An unconventional News Portal.

ಪ್ರತಿಭಟನಾಕಾರರ ಮೇಲೆ ಹರಿದ ವ್ಯಾನ್: ತಲೆ ಕೆಟ್ಟ ಫಿಲಿಪ್ಪೀನ್ಸ್ ಪೊಲೀಸರ ಹಿನ್ನೆಲೆ ಏನು?

ಪ್ರತಿಭಟನಾಕಾರರ ಮೇಲೆ ಹರಿದ ವ್ಯಾನ್: ತಲೆ ಕೆಟ್ಟ ಫಿಲಿಪ್ಪೀನ್ಸ್ ಪೊಲೀಸರ ಹಿನ್ನೆಲೆ ಏನು?

ಫಿಲಿಪ್ಪೀನ್ಸ್ ‘ಮಾದಕ ಲೋಕದಲ್ಲಿ ಮರಣ ಮೃದಂಗ’ವನ್ನು ನುಡಿಸಿದ್ದ ಪೊಲೀಸರು, ಇದೀಗ ಪ್ರತಿಭಟನಾಕಾರರ ಮೇಲೆ ವ್ಯಾನ್ ಹರಿಸಿದ್ದು ಜಾಗತಿಕ ಸುದ್ದಿಗೆ ಗ್ರಾಸವಾಗಿದೆ. ಈ ಮೂಲಕ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆಯ ಪೊಲೀಸರ ನಿರ್ದಯತೆ ಹೇಗಿರುತ್ತದೆ ಎಂಬುದಕ್ಕೆ ಜಗತ್ತು ಮತ್ತೊಮ್ಮೆ ಸಾಕ್ಷಿಯಾಗಿದೆ.

ಹಿಂದೆ, ಸ್ಥಳೀಯ ಮಾದಕ ಲೋಕವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಲ್ಲಿನ ಪೊಲೀಸರು ಸಾಲು ಸಾಲು ಎನ್ ಕೌಂಟರ್ಗಳನ್ನು ನಡೆಸಿದ್ದರು. ಈ ಕುರಿತು ‘ಸಮಾಚಾರ’ ವಿಶೇಷ ವರದಿಯೊಂದನ್ನು ಪ್ರಕಟಿಸಿತ್ತು. ಬುಧವಾರ ದೇಶದ ರಾಜಧಾನಿ ಮನಿಲಾದಲ್ಲಿರುವ ಅಮೆರಿಕಾ ರಾಯಭಾರ ಕಚೇರಿ ಹೊರಗಡೆ ಜನರು ಪ್ರತಿಭಟನೆ ನಡೆಸುತ್ತಿದ್ದರು. “ಫಿಲಿಪ್ಪೀನ್ಸ್ ವಿಚಾರದಲ್ಲಿ ಅಮೆರಿಕ ಪದೇ ಪದೇ ಮೂಗು ತೂರಿಸುತ್ತಿದೆ. ಫಿಲಿಪ್ಪೀನ್ಸ್ ದೇಶದಲ್ಲಿ ಅಮೆರಿಕಾ ಸೇನೆಯ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳಬೇಕು,” ಎಂದು ಆಗ್ರಹಿಸಿ ಉಗ್ರ ಪ್ರತಿಭಟನೆ ನಡೆಯುತ್ತಿತ್ತು.

ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಅಶ್ರುವಾಯು ಪ್ರಯೋಗ, ಲಾಠಿ ಚಾರ್ಜ್, ಜಲ ಫಿರಂಗಿ ಬಳಸಿದರಾದರೂ ಹತೋಟಿಗೆ ಬಂದಿರಲಿಲ್ಲ. ಒಂದು ಹಂತದಲ್ಲಿ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಅವರದೇ ಲಾಠಿ ಕಿತ್ತುಕೊಂಡು ಹಲ್ಲೆ ಮಾಡಲು, ಕಲ್ಲು ತೂರಲು ಆರಂಭಿಸಿದ್ದರು. ಈ ಸಂದರ್ಭ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು, ಕ್ರೂರ ಅಮಾನವೀಯ ನಡೆ ತೆಗೆದುಕೊಂಡಿದ್ದಾರೆ.

