An unconventional News Portal.

ಪಾರ್ಲಿಮೆಂಟ್ ಅಧಿವೇಶನ ನಡೆಸಲು ಪ್ರತಿ ನಿಮಿಷಕ್ಕೆ ಖರ್ಚಾಗುತ್ತಿರುವ ಹಣ 2.5 ಲಕ್ಷ ರೂ.!

ಪಾರ್ಲಿಮೆಂಟ್ ಅಧಿವೇಶನ ನಡೆಸಲು ಪ್ರತಿ ನಿಮಿಷಕ್ಕೆ ಖರ್ಚಾಗುತ್ತಿರುವ ಹಣ 2.5 ಲಕ್ಷ ರೂ.!

ಸೋಮವಾರ ಆರಂಭವಾಗಲಿರುವ ಬಜೆಟ್ ಮುಂದುವರಿದ ಅಧಿವೇಶದಲ್ಲಿ ಪ್ರತಿ ನಿಮಿಷಕ್ಕೆ ಅಂದಾಜು 2.5 ಲಕ್ಷ ರೂಪಾಯಿ ತೆರಿಗೆದಾರರ ಹಣ ಖರ್ಚಾಗಲಿದೆ!

ದೇಶಕ್ಕೆ ಕಾನೂನುಗಳನ್ನು ರೂಪಿಸುವ, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ವರ್ಷಕ್ಕೆ ಕನಿಷ್ಟ ಮೂರು ಬಾರಿ ನಡೆಯುವ ಅಧಿವೇಶನಗಳಿಗಾಗಿಯೇ ಖರ್ಚು ಮಾಡುವ ಒಟ್ಟು ಹಣ 600 ಕೋಟಿ ರೂಪಾಯಿ. ಅಧಿವೇಶನಗಳು ಪ್ರತಿ ದಿನ ಸರಾಸರಿ 6 ಗಂಟೆಗಳ ಕಾಲ ನಡೆಯುತ್ತವೆ ಎಂದುಕೊಂಡರೂ, ಅದು ಪ್ರತಿ ನಿಮಿಷಕ್ಕೆ 2.5 ಲಕ್ಷ ರೂಪಾಯಿ ವೆಚ್ಚವನ್ನು ಇದು ಬೇಡುತ್ತದೆ.

2010ರ ನವೆಂಬರ್ ತಿಂಗಳಿನಲ್ಲಿ  ನಡೆದ ಚಳಿಗಾಲದ ಅಧಿವೇಶನದಲ್ಲಿ ಅವತ್ತು ಪ್ರತಿಪಕ್ಷದಲ್ಲಿ ಕುಳಿತಿದ್ದ ಬಿಜೆಪಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಈ ಸಮಯದಲ್ಲಿ, ಪಾರ್ಲಿಮೆಂಟ್ ವ್ಯವಹಾರಗಳ ಸಚಿವ ಪವನ್ ಬನ್ಸಾಲ್, “ಅಧಿವೇಶನ ನಡೆಸಲು ಪ್ರತಿ ನಿಮಿಷಕ್ಕೆ 2.5 ಲಕ್ಷ ರೂಪಾಯಿ ತೆರಿಗೆದಾರರ ಹಣವನ್ನು ಖರ್ಚು ಮಾಡುತ್ತೇವೆ. ಪ್ರತಿ ಪಕ್ಷಗಳು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು,” ಎಂದು ತಿಳಿಸಿದ್ದರು. ಅಂದಿನಿಂದ ಇಲ್ಲಿಯವರೆಗೆ ಅಧಿವೇಶನದ ವೆಚ್ಚದಲ್ಲಿ ವಿಶೇಷ ಕಡಿತಗಳೇನೂ ಆಗಿಲ್ಲ.

ಕೇಂದ್ರದಲ್ಲಿ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ಸಮಯದಲ್ಲಿ ಹಾಗೂ ಪ್ರತಿ ವರ್ಷಾರಂಭದ ಸಮಯದಲ್ಲಿ ಜಂಟಿ ಅಧಿವೇಶನ ನಡೆಯುತ್ತದೆ. ಅದನ್ನು ಹೊರತು ಪಡಿಸಿದರೆ, ಬಜೆಟ್ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳು ನಡೆಯುತ್ತವೆ. ಅಪರೂಪಕ್ಕೆ ವಿಶೇಷ ಅಧಿವೇಶನಗಳನ್ನು ಕರೆಯಲಾಗುತ್ತದೆ. ವರ್ಷಕ್ಕೆ ಹೆಚ್ಚು ಕಡಿಮೆ 60 ದಿನಗಳನ್ನು ನಾವು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ಅಧಿವೇಶನದ ಕಲಾಪದಲ್ಲಿಯೇ ಕಳೆಯುತ್ತಾರೆ. ಅದಕ್ಕಾಗಿ ಅವರಿಗೆ ದಿನದ ಭತ್ಯೆಯೂ ಸಿಗುತ್ತದೆ.

