An unconventional News Portal.

31 ಬೇಡಿಕೆ ಮುಂದಿಟ್ಟು ಡಿಜಿಪಿಗೆ ಮನವಿ: ಪೊಲೀಸರ ಪ್ರತಿಭಟನೆಗೆ ಈಗ ಅಧಿಕೃತ ಮುದ್ರೆ!

31 ಬೇಡಿಕೆ ಮುಂದಿಟ್ಟು ಡಿಜಿಪಿಗೆ ಮನವಿ: ಪೊಲೀಸರ ಪ್ರತಿಭಟನೆಗೆ ಈಗ ಅಧಿಕೃತ ಮುದ್ರೆ!

ಜೂನ್ 4ರಂದು ಸಾಮೂಹಿಕ ರಜೆ ಹಾಕುವ ಮೂಲಕ ಕುಂದುಕೊರತೆಗಳನ್ನು ಈಡೇರಿಸಿಕೊಳ್ಳಲು ಮುಂದಾದ ಪೊಲೀಸರ ಪ್ರತಿಭಟನೆಗೆ ಮಂಗಳವಾರ ಅಧಿಕೃತ ಮುದ್ರೆಯೊಂದು ಬಿದ್ದಿದೆ.

ಕರ್ನಾಟಕ ರಾಜ್ಯ ಪೊಲೀಸ್ ಸಂಘದ ವತಿಯಿಂದ ಡಿಜಿಪಿ ಓಂಪ್ರಕಾಶ್ ಅವರಿಗೆ 31 ಬೇಡಿಕೆಗಳಿರುವ ಮನವಿ ಪತ್ರವನ್ನು ನೀಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಳಗೆ ನಡೆಯುತ್ತಿದ್ದ ಪ್ರತಿಭಟನೆಗೆ ಅಧಿಕೃತತೆ ಬಂದಂತಾಗಿದೆ.

“ಸೋಮವಾರ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಭೇಟಿ ಮಾಡಿ ಇದೇ ಮನವಿಯನ್ನು ನೀಡಲಾಗಿತ್ತು. ಮಂಗಳವಾರ ಡಿಜಿಪಿಯವರಿಗೆ ಮನವಿಯನ್ನು ನೀಡಲಾಗಿದೆ. ಅವರ ಪ್ರತಿಕ್ರಿಯೆ ಬಂದ ನಂತರ ಜೂ. 4ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ರೂಪುರೇಷೆಗಳನ್ನು ನಿರ್ಧರಿಸಲಾಗುವುದು,” ಎಂದು ನೋಂದಣಿಗೊಂಡಿರುವ ಪೊಲೀಸ್ ಸಂಘದ ಪ್ರಮುಖರೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದರು.

‘ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ’ದ ಅಡಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯೊಳಗಿನ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ‘ಸಿಪಾಯಿ ದಂಗೆ’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೇ ತಿಂಗಳ ಮೊದಲ ವಾರದಲ್ಲಿ ಪ್ರತಿಭಟನೆಯ ಕೂಗು ಎದ್ದಿತ್ತು. ಇದಕ್ಕೆ ಇಲಾಖೆಯೊಳಗೆ ಸಿಬ್ಬಂದಿಗಳು ಸ್ಪಂದನೆ ವ್ಯಕ್ತಪಡಿಸಿದ್ದರು. ಜೂ. 4ರಂದು ಸಾಮೂಹಿಕ ರಜೆ ಹಾಕಲು ಮಹಾ ಸಂಘ ನೀಡಿದ್ದ ಕರೆ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಡಿವೈಎಸ್ಪಿ ಹಾಗೂ ಕೆಳ ಹಂತದ ಅಧಿಕಾರಿಗಳು ವೈಯುಕ್ತಿಕ ರಜೆಗಳನ್ನು ಹಾಕಲು ಶುರು ಮಾಡಿದ್ದರು.

