An unconventional News Portal.

ಬಾಳಿಗ ಕೊಲೆಗೆ ‘ಪತ್ರ ಕಾರಣ’: ಪೊಲೀಸರಿಂದ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ

ಬಾಳಿಗ ಕೊಲೆಗೆ ‘ಪತ್ರ ಕಾರಣ’: ಪೊಲೀಸರಿಂದ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ

ಇತ್ತ ‘ಬ್ರಿಗೇಡ್ ಬಾಯ್’ ನರೇಶ್ ಶೆಣೈ ನರೇಂದ್ರ ‘ಮೋದಿ ಸರ್ಕಾರ್’ ಹೆಸರಿನಲ್ಲಿ ಚಲಾವಣೆಗೆ ಬರಲು ಪ್ರಯತ್ನಿಸುತ್ತಿರುವ ಹೊತ್ತಿನಲ್ಲೇ, ಮಂಗಳೂರು ಪೊಲೀಸರು ವಿನಾಯಕ್ ಬಾಳಿಗ ಕೊಲೆ ಪ್ರಕರಣದಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.

ಮಂಗಳೂರು ಮೂಲದ ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಮಾರ್ಚ್ 21ರಂದು ತಮ್ಮ ನಿವಾಸದ ಬಳಿಯೇ ಹತ್ಯೆಯಾಗಿದ್ದರು. ಈ ಪ್ರಕರಣದಲ್ಲಿ ತನಿಖೆ ಆರಂಭಿಸಿದ ನಗರ ಪೊಲೀಸರು ನಮೋ ಬ್ರಿಗೇಡ್ ಸಂಸ್ಥಾಪಕ ಹಾಗೂ ಉದ್ಯಮಿ ನರೇಶ್ ಶೆಣೈನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಎರಡು ತಿಂಗಳ ಹಿಂದೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದರು. ಇದೀಗ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ವಿನಾಯಕ್ ಬಾಳಿಗಾ ‘ಸುಧಾ ಸೇವಾ ಪ್ರತಿಷ್ಠಾನ’ದ ಟ್ರಸ್ಟಿಗಳಿಗೆ ಬರೆದ ಪತ್ರವೇ ಅವರ ಕೊಲೆಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಈ ಜಾರ್ಜ್ ಶೀಟಿನಲ್ಲಿ ಹೇಳಲಾಗಿದೆ. ವಿನಾಯಕ್ ಬಾಳಿಗ ಈ ಪತ್ರದಲ್ಲಿ ‘ನರೇಶ್ ಶೆಣೈ ಮತ್ತು ಆತನ ಕುಟುಂಬಸ್ಥರು ವಿಠೋಬಾ ದೇವಸ್ಥಾನದ ಆಸ್ತಿಯ ಕಳ್ಳತನದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಆರೋಪಿಸಿದ್ದರು.

ಮಾತ್ರವಲ್ಲ ವೆಂಕಟರಮಣ ದೇವಸ್ಥಾನದಲ್ಲಿ 2013ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸಲು ಇದೇ ನರೇಶ್ ಶೆಣೈ ಸಹಕರಿಸಿದ್ದರು ಎಂದೂ ಪತ್ರದಲ್ಲಿ ಆರೋಪಿಸಿದ್ದರು. ಬಾಳಿಗಾ ಬರೆದ ಈ ಪತ್ರವೇ ಆತನ ಕೊಲೆಗೆ ನರೇಶ್ ಶೆಣೈ ಸುಪಾರಿ ಕೊಡಲು ಪ್ರಮುಖ ಕಾರಣ ಎಂದು ಪೊಲೀಸರು ತನಿಖೆಯ ನಂತರ ತೀರ್ಮಾನಕ್ಕೆ ಬಂದಿದ್ದಾರೆ.

ಪ್ರತಿಷ್ಠಾನದ ಸಂಯೋಜಕರಾದ ಅನಿಲ್ ಕುಡ್ವ ಹಾಗೂ ಸದಸ್ಯರಾದ ಗಣಪತಿ ಪೈಗಳಿಗೆ ಬಾಳಿಗ ಪತ್ರ ಬರೆದಿದ್ದರು. ‘ನರೇಶ್ ಶೆಣೈ, ಆತನ ತಂದೆ ಮತ್ತು ಇತರ ವ್ಯಕ್ತಿಗಳು ವಿಠೋಬಾ ರುಕುಮಾಯಿ ದೇವಸ್ಥಾನದ ಟ್ರಸ್ಟಿಗಳ ಹೆಸರಿನಲ್ಲಿ  ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಬ್ಯಾಂಕಿನಲ್ಲಿ ಇಟ್ಟಿದ್ದ ಚಿನ್ನವನ್ನು ಬಿಡಿಸಿದ್ದರು. ವಿಶೇಷವೆಂದರೆ ಸದರಿ ಚಿನ್ನ 2013 ಕಳ್ಳತನವಾಗಿತ್ತು’ ಎಂದು ಪತ್ರದಲ್ಲಿ ಕೊಲೆಯಾದ ಬಾಳಿಗ ಉಲ್ಲೇಖಿಸಿದ್ದರು.

