An unconventional News Portal.

‘ಉಡುಪಿ ಗೊಂದಲಕ್ಕೆ ತೆರೆ’: ನಡೆಗಳಿಗೆ ತಡೆ; ಸ್ವಚ್ಚತೆ ಮಠದ ಒಳಗೂ ಇಲ್ಲ; ಹೊರಗೂ ಇಲ್ಲ!

‘ಉಡುಪಿ ಗೊಂದಲಕ್ಕೆ ತೆರೆ’: ನಡೆಗಳಿಗೆ ತಡೆ; ಸ್ವಚ್ಚತೆ ಮಠದ ಒಳಗೂ ಇಲ್ಲ; ಹೊರಗೂ ಇಲ್ಲ!

ಉಡುಪಿಯಲ್ಲಿ ನಡೆಯಬೇಕಾಗಿದ್ದ ‘ಕನಕ ನಡೆ’ ಸ್ವಚ್ಛತಾ ಪ್ರದರ್ಶನಕ್ಕೆ ಜಿಲ್ಲಾಡಳಿತ ತಡೆ ನೀಡಿದೆ.

ಮಠದ ಒಳಗೆಯೂ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಅನುಮತಿ ನಿರಾಕರಣೆ ಪತ್ರದಲ್ಲಿ, ಜಿಲ್ಲಾಧಿಕಾರಿ ಬಳಸಿದ ‘ಎಡಪಂಥೀಯರು ಮಠಕ್ಕೆ ಮುತ್ತಿಗೆ ಹಾಕುವ ಮಾಹಿತಿ ಬಂದಿದೆ’ ಎಂಬ ಸಾಲುಗಳು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ಆಕ್ರೋಶಕ್ಕೂ ಕಾರಣವಾಗಿದೆ.

ಇನ್ನು ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ನಡೆಗೂ ಅನುಮತಿ ನಿರಾಕರಿಸಲಾಗಿದ್ದು, ‘ಸ್ವಾಭಿಮಾನಿ ನಡೆ’ಯನ್ನು ಆಯೋಜಕರು ಮುಂದೂಡಿದ್ದಾರೆ.

ಅಂದುಕೊಂಡಂತೆ ನಡೆದಿದ್ದರೆ ನಾಳೆ ಬೆಳಿಗ್ಗೆ 9 ಗಂಟೆಗೆ ಉಡುಪಿಯಲ್ಲಿ ‘ಬ್ರಿಗೇಡ್ ಬ್ರದರ್ಸ್’ ಹಾಜರಿರಬೇಕಾಗಿತ್ತು. ಪೊರಕೆ ಹಿಡಿದು ಉಡುಪಿ ಸುತ್ತ ಮುತ್ತ ಸ್ವಚ್ಛತೆ ಕೈಗೊಳ್ಳಬೇಕಾಗಿತ್ತು. ಆದರೆ ಈ ಸ್ವಚ್ಛತಾ ಪ್ರದರ್ಶನಕ್ಕೆ ಜಿಲ್ಲಾಡಳಿತ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದೆ. ಈ ಮೂಲಕ ಉಡುಪಿಯಲ್ಲಿ ಸಂಘರ್ಷ ನಡೆಯಲಿದೆ ಎಂಬ ವಾತಾವರಣ ತಿಳಿಯಾಗಿದೆ.

ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿ ನೀಡಿರುವ ಪತ್ರ

ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿ ನೀಡಿರುವ ಪತ್ರ

ಶನಿವಾರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ‘ಯುವ ಬ್ರಿಗೇಡ್ (ಹಿಂದಿನ ನಮೋ ಬ್ರಿಗೇಡ್)’ಗೆ ಬರೆದಿರುವ ಪತ್ರದಲ್ಲಿಅನುಮತಿ ನಿರಾಕರಿಸಿರುವುದನ್ನು ಖಚಿತ ಪಡಿಸಿದ್ದಾರೆ. ಈ ಕುರಿತು ಬರೆದಿರುವ ಪತ್ರದಲ್ಲಿ ಅವರು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸುಗಳನ್ನೂ ಉಲ್ಲೇಖಿಸಿದ್ದಾರೆ. “ಕನಕ ನಡೆಯ ಸಂದರ್ಭದಲ್ಲಿ ಎಡಪಂಥೀಯರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಮಾಹಿತಿ ಬಂದಿದ್ದು, ಎರಡೂ ಗುಂಪುಉಗಳ ಮಧ್ಯೆ ಈ ಸಂದರ್ಭದಲ್ಲಿ ಘರ್ಷಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಯುವ ಬ್ರಿಗೇಡ್ ನಡೆಸಲಿರುವ ಸ್ವಚ್ಛತೆ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ಶಿಫಾರಸ್ಸು ಮಾಡಿದ್ದಾರೆ,” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇಷ್ಟಲ್ಲದೆ ಕನಕ ನಡೆಯವರು ಸ್ವಚ್ಛತೆ ಮಾಡುತ್ತೇವೆ ಎಂದು ಹೇಳಿರುವ ಸದರಿ ಸ್ಥಳಗಳಲ್ಲಿ ಉಡುಪಿ ನಗರ ಸಭೆಯವರು ತಮ್ಮ ವತಿಯಿಂದ ದಿನಂಪ್ರತಿ ಸ್ವಚ್ಛತೆ ನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಅನುಮತಿ ನಿರಾಕರಿಸುತ್ತಿರುವುದಾಗಿ ಹೇಳಿದ್ದಾರೆ.

‘ಮಠ’ದೊಳಗೆಯೂ ಸ್ವಚ್ಛತೆ ಇಲ್ಲ

ತಮ್ಮ ಮನವಿ ನಿರಾಕರಿಸಿದ ಹಿನ್ನಲೆಯಲ್ಲಿ ಮಠದೊಳಗೆ ಸ್ವಚ್ಛತಾ ಕಾರ್ಯ ನಡೆಸಲಾಗುವುದು ಎಂದು ಸೂಲಿಬೆಲೆ ಹೇಳಿದ್ದಾಗಿ ಪ್ರಜಾವಾಣಿ ವರದಿ ಮಾಡಿತ್ತು. ಈ ಕುರಿತಾದ ಗೊಂದಲಗಳಿಗೆ ಸಮಾಚಾರಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ “ಅವರು ನೀಡಿದ ಮನವಿ ತಿರಸ್ಕರಿಸಿದ್ದೇವೆ ಎಂದರೆ ಮುಗಿಯಿತು. ಅಲ್ಲಿ ಯಾವುದೇ ಗೊಂದಲಗಳಿಲ್ಲ. ಮಠದೊಳಗೆಯೂ ಸ್ವಚ್ಛತೆ ಮಾಡುವಂತಿಲ್ಲ,” ಎಂದಿದ್ದಾರೆ.

ಈ ಪತ್ರ ‘ಯುವ ಬ್ರಿಗೇಡ್’ ಕೈಗೆ ಸಿಗುತ್ತಿದ್ದಂತೆ ತಮ್ಮ ಪೇಸ್ಬುಕ್ ಗೋಡೆ ಮೇಲೆ ಬರೆದುಕೊಂಡಿರುವ ‘ಕನಕ ನಡೆ’ ಆಯೋಜಕ ಚಕ್ರವರ್ತಿ ಸೂಲಿಬೆಲೆ ಶಭಾಷ್! ಪೊಲೀಸರ ಗುಪ್ತಚರ ಮಾಹಿತಿಯೇ ಎಡಪಂಥೀಯ ಸಂಘಟನೆಗಳು ಮುತ್ತಿಗೆ ಹಾಕುವುದನ್ನು ದೃಢಪಡಿಸಿವೆ. ಅಂದಮೇಲೆ, ದಲಿತ-ದಮನಿತರ ಹೆಸರು ಹೇಳಿದ್ದೆಲ್ಲ ಬೂಟಾಟಿಕೆಯಾ?
ಯಾರದ್ದೋ ಹೆಗಲ ಮೇಲೆ ಬಂದೂಕಿಟ್ಟು ರಕ್ತ ಹರಿಸುವ 
#ಚೀನಾಚೇಲಾಗಳವಿರುದ್ಧದ ನಮ್ಮ ಹೋರಾಟ ಶುರುವಾಗಿದೆ ಅಷ್ಟೇ!!,” ಎಂದು ಬರೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿಯ ‘ಎಡಪಂಥೀಯರು’ ಶಬ್ದ ಪ್ರಯೋಗಕ್ಕೆ ದಲಿತರ ಆಕ್ರೋಶ

