An unconventional News Portal.

ಶಶಿಧರ್ ವೇಣುಗೋಪಾಲ್ ಬಿಡುಗಡೆಗಾಗಿ ಆನ್ಲೈನ್ ಪಿಟಿಷನ್

ಶಶಿಧರ್ ವೇಣುಗೋಪಾಲ್ ಬಿಡುಗಡೆಗಾಗಿ ಆನ್ಲೈನ್ ಪಿಟಿಷನ್

ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ಜೈಲು ಪಾಲಾಗಿರುವ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಿಡುಗಡೆಗೆ ಆಗ್ರಹಿಸಿ ಅಂತರ್ಜಾಲದಲ್ಲಿ ಹೋರಾಟವೊಂದು ಶುರುವಾಗಿದೆ.

ಜೈಲಿನಲ್ಲಿರುವ ವೇಣುಗೋಪಾಲ್ ಪರವಾಗಿ ಮಗಳು ನಯನಾ ಶಶಿಧರ್ ‘ಚೇಂಜ್ ಡಾಟ್ ಆರ್ಗ್’ನಲಿ ಪಿಟಿಷನ್ ಹಾಕಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯೊಳಗೆ ಮಹತ್ವದ ಬೆಳೆವಣಿಗೆಗಳು ನಡೆಯುತ್ತಿರುವಾಗಲೇ ಈ ಪಿಟಿಷನ್ ಸಲ್ಲಿಸಿದ್ದು, ಮಹತ್ವ ಪಡೆದುಕೊಂಡಿದೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕುವ ಭಾಗವಾಗಿ ವೇಣುಗೋಪಾಲ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು.

ಜೂನ್ 4ರಂದು ಕರ್ನಾಟಕದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಮತ್ತು ಕೆಳಹಂತದ ಅಧಿಕಾರಿಗಳ  ಮೇಲಾಗುತ್ತಿರುವ ದೌರ್ಜನ್ಯ ಮತ್ತು ತಾರತಮ್ಯ ವಿರೋಧಿಸಿ ಪೊಲೀಸ್ ಮಹಾಸಂಘ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಇದರ ಅಂಗವಾಗಿ ನಾಲ್ಕರಂದು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಇದಕ್ಕೂ ಎರಡು ದಿನ ಮೊದಲು ಅಂದರೆ ಜೂನ್ 2ರ ಮಧ್ಯರಾತ್ರಿ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ರನ್ನು ಅವರ ಮನೆಯಿಂದ ಬಂಧಿಸಲಾಗಿತ್ತು. ಪೊಲೀಸ್ ದಂಗೆಗೆ ಪ್ರೇರಣೆ ನೀಡಿದ್ದಾರೆ ಎಂಬ ಆರೋಪದಲ್ಲಿ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

ಇದಾದ ಬಳಿಕ ಸರಕಾರ ಪೊಲೀಸರ ಕೆಲವು ಬೇಡಿಕೆಗಳನ್ನು ಇಡೇರಿಸಿ ಪ್ರತಿಭಟನೆ ನಡೆಸಿದರೆ ಶಿಸ್ತು ಕ್ರಮದ ಬೆದರಿಕೆ ಹಾಕಿತ್ತು. ಕೊನೆಗೆ ಪೊಲೀಸರ ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಜೂನ್ 4ರ ಪೊಲೀಸ್ ಪ್ರತಿಭಟನೆಯನ್ನು ಖಾಕಿ ಪಡೆ ಬಳಸಿಯೇ ಹತ್ತಿಕ್ಕಲಾಗಿತ್ತು.

