An unconventional News Portal.

ಇಂಡೋನೇಷ್ಯಾದ ಸುಮಾತ್ರದಲ್ಲಿ ಪ್ರಬಲ ಭೂಕಂಪ: 7 ಮಕ್ಕಳೂ ಸೇರಿ 97 ಸಾವು

ಇಂಡೋನೇಷ್ಯಾದ ಸುಮಾತ್ರದಲ್ಲಿ ಪ್ರಬಲ ಭೂಕಂಪ: 7 ಮಕ್ಕಳೂ ಸೇರಿ 97 ಸಾವು

ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಬುಧವಾರ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಗೆ 97 ಜನ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಕಂಪನಗಳು ಎದ್ದಿರುವುದು ದಾಖಲಾಗಿವೆ.

ಸುಮಾತ್ರಾ ದ್ವೀಪದ ಆಚ್ಚೆ ಪ್ರಾಂತ್ಯದಲ್ಲಿ ಸ್ಥಳೀಯ ಕಾಲಮಾನ ಬುಧವಾರ ಮುಂಜಾನೆ 5 ಗಂಟೆಗೆ ಈ ಭೂಕಂಪ ಸಂಭವಿಸಿದೆ. ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ, ಬೆಳಗ್ಗಿನ ಪ್ರಾರ್ಥನೆಗೆ ಜನ ಸಿದ್ಧವಾಗುತ್ತಿದ್ದ ಹೊತ್ತಿಗೆ ಈ ದುರಂತ ಘಟಿಸಿದೆ. ಇಲ್ಲಿನ ಸೇನಾ ಮುಖ್ಯಸ್ಥರ ಪ್ರಕಾರ 97 ಜನ ಸಾವಿಗೀಡಾಗಿದ್ದು 78 ಜನ ಗಂಭೀರ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ 7 ಮಕ್ಕಳೂ ಸೇರಿದ್ದಾರೆ.

ಆಸ್ಪತ್ರೆಗಳು ಗಾಯಗೊಂಡವರಿಂದ ತುಂಬಿಕೊಂಡಿದ್ದು ಚಿಕಿತ್ಸೆಗೆ ಜಾಗವಿಲ್ಲದಾಗಿದೆ. ಇನ್ನೂ ಹಲವಾರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ನೂರಾರು ಕಟ್ಟಡಗಳು ಧರಶಾಯಿಯಾಗಿದ್ದು, ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ಬಿದ್ದಿರುವ ಕಟ್ಟಡಗಳ ಅಡಿಯನ್ನು ಜನರು ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

indenesia-earthquake-2016-2

ಬುಲ್ಡೋಜರ್ ಮುಂತಾದ ಭಾರೀ ಯಂತ್ರಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

ಭೂಕಂಪದ ಕಂಪನಗಳು ಆರಂಭವಾಗುತ್ತಿದ್ದಂತೆ ಜನ ಮನೆಗಳಿಂದ ಹೊರಕ್ಕೆ ಓಡಿ ಹೋಗಿದ್ದಾರೆ. “2004ರ ಭೀಕರ ಭೂಕಂಪದ ಅನುಭವ ಜನರಿಗಿದ್ದ ಕಾರಣಕ್ಕೆ ಕಂಪನ ಆರಂಭವಾಗುತ್ತಿದ್ದಂತೆ ಎತ್ತರದ ಪ್ರದೇಶಗಳಿಗೆ ತೆರಳಿದರು,” ಎಂದು ಸ್ಥಳೀಯ ವರದಿಗಾರರು ಹೇಳಿದ್ದಾರೆ.

ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ:

ಭೂಕಂಪ ಸಂಭವಿಸಿಯೂ ಸುನಾಮಿ ಮುನ್ನಚರಿಕೆ ನೀಡಿಲ್ಲ; ಮತ್ತು ಸುನಾಮಿಯ ಸಾಧ್ಯತೆ ಇಲ್ಲ ಎಂದು ಇಂಡೋನೇಷ್ಯಾ ಹವಾಮಾನ ಇಲಾಖೆ ಹೇಳಿದೆ.

