An unconventional News Portal.

ಬದುಕು ಅರಸಲು ಉದ್ಯೋಗ ಸಾಕಿತ್ತು; ನಿರುದ್ಯೋಗ ಕಂಬಿ ಹಿಂದೆ ತಳ್ಳಿತ್ತು…

ಬದುಕು ಅರಸಲು ಉದ್ಯೋಗ ಸಾಕಿತ್ತು; ನಿರುದ್ಯೋಗ ಕಂಬಿ ಹಿಂದೆ ತಳ್ಳಿತ್ತು…

ಹಾವೇರಿ ಈಗ ಕರ್ನಾಟಕದ ಒಂದು ಜಿಲ್ಲೆ. ಈ ಮೊದಲು ಅದು ಧಾರವಾಡದ ಜಿಲ್ಲೆಗೆ ಸೇರಿತ್ತು. 1997ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ, ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು. ಜಿಲ್ಲೆಯ ವಿಸ್ತೀರ್ಣ 4,823 ಚದರ ಕಿ,ಮೀ ಇದೆ. 2011ರ ಜನಗಣತಿ ಜನಗಣತಿ ಪ್ರಕಾರ, ಜಿಲ್ಲೆಯ ಒಟ್ಟು  ಜನಸಂಖ್ಯೆ 15,97,668 ಇದೆ. ಇದು 7 ವರ್ಷಗಳಲ್ಲಿ ಇನ್ನೂ ಹೆಚ್ಚಾಗಿದೆ. ಇಲ್ಲಿ ಮಳೆ ಕಡಿಮೆ. ಒಣ ಭೂಮಿಯೇ ಅಧಿಕ. ಮಳೆಯೇ ಕೃಷಿಗೆ ಆಧಾರವಿಲ್ಲಿ. ವರ್ಷಪೂರ್ತಿಯಂತೂ ಇಲ್ಲಿನ ಜನರಿಗೆ ಉದ್ಯೋಗ ಸಿಗುವುದಿಲ್ಲ. ಹಲವರು ಉದ್ಯೋಗ ಅರಸಿಕೊಂಡು ಬೇರೆ ಬೇರೆ ನಗರಗಳಿಗೆ ಹೊರಡುತ್ತಾರೆ. ಕಾಫಿ ಹಣ್ಣಿನ ಕಾಲದಲ್ಲಿ ಹಣ್ಣನ್ನು ಕುಯ್ದುಕೊಡಲು ಕಾಫಿ ಸೀಮೆಗೆ ಬರುವವರಲ್ಲಿ ಇಲ್ಲಿನವರೂ ಇದ್ದಾರೆ…

ಬೆಂಗಳೂರು, ಮಂಗಳೂರು, ಉಡುಪಿ ಕಡೆಗೆ ಕೆಲಸ ಅರಸಿ ಹೋಗುವವರೂ ಬಹಳ ಜನರು. ಕಟ್ಟಡ ನಿರ್ಮಾಣದ ಕೆಲಸದಲ್ಲಿ ಉತ್ತರ ಕರ್ನಾಟಕದವರೇ ಹೆಚ್ಚು. ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಸಿಗುವಷ್ಟು ಕೂಲಿ ಉತ್ತರ ಕರ್ನಾಟಕದಲ್ಲಿ ಸಿಗುವುದಿಲ್ಲ. ಬೆಂಗಳೂರು ಮತ್ತು ಮಂಗಳೂರಿನಂತ ನಗರಗಳಂತಹ ಪ್ರದೇಶಗಳಲ್ಲಿ ಕೆಲಸಕ್ಕೆ ಅವಕಾಶಗಳೂ ಹೆಚ್ಚು. ಈ ಭಾಗಗಳಲ್ಲಿ ದಿನಕ್ಕೆ ನಾಲ್ಕು ನೂರು ರುಪಾಯಿಗೆ ಮೋಸವೂ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಹಾವೇರಿ ಜಿಲ್ಲೆಯಿಂದ ಉದ್ಯೋಗ ಅರಸಿಕೊಂಡು ಮಂಗಳೂರು ಕಡೆಗೆ ಬಂದ ಹುಡುಗನೊಬ್ಬನ ಕಥೆ ಇಲ್ಲಿದೆ…