ಲಾಠಿ ಹಿಡಿದು ವ್ಯಾನ್ ತಡೆಯಲು ಬಂದ ಪ್ರತಿಭಟನಾಕಾರರ ಮೇಲೆ ಮತ್ತೆ ಪೊಲೀಸರು ಕರುಣೆಯಿಲ್ಲದೆ ವ್ಯಾನ್ ಹರಿಸಿದ್ದು, ನಂತರ ಹಲವು ಬಾರಿ ಹಿಂದೆ ಮುಂದೆ ಹರಿಸಲಾಗಿದೆ.

ಹಿನ್ನಲೆ:

ಈ ಹಿಂದೆ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ದೇಶದಲ್ಲಿ ಹಬ್ಬಿಕೊಂಡಿದ್ದ ಮಾದಕ ದ್ರವ್ಯ ಜಾಲದ ವಿರುದ್ಧ ಯುದ್ಧ ಸಾರಿದ್ದರು. ಪೊಲೀಸರು ಸಾವಿರಾರು ಜನರನ್ನು ಬೀದಿ ಬೀದಿಗಳಲ್ಲಿ ಎನ್ಕೌಂಟರ್ ಮಾಡಿ ಮುಗಿಸಿದ್ದರು. ಇದನ್ನು ಅಮೆರಿಕಾ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಶ್ನಿಸಿತ್ತು.

ಹೀಗಾದಾಗ ಫಿಲಿಪ್ಪೀನ್ಸ್ ಜತೆಗೆ ಹಿಂದಿನಿಂದಲೂ ಸಂಬಂಧ ಹೊಂದಿದ್ದ ಅಮೆರಿಕಾ ಜತೆಗಿನ ನಂಟಿಗೆ ದುತಾರ್ತೆ ತಿಲಾಂಜಲಿ ನೀಡಿದ್ದರು. ಇಷ್ಟಾಗಿದ್ದರೆ ಏನೂ ಆಗುತ್ತಿರಲಿಲ್ಲವೇನೋ. ಆದರೆ ಇದಾಗಿ ಕೆಲವೇ ದಿನಗಳಲ್ಲಿ ದುತಾರ್ತೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಗೆ ಅಸಭ್ಯವಾಗಿ ಬೈದಿದ್ದಲ್ಲದೆ ಹೀನಾಯವಾಗಿ ನಿಂದಿಸಿದ್ದರು.

ಇದರಿಂದ ಕೆರಳಿದ ಅಮೆರಿಕಾ ಫಿಲಿಪ್ಪೀನ್ಸಿನಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಎಂದಿಗಿಂತ ಜೋರಾಗಿಯೇ ಧ್ವನಿ ಎತ್ತಲಾರಂಭಿಸಿತು. ಇದು ದೇಶದಲ್ಲಿ ಸಾವಿರಾರು ಕೊಲೆಗಳು ನಡೆದ ಮೇಲೆಯೂ ಅಧ್ಯಕ್ಷ ದುತಾರ್ತೆ ಬೆನ್ನಿಗೆ ನಿಂತಿದ್ದ ಅಲ್ಲಿನ ನಾಗರಿಕರನ್ನು ಕೆರಳಿಸಿತ್ತು. ಜನ ರಾಜಧಾನಿ ಮನೀಲಾದಲ್ಲಿರುವ ಅಮೆರಿಕಾದ ರಾಯಭಾರ ಕಚೇರಿ ಹೊರಗಡೆ ಉಗ್ರ ಪ್ರತಿಭಟನೆ ಆರಂಭಿಸಿದರು.

ಆದರೆ ದುರಾದೃಷ್ಟಾವಶಾತ್ ಇದೇ ಪ್ರತಿಭಟನೆಯ ಮೇಲೆ ದುತಾರ್ತೆಯ ಪೊಲೀಸರು ಮುಗಿಬಿದ್ದರು.