ಸಂಸದರ ಮಾಸಿಕ ಖರ್ಚು:

ಭಾರತದ ಪ್ರತಿ ಸಂಸದ ಪ್ರತಿ ತಿಂಗಳು ತೆಗೆದುಕೊಳ್ಳುವ ಮೂಲ ವೇತನ 50 ಸಾವಿರ ರೂಪಾಯಿ. 2010 ಆಗಸ್ಟ್ ತಿಂಗಳಿನಲ್ಲಿ 16 ಸಾವಿರ ಇದ್ದ ಮೂಲ ವೇತನವನ್ನು ಮೂರು ಪಟ್ಟು ಅಂದರೆ 50ಕ್ಕೆ ಅವರೇ ಧ್ವನಿ ಮತದ ಮೂಲಕ ಹೆಚ್ಚಿಸಿಕೊಂಡಿದ್ದರು. ಇದು ಈ ದೇಶದ ದಡಿಯುವ ವರ್ಗ ಪಡೆಯುವ ಸರಕಾರಿ ಮೂಲ ವೇತನದ ಶೇ. 15 ಪಟ್ಟು ಹೆಚ್ಚು.

ಇದರ ಜತೆಗೆ, ಕ್ಷೇತ್ರ ಭತ್ಯೆ ರೂಪದಲ್ಲಿ ಮಾಸಿಕ 45 ಸಾವಿರ, ಕಚೇರಿ ನಿರ್ವಹಣೆಗೆ 45 ಸಾವಿರ ರೂಪಾಯಿಗಳನ್ನು ಪ್ರತಿ ಎಂಪಿಯೂ ಪಡೆಯುತ್ತಾರೆ. ತಿಂಗಳಿಗೆ 1. 40 ಲಕ್ಷದಂತೆ ಒಟ್ಟು 543 ಎಂಪಿಗಳಿಗೆ ಮಾಸಿಕ ವೇತನ ರೂಪದಲ್ಲಿ ಖರ್ಚು ಮಾಡುತ್ತಿರುವ ಹಣವನ್ನು 12 ತಿಂಗಳಿಗೆ ಲೆಕ್ಕ ಹಾಕಿ ನೋಡಿ.

ಇದರ ಜತೆಗೆ, ಕಡಿಮೆ ಬಡ್ಡಿಯ ಸಾಲದ ವ್ಯವಸ್ಥೆ, ಉಚಿತ ರೈಲು ಹಾಗೂ ವಿಮಾನ ಪ್ರಯಾಣ, ದಿಲ್ಲಿಯಲ್ಲಿ ಫ್ಯ್ಲಾಟ್, ಪೀಠೋಪಕರಣಗಳ ನವೀಕರಣಕ್ಕೆ ಹಣ, ದೂರವಾಣಿ, ಬ್ರಾಡ್ ಬ್ಯಾಂಡ್ ಸೌಲಭ್ಯಗಳು ಪ್ರತ್ಯೇಕ. ತಮ್ಮ ಅವಧಿ ಮುಗಿದ ನಂತರ ತಿಂಗಳಿಗೆ 20 ಸಾವಿರ ಪಿಂಚಣಿ ವ್ಯವಸ್ಥೆ ಇದೆ. ಇದಕ್ಕೆ ಯಾವ ವಯೋಮಿತಿಯೂ ಇಲ್ಲ.

ಅಧಿವೇಶನ ಆರಂಭಕ್ಕೆ ಮೂರು ದಿನ ಮೊದಲು, ಅಧಿವೇಶನದ ಅವಧಿಯಲ್ಲಿ ಹಾಗೂ ಮುಗಿದು ಮೂರು ದಿನಗಳ ನಂತರ ಪ್ರತಿ ದಿನದ ಲೆಕ್ಕದಲ್ಲಿ 2 ಸಾವಿರ ಪ್ರತ್ಯೇಕ ಭತ್ಯೆಯನ್ನು ನಮ್ಮ ಜನಪ್ರತಿನಿಧಿಗಳು ಪಡೆಯುತ್ತಾರೆ.

ಒಂದು ಕಡೆ ಕಾನೂನು ರೂಪಿಸುವವರ ಮೇಲೆ ಮಾಡುತ್ತಿರುವ ಖರ್ಚು, ಇನ್ನೊಂದು ಕಡೆ ಕಾನೂನು ರೂಪಿಸಲು ಅಧಿವೇಶನಗಳನ್ನು ನಡೆಸುವ ಸಲುವಾಗಿ ಮಾಡುತ್ತಿರುವ ಖರ್ಚು. ಎರಡನ್ನೂ ತೆರಿಗೆದಾರ ಭರಿಸುತ್ತಾನೆ. ಆದರೆ, ಅಧಿವೇಶನಗಳೂ ರಾಜಕೀಯ ಬೇಳೆ ಬೇಯಿಸಿಕೊಳ್ಳುಲು ಕೆಲವೊಮ್ಮೆ ಬಳಕೆಯಾಗುತ್ತವೆ. ಅಧಿವೇಶನಗಳ ಅಮೂಲ್ಯ ಸಮಯ ವ್ಯರ್ಥವಾಗುತ್ತಿರುತ್ತದೆ. ಕಳೆದ ಒಂದು ದಶಕದಲ್ಲಿ ಸರಾಸರಿ ಶೇ. 49ರಷ್ಟು ಅಧಿವೇಶನ ಸಮಯ ಹಾಳಾಗಿದೆ ಎಂದು ಕೆಲವು ಸಮೀಕ್ಷೆಗಳು ಹೇಳುತ್ತಿವೆ.

 

Top