ಬಸಪ್ಪ ಉದ್ಯೋಗ ಅರಸಿಕೊಂಡು ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದ. ಆಗ ಸಮಯ ರಾತ್ರಿ ಹತ್ತು ಗಂಟೆ. ಅವನೂರಿನವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೂಲಕ ಕೆಲಸ ಗಿಟ್ಟಿಸಿಕೊಂಡು ಯುಗಾದಿ ಹೊತ್ತಿಗೆ ಕೈತುಂಬಾ ಹಣ ಮಾಡಿಕೊಂಡು ಊರಿಗೆ ಹೋಗಬೇಕೆಂಬ ಯೋಜನೆ ಅವನದಾಗಿತ್ತು. ಪ್ರಯಾಣದ ಸಮಯದ ಬಗ್ಗೆ ತಲೆ ಕಡೆಸಿಕೊಳ್ಳದೆ, ಹೊರಟು ಬಂದಿದ್ದ. ಕೈಯಲ್ಲಿ ಮೊಬೈಲ್ ಇದ್ದರೂ ಅವನ ಸ್ನೇಹಿತ ಕರೆ ಸ್ವೀಕರಿಸುತ್ತಿಲ್ಲ. ಬೇರೆಯವರಾರೂ ಅಷ್ಟಾಗಿ ಪರಿಚಯವಿರಲಿಲ್ಲ. ಈಗೇನು ಮಾಡುವುದು ಎಂದು ತಲೆ ಕೆರೆಯುತ್ತಾ ಯೋಚಿಸತೊಡಗಿದ.

ಹಳ್ಳಿ ಹಿನ್ನೆಲೆಯಾದ್ದರಿಂದ ಉಡುಪು ಮತ್ತು ವಾಸದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳಲಿಲ್ಲ. ರೈಲ್ವೇ ನಿಲ್ದಾಣದಲ್ಲಿ ಬನ್ ತಿಂದು, ಟೀ ಕುಡಿದ. ಏನು ಮಾಡೋದು ಎಲ್ಲಿಗೆ ಹೋಗೋದು ಎಂದು ಗೊತ್ತಾಗದೇ ಕುಳಿತ. ಸಮಯ ರಾತ್ರಿ ಹನ್ನೆರಡಾಗುತ್ತಾ ಬಂತು. ಹಲವು ರೈಲುಗಳು ಬಂದು ಹೋದರೂ ಇವನು ಯಾವುದಕ್ಕೂ ಹತ್ತದೇ ಇರುವುದನ್ನು ನೋಡಿದ ಪೊಲೀಸರು ಇವನನ್ನು ವಿಚಾರಿಸಿದರು. ‘ಕೆಲಸ ಹುಡುಕಿಕೊಂಡು ಬಂದಿದ್ದು, ಹಾವೇರಿ ಕಡೆಯವನು, ಇಲ್ಲಿ ಸ್ನೇಹಿತನಿದ್ದಾನೆ, ಅಲ್ಲಿಗೆ ಹೋಗಬೇಕು. ಆದರೆ ಕರೆಗೆ ಅವನು ಸಿಗುತ್ತಿಲ್ಲ,’ ಎಂದು ಇದ್ದದ್ದನ್ನು ಇದ್ದ ಹಾಗೆಯೇ ಹೇಳಿದ.

ಆದರೆ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು. “ಎಲ್ಲೆಲ್ಲಿ ಏನೇನು ಕಳ್ಳತನ ಮಾಡಿದ್ದೀಯ ಹೇಳು,” ಎಂದು ಹೊಡೆಯತೊಡಗಿದರು. “ನಾನು ಕಳ್ಳನಲ್ಲ,” ಎಂದು ಚೀರಿ ಹೇಳಿದರೂ ಬಿಡಲಿಲ್ಲ. ಹೊಡೆದು ಹೊಡೆದು ಮೂರ್ಛೆ ಬರಿಸಿ ಮಲಗಿಸಿಬಿಟ್ಟರು. ಸಾಮಾನ್ಯವಾಗಿ ಕಳ್ಳರ ಮೇಲೇ ಪೊಲೀಸರಿಗೆ ಹೊಡೆಯೋ ಆಸಕ್ತಿ ಜಾಸ್ತಿ. ಅವರು ಕದ್ದಿಟ್ಟದನ್ನು, ಮಾರಿದ್ದನ್ನು ಕಂಡುಹಿಡಿದು ಅದರಲ್ಲಿ ಪಾಲು ತೆಗೆದುಕೊಳ್ಳುವ ಸ್ವಹಿತಾಸಕ್ತಿ ಕೂಡ ಅಲ್ಲಿ ಕೆಲಸ ಮಾಡುತ್ತಿರುತ್ತದೆ. ಮಾರನೇ ದಿನ ಅವನ ಮೇಲೆ ಕಳ್ಳತನದ ಮೂರ್ನಾಲ್ಕು ಪ್ರಕರಣಗಳನ್ನು ದಾಖಲಿಸಿ, ನಿರಪರಾಧಿಯಾಗಿದ್ದ ಆತನನ್ನು ಅಪರಾಧಿಯನ್ನಾಗಿ ಮಾಡಿಬಿಟ್ಟರು.

