An unconventional News Portal.

ಕರ್ನಾಟಕ ವಿಕಾಸಕ್ಕೆ ಎರಡು ಪ್ರತಿಮೆಗಳು; ಯಡಿಯೂರಪ್ಪ- ಮೋದಿ: ಮಹದಾಯಿ ಮರೆತ ಪ್ರಧಾನಿ ‘ಬಜೆಟ್ ಭಾಷಣ’!

ಕರ್ನಾಟಕ ವಿಕಾಸಕ್ಕೆ ಎರಡು ಪ್ರತಿಮೆಗಳು; ಯಡಿಯೂರಪ್ಪ- ಮೋದಿ: ಮಹದಾಯಿ ಮರೆತ ಪ್ರಧಾನಿ ‘ಬಜೆಟ್ ಭಾಷಣ’!

ಪ್ರತಿಪಕ್ಷ ಬಿಜೆಪಿ ಒಂದು ವೇಳೆ ಅಧಿಕಾರಕ್ಕೆ ಬಂದರೆ, ಬಿ. ಎಸ್. ಯಡಿಯೂರಪ್ಪ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗುವುದು ನಿಚ್ಚಳವಾಗಿದೆ.

ಕಳೆದ 75 ದಿನಗಳ ಕಾಲ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಿಬಂದ ಪಕ್ಷದ ರಾಜ್ಯಾಧ್ಯಕ್ಷರ ಶ್ರಮಕ್ಕೆ ‘ಒಡೆದ ಮನೆ’ಯಲ್ಲಿ ಮೊದಲ ಹಂತದ ಬಲ ಸಿಕ್ಕಂತಾಗಿದೆ. ಒಂದು ಕಾಲದ ಆತ್ಮೀಯ, ನಂತರ ಪಕ್ಷದೊಳಗೇ ವಿರೋಧಕ್ಕೆ ವೇದಿಕೆ ಸಿದ್ಧಪಡಿಸಿದ ಕೆ. ಎಸ್. ಈಶ್ವರಪ್ಪ ಕೂಡ, ನಮ್ಮ ಮುಂದಿನ ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಘೋಷಿಸಿದರು. ಇತರೆ ಬಿಜೆಪಿ ನಾಯಕರೂ ಈ ಕುರಿತು ಸ್ಥೂಲವಾಗಿ ಪರಿಚಯಿಸಿದರು. ಅದಕ್ಕಿಂತ ಹೆಚ್ಚಾಗಿ ಭಾನುವಾರ ವೀಕೆಂಡ್ ಸ್ಪೆಷಲ್ ರೀತಿಯಲ್ಲಿ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ, ಯಡಿಯೂರಪ್ಪ ಅವರ ಸ್ಥಾನ ಅಬಾಧಿತ ಎಂಬುದನ್ನು ಮತ್ತೊಮ್ಮೆ ಖಾತ್ರಿಪಡಿಸಿ ಹೋಗಿದ್ದಾರೆ. ಅಷ್ಟರ ಮಟ್ಟಿಗೆ, ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ, ರಾಜ್ಯ ಬಿಜೆಪಿ ಒಳಗಿದ್ದ ನಾಯಕತ್ವದ ಬಗೆಗಿನ ಗೊಂದಲ ನಿವಾರಿಸಿದೆ.

ಕಳೆದ ವರ್ಷದ ನವೆಂಬರ್ ತಿಂಗಳ ಆರಂಭದಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಚಾಲನೆ ಸಿಕ್ಕಿತ್ತು. ಆರಂಭದ ವೈಫಲ್ಯಗಳಿಂದಾಗಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬದಲಾಗಬಹುದೆಂಬ ಅನುಮಾನಗಳಿದ್ದವು. ಈ ಅನುಮಾನದ ನಡುವೆಯೇ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಖುದ್ದು ಮೋದಿ ಅವರೇ ಯಾತ್ರೆಯ ಸಮಾರೋಪ ಭಾಷಣದಲ್ಲಿ “ಯಡಿಯೂರಪ್ಪ ಅವರನ್ನು ಗೆಲ್ಲಿಸಿ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಅಭ್ಯರ್ಥಿ ಬದಲಾವಣೆಯ ಚರ್ಚೆಗೆ ಅಂತ್ಯ ಹಾಡಿದ್ದಾರೆ.

