An unconventional News Portal.

ವೇತನ ಹೆಚ್ಚಳ ಆಗ್ರಹಕ್ಕೆ ಕೂಡ ಬಂದ ಕಾಲ: ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಸರಕಾರಿ ನೌಕರರು

ವೇತನ ಹೆಚ್ಚಳ ಆಗ್ರಹಕ್ಕೆ ಕೂಡ ಬಂದ ಕಾಲ: ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಸರಕಾರಿ ನೌಕರರು

ಹೆಚ್ಚುತ್ತಿರುವ ಅಕ್ಕಿ, ಬೇಳೆಕಾಳು, ಸೊಪ್ಪು- ತರಕಾರಿ, ಪೆಟ್ರೋಲ್- ಡೀಸೆಲ್- ಅಡುಗೆ ಅನಿಲ ಮತ್ತಿತರ ಅಗತ್ಯ ವಸ್ತುಗಳ ಬೆಲೆಗಳು ನಿತ್ಯ ಬದುಕನ್ನು ಹೈರಾಣಾಗಿಸುತ್ತಿವೆ. ದುಡಿಮೆ ಹಾಗೂ ಖರ್ಚಿನ ನಡುವೆ ಅಂತರ ಕಡಿಮೆಯಾಗುತ್ತಿದೆ, ಇಲ್ಲದೇ ದುಡಿಮೆಗಿಂತಲೂ ಖರ್ಚು ಹೆಚ್ಚುತ್ತಿದೆ. ನೆಮ್ಮದಿಯಿಂದ ಬದುಕುವುದು ಕಷ್ಟ ಎನ್ನಿಸುತ್ತಿದೆ, ಮಕ್ಕಳಿಗೆ ಇಷ್ಟಪಟ್ಟ ವಿದ್ಯಾಭ್ಯಾಸ ಕೊಡಿಸಲು ಸಾಧ್ಯವಾಗುತ್ತಿಲ್ಲ…

ಹೀಗೆ ಸಮಸ್ಯೆಗಳ ಪಟ್ಟಿಯನ್ನು ಮುಂದಿಡುತ್ತಿರುವವರು ಕೊಳಗೇರಿಗಳ ಜನರಲ್ಲ, ರೈತರಲ್ಲ, ಬದಲಿಗೆ ಸರಕಾರಿ ನೌಕರರು. ಈ ವರ್ಷದ ಆರಂಭದಲ್ಲಿ ಹೈಸ್ಕೂಲು ಮತ್ತು ಪಿಯು ಉಪನ್ಯಾಸಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅಲ್ಲಿಂದ ಆರಂಭವಾದ ವೇತನ ಹೆಚ್ಚಳ ಬೇಡಿಕೆಗಳನ್ನು ಮುಂದಿಟ್ಟುಕೊಂಡ ಸರಕಾರಿ ನೌಕರರ ಪ್ರತಿಭಟನೆ ಸಾಲಿಗೆ ಸರಕಾರಿ ನೌಕರರ ಸಂಘದ ಗುರುವಾರದ ಒಂದು ದಿನದ ಮುಷ್ಕರವೂ ಸೇರ್ಪಡೆಗೊಳ್ಳುತ್ತಿದೆ.

ಸುಮಾರು 84 ಇಲಾಖೆಗಳ ನೌಕರರನ್ನು ಒಳಗೊಂಡಿರುವ ಈ ಸಂಘವು, ‘ಕೇಂದ್ರ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಮತ್ತು ಭತ್ಯೆಯಂತೆ ತಮಗೂ ನೀಡಬೇಕೆಂದು ಆಗ್ರಹಿಸಿ’ ಒಂದು ದಿನದ ಸಾಂಕೇತಿಕ ಮುಷ್ಕರಕ್ಕೆ ಕರೆ ನೀಡಿದೆ. ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಹೊರತುಪಡಿಸಿ ‘ಸರ್ಕಾರಿ ನೌಕರರ ಸಂಘ’ದ ಸದಸ್ಯತ್ವ ಪಡೆದಿರುವ ಎಲ್ಲಾ ನೌಕರರು ಸರಕಾರಿ ಕಚೇರಿಗಳಿಗೆ ನಾಳೆ ಗೈರು ಹಾಜರಾಗುವ ಮೂಲಕ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಇದರಿಂದ ನಾಳೆ ಬಹುತೇಕ ಸರ್ಕಾರಿ ಕಚೇರಿಗಳು ನೌಕರರಿಲ್ಲದೆ ಮುಚ್ಚುವ, ಇಲ್ಲವೆ ಭಣಗುಡುವ ಪರಿಸ್ಥಿತಿ ಉಂಟಾಗಲಿದೆ. ಆಡಳಿತ ಯಂತ್ರಾಂಗ ಒಂದು ದಿನದ ಮಟ್ಟಿಗೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. “ನಾವು ಮೆರವಣಿಗೆ, ಪ್ರತಿಭಟನೆಗಳನ್ನು ಮಾಡುವುದಿಲ್ಲ. ಈಗಾಗಲೇ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿರುವುದರಿಂದ ಮನವಿಯನ್ನೂ ಸಲ್ಲಿಸುವುದಿಲ್ಲ. ನಮ್ಮದು ಸಾಂಕೇತಿಕ ಅಷ್ಟೆ,” ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ತಿಳಿಸಿದ್ದಾರೆ.

Government-Employees-Association-1

ವಿಧಾನಸೌಧದಲ್ಲಿ ಪ್ರತಿಭಟನೆ:

ಇದರ ನಡುವೆ ವಿಧಾನಸೌಧದಲ್ಲಿ ಕೆಲಸ ಮಾಡುವ ಸಚಿವಾಲಯದ ನೌಕರರೂ ಕೂಡ ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಮಾದರಿಯಲ್ಲಿ ಭತ್ಯೆ ಹಾಗೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ಜೂನ್ 4ರಂದು ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳು ಕೂಡ ಒಂದು ದಿನದ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಸರಕಾರಿ ನೌಕರರ ಸಾಂಕೇತಿಕ ಪ್ರತಿಭಟನೆ ಹಿನ್ನೆಲೆಯಲ್ಲಿ ಸರಕಾರ ಮುಷ್ಕರದಲ್ಲಿ ಭಾಗವಹಿಸುವ ಸರ್ಕಾರಿ ನೌಕರರು ಎದುರಿಸಬೇಕಾದ ಪರಿಣಾಮಗಳ ಬಗ್ಗೆ ಮಾಹಿತಿ ಸುತ್ತೋಲೆಯೊಂದನ್ನು ಬುಧವಾರ ಸಂಜೆ ವೇಳೆಗೆ ಹೊರಡಿಸಿದೆ.

Top