An unconventional News Portal.

‘ಆಹಾರ ರಾಜಕೀಯ’: ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳು ಮಾಂಸದೂಟ ಮಾಡಿದ್ದಕ್ಕೆ ವಿರೋಧ!

‘ಆಹಾರ ರಾಜಕೀಯ’: ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಕ್ಕಳು ಮಾಂಸದೂಟ ಮಾಡಿದ್ದಕ್ಕೆ ವಿರೋಧ!

ಸದ್ಯ ನಡೆಯುತ್ತಿರುವ ‘ಆಹಾರ ರಾಜಕೀಯ’ಕ್ಕೆ ಇತ್ತೀಚಿಗೆ ಬೆಂಗಳೂರಿನ ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ಖಾಸಗಿ ಶಾಲೆಯಲ್ಲಿ ನಡೆದ ಅಪರೂಪದ ಘಟನೆಯೊಂದು ಸೇರ್ಪಡೆಯಾಗಿದೆ.

ಟ್ರಸ್ಟ್ ಒಂದರ ಅಡಿಯಲ್ಲಿ ನಡೆಸಲಾಗುತ್ತಿರುವ ಈ ಶಾಲೆಯಲ್ಲಿ ಪ್ರತಿ ಬುಧವಾರ ‘ಕಮ್ಯುನಿಟಿ ಲಂಚ್’ ಹೆಸರಿನಲ್ಲಿ ಮಕ್ಕಳೇ ಕೂಡಿ ಅಡುವೆ ಮಾಡುವ ಚಟುವಟಿಕೆಯೊಂದನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಅಗರ್ಭ ಶ್ರೀಮಂತರ ಮಕ್ಕಳೇ ಕಲಿಯುವ ಈ ಶಾಲೆಯಲ್ಲಿ ಬಡ ವರ್ಗದ ಮಕ್ಕಳಿಗೂ ಸಬ್ಸಿಡಿ ದರದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಎಲ್ಲಾ ಮಕ್ಕಳು ಒಟ್ಟಿಗೆ ಅಡುಗೆ ಮಾಡಿ ಊಟ ಮಾಡುವ ಮೂಲಕ ಮಕ್ಕಳಲ್ಲಿ ಅಸಮಾನತೆಯ ಕಂದಕವನ್ನೂ ಮುಚ್ಚುವ ಪ್ರಯತ್ನವೊಂದು ಜಾರಿಯಲ್ಲಿದೆ.

ಹೀಗಿರುವಾಗ, ಕೆಲವು ದಿನಗಳ ಹಿಂದೆ 9 ನೇ ತರಗತಿಯ ಮಕ್ಕಳು, ಅವರ ಇಚ್ಚೆಯ ಮೇರೆಗೆ ಮಾರುಕಟ್ಟೆಯಲ್ಲಿ ಕೋಳಿ ಮಾಂಸವನ್ನು ಖರೀದಿಸಿ ತಂದಿದ್ದಾರೆ. ಹಾಗೆಯೇ ಅಡುಗೆಯನ್ನೂ ಮಾಡಿ ಸಹಪಂಕ್ತಿ ಭೋಜನವನ್ನು ಮಾಡಿದ್ದಾರೆ. ಅದರಲ್ಲಿ ಎಲ್ಲ ಮಕ್ಕಳು ಭಾವಹಿಸಿ ಮನೆಗೆ ಹೋಗಿದ್ದಾರೆ. “ಇದಾದ ಎರಡು ದಿನಗಳ ನಂತರ ಒಬ್ಬರು ವಿಜ್ಞಾನಿ ಮತ್ತೊಬ್ಬರು ಪೈಲಟ್ ಶಾಲೆಯಲ್ಲಿ ಮಾಂಸಾಹಾರ ಮಾಡಿರುವುದನ್ನು ವಿರೋಧಿಸಿ ಇ- ಮೇಲ್ ಕಳುಹಿಸಿದರು,” ಎಂದು ವಿವಾದ ಹುಟ್ಟಿಕೊಂಡ ಬಗೆಯನ್ನು ಶಾಲೆಯ ಮೂಲಗಳು ‘ಸಮಾಚಾರ’ಕ್ಕೆ ವಿವರಿಸಿದರು.

ಮಾಂಸಾಹಾರಕ್ಕೆ ವಿರೋಧ: 

“ಶಾಲೆಯಲ್ಲಿ ಮಕ್ಕಳ ಕೈಲಿ ಮಾಂಸಾಹಾರ ಅಡುಗೆ ಮಾಡಿಸಿರುವುದು ಸರಿಯಲ್ಲ. ನಮ್ಮ ಮಕ್ಕಳಿಗೆ ನಾವು ಮನೆಯಲ್ಲಿಯೂ ಮಾಂಸಾಹಾರ ನೀಡುವುದಿಲ್ಲ. ಹೀಗಾಗಿ ಕಮ್ಯುನಿಟಿ ಲಂಚ್ ಚಟುವಟಿಕೆಯಲ್ಲಿ ಮಾಂಸಾಹಾರವನ್ನು ಮಾಡುವಂತಿಲ್ಲ,” ಎಂದು ಇಬ್ಬರು ಪೋಷಕರು ದೂರಿದ್ದಾರೆ ಎಂದು ಮೂಲಗಳು ಹೇಳುತ್ತವೆ. ಅವತ್ತಿನ ದಿನ ಸಸ್ಯಹಾರಕ್ಕೂ ವ್ಯವಸ್ಥೆ ಇತ್ತು. ಮಕ್ಕಳು ಅವರವರ ಇಷ್ಟದ ಆಹಾರವನ್ನು ಸೇವಿಸಿದ್ದಾರೆ ಎಂಬ ಮಾಹಿತಿ ಇದೆ.