ಇವೆಲ್ಲಾ ಬೆಳವಣಿಗೆಗಳು ಮಧ್ಯೆ ಜೂನ್ 2ರಂದು ಬಂಧಿತರಾದ ಶಶಿಧರ್ ವೇಣುಗೋಪಾಲ್ ಇನ್ನೂ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದಾದ ನಂತರ ರಾಜ್ಯದ ಪೊಲೀಸ್ ಇಲಾಖೆಯೊಳಗೆ ಹಲವು ಬೆಳವಣಿಗೆಗಳು ನಡೆದವು. ಮೇಲಾಧಿಕಾರಿಗಳು ಮತ್ತು ರಾಜಕಾರಣಿಗಳ ಹಸ್ತಕ್ಷೇಪ ಖಂಡಿಸಿ ಬಳ್ಳಾರಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ನೀಡಿ ಹೊರ ಬಂದರು. ಇದಾದ ಬೆನ್ನಿಗೆ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಶರಣಾದರು. ಇದಕ್ಕಿಂತ ಹೆಚ್ಚು ಸುದ್ದಿಯಾಗಿದ್ದು ಮಂಗಳೂರು ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ. ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಆಶಿಕ್ ಮೋಹನ್ ಪ್ರಸಾದ್ ಮೇಲೆ ಕಿರುಕುಳದ ಆರೋಪ ಹೊರಿಸಿ ಆತ್ಮಹತ್ಯೆ ಶರಣಾಗಿದ್ದು ಸದ್ಯ ರಾಜ್ಯದಲ್ಲಿ ಕೋಲಾಹಲ ಎಬ್ಬಿಸುತ್ತಿದೆ.

ಈ ಎಲ್ಲಾ ಬೆಳವಣಿಗೆಗಳು ರಾಜ್ಯ ಪೊಲೀಸ್ ಇಲಾಖೆಯ ಹುಳುಕನ್ನು ಬೀದಿಗೆ ತಂದಿರುವಾಗಲೇ, ಇದೇ ತಕ್ಕ ಸಂದರ್ಭ ಎಂದುಕೊಂಡಿರುವ ಶಶಿಧರ್ ವೇಣುಗೋಪಾಲ್ ಮತ್ತೆ ತಮ್ಮಮಗಳು ನಯನಾ ಮೂಲಕ ಅಖಾಡಕ್ಕೆ ಇಳಿದಂತಿದೆ. ನಯನಾ ‘ಚೇಂಜ್ ಡಾಟ್ ಆರ್ಗ್’ನಲ್ಲಿ ತಮ್ಮ ತಂದೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಪೆಟಿಷನ್ ಸಲ್ಲಿಸಿದ್ದು, ಸಹಿ ಹಾಕುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.

ಈಗಾಗಲೇ ಮುನ್ನೂರೈವತ್ತಕ್ಕೂ ಹೆಚ್ಚು ಜನ ಇದಕ್ಕೆ ಸಹಿ ಹಾಕಿದ್ದಾರೆ.

ನಯನಾ ಶಶಿಧರ್ ಚೇಂಜ್ ಡಾಟ್ ಆರ್ಗ್ನಲ್ಲಿ ಸಲ್ಲಿಸಿರು ಪಿಟಿಷನ್ ಸಾರಾಂಶ ಇಲ್ಲಿದೆ,

ಜೂನ್ 2, 2016ರ ಮಧ್ಯರಾತ್ರಿ ನನ್ನ ತಂದೆ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ಶಶಿಧರ್ ವೇಣುಗೋಪಾಲ್ ರನ್ನು ನಾಟಕೀಯವಾಗಿ, ಅಮಾನವೀಯವಾಗಿ ನನ್ನ ಅಭಿಪ್ರಾಯದಂತೆ ಕಾನೂನನ್ನು ಗಾಳಿಗೆ ತೂರಿ ಬಂಧಿಲಾಗಿದೆ. 30 ಪೊಲೀಸರು ಕಾರು ಮತ್ತು ಟೆಂಪೋದಲ್ಲಿ ಬಂದು ಕಂಪೌಂಡ್ ಹಾರಿ ವಶಕ್ಕೆ ಅವರನ್ನು ವಶಕ್ಕೆ ಪಡೆದಿದ್ದಾರೆ. ಅವರಿನ್ನೂ ಜೈಲಿನಲ್ಲೇ ಇದ್ದಾರೆ.