ಬಸಪ್ಪನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಜೈಲಿಗೆ ಹಾಕಿಸಿದರು. ಮನೆಯಲ್ಲಿ ಬಸಪ್ಪನ ಬಗ್ಗೆ ಏನೂ ತಿಳಿಯದೇ ಗಾಬರಿಯಾದರು. ‘ಫೋನ್ ಮಾಡಿದರೂ ಹೋಗುತ್ತಿಲ್ಲ. ಏನಾಯಿತು, ಎಲ್ಲಿಗೆ ಹೋದ,’ ಎಂಬುದರ ಬಗ್ಗೆ ಮನೆಯವರಿಗೆ ಮಾಹಿತಿಯೇ ಇಲ್ಲ. ಆದರೆ ಜೈಲಿನ ಒಳಗೆ ಬಂದ  ಮೇಲೆ ಹುಡುಗ ಅವಕ್ಕಾಗಿಬಿಟ್ಟ. ಅವನೆಂದೂ ಕನಸಲ್ಲೂ ನೆನಸದ ಸ್ಥಳ ಅದಾಗಿತ್ತು. ಅವರಿವರು ಕಳ್ಳನೆಂದು ಕಂಡಲ್ಲೆಲ್ಲಾ ಹೊಡೆಯುತ್ತಿದ್ದರು. ಪೊಲೀಸರು ನೀಡುವ ಚಿತ್ರಹಿಂಸೆ ಯಾತನಾಮಯವಾಗಿತ್ತು. ಯಾರ ಬೆಂಬಲ ಮತ್ತು ಯಾರ ಪರಿಚಯವೂ ಇಲ್ಲದೇ ಒಂದೆರಡು ವಾರ ಕೊರಗುತ್ತಲೇ ಕಳೆದ. ಜೈಲಿನಲ್ಲಿ ಕೊಡುವ ಕುಚಲಕ್ಕಿ ಅನ್ನ ಆತನಿಗೆ ಗಂಟಲಿನಲ್ಲಿ ಇಳಿಯುತ್ತಿಲ್ಲ. ನಿದ್ರೆಯೂ ಇಲ್ಲದೆ ನಿತ್ರಾಣನಾದ.