ಎಡಪಂಥೀಯ ಕಾರ್ಯಕರ್ತರ ಗುಂಪು ‘ಬಯಾನ್’ನ ನಾಯಕ ರೆನೆಟೋ ರೆಯೀಸ್ ಘಟನೆಯಲ್ಲಿ ಕನಿಷ್ಠ ಮೂರು ಜನರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

“ಅಧ್ಯಕ್ಷರು ಸ್ವತಂತ್ರ ವಿದೇಶಾಂಗ ನೀತಿಯನ್ನು ಘೋಷಿಸಿದ್ದರೂ, ಫಿಲಿಪ್ಪೀನ್ಸ್ ಪೊಲೀಸರು ಮಾತ್ರ ಅಮೆರಿಕಾದ ನಾಯಿಗಳಂತೆ ವರ್ತಿಸುತ್ತಿದ್ದಾರೆ,” ಎಂದು ಅವರು ದೂರಿದ್ದಾರೆ. ಆದರೆ ಪೊಲೀಸರ “ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ,” ಎಂದು ರೆಯೀಸ್ ಹೇಳಿದ್ದಾರೆ.

ಘಟನೆಯಲ್ಲಿ ಪೊಲೀಸರತ್ತ ಕೆಂಪು ಬಣ್ಣ ಎರಚಿದ 23 ಜನರನ್ನು ಬಂಧಿಸಲಾಗಿದೆ.

ವಿಕ್ಷಿಪ್ತ ಮನಸ್ಥಿತಿಯ ನಾಯಕನಂತೆ ಕಾಣುವ ದುತಾರ್ತೆ ಇದೀಗ ಬೀಜಿಂಗ್ ಪ್ರವಾಸದಲ್ಲಿದ್ದಾರೆ. ಅಮೆರಿಕಾದಿಂದ ದೂರ ಸರಿದು ಚೀನಾದೊಂದಿಗೆ ಹೊಸ ಒಪ್ಪಂದಗಳನ್ನು, ಆರ್ಥಿಕ ಸಂಬಂಧಗಳನ್ನು ಬೆಸೆಯುವ ಧಾವಂತದಲ್ಲಿದ್ದಾರೆ. ಮಾದಕ ಪದಾರ್ಥಗಳ ವಿರುದ್ಧದ ದುತಾರ್ತೆಯ ಯುದ್ಧ ಮತ್ತು ವಿವಾದಿತ ಹೇಳಿಕೆಗಳಿಂದಾಗಿ ‘ಅಮೆರಿಕಾ-ಫಿಲಿಪ್ಪೀನ್ಸ್’ ನಡುವಿನ ಸಂಬಂಧ ಹದಗೆಟ್ಟಿತ್ತು. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ರಷ್ಯಾದಿಂದ ಆಯುಧಗಳನ್ನು ಖರೀದಿಸುವುದಾಗಿ ಇತ್ತೀಚೆಗೆ ದುತಾರ್ತೆ ಘೋಷಿಸಿದ್ದರು. ಇದಲ್ಲದೇ ಅಮೆರಿಕಾಗೆ ಪೂರ್ಣ ಪ್ರಮಾಣದಲ್ಲಿ ಸಡ್ಡು ಹೊಡೆದಿರುವ ದುತಾರ್ತೆ ಚೀನಾ ನೇತೃತ್ವದಲ್ಲಿ ಪ್ರತ್ಯೇಕ ವಿಶ್ವಸಂಸ್ಥೆ ಕಟ್ಟುವುದಾಗಿಯೂ ಬೆದರಿಕೆ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.

Read More: ಫೀಲಿಪ್ಪೀನ್ ಮಾದಕ ಲೋಕದಲ್ಲಿ ಮರಣ ಮೃದಂಗ; ಅಧ್ಯಕ್ಷ ದುತಾರ್ತೆಯ ಒಂದು ಮುತ್ತಿನ ಸಂಗ!

Top