ಆದರೆ, ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಶನಿವಾರ ಮಾತುಕತೆ ನಡೆಸಿದ್ದ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಭಟನೆ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದಿದ್ದರು. “ಇಲಾಖೆಯಿಂದ ಹೊರ ಹೋದವರು ನಡೆಸುತ್ತಿರುವ ಪಿತೂರಿ,” ಎಂದು ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಶಶಿಧರ್ ವೇಣುಗೋಪಾಲ್ ನೇತೃತ್ವದ ಅಖಿಲ ಕರ್ನಾಟಕ ಮಹಾ ಸಂಘಕ್ಕೆ ಯಾವುದೇ ಅಧಿಕೃತತೆ ಇಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಆಫ್ ದಿ ರೆಕಾರ್ಡ್ ಪ್ರಚಾರ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನೋಂದಣಿಯಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಸಂಘದ ಅಡಿಯಲ್ಲಿ ಮಂಗಳವಾರ ಸಲ್ಲಿಕೆಯಾಗಿರುವ ಮನವಿ ಪತ್ರ ಮಹತ್ವ ಪಡೆದುಕೊಂಡಿದೆ.

ಬೇಡಿಕೆಗಳೇನಿವೆ?:

police-protest-memorandumಸದ್ಯ ಡಿಜಿಪಿಗೆ ಅಧಿಕೃತವಾಗಿ ಸಲ್ಲಿಕೆಯಾಗಿರುವ ಮನವಿ ಪತ್ರದಲ್ಲಿ ಒಟ್ಟು 31 ಬೇಡಿಕೆಗಳನ್ನು ಪಟ್ಟಿ ಮಾಡಲಾಗಿದೆ. ಖಾಲಿ ಇರುವ ಹುದ್ದೆಗಳ ಭರ್ತಿ, ವಸತಿ ಗೃಹಗಳ ಸೂಕ್ತ ನಿರ್ವಹಣೆ, ಪದೋನ್ನತಿಗೆ ಜ. 1ರಂದು ದಿನಾಂಕ ನಿಗದಿ, ಬಂದೋಬಸ್ತ್ ಸಮಯದಲ್ಲಿ ಸೂಕ್ತ ಭತ್ಯೆ, ಪಡಿತರ ನೀಡುವ ಬದಲು ಭತ್ಯೆ, ವೈದ್ಯಕೀಯ ಸೌಲಭ್ಯ, ಗುಣಮಟ್ಟದ ಸಮವಸ್ತ್ರ, ಹೊಸ ವೇತನ ನೀತಿ ಜಾರಿ, ಆರ್ಡರ್ಲಿ ವ್ಯವಸ್ಥೆ ರದ್ದು, ಮಹಿಳಾ ಸಿಬ್ಬಂದಿಗೆ ಅಗತ್ಯ ವ್ಯವಸ್ಥೆ, ಹೆಚ್ಚುವರಿ ಕರ್ತವ್ಯ ನಿರ್ವಹಣೆಗೆ ಸೂಕ್ತ ಭತ್ಯೆ ಸೇರಿದಂತೆ ಒಟ್ಟು 31 ಬೇಡಿಕೆಗಳನ್ನು ಮುಂದಿಡಲಾಗಿದೆ.

ಈ ಕುರಿತು ಡಿಜಿಪಿ ಹಾಗೂ ಇಲಾಖೆಯ ಮುಂದಿನ ತೀರ್ಮಾನವನ್ನು ಸಂಘ ಎದುರು ನೋಡುತ್ತಿದೆ. ಅದಾದ ನಂತರ ಜೂ. 4ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಸ್ವರೂಪ ತೀರ್ಮಾನವಾಗಲಿದೆ.