ಇದೇ ಪತ್ರದಲ್ಲಿ, ವೆಂಕಟರಮಣ ದೇವಸ್ಥಾನದಲ್ಲಿ 2013ರಲ್ಲಿ ನಡೆದಿದ್ದ ಕೊಲೆಯ ಪ್ರಮುಖ ಆರೋಪಿ ನಂದಕುಮಾರ್’ಗೆ ಜಾಮೀನು ಪಡೆಯಲು ಮತ್ತು ಏಳನೇ ಆರೋಪಿ ಮಂಜುನಾಥ್ ಶೆಣೈಯತ್ತ ಕೊಲೆಯ ಸಂಚನ್ನು ತಿರುಗಿಸಲು ನರೇಶ್ ಶೆಣೈ ಸಹಾಯ ಮಾಡಿದ್ದರು ಎಂದು ಆರೋಪಿಸಿದ್ದರು.

ವೆಂಕರಮಣ ದೇವಸ್ಥಾನಕ್ಕೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳ ಮಾಹಿತಿಯನ್ನು ವಿನಾಯಕ್ ಬಾಳಿಗ ಆರ್ಟಿಐ ಕಾಯಿದೆಯ ಅನ್ವಯ ಪಡೆದುಕೊಂಡಿದ್ದರು. ಮತ್ತು ನ್ಯಾಯಾಲಯದಲ್ಲಿ ಎರಡು ದೂರುಗಳನ್ನೂ ದಾಖಲಿಸಿದ್ದರು ಎಂದು ಹೆಚ್ಚುವರಿ ಜಾರ್ಜ್ ಶೀಟಿನಲ್ಲಿ ಹೇಳಲಾಗಿದೆ. ಇದಿಷ್ಟಲ್ಲದೆ ವಿನಾಯಕ್ ಬಾಳಿಗ ವೆಂಕಟರಮಣ ದೇವಸ್ಥಾನದ ಜಮೀನೊಂದರ ಮಾರಾಟಕ್ಕೆ ಸಂಬಂಧಿಸಿದಂತೆ ಟ್ರಸ್ಟಿಗಳ ವಿರುದ್ಧವೂ ಕೋರ್ಟಿಗೆ ದೂರು ನೀಡಿದ್ದರು. ಪ್ರಕರಣದ ಮೊದಲ ಆರೋಪಿಯಾಗಿರುವ ನರೇಶ್ ಶೆಣೈ ವೆಂಕಟರಮಣ ದೇವಸ್ಥಾನದ ವ್ಯವಹಾರಗಳಲ್ಲಿ ಪ್ರಭಾವ ಬೀರುತ್ತಿದ್ದರು ಎಂದೂ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಈ ಎಲ್ಲಾ ಕಾರಣಗಳಿಂದಾಗಿ ನರೇಶ್ ಶೆಣೈ ತನ್ನ ಸಿಬ್ಬಂದಿಗಳಾದ ಶ್ರೀಕಾಂತ್ (ಎರಡನೇ ಆರೋಪಿ) ಮತ್ತು ಶೈಲೇಶ್ (ಆರನೇ ಆರೋಪಿ)  ಜತೆ ವಿನಾಯಕ್ ಬಾಳಿಗಾ ಕೊಲೆಗೆ ಸಂಚು ರೂಪಿಸಲಾಗಿತ್ತು. ನರೇಶ್ ಶೆಣೈ ತನ್ನ ಕಾರು ಮತ್ತು ಹಣವನ್ನು ಶಿವಪ್ರಸಾದ್, ವಿನೀತ್ ಪೂಜಾರಿ ಮತ್ತು ನಿತೀಶ ದೇವಾಡಿಗ ಅವರಿಗೆ ನೀಡಿದ್ದಾರೆ. ಈ ಮೂರು ಜನ ವಿನಾಯಕ್ ಬಾಳಿಗಾರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಆರೋಪ ಹೊರಿಸಿದ್ದಾರೆ. ನರೇಶ್ ಶೆಣೈ ಕೊಲೆಯಾದ ದಿನದಿಂದ ಜೂನ್ 26ರಂದು ಬಂಧಿತರಾಗುವವರೆಗೆ ತಲೆ ಮರೆಸಿಕೊಳ್ಳಲು ಏಳನೇ ಆರೋಪಿ ಮಂಜುನಾಥ್ ಶೆಣೈ ಅಲಿಯಾಸ್ ಮಂಜು ನೀಲೆಶ್ವಾಲ್ಯ ಸಹಾಯ ಮಾಡಿದ್ದ ಎಂಬುದು ದೋಷಾರೋಪ ಪಟ್ಟಿಯಲ್ಲಿದೆ.

ತನಿಖಾಧಿಕಾರಿ ಉದಯ್ ನಾಯಕ್ ಡಿಸೆಂಬರ್ 17ರಂದು ಮೂರನೇ ಜಿಲ್ಲಾ ಪ್ರಥಮದರ್ಜೆ ನ್ಯಾಯಾಲಯದಲ್ಲಿ ಈ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕೆಲವು ಹೆಚ್ಚುವರಿ ಪುರಾವೆಗಳು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಮತ್ತು ಮೊಬೈಲ್ ಕರೆಗಳ ರೆಕಾರ್ಡಿಂಗ್ ವಿಶ್ಲೇಷಣೆಗಳಿಗಾಗಿ ಸಮಯ ತೆಗೆದುಕೊಂಡಿದ್ದಾಗಿ ನ್ಯಾಯಾಲಯದಲ್ಲಿ ಅರಿಕೆ ಮಾಡಿಕೊಂಡಿದ್ದಾರೆ.

 

 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top