ಕಾರಣ: ಕರ್ನಾಟಕದಲ್ಲಿ ತುಳಿತಕ್ಕೊಳಗಾದ ಕೆಳಹಂತದ ಪೊಲೀಸರ ಗುಣಮಟ್ಟದ ಜೀವನಕ್ಕಾಗಿ ಬೆಂಬಲ ವ್ಯಕ್ಪಡಿಸಿದ್ದು

ಅವರ ವಿರುದ್ಧ ‘ದೇಶದ್ರೋಹ’ ಸೆಕ್ಷನ್ (124A) ಅಡಿಯಲ್ಲಿ ಮತ್ತು ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಬೇಲ್ ಪಡೆದು ಜೈಲಿನಿಂದ ಹೊರಬರಲಾರದಂತೆ ಮಾಡಬೇಕಾದ ಎಲ್ಲಾ ಕೆಲಸಗಳನ್ನೂ ಅಧಿಕಾರದಲ್ಲಿರುವವರು ಮಾಡಿದ್ದಾರೆ. ನಾವೂ ಕುಟುಂಬಸ್ಥರು ವ್ಯವಸ್ಥೆಯಿಂದ ನಿರಂತರ ಬೆದರಿಕೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದೇವೆ.

ಅನ್ಯಾಯದ ವಿರುದ್ಧ ನಿಲ್ಲುವುದು/ಧ್ವನಿ ಗೂಡಿಸುವುದು ರಾಷ್ಟ್ರದ್ರೋಹ ಪ್ರಕರಣವೇ?

ದಯವಿಟ್ಟು ಗಮನಿಸಿ, ಸಮಸ್ಯೆಯ ವಿರುದ್ಧದ ಅವರ ಹೋರಾಟಕ್ಕೆ ಇಡೀ ರಾಜ್ಯವೇ ಬೆಂಬಲಿಸಿತ್ತು. ರಾಜ್ಯ ಸರಕಾರ ಸಿಬ್ಬಂದಿಗಳಾಗುತ್ತಿರುವ ಅನ್ಯಾಯದ ಬಗ್ಗೆ ಕಾಳಜಿ ತೋರಬೇಕು ಎಂಬ ಬೇಡಿಕೆ ಇಡುವುದು ಅಸಮಂಜಸವಾಗಲೀ ರಾಷ್ಟ್ರದ್ರೋಹವಾಗಲೀ ಅಲ್ಲ.

ಗೌರವಾನ್ವಿತ ಭಾರತ ಸರ್ಕಾರ (ನರೇಂದ್ರ ಮೋದಿ ಜಿ – ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತ ಸರಕಾರ), ಭಾರತದ ಪ್ರಜೆಗಳು ಮತ್ತು ಶಾಸಕಾಂಗ ಈ ವಿಷಯದ ಕುರಿತು ಗಮನ ಹರಿಸಬೇಕು. ಮತ್ತು ದೇಶದ್ರೋಹಿ ಎಂಬ ಪಟ್ಟ ಕಟ್ಟಿದ್ದು ಸರಿಯೇ; ಕಳೆದೊಂದು ತಿಂಗಳಿನಿಂದ ಜಾಮೀನು ನೀಡದೆ ಇವತ್ತಿಗೂ ಯಾವುದೇ ಆರೋಪವನ್ನು ಸಾಬೀತು ಪಡಿಸಲಾಗದೇ ಇರುವುದು ಸರಿಯೇ ಎಂಬುದನ್ನು ನಿರ್ಧರಿಸಬೇಕು.

ದಯವಿಟ್ಟು, ಕರ್ನಾಟಕ ಸರಕಾರಕ್ಕೆ ಸೆಕ್ಷನ್ 124A ಅರ್ತ ಮಾಡಿಸಿ, ನನ್ನ ತಂದೆಯ ವಿರುದ್ಧ ಹಾಕಿರುವ ಪ್ರಕರಣ ಸೂಕ್ತವಲ್ಲದ, ಅನಗತ್ಯ ಪ್ರಕರಣ ಎಂಬುದನ್ನು ಮನವರಿಕೆ ಮಾಡಿ ನಮಗೆ ಸಹಾಯ ಮಾಡಬೇಕು.

ನಮಗೆ ಶೀಘ್ರದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ದಯವಿಟ್ಟು ಅನ್ಯಾಯದ ವಿರುದ್ಧ ಹೋರಾಡಲು ನಮ್ಮನ್ನು ಬೆಂಬಲಿಸಿ.

Leave a comment

Top