An unconventional News Portal.

ಸಮಯ ಪ್ರಜ್ಞೆ ಮೆರೆದ ಮಹಿಳಾ ಪೈಲಟ್‌; ಸಾವಿನ ದವಡೆಯಿಂದ ಪಾರಾದ 261 ಮಂದಿ

ಸಮಯ ಪ್ರಜ್ಞೆ ಮೆರೆದ ಮಹಿಳಾ ಪೈಲಟ್‌; ಸಾವಿನ ದವಡೆಯಿಂದ ಪಾರಾದ 261 ಮಂದಿ

ಅದು ಫೆ. 7ನೇ ತಾರೀಖು ಬೆಳಗ್ಗೆ 8ರ ಸಮಯ. ಆಕಾಶದ ಅಂಗಳದಲ್ಲಿ ಏಕಾಏಕಿ ಮುಖಾಮುಖಿಗೊಂಡ ಎರಡು ವಿಮಾನಗಳ ಮಧ್ಯೆ ಘಟಿಸಬಹುದಾಗಿದ್ದ ಅಫಘಾತ ಕೆಲವೇ ಕ್ಷಣಗಳ ಅಂತರದಲ್ಲಿ ಪವಾಡವೆಂಬಂತೆ ದೂರವಾಯಿತು. ವಿಮಾನದಲ್ಲಿದ್ದ ಮಹಿಳಾ ಪೈಲಟ್‌ ಓರ್ವಳ ಅನುಭವ ಮತ್ತು ಚಾಕಚಕ್ಯತೆ ಸುಮಾರು 261 ಪ್ರಯಾಣಿಕ ಜೀವ ಉಳಿಸಿತು.

‘ವಿಸ್ತಾರ’ ಎಂಬ ವಾಯುಯಾನ ಸಂಸ್ಥೆಯ ‘ಏ-320 ನಿಯೋ’ ವಿಮಾನವು ‘ಯುಕೆ 997’ ಹೆಸರಿನಲ್ಲಿ ದೆಹಲಿಯಿಂದ ಪುಣೆಗೆ ಮುಂಬೈ ಚಲಿಸುತ್ತಿತ್ತು. ಸುಮಾರು 152 ಜನ ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನಕ್ಕೆ 29,000 ಅಡಿ ಎತ್ತರದಲ್ಲಿ ಹಾರಬೇಕೆಂಬ ಸೂಚನೆ ನೀಡಲಾಗಿತ್ತು. ಪ್ರಮಾದವಶಾತ್ 29000 ಅಡಿ ಎತ್ತರದ ಬದಲಾಗಿ ವಿಮಾನವು ಸುಮಾರು 27,100 ಅಡಿ ಎತ್ತರಕ್ಕಿಳಿದಿತ್ತು.

ಇದೇ ಸಮಯಕ್ಕೆ ಏರ್ ಇಂಡಿಯಾ ಕಂಪನಿಯ ‘ಏರ್‌ಬಸ್ ಏ-319’ ಅದೇ ತಾನೇ ಮುಂಬೈನಿಂದ ಭೂಪಾಲ್‌ನ ದಾರಿಯಲ್ಲಿ ಭೂಮಿಯಿಂದ ಸುಮಾರು 27,000 ಅಡಿ ಅಂತರದಲ್ಲಿ ಹಾರುತ್ತಿತ್ತು. ಒಂದೇ ಸಮಯಕ್ಕೆ ಮುಂಬೈ ವಾಯು ಪ್ರದೇಶದಲ್ಲಿ 27,000 ಅಡಿಗಳ ಅಂತರದಲ್ಲಿ ಹಾರುತ್ತಿದ್ದ ಎರಡು ವಿಮಾನಗಳ ನಡುವಿದ್ದ ಅಂತರ ಕೇವಲ ನೂರು ಅಡಿಗಳು. ಎರಡೂ ವಿಮಾನಗಳ ನಡುವಿದ್ದ ದೂರ ಬರೀ 2.8 ಕಿಮೀ.