ಇದರ ಜತೆಗೆ, ನಿರೀಕ್ಷೆಯಂತೆಯೇ ಕಾಂಗ್ರೆಸ್ ಸರಕಾರವನ್ನು ಟೀಕಿಸಿರುವ ಪ್ರಧಾನಿ ಮೋದಿ, “ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ’10 ಪರ್ಸೆಂಟ್’ ಟ್ಯಾಗ್ಲೈನ್ ಕೊಟ್ಟು ಹೋಗಿದ್ದಾರೆ. ಆರಂಭದಿಂದಲೂ ಬಿಜೆಪಿ ರಾಜ್ಯ ಸರಕಾರವನ್ನು ಭ್ರಷ್ಟ ಸರಕಾರ ಎಂದು ಮೊದಲಿಸುತ್ತಲೇ ಬಂದಿತ್ತು. ರಾಷ್ಟ್ರಾಧ್ಯಕ್ಷ ಅಮಿತ್ ಶಾ, ನೇರವಾಗಿಯೇ ದಾಳಿ ನಡೆಸಿದ್ದರಾದರೂ, ವೈಯಕ್ತಿಕ ಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಚಾರಿತ್ರ್ಯವನ್ನು ಹಣಿಯುವ ದಾಖಲೆಗಳನ್ನು ಒದಗಿಸಲು ಸೋತು ಹೋಗಿದ್ದರು. ಇದೀಗ ಪ್ರಧಾನಿ ಮೋದಿ, ‘ಇದು 10% ಸರಕಾರ’ ಎನ್ನುವ ಮೂಲಕ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ.

ಕನ್ನಡದ ಮಾತಿನ ಮೂಲಕ ಭಾಷಣ ಆರಂಭಿಸಿದ ಮೋದಿ ಬಜೆಟ್ ಘೋಷಣೆಗಳ ಪುನರಾವರ್ತನೆ ಮಾಡಿದರು. ಮಹದಾಯಿ ನದಿ ನೀರಿನ ವಿಚಾರದಲ್ಲಿ ಮೋದಿ ಮೌನ ಮುರಿಯಬಹುದೆಂಬ ನಿರೀಕ್ಷೆ ಹುಸಿಯಾಯಿತು. ಸಮಾರೋಪ ಸಮಾರಂಭದಲ್ಲಿ ಮೋದಿ ಮಾತು ಕೇವಲ ಕಾಂಗ್ರೆಸ್ ಹಣಿಯಲು ಹಾಗೂ ಬಜೆಟ್ ಘೋಷಣೆಗಳನ್ನು ವಿವರಿಸಲು ಸೀಮಿತವಾಯಿತು. ಮೈಸೂರಿನಲ್ಲಿ ಜನವರಿ 25ರಂದು ನಡೆದಿದ್ದ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ ಮಹದಾಯಿ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. ಹೀಗಾಗಿ ಮೋದಿ ಅವರಾದರೂ ಭಾನುವಾರದ ಸಮಾರಂಭದಲ್ಲಿ ಮಹದಾಯಿ ವಿಚಾರ ಪ್ರಸ್ತಾಪಿಸಬಹುದೆಂಬ ನಿರೀಕ್ಷೆ ಹೆಚ್ಚಾಗಿತ್ತು. ಆದರೆ, ಮಹದಾಯಿ ವಿಚಾರದಲ್ಲಿ ಮೋದಿ ಮೌನ ಮುಂದುವರಿದಿದೆ.

“ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ” ಎಂದು ಹೇಳುವ ವೇಳೆ ಮೋದಿ ಬಿಜೆಪಿ ಕಾರ್ಯಕರ್ತರ ಕೊಲೆಗಳನ್ನು ಪ್ರಸ್ತಾಪಿಸಿದರು. “ಬಿಜೆಪಿ ಕಾರ್ಯಕರ್ತರ ಕೊಲೆಗಳಿಗೆ ಬದಲಾಗಿ ಕಾಂಗ್ರೆಸ್ ಗೆ ಸೋಲಿನ ಪಾಠ ಕಲಿಸಿ” ಎಂದರು. ಒಂದು ಕಡೆ ಮಹದಾಯಿ ಸಮಸ್ಯೆ ಕುರಿತು ಪ್ರಸ್ತಾಪಿಸಲು ಮರೆತ ಪ್ರಧಾನಿ, ಹಿಂದೂ ಕಾರ್ಯಕರ್ತರ ಕೊಲೆಯ ಕುರಿತೂ ಒಂದು ಸಾಲಿನ ಪ್ರತಿಕ್ರಿಯೆಗೆ ಸೀಮಿತರಾಗಿದ್ದು ಗಮನ ಸೆಳೆಯುವಂತಿತ್ತು. ಇದರ ಜತೆಗೆ, ರೈಲ್ವೆ ಯೋಜನೆಗಳು, ಹೆದ್ದಾರಿ ನಿರ್ಮಾಣ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಮಾರುಕಟ್ಟೆಗಳ ಅಭಿವೃದ್ಧಿ, ಆಪರೇಷನ್ ಗ್ರೀನ್, ಬೆಂಗಳೂರಿಗೆ ಉಪ ನಗರ ರೈಲು ಯೋಜನೆ – ಹೀಗೆ ಬಜೆಟ್ ನಲ್ಲಿ ಪ್ರಸ್ತಾಪವಾದ ಪ್ರಮುಖ ಅಂಶಗಳನ್ನೇ ಮೋದಿ ಭಾಷಣ ಒಳಗೊಂಡಿತ್ತು.

“ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ರೂ. 73,000 ಕೋಟಿ ಅನುದಾನ ನೀಡಿತ್ತು. ಆದರೆ, ನಮ್ಮ ಸರ್ಕಾರ ರೂ. 2 ಲಕ್ಷ ಕೋಟಿ ಅನುದಾನ ನೀಡಿದೆ. ಆದರೆ, ನೀಡಿರುವ ಅನುದಾನವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ,” ಎಂದ ಮೋದಿ ಕರ್ನಾಟಕದ ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರ ಸರ್ಕಾರ ಒತ್ತು ನೀಡಿದೆ ಎಂಬ ವಿಷಯಗಳನ್ನೇ ಪ್ರಮುಖವಾಗಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

“ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪರ್ಸೆಂಟೇಜ್ ಸರ್ಕಾರ. ಇಲ್ಲಿ ಎಲ್ಲಾ ಕೆಲಸಗಳಿಗೂ 10 ಪರ್ಸೆಂಟ್ ಕೊಡಬೇಕು. ಕಮಿಷನ್ ಇಲ್ಲದೆ ಇಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು” ಎಂದು ಹೇಳಿದ ಮೋದಿ ಭಾಷಣದ ಕೊನೆಗೂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರಕ್ಕೆ ಮತ ನೀಡಿ ಎಂದರು.

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮೋದಿ ಭಾಷಣಕ್ಕೂ ಮುನ್ನಾ ಮಾತನಾಡಿದ ರಾಜ್ಯ ಬಿಜೆಪಿ ಮುಖಂಡರು “ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಮತ ನೀಡಿ” ಎಂದು ಜನರಲ್ಲಿ ಮನವಿ ಮಾಡಿದರು. ತಮ್ಮ ಭಾಷಣದ ಉದ್ದಕ್ಕೂ ಯಡಿಯೂರಪ್ಪ, ಮೋದಿ ಅವರನ್ನು ಓಲೈಸುವ ಪ್ರಯತ್ನವನ್ನು ಮಾಡಿದರು. ಇದಕ್ಕಾಗಿ ಅವರು ತಮ್ಮ ಭಾಷಣವನ್ನು ಹಿಂದಿ ಮತ್ತು ಇಂಗ್ಲಿಷ್ ಕಡೆಗೂ ಹರಿಸಿದರು. “ಜಗತ್ತನ್ನೇ ಆಳುವ ನಾಯಕ ಭಾರತದಿಂದ ಬರುತ್ತಾನೆ ಎಂದು ನಾಸ್ಟ್ರಡಾಮಸ್ ಭವಿಷ್ಯ ನುಡಿದಿದ್ದ. ಆ ಭವಿಷ್ಯವಾಣಿ ಮೋದಿ ಅವರ ಮೂಲಕ ನಿಜವಾಗಿದೆ” ಎಂದು ಯಡಿಯೂರಪ್ಪ ಮೋದಿ ಅವರನ್ನು ‘ನಕಲಿ ಉಪಮೇಯ’ವೊಂದನ್ನು ನೀಡುವ ಮೂಲಕ ಹೊಗಳಿಕೆಗೆ ಸೀಮಿತರಾದರು.

