An unconventional News Portal.

ಗುಜರಾತ್ ದಲಿತರ ಮೇಲಿನ ಹಲ್ಲೆ ಪ್ರಕರಣ: ಟೀಕೆಗೆ ಒಳಗಾದ ಪ್ರಧಾನಿ ‘ಮೋದಿ ಮೌನ’!

ಗುಜರಾತ್ ದಲಿತರ ಮೇಲಿನ ಹಲ್ಲೆ ಪ್ರಕರಣ: ಟೀಕೆಗೆ ಒಳಗಾದ ಪ್ರಧಾನಿ ‘ಮೋದಿ ಮೌನ’!

ಗುಜಾರಾತಿನಲ್ಲಿ ದಲಿತರ ಮೇಲೆ ಗೋ ರಕ್ಷಕರು ನಡೆಸಿದ ಹಲ್ಲೆ ರಾಜ್ಯದಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ. ದೇಶಾದ್ಯಂತ ವ್ಯಾಪಕ ಖಂಡಿನೆಗೆ ಒಳಗಾಗಿದೆ. ಹೀಗಿದ್ದೂ ಪ್ರಧಾನಿ ಮೋದಿ ಕಳೆದ 10 ದಿನಗಳಿಂದ ನಡೆಯುತ್ತಿರುವ ಈ ವಿದ್ಯಮಾನಕ್ಕೆ ಈವರೆಗೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಗುಜರಾತಿನ ಉನಾದಲ್ಲಿ ನಾಲ್ವರು ದಲಿತ ಯುವಕರ ಮೇಲೆ ಹಲ್ಲೆ ನಡೆದು ಎರಡು ವಾರವಾಗುತ್ತಾ ಬಂದಿದೆ. ಒಂದು ಕಾಲಕ್ಕೆ ಗುಜರಾತ್ ರಾಜ್ಯವನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಇಡೀ ದೇಶಕ್ಕೆ ‘ಮಾದರಿ ರಾಜ್ಯ’ ಎಂದು ಬಿಂಬಿಸಿದವರು. ಹೆಚ್ಚಾಗಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿ, ನಂತರ ಬಿಜೆಪಿಯಲ್ಲಿ ನಾನಾ ಹೊಣೆಗಾರಿಕೆ ವಹಿಸಿಕೊಂಡು, ಮುಖ್ಯಮಂತ್ರಿಯಾದ ತವರು ರಾಜ್ಯವದು. ಅಲ್ಲೀಗ ಆಡಳಿತದಲ್ಲಿರುವುದು ಆನಂದಿ ಬೆನ್ ಪಟೇಲ್ ನೇತೃತ್ವದ ಬಿಜೆಪಿ ಸರಕಾರ. ಆನಂದಿ ಬೆನ್ ಪಟೇಲ್ ಮೋದಿ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ‘ಕೈಗೊಂಬೆ’ ಎಂಬ ಮಾತುಗಳಿವೆ. ಹೀಗಿರುವಾಗ, ತಮ್ಮದೇ ತವರು ರಾಜ್ಯದಲ್ಲಿ ದಲಿತ ಮೇಲಿನ ಹಲ್ಲೆ ಮತ್ತು ಅದನ್ನು ಪ್ರತಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಈವರೆಗೂ ಒಂದು ಟ್ವೀಟ್ ಅಥವಾ ಅಧಿಕೃತ ಪ್ರಕಟಣೆಗಳು ಪ್ರಧಾನಿ ಮೋದಿ ಅವರ ಕಾರ್ಯಾಲಯದಿಂದ ಹೊರಬೀಳದಿರುವುದು ಸಹಜ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಟ್ವೀಟ್ ಕತೆ:

ಪ್ರಧಾನಿ ಮೋದಿ ಇತ್ತೀಚಿನ ಟ್ವೀಟ್ಸ್.

ಪ್ರಧಾನಿ ಮೋದಿ ಇತ್ತೀಚಿನ ಟ್ವೀಟ್ಸ್.

