An unconventional News Portal.

‘ನರೇಂದ್ರಭಾಯಿ ಎಂಎ’: ಎಎಪಿ ನಿರ್ದೇಶನದ ಸಿನೆಮಾ ಹಿಟ್ ಆಗೋಕೆ ಅಮಿತ್ ಶಾ ಒಬ್ಬರು ಬೇಕಿತ್ತು!

‘ನರೇಂದ್ರಭಾಯಿ ಎಂಎ’: ಎಎಪಿ ನಿರ್ದೇಶನದ ಸಿನೆಮಾ ಹಿಟ್ ಆಗೋಕೆ ಅಮಿತ್ ಶಾ ಒಬ್ಬರು ಬೇಕಿತ್ತು!

ಕಳೆದ ಕೆಲವು ದಿನಗಳಿಂದ ದೇಶದ ಪ್ರಧಾನಿ ನರೇಂದ್ರ ದಾಮೋದರ್ ಮೋದಿ ವಿದ್ಯಾರ್ಹತೆ ಸುತ್ತ ಎದ್ದಿದ್ದ ಕಿಚ್ಚಿಗೆ ಸ್ವತಃ ಭಾರತೀಯ ಜನತಾ ಪಕ್ಷ ತುಪ್ಪ ಸುರಿದಿದೆ.

ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವ ಅರುಣ್ ಜೇಟ್ಲಿ ಜಂಟಿಯಾಗಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಮೋದಿ ಶಿಕ್ಷಣ ಪ್ರಮಾಣ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದನ್ನೇ ಕಾಯುತ್ತಿದ್ದ ಆಮ್ ಆದ್ಮಿ ಪಕ್ಷ, ತನ್ನ ಬತ್ತಳಿಕೆಯಲ್ಲಿ ಇಟ್ಟುಕೊಂಡಿದ್ದ ಅಸ್ತ್ರಗಳನ್ನು ಪಕ್ಷದ ವಕ್ತಾರ ಅಶುತೋಶ್ ಮೂಲಕ ಪ್ರಯೋಗಿಸಿದೆ. ಒಟ್ಟಾರೆ, ದೇಶದ ಆಡಳಿತದ ಪ್ರಮುಖ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರ ಶಿಕ್ಷಣ ಅರ್ಹತೆಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿವೆ. ಬಿಜೆಪಿಯ ಈ ನಡೆಯ ಮೂಲಕ ಚರ್ಚೆಗೆ ಗಂಭೀರ ಆಯಾಮವೊಂದು ದೊರಕಿದಂತಾಗಿದೆ.

ಇದು ಎಎಪಿ ಸಿನೆಮಾ:

ಪ್ರಧಾನಿ ಮೋದಿ ಶಿಕ್ಷಣದ ಹಿನ್ನೆಲೆಯನ್ನು ಮೊದಲು ಚರ್ಚೆಗೆ ಎಳೆದು ತಂದಿದ್ದು ಆಮ್ ಆದ್ಮಿ ಪಕ್ಷ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾಮಾಜಿಕ ಜಾಲತಾಣಗಳಲ್ಲಿ ಮೊದಲಿನಿಂದಲೂ ಹರಿದಾಡುತ್ತಿದ್ದ ಈ ವಿಚಾರವನ್ನು ಮುನ್ನಲೆಗೆ ತಂದರು. ನಂತರ ಎಎಪಿಯ ಉಳಿದ ನಾಯಕರು ಬಿಜೆಪಿಗೆ ಸವಾಲೆಸೆಯುವ ಮೂಲಕ ಮೋದಿ ವಿದ್ಯಾರ್ಹತೆಯನ್ನು ಸಾಬೀತುಪಡಿಸಿ ಎಂದು ಒತ್ತಾಯಿಸಿದರು.