ಆದರೆ “ನಮಗೆ ಆ ರೀತಿಯ ಯಾವುದೇ ಗುಪ್ತಚರ ಮಾಹಿತಿಗಳೂ ಬಂದಿಲ್ಲ. ನಾವೆಲ್ಲೂ ಎಡಪಂಥೀಯರು ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿಲ್ಲ. ಜಿಲ್ಲಾಧಿಕಾರಿಗಳು ತಮ್ಮ ಪತ್ರದಲ್ಲಿ ಹಾಗೇನಾದರೂ ಬರೆದಿದ್ದರೆ ಪರಿಶೀಲಿಸುತ್ತೇನೆ. ಒಟ್ಟಿನಲ್ಲಿ ಭಾನುವಾರ ಯಾರಿಗೂ ಕಾರ್ಯಕ್ರಮ ಮಾಡಲು ಅನುಮತಿ ಇಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ವಿಶೇಷ ಭದ್ರತೆ ಇದ್ದೇ ಇರುತ್ತದೆ,” ಎನ್ನುತ್ತಾರೆ ಉಡುಪಿ ಪೊಲೀಸ್ ಅಧೀಕ್ಷಕ ಕೆ.ಟಿ. ಬಾಲಕೃಷ್ಣ. ಹಾಗಾದರೆ ಪೊಲೀಸ್ ಅಧೀಕ್ಷಕರು ಹೇಳದೆಯೇ ‘ಎಡಪಂಥೀಯರು ಮುತ್ತಿಗೆ ಹಾಕಲಿದ್ದಾರೆ ಎಂಬ ಮಾಹಿತಿ ಬಂದಿದೆ’ ಎಂದು ಜಿಲ್ಲಾಧಿಕಾರಿಗೇ ಹೇಗೆ ಪತ್ರದಲ್ಲಿ ಉಲ್ಲೇಖಿಸಿದರು ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ಪ್ರತಿಕ್ರೀಯೆಗೆ ಜಿಲ್ಲಾಧಿಕಾರಿಗಳು ಲಭ್ಯರಾಗಲಿಲ್ಲ

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಮಾತನಾಡಿರುವ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ಯ ಸದಸ್ಯರಾದ ಭಾಸ್ಕರ್ ಪ್ರಸಾದ್ “ಕನಕ ನಡೆಗೆ ಅನುಮತಿ ನಿರಾಕರಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಎಡಪಂಥೀಯರು ಮುತ್ತಿಗೆ ಹಾಕುತ್ತಾರೆ ಎಂದು ಅನುಮತಿ ನಿರಾಕರಿಸಿರುವುದು ಸರಿಯಲ್ಲ. ಅಲ್ಲದೆ ಪತ್ರದಲ್ಲಿ ಅವರು ಸ್ವಚ್ಛತೆ ಮಾಡಲು ಹೊರಟಿದ್ದಾರೆ ಎಂದು ಜಿಲ್ಲಾಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಒಂದೊಮ್ಮೆ ಅವರು ಹೇಳಿದ್ದೇ ನಿಜವಾದಲ್ಲಿ ಎಡಪಂಥೀಯರ ವಿರುದ್ಧ ಕ್ರಮ ಕೈಗೊಂಡು ಸ್ವಚ್ಛತೆಯಂಥ ಒಳ್ಳೆಯ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕಾಗಿತ್ತು. ಅವರಿಗೆ ಯಾವ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿತ್ತಂತೆ. ಅವರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದವರು ಯಾರು. ನಾಮ್ಮ ಗುರಿ ಅದು ಹೌದು. ಆದರೆ ಅದಕ್ಕಿನ್ನೂ ಡೇಟ್ ಫಿಕ್ಸ್ ಮಾಡಿಲ್ಲ. ಅದಿನ್ನೂ ದೂರದಲ್ಲಿದೆ. ಅವರಿಗ ಎಡಪಂಥೀಯರು ಮನವಿ ಸಹ ನೀಡಿರಲಿಲ್ಲ. ನಾವು ದಲಿತರು ನೀಡಿದ್ದನ್ನು ಅವರು ಎಡಪಂಥೀಯರು ಎಂದು ಅವರಷ್ಟಕ್ಕೇ ಊಹಿಸಿಕೊಂಡಿದ್ದಾರೆ. ಈ ಮೂಲಕ ಎಡಪಂಥಿಯರನ್ನು ಎಳೆದು ತಂದು ದಲಿತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮಕ್ಕಾಗಿ ಸರಕಾರಕ್ಕೆ ಪತ್ರ ಬರೆಯುತ್ತೇವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕನಕ ನಡೆ’ಗೆ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ನಮಗೂ ‘ಸ್ವಾಭಿಮಾನಿ ನಡೆ’ ನಡೆಸದಂತೆ ಹೇಳಿದ್ದಾರೆ. ಹಾಗಾಗಿ ‘ಸ್ವಾಭಿಮಾನಿ ನಡೆ’ಯೂ ನಡೆಯುವುದಿಲ್ಲ ಎಂದು ಆಯೋಜಕರ ಪರವಾಗಿ ಶ್ಯಾಮ್ ರಾಜ್ ಬಿರ್ತಿ ಖಚಿತ ಪಡಿಸಿದ್ದಾರೆ. ನಮ್ಮದೇನಿದ್ದರೂ ಕನಕ ನಡೆಗೆ ಪ್ರತಿಕ್ರಿಯೆಯಾಗಿತ್ತು ಅಷ್ಟೇ. ನಾಳಿನ ಬೆಳವಣಿಗೆ ನೋಡಿಕೊಂಡು ನಾವು ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಅವರು ತಿಳಿಸಿದರು.