ದಿನಕ್ಕೆ ಹತ್ತಾರು ಟ್ವೀಟ್ ಮಾಡುವ ಪ್ರಧಾನಿ ಮೋದಿ ಟ್ವಿಟ್ಟರ್ ಈ ವಿಚಾರದಲ್ಲಿ ಮಾತ್ರ ಮಾತಾಡುತ್ತಿಲ್ಲ. ದಲಿತರ ಮೇಲಿನ ಹಲ್ಲೆ ಘಟನೆ ಸಂಬಂಧ ಜುಲೈ 20ರಂದು ಲೋಕಸಭೆಯಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, “ಉನಾದಲ್ಲಿ ನಡೆದ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ದಲಿತರ ಮೇಲಿನ ಅಸಮಾನತೆ ಸಮಾಜಿಕ ಕಳಂಕ, ಇದನ್ನು ತೊಡೆದು ಹಾಕಲು ಎಲ್ಲಾ ಪಕ್ಷಗಳು ಒಂದಾಗಬೇಕು” ಎಂದಿದ್ದರು.

ಈ ಸಂದರ್ಭ ಅವರು “ನರೇಂದ್ರ ಮೋದಿ ಉನಾ ಘಟನೆಯ ಬಗ್ಗೆ ತೀವ್ರ ಅಸಮಧಾನಗೊಂಡಿದ್ದಾರೆ. ಘಟನೆಯ ಮಾಹಿತಿಗಳನ್ನು ಅವರು ಪಡೆದುಕೊಂಡಿದ್ದಾರೆ,” ಎಂದು ತಿಳಿಸಿದ್ದರು. ಸರಕಾರದ ಪರವಾಗಿ ರಾಜನಾಥ್ ಸಿಂಗ್ ಮಾತನಾಡಿದ್ದು ಬಿಟ್ಟರೆ ಪ್ರಧಾನಿ ಒಮ್ಮೆಯೂ ಬಾಯಿ ಬಿಟ್ಟಿಲ್ಲ. ಇದಾಗಿ ಒಂದು ವಾರ ಕಳೆದ ನಂತರ ನಡೆದ ಮ್ಯೂನಿಚ್ ದಾಳಿಯ ಬಗ್ಗೆ ಟ್ವಿಟ್ ಮಾಡಿರುವ ಮೋದಿ, ನಮ್ಮದೇ ದೇಶದಲ್ಲಿ ನಡೆಯುತ್ತಿರುವ, ಅದೂ ಅವರ ತವರು ರಾಜ್ಯದಲ್ಲಿ ನಡೆಯುತ್ತಿರಯವ ಘಟನೆ ಕುರಿತು ಮೌನಕ್ಕೆ ಶರಣಾಗಿದ್ದೇಕೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಇಲ್ಲೂ ರಾಜಕೀಯ:

ಉನಾ ಘಟನೆ ಬೆನ್ನಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿದ್ದಾರೆ. ಇದಲ್ಲದೇ ಶುಕ್ರವಾರ ಎಎಪಿ ನಾಯಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಜರಾತಿಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದ್ದಾರೆ. ಗಲಭೆಯಲ್ಲಿ ಪೊಲೀಸ್ ಸಾವಿಗೆ ಕಾರಣನಾಗಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿರುವ ಆರೋಪಿಯ ಮನೆಗೂ ಬೇಟಿ ನೀಡಿ ಬಂದಿದ್ದಾರೆ. ಆದರೆ ಬಿಪಿಯ ಸರಕಾರದ ಆಡಳಿತವಿರುವ, ಪ್ರಧಾನಿಯ ತವರು ರಾಜ್ಯದತ್ತ ಯಾವ ಕೇಂದ್ರ ನಾಯಕರೂ ಮುಖ ಮಾಡಿಲ್ಲ. ಪ್ರಧಾನಿಯೂ ಈ ಬಗ್ಗೆ ಚಕಾರವನ್ನೂ ಎತ್ತಿಲ್ಲ.

ಹಿಂದೆ ಪ್ರಧಾನಿಯಾಗಿದ್ದಾಗ ‘ಮೌನ’ದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದವರು ಮನಮೋಹನ್ ಸಿಂಗ್. ಅವರೂ ಕೂಡ ಪ್ರತಿಕ್ರಿಯಿಸಿದ್ದು, “ಪ್ರಧಾನಿ ಮೋದಿ ಮೌನ ಮುರಿಯಲಿ,” ಎಂದು ಆಗ್ರಹಿಸಿದ್ದಾರೆ.