ಇದಾದ ನಂತರ ಶಾಲೆಯ ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳನ್ನು ಕರೆದು ಅಭಿಪ್ರಾಯ ನೀಡುವಂತೆ ಕೋರಿದೆ. ಆಗ ಬಹುತೇಕ ಮಕ್ಕಳು ಮಾಂಸಾಹಾರ ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದ್ದಾರೆ. ಜತೆಗೆ, ಬಹುತೇಕ ಪೋಷಕರು ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊನೆಗೆ, ಅದನ್ನು ವಿರೋಧ ವ್ಯಕ್ತಪಡಿಸಿದ ಇಬ್ಬರ ಪೋಷಕರ ಗಮನಕ್ಕೆ ತಂದು, “ನೀವು ಬಹುಸಂಖ್ಯಾತರ ಅಭಿಪ್ರಾಯಕ್ಕೆ ಮನ್ನಣೆ ನೀಡಿ. ಇಲ್ಲವಾದರೆ ನಿಮ್ಮಿಷ್ಟ,” ಎಂದು ತಿಳಿಹೇಳಲಾಗಿದೆ. ಇಷ್ಟಾದರೂ ದಿನಕ್ಕೊಂದು ರೀತಿ ಮೇಲ್ ಬರೆಯುವುದು ನಡೆಯುತ್ತಲೇ ಇದೆ ಎಂದು ಶಾಲೆಯ ಮೂಲಗಳು ಹೇಳುತ್ತವೆ.

ಮೊಟ್ಟೆ ರಾಜಕೀಯ:

egg-midday-meal-1

ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟದ ಜತೆಗೆ ಮೊಟ್ಟೆಯನ್ನು ನೀಡುವ ಪರಿಪಾಠ ರಾಜ್ಯದ ಸರಕಾರಿ ಶಾಲೆಗಳಲ್ಲಿ 2005ರಲ್ಲಿ ಜಾರಿಗೆ ಬಂದಿತ್ತು. ಅದಾದ ಮರುವರ್ಷ ಮೊಟ್ಟೆಯನ್ನು ಮಧ್ಯಾಹ್ನ ಬಿಸಿಊಟದ ಮೆನುವಿನಿಂಧ ಕೈ ಬಿಡಲಾಗಿತ್ತು. ಕೆಲ ದಲಿತ ಸಂಘಟನೆಗಳು ಪೌಷ್ಠಿಕತೆಯ ಕಾರಣಕ್ಕೆ ಮಕ್ಕಳಿಗೆ ಮೊಟ್ಟೆ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದವು. ಆದರೆ, ಸರಕಾರ ಮೊಟ್ಟೆ ನೀಡುವುದನ್ನು ನಿಲ್ಲಿಸಿತ್ತು. 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಮೊಟ್ಟೆ ನೀಡುವ ಕುರಿತು ಮನಸ್ಸು ಮಾಡಿತ್ತು. ಆದರೆ ಅದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಇವತ್ತಿಗೂ ಶಾಲೆ ಮಕ್ಕಳಿಗೆ ಮೊಟ್ಟೆ ಸಿಗಲಿಲ್ಲ.

ಹೀಗೆ, ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಆಹಾರದಲ್ಲಿಯೂ ರಾಜಕೀಯ ನಡೆದಿತ್ತು. ಇದೀಗ ಖಾಸಗಿ ಶಾಲೆಯಲ್ಲಿ ಕೋಳಿ ಮಾಂಸದ ಅಡುಗೆ ಮಾಡಿರುವುದು ಆಂತರಿಕ ವಿವಾದವನ್ನು ಎಬ್ಬಿಸಿದೆ. “ಇದು ನಮ್ಮ ಒಳಗಿನ ವಿಚಾರ. ದಯವಿಟ್ಟು ಇದನ್ನು ಸುದ್ದಿ ಮಾಡಲು ಹೋಗುವುದು ಬೇಡ. ಮಕ್ಕಳು ಯಾವುದು ಇಷ್ಟವೋ ಅದನ್ನು ತಿನ್ನುತ್ತಾರೆ. ಅದರಲ್ಲಿ ಯಾರೂ ರಾಜಕೀಯ ಮಾಡಬಾರದು,” ಎಂದು ಮಾದರಿ ಅಂತಾರಾಷ್ಟ್ರೀಯ ಶಾಲೆಯ ಸಂಸ್ಥಾಪಕಿ ‘ಸಮಾಚಾರ’ಕ್ಕೆ ಪ್ರತಿಕ್ರಿಯಿಸಿದರು.

ಶಾಲೆಯ ಆಂತರಿಕ ವಿಚಾರ ಇನ್ನಷ್ಟು ಬಿಗಡಾಯಿಸಬಾರದು ಎಂಬ ಕಾಳಜಿಯಿಂದ ‘ಸಮಾಚಾರ’ ಶಾಲೆಯ ಹೆಸರು ಹಾಗೂ ಘಟನೆಯಲ್ಲಿರುವ ವ್ಯಕ್ತಿಗಳ ಹೆಸರನ್ನು ಗೌಪ್ಯವಾಗಿಡುತ್ತಿದೆ. ಅದೇ ವೇಳೆ, ಹೀಗೊಂದು ಆಹಾರ ಸುತ್ತ ನಡೆದ ರಾಜಕೀಯದ ಬಗ್ಗೆ ಓದುಗರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಈ ವರದಿಯನ್ನು ಪ್ರಕಟಿಸಲಾಗುತ್ತಿದೆ.

Top