ರಾಜ್ಯದಲ್ಲಿ ಈಗಲೇ ಚುನಾವಣೆ ನಡೆದರೆ, ಶೇ. 5ರಿಂದ 10ರಷ್ಟು ಮತಗಳನ್ನು ಮೋದಿ ಒಬ್ಬರೇ ತರಬಹುದು ಎಂಬುದು ಒಂದು ಅಂದಾಜು. ಅದಕ್ಕಾಗಿಯೇ ಮೋದಿ ಆಗಮನದ ಸಮಯದಲ್ಲಿ ನೆರೆದಿದ್ದ ಜನರ ಬಾಯಲ್ಲಿ, ‘ಮೋದಿ ಮೋದಿ’ ಎಂಬ ಘೋಷಣೆ ಕೂಗಿಸಲು ವಿಫಲ ಪ್ರಯತ್ನಗಳು ನಡೆದವು. ಕೊನೆಗೆ, ‘ಕರ್ನಾಟಕದ ವಿಕಾಸಕ್ಕೆ ಹೊಸ ಜೋಡಿ- ಅದು ಯಡಿಯೂರಪ್ಪ ಮೋದಿ’ ಎಂಬ ಹೊಸ ಘೋಷಣೆಯನ್ನು ತೂರಿ ಬಿಡುವ ಕೆಲಸ ಆಯಿತಾದರೂ, ಹೆಚ್ಚು ಗಮನ ಸೆಳೆಯಲಿಲ್ಲ.

ಸಮಾರೋಪ ಸಮಾರಂಭದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಆದರೆ, “ಮೋದಿ ಮೋದಿ” ಘೋಷಣೆಗೆ ಜನರ ಸ್ಪಂದನೆ ಹೆಚ್ಚಾಗಿರಲಿಲ್ಲ. ಮೋದಿ ಸಮಾರಂಭದ ವೇದಿಕೆಗೆ ಆಗಮಿಸುತ್ತಿದ್ದ ವೇಳೆ ಬಿಜೆಪಿ ಮುಖಂಡರು “ಮೋದಿ, ಮೋದಿ” ಘೋಷಣೆ ಮೂಲಕ ನೆರೆದಿದ್ದ ಜನರನ್ನು “ಮೋದಿ” ಘೋಷಣೆಗೆ ಉತ್ತೇಜಿಸಲು ಪ್ರಯತ್ನಿಸಿದರು. ಆದರೆ, ಸೇರಿದ್ದ ಜನರ ಸಂಖ್ಯೆಗೆ ಹೋಲಿಸಿದರೆ “ಮೋದಿ ಮೋದಿ” ಘೋಷಣೆಯ ಸದ್ದು ಕಡಿಮೆ ಇತ್ತು. ಮೋದಿ ಭಾಷಣ ಮುಗಿಸಿ ವೇದಿಕೆಯಿಂದ ತೆರಳುವ ವೇಳೆಯೂ ಬಿಜೆಪಿ ಮುಖಂಡರ “ಮೋದಿ ಮೋದಿ” ಘೋಷಣೆಗೆ ಸರಿಯಾದ ಪ್ರತಿಧ್ವನಿ ಜನರಿಂದ ಸಿಗಲಿಲ್ಲ. ಮೋದಿ ಭಾಷಣ ಮುಗಿಯುತ್ತಿದ್ದಂತೆ ಜನರೂ ಅರಮನೆ ಮೈದಾನದಿಂದ ಹೊರ ನಡೆಯಲು ಮುಂದಾದರು.