ಮುಂದುವರಿದ ಪ್ರತಿಭಟನೆ:

Gujarat dalit protest

ಗುಜರಾತಿನಲ್ಲಿ ದಲಿತರ ಪ್ರತಿಭಟನೆಗಳು ಮುಂದುವರಿದಿವೆ. ದಲಿತ ಸಂಘಟನೆಗಳ ಆಕ್ರೋಶದ ಕಾವು ಎರಡು ವಾರಗಳಾದರೂ ಇಳಿಯುತ್ತಿಲ್ಲ. ಇಲ್ಲಿವರೆಗೆ 30 ಕ್ಕೂ ಹೆಚ್ಚು ಜನ ಆತ್ಮಹತ್ಯೆ ಪ್ರಯತ್ನ ನಡೆಸಿದ್ದಾರೆ. ಶುಕ್ರವಾರ ಇಬ್ಬರು ದಲಿತ ಮಹಿಳೆಯರು ಸೇರಿ 7 ಜನ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೋರಾಟ ಬೆಂಬಲಿಸಿ ಮತ್ತು ತ್ವರಿತ ನ್ಯಾಯಕ್ಕಾಗಿ ಒತ್ತಾಯಿಸಿ ಪೋರ್ ಬಂದರ್, ಜಾಮ್ನಗರ್ ಮತ್ತು ಬೊಟಾಡ್ನದ ರಾನ್ಪುರದಲ್ಲಿ ತಲಾ ಒಬ್ಬರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಾರೆ.

ಇನ್ನು ಸುರೇಂದ್ರನಗರದ ಥಾಣ್ ನಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಯತ್ನ ನಡೆಸಿದ್ದು ವರದಿಯಾಗಿದೆ. ಇಲ್ಲಿ ಪ್ರತಿಭಟನಾಕಾರರ ಮೇಲೆ ದಾಖಲಾಗಿದ್ದ ಕೇಸುಗಳನ್ನು ಹಿಂದೆಗೆದುಕೊಳ್ಳುವಂತೆ ಒತ್ತಾಯಸಿ 150 ಕ್ಕೂ ಹೆಚ್ಚು ಜನ ಪೊಲೀಸ್ ಠಾಣೆಗೆ ಘೇರಾವ್ ಶುಕ್ರವಾರ ಘೇರಾವ್ ಹಾಕಿದ್ದಾರೆ. ಕಚ್ಛ್ ನ ಭಾವು ನಗರ, ಪಟಾಣ್, ಆನಂದ್, ಮಾನ್ಸಾ, ವಿರಂಮ್ಗಂ ಮತ್ತು ವಡೋದರ ಸೇರಿದಂತೆ ಕೇಂದ್ರ ಮತ್ತು ಉತ್ತರ ಗುಜರಾತಿನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಇದಲ್ಲದೇ ಶುಕ್ರವಾರ ನರೇಂದ್ರ ಮೋದಿ ತವರು ವಡೋದರದಲ್ಲಿ 6 ಸಾವಿರ ದಲಿತರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಹೆಚ್ಚಿನ ಎಲ್ಲಾ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದವು. ಕೆಲವು ಕಡೆಗಳಲ್ಲಿ ಮಾತ್ರ ಪೊಲೀಸರು, ಸರಕಾರಿ ಬಸ್ಸು ಮತ್ತು ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ ಘಟನೆಗಳು ನಡೆದವು.

ಇದೀಗ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಉನಾ ಘಟನೆಗೆ ಸಂಬಂಧಿಸಿದಂತೆ ಹಾಗೂ ಈ ಬಗ್ಗೆ ತೆಗೆದುಕೊಂಡಿರುವ ಕ್ರಮಗಳನ್ನು ಮಾಹಿತಿ ಕೋರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ.

ಉನಾ ಘಟನೆ ಮತ್ತು ದಲಿತರ ಮೇಲಿನ ಹಲ್ಲೆ ಖಂಡಿಸಿ ದೇಶಾದಾದ್ಯಂತ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಬೆಂಗಳೂರಿನ ಟೌನ್ ಹಾಲ್ ಮುಂದುಗಡೆ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಭಟನೆಕಾರರಿಂದ ಚಪ್ಪಲಿ ಸೇವೆಯೂ ನಡೆದಿದೆ.

ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವ ವೇಳೆಯಲ್ಲಿ ಪ್ರಧಾನಿ ಸ್ಥಾನದಲ್ಲಿ ಇರುವವರು ಯಾರೇ ಆಗಿದ್ದರೂ, ಮೌನವಾಗಿರುವುದನ್ನು ಈ ದೇಶದ ಜನ ಒಪ್ಪುವುದಿಲ್ಲ. ಹಾಗಂತ ಕೆಲವೇ ವರ್ಷಗಳ ಹಿಂದೆ ನರೇಂದ್ರ ಮೋದಿ ಟೀಕಿಸಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಬೇಕಿದೆ.

Top