ಸಾಮಾಜಿಕ ಬೆಂಬಲ:

ಕೆಲವು ಅಪಸ್ವರಗಳ ನಡುವೆಯೇ ಪೊಲೀಸರು ಕರೆ ನೀಡಿರುವ ಪ್ರತಿಭಟನೆಗೆ ಸಾಮಾಜಿಕ ಬೆಂಬಲ ವ್ಯಕ್ತವಾಗುತ್ತಿದೆ. “ಪೊಲೀಸರು ಜನರ ಮೇಲೆ ನಡೆಸುವ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರವನ್ನು ಚರ್ಚಿಸಲು ಬೇರೆಯದೇ ವೇದಿಕೆ ನಿರ್ಮಾಣವಾಗಬೇಕು. ಸದ್ಯ ಅವರು ನಡೆಸಲು ತೀರ್ಮಾನಿಸಿರುವ ಹೋರಾಟದಲ್ಲಿ ಕೆಳಹಂತದ ಸಿಬ್ಬಂದಿಗಳ ಬದುಕಿದೆ. ಅದನ್ನು ಈ ಸಮಯದಲ್ಲಿ ಬೆಂಬಲಿಸಬೇಕಿದೆ. ಅದಾದ ನಂತರ, ಸಮಾಜದ ಜತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ನಾವು ಪೊಲೀಸರನ್ನು ಒತ್ತಾಯಿಸುವುದು ತಾರ್ಕಿಕವಾದುದು,” ಎನ್ನುತ್ತಾರೆ ಎಡಪಕ್ಷಗಳ ನಾಯಕರೊಬ್ಬರು.

ಸದ್ಯ ಮಂಗಳವಾರ ನಡೆದಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಪೊಲೀಸರ ಪ್ರತಿಭಟನೆಗೆ ಇಲಾಖೆ ಮನ್ನಣೆ ನೀಡುವ ಅನಿವಾರ್ಯತೆ ಎದುರಾಗಿದೆ. ಶಿಸ್ತಿನ ಇಲಾಖೆ ಎಂದು ಕರೆಸಿಕೊಳ್ಳುತ್ತಿದ್ದ ಪೊಲೀಸ್ ಇಲಾಖೆಯೊಳಗಿರುವ ಅಧಿಕೃತ ಸಂಘವೇ ಈ ತನ್ನ ಸಿಬ್ಬಂದಿ ಹಾಗೂ ಕೆಳಹಂತದ ಅಧಿಕಾರಿಗಳ ಪರವಾಗಿ ಅಖಾಡಕ್ಕಿಳಿದಿದೆ. ಇಲಾಖೆಯೊಳಗಿದ್ದು, ಹೊರಹೋದವರು ನಡೆಸುತ್ತಿದ್ದ ಹೋರಾಟವೀಗ, ಇಲಾಖೆಯೊಳಗೂ ಅಧಿಕೃತತೆ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಮುಂದಿನ ತೀರ್ಮಾನದ ಮೇಲೆ ಭವಿಷ್ಯ ನಿಂತಿದೆ.

ಶಾಸಕರ ಒತ್ತಾಯ: 

ಮಂಗಳವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಡುಚಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಪಿ.ರಾಜೀವ್, ಪ್ರತಿಭಟನೆಗೆ ಮುನ್ನವೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಸರಕಾರ ಶಿಸ್ತು ಕ್ರಮದ ಹೆಸರಿನಲ್ಲಿ ಪೊಲೀಸರ ಮೇಲೆ ಕ್ರಮ ಜರುಗಿಸಿದರೆ, ಸುದ್ದಿಗೆ ರೆಕ್ಕೆಪುಕ್ಕ ಬಂದು ಪೊಲೀಸ್ ದಂಗೆಗೆ ಕಾರಣವಾಗಬಹುದು, ಹೀಗಾಗಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದ್ದಾರೆ. ಪೊಲೀಸರ ಕುಂದುಕೊರತೆಗಳ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಿ, ಮೂರು ತಿಂಗಳು ಗಡುವು ವಿಧಿಸಿದರೆ, ಪ್ರತಿಭಟನೆ ಹಿಂಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ENTER YOUR E-MAIL

Name
Email *
September 2017
M T W T F S S
« Aug    
 123
45678910
11121314151617
18192021222324
252627282930  

Top