indenesia-earthquake-2016-3

ಆದರೆ ಕಂಪನದ ತೀವ್ರತೆಗೆ ಮಸೀದಿಗಳು, ಮನೆಗಳು, ವ್ಯಾಪಾರ ಮಳಿಗೆಗಳು ನೆಲಕಚ್ಚಿವೆ. ಅದರಲ್ಲೂ ಭೂಕಂಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಹಾನಿ ಸಂಭವಿಸಿದೆ. ಸ್ಥಳೀಯ ರಕ್ಷಣಾ ತಂಡಗಳು ಕಟ್ಟಡಗಳಡಿಯಲ್ಲಿ ಸಿಲುಕಿಕೊಂಡ ಜನರನ್ನು ಹೊರತೆಗೆಯುವಲ್ಲಿ ನಿರತವಾಗಿವೆ. ಕುಸಿದ ಕಟ್ಟಡಗಳಡಿಯಲ್ಲಿ ಇನ್ನೂ ಹೆಚ್ಚಿನ ಜನ ಸಿಲುಕಿಕೊಂಡಿರಬಹುದು, ಈ ಕಾರಣಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ವಿಕೋಪ ನಿರ್ವಹಣಾ ಪಡೆಗಳು ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

2004ರಲ್ಲಿ ಇದೇ ಆಚ್ಚೆ ಪ್ರದೇಶ ಹಿಂದೂ ಮಹಾಸಾಗರದಲ್ಲಿ ಎದ್ದ ಭೀಕರ ಸುನಾಮಿಗೆ ತತ್ತರಿಸಿ ಹೋಗಿತ್ತು. ಸದ್ಯ ಇದೇ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು ಮತ್ತೆ ನಾಶವಾಗಿದೆ. ಭೂಕಂಪದ ನಂತರ ಸಂಭವಿಸಿದ 5 ಕಂಪನಗಳಿಗೆ ಕಟ್ಟಡಗಳೆಲ್ಲಾ ಕುಸಿದು ಬಿದ್ದಿವೆ.

ಭೂಕಂಪದ ಬಾಣಲೆಯ ಮೇಲೆ:

ಇಂಡೋನೇಷ್ಯಾ ಜನರಿಗೆ ಭೂಕಂಪದ ಅನುಭವ ಹೊಸದೇನೂ ಅಲ್ಲ. ಭೂಗರ್ಭದಲ್ಲಿ ಶಿಲಾಫಲಕಗಳು ನಿರಂತರವಾಗಿ ಘರ್ಷಣೆಗೆ ಒಳಗಾಗುವ ಭಾಗದಲ್ಲಿಯೇ ಇಂಡೋನೇಷ್ಯಾ ಇರುವ ಕಾರಣಕ್ಕೆ ನಿರಂತರವಾಗಿ ಜ್ವಾಲಮುಖಿ, ಕಂಪನದಂತ ಚಟುವಟಿಕೆಗಳಿಗೆ ಗುರಿಯಾಗುತ್ತಲೇ ಇದೆ.

ಅದರಲ್ಲೂ ಆಚ್ಚೆ ಪ್ರದೇಶ ಸುಮಾತ್ರದ ಉತ್ತರ ತುತ್ತತುದಿಯಲ್ಲಿದ್ದು, ಭೂಕಂಪ ಪೀಡಿತ ಪ್ರದೇಶವಾಗಿದೆ. ಇದೇ ಜೂನಿನಲ್ಲಿ ಪಶ್ಚಿಮ ಸುಮಾತ್ರಾದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿ 8 ಜನ ಸಾವಿಗೀಡಾಗಿದ್ದರು.

ಇಲ್ಲಿನ ಸಮುದ್ರದಾಳದಲ್ಲಿ 2004ರಲ್ಲಿ ಭಾರಿ ಭೂಕಂಪ ಸಂಭವಿಸಿ ಭೀಕರ ಸುನಾಮಿ ಎದ್ದಿತ್ತು. ಇದರಲ್ಲಿ ಆಚ್ಚೆಯ ಕೆಲವು ಭಾಗಗಳು ನಾಮಾವಶೇಷವಾಗಿದ್ದವು. ಇಂಡೋನೇಷ್ಯಾ ಒಂದರಲ್ಲೇ 1,70,000 ಹೆಚ್ಚು ಜನ ಸಾವಿಗೀಡಾಗಿದ್ದರು. ಭಾರತವೂ ಸೇರಿದಂತೆ ಹಿಂದೂ ಮಹಾಸಾಗರವನ್ನು ಹಂಚಿಕೊಂಡಿರುವ ದೇಶಗಳಲ್ಲೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಜೀವಹಾನಿ ಸಂಭವಿಸಿತ್ತು.

ಚಿತ್ರ ಕೃಪೆ: ಅಲ್ ಜಝೀರಾ

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top