ವಿರುದ್ಧ ದಿಕ್ಕಿನಲ್ಲಿ ಚಲಿಸಿ ಬರುತ್ತಿದ್ದ ವಿಮಾನಗಳು ಒಂದಕ್ಕೊಂದು ಹತ್ತಿರ ಇರುವಾಗಲೇ ಎರಡೂ ವಿಮಾನಗಳಲ್ಲಿದ್ದ ಸಂಚಾರ ಘರ್ಷಣೆ ನಿವಾರಣಾ ವ್ಯವಸ್ಥೆಗಳು(ಟಿಸಿಎಎಸ್) ಪೈಲಟ್‌ಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡತೊಡಗಿದವು. ಎಚ್ಚರಿಕೆಯ ಸಂದೇಶ ದೊರೆಯುತ್ತಿದ್ದಂತೆ ವಿಮಾನಗಳಲ್ಲಿದ ಪೈಲೆಟ್‌ಗಳು ಕಾರ್ಯಗತರಾದರು.

ಇನ್ನೇನು ಎರಡು ವಿಮಾನಗಳು ಒಂದಕ್ಕೊಂದು ಅಪ್ಪಳಿಸಿದವು ಎನ್ನುವಷ್ಟರಲ್ಲೇ ಏರ್‌ ಇಂಡಿಯಾ ವಿಮಾನದ ಕ್ಯಾಪ್ಟನ್ ಅನುಪಮಾ ಕೋಹ್ಲಿ ತೋರಿಸಿದ ಚಾಣಾಕ್ಷತನ ಪ್ರಯಾಣಿಕರ ಜೀವವನ್ನು ಉಳಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಕೆಲವೇ ಕೆಲವು ಅಡಿಗಳಷ್ಟು ಅಂತರದಲ್ಲಿ ತಪ್ಪಿದ ವಿಮಾನ ಅವಘಡಗಳಲ್ಲಿ ಈ ಘಟನೆಯು ಅತೀ ಗಂಭೀರವಾದದ್ದು ಎನಿಸಿದೆ. ಸಂಭವಿಸಬಹುದಾಗಿದ್ದ ಸಾವು ನೋವುಗಳನ್ನು ತಪ್ಪಿಸಿದ ಕೀರ್ತಿ ಅನುಪಮಾ ಕೋಹ್ಲಿಗೆ ಸಲ್ಲುತ್ತದೆ.

ಅಧುನಿಕ ವಿಮಾನಗಳಲ್ಲಿ ಟಿಸಿಎಎಸ್‌(Traffic Collision Avoidance System) ಎಂಬ ಉಪಕರಣವನ್ನು ಅಳವಡಿಸಲಾಗಿರುತ್ತದೆ. ಈ ಉಪಕರಣ ಎರಡು ಹಂತಗಳಲ್ಲಿ ಕೆಲಸ ನಿರ್ವಹಿಸುತ್ತದೆ. ಸಂಚಾರದ ಕುರಿತಾದ ಸಲಹೆಗಳನ್ನು ನೀಡುವುದು ಮೊದಲನೆ ಹಂತವಾದರೆ ರೆಸೊಲ್ಯೂಷನ್‌ ಕುರಿತಾದ ಸಲಹೆಗಳನ್ನು ನಿಡುವುದು ಎರಡನೆಯ ಹಂತ. ಮೊದಲ ಹಂತದಲ್ಲಿ ಎರಡು ವಿಮಾನಗಳು ಒಂದೇ ದಾರಿಯಲ್ಲಿವೆ ಎನಿಸಿದ ಕೂಡಲೇ ಈ ಉಪಕರಣ ಮೊದಲೇ ಎಚ್ಚರಿಕೆಯನ್ನು ಕೊಡಲಾರಂಭಿಸುತ್ತದೆ. ಎರಡನೇ ಹಂತದಲ್ಲಿ ವಾಯು ಅಫಘಾತದಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿಬ್ಬಂಧಿಗಳಿಗೆ ಸೂಚಿಸುತ್ತದೆ. ಈ ಉಪಕರಣ ನೀಡಿದ ಸೂಚನೆಯೇ ಅನುಪಮಾ ಕಾರ್ಯ ಪ್ರವೃತ್ತರಾಗಲು ದಾರಿಯನ್ನು ತೋರಿಸಿತು.