ಸ್ವಾಭಿಮಾನಿ ನಡೆ ಮುಂದೂಡಿಕೆ

whatsapp-image-2016-10-22-at-7-01-31-pmಈ ಕುರಿತು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, “ಈಗಾಗಲೇ ಸಂಘಟಿತ ಮತ್ತು ಘೋಷಿತ ಅಸ್ಪಷ್ಯತಾ ಆಚರಣೆಗೆ ಕರೆ ನೀಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯನ್ವಯ ಅಪರಾಧ ಮಾಡಿರುವ ಹಾಗೂ ದಲಿತ ದಮನಿತರನ್ನು ನಿಂದಿಸಿರುವ ಚಕ್ರವರ್ತಿ ಸೂಲಿಬೆಲೆ, ಕಬ್ಯಾಡಿ ಜಯರಾಮಾಚಾರ್ಯ, ಮತ್ತಿತರರು ಹಾಗೂ ಪ್ರಾಣ ಬೆದರಿಕೆ ಒಡ್ಡಿರುವ ಪ್ರಮೋದ್ ಮುತಾಲಿಕ್ ಹಾಗೂ ಉಡುಪಿ ಭಜರಂಗದಳ ಮುಖಂಡರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸುತ್ತಿದ್ದೇವೆ,” ಎಂದು ಹೇಳಿದೆ. ಅಲ್ಲದೇ ‘ಸ್ವಾಭಿಮಾನಿ ನಡೆ’ಯನ್ನು ಮುಂದೂಡಿರುವುದಾಗಿ ತಿಳಿಸಿದ್ದಾರೆ.

ಇನ್ನು ಉಡುಪಿಯಲ್ಲಿ ‘ಕನಕ ನಡೆ’ಗೆ ಅನುಮತಿ ನಿರಾಕರಿಸಿದ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳನ್ನು ಚಕ್ರವರ್ತಿ ಸೂಲಿಬೆಲೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಸರ್ಕಾರದ ನಿರ್ಧಾರದಿಂದ ಮನಸ್ಸಿಗೆ ನೋವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಶ್ರೀಗಳು ‘ಸಂಘರ್ಷ ಬೇಡ, ಕಾನೂನು ಕೈಗೆತ್ತಿಕೊಂಡರೆ ಉಪವಾಸ ಕೂರುತ್ತೇನೆ’ ಎಂದು ಹೇಳಿದ್ದಾರೆ. ಅದಕ್ಕೆ ಸೂಲಿಬೆಲೆ ‘ಜಿಲ್ಲಾಡಳಿತದ ಆದೇಶವನ್ನು ಪಾಲಿಸಲಾಗುವುದು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸ್ಪಷ್ಟನೆಗಾಗಿ ಚಕ್ರವರ್ತಿ ಸೂಲಿಬೆಲೆಯವರನ್ನು ‘ಸಮಾಚಾರ’ ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಅವರು ಲಭ್ಯವಾಗಲಿಲ್ಲ.

Leave a comment

Top