ವಕೀಲರನ್ನು ನೇಮಿಸುವುದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ಬಗ್ಗೆ ಏನೊಂದೂ ತಿಳಿದಿರಲಿಲ್ಲ ಆತನಿಗೆ. “ಕೆಲಸ ಮಾಡಿ  ದುಡ್ಡು ಗಳಿಸಿ ಉಗಾದಿಗೆ ಊರಿಗೆ ಹೋಗಬೇಕು. ತಂಗಿಗೆ ಬಟ್ಟೆ ಕೊಡಿಸಬೇಕು,” ಎಂದು ಬಂದ ನನಗೆ ಈ ಗತಿ ಏಕೆ ಬಂತು ಎಂದೆಲ್ಲಾ ಪ್ರಶ್ನೆ ಮಾಡಿಕೊಂಡು ಮಮ್ಮಲ ಮರುಗಿದ. ದಿನಗಳು ಉರುಳುತ್ತಿದ್ದವು. ಬಂದಿದ್ದನ್ನು ಎದುರಿಸಬೇಕು ಎಂದುಕೊಂಡು ನ್ಯಾಯಾಲಯವೇ ವಕೀಲರನ್ನು ಒದಗಿಸುವ ವಿಚಾರ ತಿಳಿದುಕೊಂಡ. ನ್ಯಾಯಾದೀಶರನ್ನೇ ಈ ಬಗ್ಗೆ ಕೇಳಿದ. ಹಾಗೆ ಕೇಳಬೇಕೆಂದು ಮೊದಲೇ ಅಂದುಕೊಂಡರೂ ಅದನ್ನು ಮಾಡಲು ತಿಂಗಳು ಸಮಯವೇ ಹಿಡಿಯಿತು. ಆಗಲೂ ಮನೆಯವರನ್ನು ಸಂಪರ್ಕಿಸಲು ಆತನಿಗೆ ಸಾಧ್ಯವಾಗಲಿಲ್ಲ. ಜೈಲಿನಲ್ಲಿ ಮೊಬೈಲ್‌ಗಳು ಓಡಾಡುತ್ತಿದ್ದವಾದರೂ, ಯಾರೂ ಇವನ ಕೈಗೆ ಮೊಬೈಲ್ ಕೊಡುವ ಮನಸು ಮಾಡಲಿಲ್ಲ. ಇವನೂ ಕೇಳಲಿಲ್ಲ. ಅದು ಅವರು ಕೇಳಿದಷ್ಟು ದುಡ್ಡು ಬಿಚ್ಚಿದವರಿಗೆ ಮಾತ್ರ ಸುಲಭದಲ್ಲಿ ಸಿಗುತ್ತಿತ್ತು. ಅಲ್ಲದೆ ಮನೆಯವರಿಗೆ ಈ ವಿಚಾರ  ಎಲ್ಲಾ ಹೇಳಿ ಯಾಕೆ ಬೇಜಾರು ಮಾಡೋದು. ಅವರಿಗೆ ಗೊತ್ತಾಗದಂತೆ ಇದ್ದರೇನೇ ಒಳ್ಳೆಯದು ಎಂದುಕೊಂಡ. “ವಿಚಾರಣೆ ಮುಗಿದ ಮೇಲೆ ನನ್ನನ್ನು ಬಿಡುತ್ತಾರೆ, ನಾನೇನು ಕಳ್ಳತನ ಮಾಡಿಲ್ಲವಲ್ಲ,” ಎಂಬ ನಂಬಿಕೆಯೂ ಅವನಿಗೆ ಇತ್ತು.

ವಿಚಾರಣೆ 2 ವರ್ಷವಾದರೂ ಮುಗಿಯಲಿಲ್ಲ. ಜಾಮೀನಿಗಾಗಿ ಪ್ರಯತ್ನಿಸಲೂ ಹೋಗಲಿಲ್ಲ. ವಕೀಲರಿಗೆ  ಕೊಡಲು ಇವನ ಬಳಿ ಹಣ ಇರಲಿಲ್ಲ. ಸರಿಯಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸುವುದೂ ನಡೆಯುತ್ತಿರಲಿಲ್ಲ. ಇದರಿಂದೆಲ್ಲಾ ವಿಚಾರಣೆ ವಿಳಂಬವಾಗುತ್ತಾ ಹೋಯಿತು. ದಿನಗಳು ಹೋಗಿ ತಿಂಗಳುಗಳು ಕಳೆದಂತೆ ಜೈಲಿನ ವಾತಾವರಣಕ್ಕೆ ಹೊಂದಿಕೊಂಡುಬಿಟ್ಟಿದ್ದ. ಎರಡು ಯುಗಾದಿಗಳು ಮುಗಿದರೂ ಮನೆಗೆ ಹೋಗಲಾಗದಿದ್ದಕ್ಕೆ ನೋವು ಅನುಭವಿಸಿದ. ಹಳ್ಳಿಯ ಮುಗ್ಧ ಮನಸು ಅವನದಾಗಿದ್ದರಿಂದ ಸಂಕಟ ನೋವು ಹೆಚ್ಚಿತ್ತು. ಜೈಲಿನಲ್ಲಿ ಅವರಿವರ ಬಟ್ಟೆ ತೊಳೆದು ಕೊಟ್ಟು, ಹತ್ತಿಪ್ಪತ್ತು ರುಪಾಯಿ ಸಂಪಾದಿಸಲು ಶುರು ಮಾಡಿದ. ನೀರಿನ ಅಭಾವದಿಂದಾಗಿ ಅದು ಕೂಡ ಕಷ್ಟದ ವಿಚಾರವೇ ಆಗಿತ್ತು. ಅದೇ ಹಣ ಬಳಸಿ ತನಗೆ ಅಗತ್ಯವಾದ ಬಟ್ಟೆ , ಬ್ರಶ್, ಪೇಸ್ಟ್‌ಗಳನ್ನು ಕೊಳ್ಳುತ್ತಿದ್ದ. ಅದರಲ್ಲೂ ಕೆಲವರು ಕೆಲಸ ಮಾಡಿಸಿಕೊಂಡು ಹಣ ಕೊಡದೇ ದಬಾಯಿಸುವುದೂ ಇತ್ತು. ಊರಿನಲ್ಲಿ ಮನೆಯವರಿಗೆ ಮಗ ಏನಾದ?, ಎಲ್ಲಿ ಹೋದ? ಎಂದು ಚಿಂತೆಯಾಗಿತ್ತು. ‘ಪೊಲೀಸ್ ಠಾಣೆಗೆ ದೂರು ಕೊಡಿ,’ ಎಂದು ಹಲವರು ಹೇಳಿದರೂ, ಭಯದಿಂದ ಅದಕ್ಕೆ ಮುಂದಾಗಲಿಲ್ಲ. “ಎಲ್ಲೋ ಬಿದ್ದು ಸತ್ತೇ ಹೋಗಿರಬೇಕು ನನ್ನ ಮಗ,” ಎಂದು ತಿಳಿದುಕೊಂಡರು. ಇಲ್ಲ ಅಂದರೆ, “ಇಷ್ಟು ದಿನ ನಮ್ಮನ್ನು ಬಿಟ್ಟು ಇರುತ್ತಿರಲಿಲ್ಲ,” ಎಂದೆಲ್ಲಾ ಅಂದುಕೊಂಡರು