ವಿಸ್ತಾರಾದ ವಿಮಾನದಲ್ಲಿದ್ದ ಮಹಿಳಾ ಪೈಲೆಟ್‌ ಅದಾಗ ತಾನೇ ವಿರಾಮಕ್ಕೆಂದು ಬಿಡುವು ಪಡೆದುಕೊಂಡಿದ್ದಳು. ಇತ್ತ  ಸುದೀರ್ಘ 20 ವರ್ಷಗಳ ಅನುಭವ ಹೊಂದಿರುವ ಅನುಪಮಾ ಕೋಹ್ಲಿಯ ನಿರ್ವಹಣೆಯಲ್ಲಿದ ಏರ್ ಇಂಡಿಯಾ ವಿಮಾನವಿತ್ತು. ಎರಡೂ ವಿಮಾನಗಳು ಹತ್ತಿರವಾಗುತ್ತಿರುವ ಸನ್ನಿವೇಶ ಉಂಟಾದೊಡನೆಯೇ ವಿಮಾನದೊಳಗಿನ ಟಿಸಿಎಎಸ್‌ ಸೂಚನೆ ಕೊಡಲಾರಂಭಿಸಿತ್ತು. ಅನುಪಮಾ ಅದಾಗಲೇ ತಮ್ಮ ಪಕ್ಕದಲ್ಲಿದ್ದ ಕಿಟಕಿಯಿಂದ ಮುಂದೆ ಬರುತ್ತಿದ್ದ ವಿಮಾನವನ್ನು ಕಂಡಿದ್ದರು. ತತ್‌ಕ್ಷಣವೇ ಜಾಗರೂಕರಾದ ಅನುಪಮಾ ಕೋಹ್ಲಿ ಟಿಸಿಎಎಸ್‌ನ ಮತ್ತೊಂದು ಸೂಚನೆಗಾಗಿ ಮೈಯೆಲ್ಲಾ ಕಿವಿಯಾಗಿಸಿಕೊಂಡರು. ಎರಡೂ ವಿಮಾನಗಳು ಇನ್ನೂ ಹತ್ತಿರವಾಗುತ್ತಿದ್ದಂತೆ ಟಿಸಿಎಎಸ್‌ ‘Claimb’, ‘Claimb’, ‘Climb'(ಮೇಲಕ್ಕೇರು) ಎಂದು ಸೂಚಿಸತೊಡಗಿತು. ಅದರ ಹಣತಿಯಂತೆ ಕಾರ್ಯಪ್ರವೃತ್ತರಾದ ಕೋಹ್ಲಿ ಕ್ಷಣಾರ್ಧದಲ್ಲಿ ವಿಮಾನವನ್ನು ಸುಮಾರು 600 ಅಡಿಗಳಷ್ಟು ಎತ್ತರಕ್ಕೇರಿಸಿದರು. ಅವರ ಸಮಯ ಪ್ರಜ್ಞೆಯಿಂದಾಗಿ ವಾಯು ಘರ್ಷಣೆಯೊಂದು ತಪ್ಪಿ ಎರಡು ವಿಮಾನಗಳಲ್ಲಿದ್ದ 261 ಪ್ರಯಾಣಿಕರ ಜೀವ ಉಳಿಯಿತು.

ಮಹಾರಾಷ್ಟ್ರದ ವಾಯುಪ್ರದೇಶದಲ್ಲಿ ಇದೇ ವರ್ಷದ ಜನವರಿ 28ರಂದು ಇಂತಹದ್ದೇ ಸಂದರ್ಭವೊಂದು ಸೃಷ್ಟಿಯಾಗಿತ್ತು. ಇಂಡಿಗೋ ಮತ್ತು  ಎಮಿರೇಟ್ಸ್ ಕಂಪನಿಗಳ ವಿಮಾನಗಳು ಸ್ವಲ್ಪವೇ ಅಂತರದಲ್ಲಿ ಅಫಘಾತದಿಂದ ಪಾರಾಗಿದ್ದವು.

ಈ ಕುರಿತು ಸಂಬಂಧಿತ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದ್ದು, ನಮಗೆ 27,000 ಅಡಿಗಳ ಎತ್ತರದಲ್ಲೇ ಸಾಗಬೇಕು ಎಂದು ತಿಳಿಸಿಲಾಗಿತ್ತು ಎಂದು ವಿಸ್ತಾರಾದ ವಿಮಾನದೊಳಗಿದ್ದ ಸಿಬ್ಬಂಧಿಗಳು ತಿಳಿಸಿದ್ದಾರೆ. ಏನೇ ಆದರೂ ಅನುಪಮಾ ಕೋಹ್ಲಿ ತೋರಿಸಿದ ಸಮಯ ಪ್ರಜ್ಞೆ ಜನರ ಜೀವವುಳಿಸಿ, ನಡೆಯುತ್ತಿದ್ದ ದುರ್ಘಟನೆಯೊಂದನ್ನು ತಪ್ಪಿಸಿದೆ.

ಚಿತ್ರಕೃಪೆ : thehushpost.com

Leave a comment

Top