ಇದಕ್ಕೂ ಮುಂಚೆ, ಭಾನುವಾರ ಬೆಳಗ್ಗೆಯಿಂದಲೇ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಪರಿವರ್ತನಾ ಯಾತ್ರೆಯ ಸಮಾರಂಭದ ದೃಶ್ಯಗಳು ನಿರಂತರವಾಗಿ ಪ್ರಸಾರವಾದವು. ಮೋದಿ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯುವುದು, ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಅರಮನೆ ಮೈದಾನಕ್ಕೆ ಆಗಮನಿಸುವುದು ಹೀಗೆ ಎಲ್ಲಾ ದೃಶ್ಯಗಳು ನೇರ ಪ್ರಸಾರಗೊಂಡವು. ಎಲ್ಲಾ ವಾಹಿನಿಗಳಲ್ಲೂ ಅದದೇ ದೃಶ್ಯಗಳು ‘ಎಕ್ಸ್ಕ್ಲೂಸಿವ್’ ಹೊದಿಕೆ ಹೊದ್ದುಕೊಂಡು ಪ್ರಸಾರವಾಗಿದ್ದು ವಿಶೇಷವಾಗಿತ್ತು. ಹೀಗೆ, ಚುನಾವಣಾ ರ್ಯಾಲಿಗಳನ್ನು ಪಕ್ಷವೇ ಮುಂದೆ ನಿಂತ ವಾಹಿನಿಗಳಿಗೆ ಲೈವ್ ಫೀಡ್ ಕೊಡುವ ಸಂಪ್ರದಾಯವನ್ನು ಮೊದಲು ಆರಂಭಿಸಿದವರು ಪಕ್ಕದ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್ ನಾಯಕ ವೈಎಸ್ಆರ್ ರಾಜಶೇಖರ್ ರೆಡ್ಡಿ. ಭಾನುವಾರ ಕೂಡ, ಬಿಜೆಪಿ ಕೂಡ ತಾಂತ್ರಿಕ ಅಡಚಣೆಗಳನ್ನು ಮೀರಿ ಎಲ್ಲಾ ವಾಹಿನಿಗಳಿಗೆ ಲೈವ್ ಫೀಡ್ ಕೊಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆ. ಇದರ ಜತೆಗೆ, ಸಾಮಾನ್ಯವಾಗಿ ಕನ್ನಡದ ಸುದ್ದಿವಾಹಿನಿಗಳ ಯೂ-ಟ್ಯೂಬ್ ಲೈವ್ ವೀಕ್ಷಣೆ ಇವತ್ತು 10 ಪಟ್ಟು ಹೆಚ್ಚಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಯ ಜನ, ನಮ್ಮಲ್ಲಿ ವಿದ್ಯುತ್ ವ್ಯತ್ಯಯವಾಗಿದೆ ಎಂದು ದೂರುತ್ತಿದ್ದದ್ದು ಕಂಡು ಬಂತು.

‘ನಂ.1’ ಟ್ವೀಟ್ ಜಟಾಪಟಿ:

ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, “ದೇಶದ ನಂಬರ್ 1 ರಾಜ್ಯಕ್ಕೆ ಸ್ವಾಗತ” ಎಂದು ಟ್ವೀಟ್ ಮಾಡಿದ್ದರು. “ಹೂಡಿಕೆ, ಆವಿಷ್ಕಾರ ಮತ್ತು ಅಭಿವೃದ್ಧಿ ನೀತಿಗಳಲ್ಲಿ ಮೊದಲ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಸ್ವಾಗತ. ಹಲವು ಅಭಿವೃದ್ಧಿ ಮಾದರಿಗಳ ಮೂಲಕ ನಾವು ದೇಶದ ಹಲವು ವಲಯಗಳಲ್ಲಿ ನಂ.1 ಸ್ಥಾನದಲ್ಲಿದ್ದೇವೆ. ಕರ್ನಾಟಕದ ಈ ಯಶಸ್ಸು ದೇಶಕ್ಕೆ ಹೆಮ್ಮೆ ತರುವಂಥದ್ದು. ಮಹದಾಯಿ ವಿವಾದ ಬಗೆಹರಿಸಿ ಕರ್ನಾಟಕದ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕು ಎಂದು ರಾಜ್ಯದ ಜನರ ಪರವಾಗಿ ಆಗ್ರಹಿಸುತ್ತೇನೆ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕವೆ ತಿರುಗೇಟು ನೀಡಿದ್ದ ಯಡಿಯೂರಪ್ಪ, “ಸಿದ್ದರಾಮಯ್ಯ ಅವರೆ ನಿಮ್ಮ ಸ್ವಾಗತಕ್ಕೆ ಧನ್ಯವಾದ. ಕರ್ನಾಟಕ ಹಲವು ಪ್ರಥಮಗಳನ್ನು ತನ್ನದಾಗಿಸಿಕೊಂಡಿದೆ. ನಂ.1 ಭ್ರಷ್ಟ ರಾಜ್ಯ, 3,500ಕ್ಕೂ ಹೆಚ್ಚು ರೈತರ ಆತ್ಮಹತ್ಯೆ, ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯ, ಅಧಿಕಾರಿಗಳ ನಿಗೂಢ ಸಾವುಗಳು, ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ, ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಯ ಕಡೆಗಣನೆ- ಇಂತಹ ಹಲವು ಕಾರಣಗಳಿಗೆ ಕರ್ನಾಟಕ ನಂ.1 ಆಗಿದೆ” ಎಂದು ಟ್ವೀಟಿಸಿದ್ದರು. ಮೋದಿ ಅವರ ಭಾಷಣದಲ್ಲೂ ಬಹುತೇಕ ಇವೇ ವಿಷಯಗಳು ಪ್ರಸ್ತಾವಗೊಂಡವು.

