An unconventional News Portal.

‘ಬೆಂಕಿ ಬಿದ್ದ ಮನೆ’ಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟವರು!

‘ಬೆಂಕಿ ಬಿದ್ದ ಮನೆ’ಯಲ್ಲಿ ಚಳಿ ಕಾಯಿಸಿಕೊಳ್ಳಲು ಹೊರಟವರು!

ಇದು ‘ಬೆಂಕಿ ಬಿದ್ದ ಮನೆಯಲ್ಲಿ ಚಳಿ ಕಾಯಿಸಿಕೊಂಡರು’ ಎಂಬ ಗಾದೆಯನ್ನು ನೆನಪಿಸುವ ಪ್ರಸಂಗ.

ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಗಾರ್ಮೆಂಟ್ಸ್ ಮಹಿಳೆಯರ ಬೃಹತ್ ಪ್ರತಿಭಟನೆಯ ಲಾಭ ಪಡೆಯುವ ಕಸರತ್ತುಗಳು ಶುರುವಾಗಿವೆ. ಬೊಮ್ಮನಹಳ್ಳಿಯ ಮುಖ್ಯ ರಸ್ತೆ ಹಾಗೂ ಗಲ್ಲಿಗಳಲ್ಲಿ ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾರ್ಮಿಕ ಬಂಧುಗಳಿಗಾಗಿ ಹೊಸ ಪಿಎಫ್ ನೀತಿಯನ್ನು ರದ್ಧುಪಡಿಸಲು ಶ್ರಮಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರಿಗೆ ಧನ್ಯವಾದಗಳು’ ಎಂಬ ದೊಡ್ಡ ದೊಡ್ಡ ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ಕೆಳಗಡೆ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಂ. ಸತೀಶ್ ರೆಡ್ಡಿ ಹೆಸರು ಹಾಗೂ ಫೊಟೋ ಇದೆ.

ananth-1

ಈ ಕುರಿತು ‘ಸಮಾಚಾರ’ ಸತೀಶ್ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, “ನಾನು ಮತ್ತು ಸಂಸದ ಅನಂತ್ ಕುಮಾರ್ ಪಿಎಫ್ ಅಧಿಕಾರಿಗಳು ಜಾರಿಗೆ ತರಲು ಹೊರಟಿದ್ದ ಪಿಎಫ್ ನೀತಿಯನ್ನು ವಿರೋಧಿಸಿದೆವು. ಹೀಗಾಗಿ ಮಾರನೇ ದಿನವೇ ಕೇಂದ್ರ ಸರಕಾರ ಹೊಸ ಪಿಎಫ್ ನೀತಿಗಳನ್ನು ಹಿಂತೆಗೆದುಕೊಂಡಿತು,” ಎಂದು ತಿಳಿಸಿದರು.

ಕಾರ್ಮಿಕರು ಪ್ರತಿಭಟನೆ ನಡೆಸದೇ ಇದ್ದರೂ ಕೇಂದ್ರ ಸರಕಾರ ಪರಿಷ್ಕೃತ ತೀರ್ಮಾನವನ್ನು ಪ್ರಕಟಿಸುತ್ತಿತ್ತಾ? ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ, ಇದರಲ್ಲಿ ಅನುಮಾನವೇ ಬೇಡ,” ಎಂದರು.

ಸದ್ಯ ಗಾರ್ಮೆಂಟ್ಸ್ ನೌಕರರ ಮೇಲೆ ದಾಖಲಾಗುತ್ತಿರುವ ಕೇಸುಗಳ ಕುರಿತು ಗಮನ ಸೆಳೆದಾಗ, “ಎಲ್ಲಾ ಗಾರ್ಮೆಂಟ್ಸ್ ಬಂಧುಗಳನ್ನು ಕರೆದು ಸಭೆ ನಡೆಸಿದ್ದೇವೆ. ಡಿಸಿಪಿಗಳಿಗೂ ಹೇಳಿದ್ದೇವೆ. ಸುಮಾರು ಜನರನ್ನು ಬಂಧಿಸುವುದನ್ನು ತಪ್ಪಿಸಿದ್ದೇವೆ,” ಎಂದರು.

ಇನ್ನು ಕೆಲವೆಡೆ, ಇದೇ ವಿಷಯ ಹೋರ್ಡಿಂಗ್ ಬೊಮ್ಮನಹಳ್ಳಿಯ ಸಿಂಗಸಂದ್ರ ವಾರ್ಡ್ ತುಂಬ ಹಾಕಲಾಗಿದೆ. ಬಿಜೆಪಿ ಹಿರಿಯ ನಾಯಕರ ಫೊಟೋಗಳು ಇದರಲ್ಲಿವೆ.

ಕೆಳಗಡೆ ವಾರ್ಡ್ ಪಾಲಿಕೆ ಸದಸ್ಯೆ ವಿ. ಶಾಂತ ಹಾಗೂ ಅವರ ಪತಿ ಡಿ. ಬಾಬು ಅವರ ಹೆಸರು ಮತ್ತು ಭಾವ ಚಿತ್ರಗಳಿವೆ.

anantha-2

ಈ ಕುರಿತು ಪ್ರತಿಕ್ರಿಯೆಗೆ ಶಾಂತ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಯಿತಾದರೂ, ದೂರವಾಣಿ ಕರೆಯನ್ನು ಅವರು ಸ್ವೀಕರಿಸಲಿಲ್ಲ.

ಬೆಳವಣಿಗೆ ಬಗ್ಗೆ ಸಂಸದ ಅನಂತ ಕುಮಾರ್ ಅವರ ಬೆಂಗಳೂರು ಕಚೇರಿಯ ಗಮನ ಸೆಳೆದಾಗ, “ಹೌದಾ, ನಮಗೆ ಗೊತ್ತಿಲ್ಲ. ಸ್ಥಳೀಯವಾಗಿ ಅವರೇ ಹೋರ್ಡಿಂಗ್ ಹಾಕಿರಬಹುದು. ಅಷ್ಟಕ್ಕೂ ಸಂಸದರು ಪ್ರತಿಭಟನೆ ಮಾರನೇ ದಿನ ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು,” ಎಂಬ ಮಾಹಿತಿ ಲಭ್ಯವಾಯಿತು. ಈ ಕುರಿತು ಅನಂತ ಕುಮಾರ್ ಅವರ ಪೇಸ್ ಬುಕ್ ಪೇಜ್ ನೀಡುವ ಮಾಹಿತಿ ಇಲ್ಲಿದೆ:

ananth-4

ಈ ಬೆಳವಣಿಗೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಂದಿರುವ ಪ್ರತಿಕ್ರಿಯೆಗಳಲ್ಲಿ ಜನಪ್ರತಿನಿಧಿಗಳ ಹೋರ್ಡಿಂಗ್ ನಡೆಗೆ ವಿರೋಧ ವ್ಯಕ್ತವಾಗಿದೆ. ಕಾರ್ಮಿಕರನ್ನು ಜೈಲಿಗೆ ತಳ್ಳುತ್ತಿರುವ ಸಮಯದಲ್ಲಿ ಪಿಎಫ್ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಕಾರ್ಮಿಕ ಹೋರಾಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ananth-3

 

Top