ವಿಚಾರಣೆ ಮೂರು ವರ್ಷ ಕಾಲ ನಡೆಯಿತು. ಪೊಲೀಸರು ದಾಖಲಿಸಿದ್ದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲವೆಂದು ನ್ಯಾಯಾಲಯ ಇವನನ್ನು ಬಿಡುಗಡೆಗೊಳಿಸಿತು. ಆಗ ಬಸಪ್ಪನ ಮನಸ್ಸಿಗೆ ಏನೋ ನೆಮ್ಮದಿ. ದುಡಿದು ಸ್ವಲ್ಪವಾದರೂ ದುಡ್ಡು ತೆಗೆದುಕೊಂಡು ಊರಿಗೆ ಹೋಗಬೇಕೆಂದು ದೊಡ್ಡ ಕಟ್ಟಡ ನಿರ್ಮಾಣವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. “ಇಲ್ಲೇ ಇದ್ದರೆ ಪೊಲೀಸರು ಮತ್ತೆ ಕಳ್ಳತನದ ಆರೋಪ ಹೊರಿಸಿ ಬಂಧಿಸಬಹುದು,” ಎಂದು ಜನ ಹೇಳಿದರು. ಪೊಲೀಸರೂ ಒಂದೆರಡು ಬಾರಿ ವಿಚಾರಿಸಿ ಹೆದರಿಸಿದ್ದರು. ಕೊನೆಗೆ “ಇನ್ನೂ ಇಲ್ಲಿದ್ದರೆ, ಮತ್ತೇನಾದರೂ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಬಹುದು,” ಎಂದುಕೊಂಡು ಊರಿನ ದಾರಿ ಹಿಡಿದ. ಆಗ ಅದಾಗಲೇ ಬಿಡುಗಡೆಗೊಂಡು ಮೂರು ತಿಂಗಳಾಗಿತ್ತು. ದುಡಿದ ಒಂದಷ್ಟು ಕಾಸು ಕೈಯಲ್ಲಿತ್ತು. ಮನೆಯವರಿಗೆ ಏನಾದರೂ ಹೇಳಿ ಅವರನ್ನು ಸಮಾಧಾನ ಮಾಡಬೇಕು ಎಂದು ಯೋಚಿಸುತ್ತಾ ರೈಲಿನಲ್ಲಿ ಕುಳಿತು ಹಾವೇರಿಯತ್ತ ಪಯಾಣ ಬೆಳೆಸಿದ್ದ. ಈ ಸಂದರ್ಭದಲ್ಲಿ ತನ್ನ ತಾನು ಮಂಗಳೂರಿಗೆ ಬಂದಿದ್ದು, ಅಲ್ಲಿಂದ ಪೊಲೀಸರ ಕೈಗೆ ಸಿಕ್ಕಿದ್ದು, ನಂತರ ಬಿಡುಗಡೆಗೊಂಡಿದ್ದು ಈ ಎಲ್ಲ ದೃಶ್ಯಗಳೂ ಕಣ್ಣ ಮುಂದೆ ಬಂದವು.