ಟ್ವೀಟ್ ಮೂಲಕ ಮಾತ್ರವಲ್ಲದೆ ಮೋದಿ ಅವರಿಗೆ ಸ್ವಾಗತ ಕೋರಿ ಬಿಜೆಪಿ ಹಾಕಿರುವ ಹೋಲ್ಡಿಂಗ್ ಗಳ ಹತ್ತಿರದಲ್ಲೇ ಸಿದ್ದರಾಮಯ್ಯ ಚಿತ್ರವಿರುವ ‘ನಂ.1 ರಾಜ್ಯಕ್ಕೆ ಸ್ವಾಗತ’ ಎಂಬ ಹೋಲ್ಡಿಂಗ್ ಗಳನ್ನೂ ಹಾಕಲಾಗಿತ್ತು. ಈ ಮೂಲಕ ಕಾಂಗ್ರೆಸ್ ಬಿಜೆಪಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿತ್ತು.

ಹೋರಾಟಗಾರರ ಕರಾಳ ದಿನ; ಯುವಕರ ಪಕೋಡಾ:

ಮಹದಾಯಿ ವಿಚಾರವಾಗಿ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದ ಕಾರ್ಯಕರ್ತರು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಿಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ ಅರಮನೆ ಮೈದಾನದತ್ತ ಹೊರಟಿದ್ದ ಕನ್ನಡ ಒಕ್ಕೂಟದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇತ್ತ ಮೋದಿ ಕಾರ್ಯಕ್ರಮ ಆಯೋಜನೆಯಾಗಿದ್ದ ಅರಮನೆ ಮೈದಾನದ ಬಳಿಯ ಮೇಖ್ರಿ ವೃತ್ತದಲ್ಲಿ ಸುಮಾರು 10 ಮಂದಿ ಯುವಕರು ಮೋದಿ ಪಕೋಡಾ ಹೇಳಿಕೆ ವಿರೋಧಿಸಿ ಪಕೋಡಾ ಹಂಚಿದರು. “ಪಕೋಡಾ ಮಾರುವುದು ಉದ್ಯೋಗ” ಎಂಬ ಮೋದಿ ಹೇಳಿಕೆ ವಿರೋಧಿಸಿ ಈ ಯುವಕರು ಪರಿವರ್ತನಾ ಯಾತ್ರೆಗೆ ಬಸ್ ಗಳಲ್ಲಿ ಬಂದಿದ್ದ ಬಿಜೆಪಿ ಕಾರ್ಯಕರ್ತರಿಗೇ ಪಕೋಡಾ ಹಂಚಿದರು. ಪದವಿ ಪ್ರದಾನದ ಗೌನ್ ಧರಿಸಿ ಪಕೋಡಾ ಹಂಚುತ್ತಿದ್ದ ಈ ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಯಡಿಯೂರಪ್ಪ ವಿಡಿಯೋ:

ಇದರ ನಡುವೆಯೇ, ಕಾಂಗ್ರೆಸ್ ಐಟಿ ಸೆಲ್ ಹೊಸ ವಿಡಿಯೋ ಒಂದನ್ನು ಟ್ವಟರ್ನಲ್ಲಿ ತೇಲಿ ಬಿಟ್ಟಿದೆ. ಯಡಿಯೂರಪ್ಪ ನಾಯಕತ್ವವವನ್ನು ಪ್ರಶ್ನೆ ಮಾಡುವ ಈ ವಿಡಿಯೋ, ಬಿಜೆಪಿ ಅಧಿಕಾರದಲ್ಲಿ ಇದ್ದ ಸಮಯದಲ್ಲಿ ನಡೆದ ಆಡಳಿತಾತ್ಮಕ ವಿಫಲತೆಗಳನ್ನು ಪಟ್ಟಿ ಮಾಡಿದೆ.

Leave a comment

Top