kejriwal-tweet-modi-degree-1

ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್ ಟ್ವೀಟ್ಸ್…

ಇದಕ್ಕೂ ಮೊದಲು ಹೀಗೊಂದು ಶಿಕ್ಷಣ ಅರ್ಹತೆಯ ಪರೀಕ್ಷೆಯನ್ನು ಎದುರಿಸಿದವರು ಕೇಂದ್ರ ಸಚಿವೆ ಸ್ಮೃತಿ ಇರಾನಿ. ಇದು ತಣ್ಣಗಾಗುತ್ತಿದ್ದಂತೆ, ಮೋದಿ ಸುತ್ತ ವಿವಾದ ಸುತ್ತಿಕೊಂಡಿತು. ಹಾದಿ ಬೀದಿಯಲ್ಲಿ ಶಿಕ್ಷಣದ ಪ್ರಮಾಣ ಪತ್ರಗಳು ಸಿಗುವ ಈ ದೇಶದಲ್ಲಿ ಇದೊಂದು ಗಂಭೀರ ವಿಚಾರವಾಗಬಹುದು ಎಂದು ಯಾರೂ ಕೂಡ ಯೋಚಿಸಿರಲೇ ಇಲ್ಲ.

ಆದರೆ, ಪದೇ ಪದೇ ಇದೇ ವಿಚಾರವನ್ನು ಇಟ್ಟುಕೊಂಡು ಬಿಜೆಪಿಯನ್ನು ತಿವಿಯುವ ಮೂಲಕ ಎಎಪಿ ಮೊದಲ ಸುತ್ತಿನ ಮಾಹಿತಿ ಯುದ್ಧದಲ್ಲಿ ಬಿಜೆಪಿಯನ್ನು ಸೋಲಿಸಿದೆ. ಅನಿವಾರ್ಯವಾಗಿ ಬಿಜೆಪಿಯ ಇಬ್ಬರು ಹಿರಿಯ ನಾಯಕರು ಮೋದಿ ಪ್ರಮಾಣ ಪತ್ರಗಳನ್ನು ಇಟ್ಟುಕೊಂಡು ಅಖಾಡಕ್ಕೆ ಇಳಿದು ಬಿಟ್ಟಿದ್ದಾರೆ.

ಸತ್ಯಾಸತ್ಯತೆ ಎಷ್ಟಿದೆ?:

ದಿಲ್ಲಿಯಲ್ಲಿ ಬಿಜೆಪಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿ.

ದಿಲ್ಲಿಯಲ್ಲಿ ಬಿಜೆಪಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿ.

ಅಮಿತ್ ಶಾ ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಎಎಪಿ ಮರೆಯಲ್ಲಿಯೇ ನಕ್ಕಿರುವ ಸಾಧ್ಯತೆ ಇದೆ. ಮೊದಲೇ ತಯಾರಿಸಿಕೊಂಡಿದ್ದ ಅಸ್ತ್ರವನ್ನು ಅದು ಪ್ರಯೋಗಿಸಿದೆ. ಬಿಜೆಪಿ ಬಿಡುಗಡೆ ಮಾಡಿರುವ ಡಿಗ್ರಿ ಪ್ರಮಾಣ ಪತ್ರ 1978ರಲ್ಲಿ ನೀಡಲಾಗಿದೆ ಎಂದು ನಮೋದಿಸಲಾಗಿದೆ. ಆದರೆ, ಮೋದಿ ಪದವಿ ಮುಗಿಸಿರುವುದು 1977ರಲ್ಲಿ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಹೇಳುತ್ತದೆ. ಹೀಗಿರುವಾಗ, ಪದವಿ ಮುಗಿದ ಮರು ವರ್ಷ ಪ್ರಮಾಣ ಪತ್ರವನ್ನು ನೀಡಲು ಹೇಗೆ ಸಾಧ್ಯ ಎಂದು ಎಎಪಿ ಪ್ರಶ್ನಿಸಿದೆ.

