An unconventional News Portal.

ಸಾಮ, ದಾನ, ಬೇಧ, ದಂಡ: ಪೊಲೀಸ್ ಪ್ರತಿಭಟನೆ ತಡೆಯುವ ಸರಕಾರದ ಪ್ರಯತ್ನ ಫಲ ನೀಡುತ್ತಾ?

ಸಾಮ, ದಾನ, ಬೇಧ, ದಂಡ: ಪೊಲೀಸ್ ಪ್ರತಿಭಟನೆ ತಡೆಯುವ ಸರಕಾರದ ಪ್ರಯತ್ನ ಫಲ ನೀಡುತ್ತಾ?

ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ರಜೆ ಹಾಕುವ ಮೂಲಕ ಕರೆ ನೀಡಿದ್ದ ಶನಿವಾರದ ಪ್ರತಿಭಟನೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲಕ್ಕೆ ಕೆಲವು ಗಂಟೆಗಳಲ್ಲಿ ತೆರೆ ಬೀಳಲಿದೆ.

ಕಳೆದ ಒಂದು ವಾರದಿಂದ ಪೊಲೀಸರ ಪ್ರತಿಭಟನೆಯನ್ನು ತಡೆಯಲು ಸರಕಾರ ಹಾಗೂ ಹಿರಿಯ ಅಧಿಕಾರಿಗಳು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳ ಮೊರೆ ಹೋಗಿದ್ದಾರೆ. ಪೊಲೀಸರು ಮಾತ್ರವಲ್ಲ, ಅವರ ಕುಟುಂಬದವರು ಹಾಗೂ ಪ್ರತಿಭಟನೆಯನ್ನು ಬೆಂಬಲಿಸುವ ಸಂಘಟನೆಗಳನ್ನೂ ಶನಿವಾರ ಬೀದಿಗೆ ಇಳಿಯದಂತೆ ತಡೆಯುವ ಪ್ರಯತ್ನಗಳು ನಡೆದಿವೆ.

ಗೃಹ ಸಚಿವರ ಮೆಸೇಜ್:

ಶುಕ್ರವಾರ ಖುದ್ದು ಗೃಹ ಸಚಿವ ಜಿ. ಪರಮೇಶ್ವರ್ ಹೆಸರಿನಲ್ಲಿ ಎಲ್ಲಾ ಪೊಲೀಸರ ಮೊಬೈಲ್ಗೆ ಆಶ್ವಾಸನೆಗಳ ಸಂದೇಶಗಳನ್ನು ಕಳುಹಿಸಲಾಗಿದೆ. ಮುಂದಿನ ಎರಡು ವರ್ಷಗಳ ಅಂತರದಲ್ಲಿ 1500 ಹುದ್ದೆ ಭರ್ತಿ ಮಾಡಲಾಗುವುದು, ಮೂಲ ಸೌಕರ್ಯ, ಮಕ್ಕಳ ಶಿಕ್ಷಣಕ್ಕೆ ಸೌಕರ್ಯ, ಆರೋಗ್ಯ ಸೌಲಭ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿ ಮಾಡುವುದಾಗಿ ಸಂದೇಶಗಳಲ್ಲಿ ತಿಳಿಸಲಾಗಿದೆ. ‘ನಮ್ಮ ಸರಕಾರ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬದ್ಧವಾಗಿದೆ. ಒಟ್ಟಾರೆ ಇಲಾಖೆ ಹಿತ ದೃಷ್ಟಿಯಿಂದ ಯಾವುದೇ ರೀತಿಯ ಅಶಿಸ್ತು ಪ್ರದರ್ಶಿಸಬಾರದಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ’ ಎಂದು ಡಾ. ಪರಮೇಶ್ವರ್ ಅವರ ಹೆಸರಿನಲ್ಲಿ ಕನ್ನಡ ಸಂದೇಶಗಳನ್ನು ಕಳುಹಿಸಲಾಗಿದೆ.

ಕ್ವಾಟ್ರಸ್ ಭೇಟಿ: 

ಇನ್ನೊಂದೆಡೆ ಹಿರಿಯ ಪೊಲೀಸ್ ಅಧಿಕಾರಿಗಳು ಇಲಾಖೆಯ ಸಿಬ್ಬಂದಿಗಳು ವಾಸಿಸುವ ವಸತಿ ಪ್ರದೇಶಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಕುಟುಂಬದವರ ಜತೆ ಮಾತುಕತೆ ನಡೆಸುತ್ತಿದ್ದಾರೆ. ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಹಾಗೂ ಶೀಘ್ರ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆ. ಇನ್ನೊಂದಡೆ, ಪೊಲೀಸರ ಕುಟುಂಬದವರೂ ಪ್ರತಿಭಟನೆ ನಡೆಸುವ ಅವಕಾಶ ಇಲ್ಲ, ಅದಕ್ಕೆ ಸುಪ್ರಿಂ ಕೋರ್ಟ್ ಆದೇಶವಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.