ಪೊಲೀಸ್ ವ್ಯವಸ್ಥೆಯ ಕ್ರೌರ್ಯ, ನ್ಯಾಯಾಲಯದ ಲೋಪದೋಷಗಳು ಅಮಾಯಕ ಹುಡುಗರ ಬದುಕನ್ನು ಹೇಗೆ ನರಕಸದೃಶ ಮಾಡುತ್ತವೆ ಎಂದು ಇಂತಹ ಹಲವಾರು ಕಥೆಗಳು ಕಂಬಿ ಹಿಂದೆ ಇರುವವರಿಂದ ಸಿಗುತ್ತವೆ. ನ್ಯಾಯಬದ್ಧವಾಗಿ ದುಡಿದು ತಿನ್ನಬೇಕೆಂದು ಬಂದ ಎಷ್ಟೋ ಜನರು ಹೀಗೆ ಮಾಡದ ತಪ್ಪಿಗೆ ಕಂಬಿ ಎಣಿಸುತ್ತಿದ್ದಾರೆ. ಪೊಲೀಸರು ಇಲ್ಲಸಲ್ಲದ ಕೇಸುಗಳನ್ನು ಜಡಿದು ಅವರನ್ನು ಅಪರಾಧಿಗಳನ್ನಾಗಿ ಮಾಡಿದ್ದಾರೆ. ಇನ್ನಾದರೂ ನ್ಯಾಯ ದೇವತೆಯು ಕಣ್ತೆರೆಯಲಿ.

2 Comments

 • Feb 05,2018
  santhosh kumar

  ನಮ್ಮದೇ ಜನರ ಮೇಲೆ ನಮ್ಮದೇ ಪೊಲೀಸರ ಕ್ರೌರ್ಯ ನೋಡಿದಾಗ ಬ್ರಿಟಿಷರ ಆಳ್ವಿಕೆಯಲ್ಲಿ ದೌರ್ಜನ್ಯಕ್ಕೊ ಈಗಲೂ ವ್ಯತ್ಯಾಸವಿಲ್ಲ ಎನಿಸುತ್ತದೆ. ಇಂಥ ಭಯಾನಕ ಕ್ರೌರ್ಯ ತೋರುವ ಪೊಲೀಸರನ್ನು ಮೊದಲು ಜೈಲಿಗೆ ಹಾಕಬೇಕು. ಕ್ರೌರ್ಯ ಮೆರೆಯುತ್ತಿರುವಾಗ ಹಿರಿಯ ಪೊಲೀಸ ಅಧಿಕಾರಿಗಳು ಯಾಕೆ ಸುಮ್ಮನೆ ಕೂರುತ್ತಾರೆ? ಇವರನ್ನು ಮನುಷ್ಯರು ಎನ್ನಲು ಸಾಧ್ಯವಿಲ್ಲ. ಇಂಥ ದುಷ್ಟ ಹಾಗೂ ನೀಚ ಪೊಲೀಸರಿಗೆ ಧಿಕ್ಕಾರ.

  Reply Reply
  • Feb 05,2018
   santhosh kumar

   ನಮ್ಮದೇ ಜನರ ಮೇಲೆ ನಮ್ಮದೇ ಪೊಲೀಸರ ಕ್ರೌರ್ಯ ನೋಡಿದಾಗ ಬ್ರಿಟಿಷರ ಆಳ್ವಿಕೆಯಲ್ಲಿ ದೌರ್ಜನ್ಯಕ್ಕೊ ಈಗಲೂ ವ್ಯತ್ಯಾಸವಿಲ್ಲ ಎನಿಸುತ್ತದೆ. ಇಂಥ ಭಯಾನಕ ಕ್ರೌರ್ಯ ತೋರುವ ಪೊಲೀಸರನ್ನು ಮೊದಲು ಜೈಲಿಗೆ ಹಾಕಬೇಕು. ಕ್ರೌರ್ಯ ಮೆರೆಯುತ್ತಿರುವಾಗ ಹಿರಿಯ ಪೊಲೀಸ ಅಧಿಕಾರಿಗಳು ಯಾಕೆ ಸುಮ್ಮನೆ ಕೂರುತ್ತಾರೆ? ಇವರನ್ನು ಮನುಷ್ಯರು ಎನ್ನಲು ಸಾಧ್ಯವಿಲ್ಲ. ಇಂಥ ದುಷ್ಟ ಹಾಗೂ ನೀಚ ಪೊಲೀಸರಿಗೆ ಧಿಕ್ಕಾರ.

   Reply Reply

Leave a comment

Top