ಪ್ರಯತ್ನ ಮತ್ತು ಪಕ್ಷದ ಮುಖಂಡರ ಆಶೀರ್ವಾದದಿಂದ ಜಿ. ಪಂ ಟಿಕೆಟ್ ಸಿಕ್ತು. ಚುನಾವಣೆಯಲ್ಲಿ ಘಟಾನುಘಟಿ ಎದುರಾಳಿ ಇದ್ದರೂ ಮತದಾರ ಕೈ ಹಿಡಿದ. ಸುಮಾರು 2500 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಪೊಲೀಸ್ ಪೇದೆ ಕೆಲಸ ಬಿಟ್ಟಾಗ ಬದುಕಿನ ಆಧಾರ ಕಳೆದು ಹೋಯ್ತೆಂದು ಮನೆಯವರು ವಿರೋಧಿಸಿದ್ದರು. ಆದರೆ ಅವರನ್ನ ಕನ್ವಿನ್ಸ್ ಮಾಡಿ ರಾಜಕೀಯವನ್ನು ಆರಿಸಿಕೊಂಡಿದ್ದೆ. ಜನ ಸೇವೆಗೆ ಒಂದು ದಾರಿ ಕಂಡುಕೊಂಡೆ ಅನ್ನಿಸುತ್ತದೆ.

• ಚುನಾವಣೆಯ ಗೆಲುವು, ಹೆಚ್ಚಿನ ಹೊಣೆಗಾರಿಕೆ ನಿರೀಕ್ಷೆ ಇತ್ತಾ?

ನಿರೀಕ್ಷೆ ಅಂತ ಏನಿರಲಿಲ್ಲ, ನನ್ನ ಮೊದಲ ಪ್ರಯತ್ನದಲ್ಲೇ ಹುಮ್ಮಸ್ಸು ತುಂಬಿ, ನನ್ನ ಗೆಲುವಿಗೆ ಶ್ರಮಿಸಿದ್ದು ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು. ಸಹಜವಾಗಿ ನನ್ನ ಮೇಲೆ ವಿಶ್ವಾಸ ಇಟ್ಟಿರುವ ಮತದಾರ ಬಾಂಧವರು ಇಷ್ಟಪಟ್ಟು ಆಯ್ಕೆ ಮಾಡಿದ್ದಾರೆ. ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದರಿಂದ ಉಪಾಧ್ಯಕ್ಷನಾಗಿದ್ದೇನೆ. ಇದೆಲ್ಲಾ ಅದೃಷ್ಟದ ಮೇಲೆ ಆಗಿದೆ. ನನ್ನ ಮೇಲೆ ವಿಶ್ವಾಸ ಇಟ್ಟವರ ಋಣ ತೀರಿಸುತ್ತೇನೆ.

• ಹಾಸನ ಜಿ.ಪಂ. ಉಪಾಧ್ಯಕ್ಷರಾಗಿ ನಿಮ್ಮ ಸೇವಾ ಆಧ್ಯತೆಗಳೇನು?

ನಿರೀಕ್ಷೆಯಂತೆ ಮುಂಗಾರು ಮಳೆ ಆರಂಭವಾಗಿಲ್ಲ. ಜಿಲ್ಲೆಯಲ್ಲಿ ಬರ ಸ್ಥಿತಿ ಇದೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಇದೆ. ಹಾಗಾಗಿ ಆಧ್ಯತೆಯ ಮೇಲೆ ಈ ಕೆಲಸಗಳನ್ನು ಕೈಗೆತ್ತಿಕೊಳ್ಳುವಂತೆ ಸೂಚನೆ ನೀಡುತ್ತೇನೆ. ಅನುಷ್ಠಾನವಾಗುವ ಕಾರ್ಯಗಳನ್ನು ವೀಕ್ಷಿಸಲು ಜಿಲ್ಲೆಯ ಪಂಚಾಯ್ತಿಗಳಿಗೆ ಭೇಟಿ ನೀಡುತ್ತೇನೆ. ಅಧಿಕಾರಿಗಳು ನೌಕರರು ಸಾರ್ವಜನಿಕರಿಗೆ ಅಗತ್ಯ ಸಂದರ್ಭಗಳಲ್ಲಿ ಲಭ್ಯವಿದ್ದು ಸ್ಪಂದಿಸುವಂತೆ ನೋಡಿಕೊಳ್ಳುವುದು ಮೊದಲ ಆದ್ಯತೆ. ಉಳಿದಂತೆ ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿ ಪಡಿಸುವುದು, ಮಕ್ಕಳಿಗೆ ತೊಂದರೆಯಾಗದಂತೆ ಶಿಕ್ಷಣ ಒದಗಿಸಲು ಬೇಕಾಗುವ ಕ್ರಮಗಳ ಕುರಿತು ಗಮನ ಹರಿಸುವೆ. ಆರೋಗ್ಯ ಬಹಳ ಮುಖ್ಯವಾಗಿರುವುದರಿಂದ ಔಷಧಗಳ ಪೂರೈಕೆ, ವೈದ್ಯಕೀಯ ಸೇವೆಗಳು ಸಮರ್ಪಕವಾಗಿ ಅರ್ಹರಿಗೆ ತಲುಪುವಂತೆ ನೋಡಿಕೊಳ್ಳುವ ಅಗತ್ಯವಿದೆ. ಸರಕಾರಿ ಯೋಜನೆಗಳ ಅನುಷ್ಠಾನ ಪ್ರಾಮಾಣಿಕವಾಗಿ ಆಗಬೇಕು ಮತ್ತು ಅದರ ಪ್ರಯೋಜನ ಜನರಿಗೆ ದಕ್ಕುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನನ್ನ ಮೇಲಿದೆ.

ಇದು ಶ್ರೀನಿವಾಸ್ ಅವರ ಮಾತುಗಳು. ಒಂದು ವ್ಯವಸ್ಥೆ ಸರಿ ಇಲ್ಲ ಎಂದು ಹೊರಬಂದವರು ಈಗ ಅದೇ ವ್ಯವಸ್ಥೆಯ ಬಹುಮುಖ್ಯ ಭಾಗವಾಗಿದ್ದಾರೆ. ಅವರ ನಿಷ್ಟೆ, ಪ್ರಾಮಾಣಿಕತೆ ಹಾಗೂ ಕಾಳಜಿಗಳು ಉಳಿದುಕೊಂಡು ಮೂಲ ಆಶಯ ಈಡೇರಲಿ ಎಂದಷ್ಟೆ ಈ ಸಮಯದಲ್ಲಿ ಆಶಿಸಬಹುದು.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top