ಶಶಿಧರ್ ಸಂದೇಶ:

ಗುರುವಾರ ಬಂಧನಕ್ಕೆ ಒಳಗಾದ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಸಂಸ್ಥಾಪಕ, ಇಲಾಖೆಯ ಮಾಜಿ ಸಿಬ್ಬಂದಿ ಶಶಿಧರ್ ವೇಣುಗೋಪಾಲ್ ಜೈಲಿನಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರನ್ನು ಭೇಟಿ ಮಾಡಿದ ಪತ್ನಿ ಈ ವಿಚಾರವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಅವರ ಫೇಸ್ ಬುಕ್ ಖಾತೆ ಶುಕ್ರವಾರ ಕೂಡ ಅಪ್ ಡೇಟ್ ಆಗುತ್ತಿದ್ದು, ಶಶಿಧರ್ ಮಗ ಅದನ್ನು ನಿರ್ವಹಿಸುತ್ತಿದ್ದಾನೆ. ‘ಅರೆ ಮನಸ್ಸಿನಿಂದ ನೀಡುವ ಆಶ್ವಾಸನೆಗಳಿಗೆ ಕಿವಿಗೊಡಬೇಡಿ. ಅವರು (ಸರಕಾರ) ಲಿಖಿತ ರೂಪದಲ್ಲಿ ನೀಡುವಂತೆ ಕೇಳಿ’ ಎಂಬುದು ಆತನ ಕೊನೆಯ ಸ್ಟೇಟಸ್ ಆಗಿದೆ.

ಜಿಲ್ಲೆಗಳಲ್ಲಿ ಪ್ರಭಾವ:

“ಬೆಂಗಳೂರಿಗೆ ಹೋಲಿಸಿದರೆ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರ ಪ್ರತಿಭಟನೆ ಹೆಚ್ಚು ಕಾವು ಪಡೆದುಕೊಂಡಿದೆ. ಇಲ್ಲಿ ಹಿರಿಯ ಅಧಿಕಾರಿಗಳ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತಿಭಟನೆ ಹೇಗೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ,” ಎಂದು ಸಿಬ್ಬಂದಿಯೊಬ್ಬರು ಹೇಳುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್ ಸಂಘ ಡಿಜಿಪಿಗೆ 31 ಬೇಡಿಕೆಗಳ ಮನವಿಯನ್ನು ನೀಡಿತ್ತು. ಪ್ರತಿಭಟನೆಗೆ ಬೆಂಬಲ ಸೂಚಿಸಿತ್ತು. ಆದರೆ, ಶುಕ್ರವಾರದ ವೇಳೆಗೆ ಸಂಘ ಮೌನಕ್ಕೆ ಶರಣಾಗಿದೆ. ಅವರ ಪಾತ್ರ ಶನಿವಾರ ಏನಿರಲಿದೆ ಎಂಬುದು ನಿಗೂಢವಾಗಿಯೇ ಇದೆ.

ಕೆಲವೊಂದು ಬದಲಾವಣೆ:

ಈಗಾಗಲೇ ಡಿಜಿಪಿ ಓಂಪ್ರಕಾಶ್ ಪೊಲೀಸ್ ಸಿಬ್ಬಂದಿಗಳಿಗೆ ವಾರದ ರಜೆಯನ್ನು ನೀಡುವಂತೆ ಜ್ಞಾಪನ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದರ ಜತೆಗೆ, ಇತರೆ ಆಶ್ವಾಸನೆಗಳನ್ನು ನೀಡಲಾಗುತ್ತಿದೆ. ಆದರೆ, ಇವುಗಳ ಬಗ್ಗೆ ಸಿಬ್ಬಂದಿಗಳಿಗೆ ವಿಶ್ವಾಸ ಇರುವಂತೆ ಕಾಣಿಸುತ್ತಿಲ್ಲ. “ವಾರದ ರಜೆ ನೀಡುವುದಾಗಿ ಹೇಳಿದ್ದಾರೆ. ಆದರೆ, ಕೆಲಸದ ಒತ್ತಡಗಳು ಹೆಚ್ಚಿದರೆ ಇಂತಹ ಯಾವ ಆದೇಶಗಳೂ ಪಾಲನೆಗೆ ಬರುವುದಿಲ್ಲ,” ಎಂದು ನೈಟ್ ಬೀಟ್ ಸಿಬ್ಬಂದಿಯೊಬ್ಬರು ಹೇಳಿದರು. ಪ್ರತಿಭಟನೆ ನಡೆಯಬಹುದಾ ಎಂಬ ಪ್ರಶ್ನೆಗೆ ಅವರಿಂದ ಮೌನವೇ ಉತ್ತರವಾಗಿದೆ.

ಸಂಘಟನೆಗಳಿಗೆ ನೋಟಿಸ್:

ಇದರ ನಡುವೆ ಪೊಲೀಸ್ ಇಲಾಖೆ ಕಡೆಯಿಂದ ಸಿಬ್ಬಂದಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸುವ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎಸ್ಮಾ ಜಾರಿಯಾದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ರವಾನಿಸಲಾಗಿದೆ. ಕೆಲವು ಕಡೆಗಳಲ್ಲಿ ಪೊಲೀಸರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ವಕೀಲರ ಸಂಘಗಳಿಗೂ ನೋಟಿಸ್ ನೀಡಲಾಗಿದೆ.

ಹೀಗೆ, ಒಂದು ಕಡೆ ಸರಕಾರ ಸಾಮ, ದಾನ, ಬೇಧ, ದಂಡದ ತಂತ್ರಗಳ ಮೂಲಕ ಪ್ರತಿಭಟನೆ ತಡೆಯಲು ಮುಂದಾಗಿದೆ. ಮತ್ತೊಂದೆಡೆ ಪೊಲೀಸ್ ಸಂಘ ಹಾಗೂ ಸಿಬ್ಬಂದಿಗಳು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಶನಿವಾರ ಪೊಲೀಸರ ಪ್ರತಿಭಟನೆ ಏನಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top