ಜತೆಗೆ, ಮೋದಿ ದಿಲ್ಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಸದರಿ ವರ್ಷದಲ್ಲಿ ಅದೇ ವಿಶ್ವವಿದ್ಯಾನಿಲಯದಿಂದ ಪದವಿ ಮುಗಿಸಿದ ವಿದ್ಯಾರ್ಥಿಯ ಹೆಸರು ನರೇಂದ್ರ ಮಹವೀರ್ ಮೋದಿ, ರಾಜಸ್ತಾನ ಮೂಲದವರು ಎಂದು ಎಎಪಿ ಆರೋಪಿಸಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊರಗೆ ಬಿಟ್ಟಿದೆ. ಇದಕ್ಕಿನ್ನೂ ಬಿಜೆಪಿಯ ಪ್ರತಿಕ್ರಿಯೆ ನೀಡುವುದನ್ನು ಎದುರು ನೋಡಲಾಗುತ್ತಿದೆ.

ಕಾಂಗ್ರೆಸ್ ಆದ ಬಿಜೆಪಿ:

ಈ ವಿಚಾರದ ಕುರಿತು ಫಸ್ಟ್ ಪೋಸ್ಟ್ ವೆಬ್ ಜಾಣದಲ್ಲಿ ವಿಶ್ಲೇಷಣೆಯೊಂದನ್ನು ಬರೆದ ಅಕ್ಷಯ್ ಮಿಶ್ರಾ, “ಒಂದು ಕಾಲದಲ್ಲಿ ಬಿಜೆಪಿ ಇದೇ ಮಾದರಿಯ ವಿಚಾರಗಳನ್ನು ಇಟ್ಟುಕೊಂಡು ಪ್ರಚಾರ ತಂತ್ರವನ್ನು ಹೆಣೆಯುತ್ತಿತ್ತು. ಈ ಬೆಳವಣಿಗೆಯನ್ನು ಗಮನಿಸಿದರೆ, ಎಎಪಿ ಬಿಜೆಪಿಯಾಗಿದೆ. ಬಿಜೆಪಿ ಕಾಂಗ್ರೆಸ್ ತರಹ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಹೆಣಗುತ್ತಿದೆ,” ಎಂದು ಅಭಿಪ್ರಾಯಿಸುತ್ತಾರೆ.

ಕಳೆದ ಕೆಲವು ವರ್ಷಗಳ ಕಾಲ ಎಎಪಿ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತ ಬಂದವರಿಗೆ, ಇಂತಹ ವಿಚಾರಗಳಲ್ಲಿ ಎಎಪಿಯ ತಂತ್ರಗಾರಿಕೆ ಏನಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ. ಜನಸಾಮಾನ್ಯರಿಗೆ ಬೇಗ ಅರ್ಥವಾಗುವ ವಿಚಾರವನ್ನು, ಅದರ ಗಂಭೀರತೆ ಹಾಗೂ ಪ್ರಸ್ತುತತೆ ಆಚೆಗೆ ಚರ್ಚೆಗೆ ತರುವಲ್ಲಿ ಎಎಪಿ ತನ್ನದೇ ನಡೆಗಳನ್ನು ಇಟ್ಟುಕೊಂಡು ಬಂದಿದೆ. ಇದೀಗ ಮೋದಿ ಶಿಕ್ಷಣ ಪ್ರಮಾಣ ಪತ್ರಗಳು. ಎಎಪಿ ತೋಡಿದ ಖೆಡ್ಡಾಕ್ಕೆ ಬಿಜೆಪಿ ಅನಾಯಾಸವಾಗಿ ಬಂದು ಬಿದ್ದಿದೆ. ಇನ್ನೇನಿದ್ದರೂ, ಮೋದಿ ವಿದ್ಯಾರ್ಹತೆಯನ್ನು ಸಮರ್ಥಿಸಿಕೊಳ್ಳುವ ಕಡೆಗಷ್ಟೆ ಯೋಚಿಸುವ ಅಗತ್ಯ ರಾಷ್ಟ್ರೀಯ ಪಕ್ಷಕ್ಕೆ ಎದುರಾಗಿದೆ.

Leave a comment

Top