An unconventional News Portal.

‘ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಜಾಗ ಇಲ್ಲ; ಜೂ.4ರ ಪ್ರತಿಭಟನೆ ನಡೆಯುವುದಿಲ್ಲ’: ಜಿ. ಪರಮೇಶ್ವರ್

‘ಶಿಸ್ತಿನ ಇಲಾಖೆಯಲ್ಲಿ ಅಶಿಸ್ತಿಗೆ ಜಾಗ ಇಲ್ಲ; ಜೂ.4ರ ಪ್ರತಿಭಟನೆ ನಡೆಯುವುದಿಲ್ಲ’: ಜಿ. ಪರಮೇಶ್ವರ್

ದುರ್ನಡತೆ, ಭ್ರಷ್ಟಚಾರ ಇನ್ನಿತರೆ ಕಾರಣಗಳಿಂದ ಸೇವೆಯಿಂದ ಅಮಾನತ್ತಾಗಿರುವವರು ಕೆಳ ಹಂತದ ಸಿಬ್ಬಂದಿಯನ್ನು ಪ್ರತಿಭಟನೆ ನಡೆಸುವಂತೆ ಪ್ರಚೋದನೆ ನಡೆಸುತ್ತಿದ್ದಾರೆ. ಇಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು…

ಹೀಗೊಂದು ಹೇಳಿಕೆ ನೀಡಿದವರು ಗೃಹ ಸಚಿವ ಜಿ. ಪರಮೇಶ್ವರ್. ಜೂನ್ 4ರಂದು ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸುವ ವಿಚಾರ ಮುನ್ನೆಲೆಗೆ ಬಂದ ನಂತರ ಮೊದಲ ಬಾರಿಗೆ ಹಿರಿಯ ಅಧಿಕಾರಿಗಳ ಜತೆ ಅವರು ಶನಿವಾರ ಸಭೆ ನಡೆಸಿದರು. ನಂತರ ಮಾಧ್ಯಮಗಳ ಜತೆ ಮಾತನಾಡಿ, “ಶಿಸ್ತಿಗೆ ಹೆಸರಾದ ಇಲಾಖೆಯಲ್ಲಿ ಅಶಸ್ತಿನ ವರ್ತನೆಗಳನ್ನು ಸಹಿಸುವುದಿಲ್ಲ,” ಎಂದು ಎಚ್ಚರಿಕೆ ಸಂದೇಶ ನೀಡಿದರು.

“ಜೂನ್‌ 4ರಂದು ಸಾಮೂಹಿಕವಾಗಿ ರಜೆ ಮೇಲೆ ತೆರಳುವಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪೊಲೀಸರಿಗೆ ಪ್ರಚೋದನೆ ನೀಡಲಾಗುತ್ತಿದೆ. ಇದರ ಮೇಲೆ ನಿಗಾ ಇಡಲಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ,” ಎಂದು ಪರಮೇಶ್ವರ್ ಹೇಳಿದರು.

“ಸಾಮೂಹಿಕವಾಗಿ ರಜೆ ಮೇಲೆ ತೆರಳದಂತೆ ಸಿಬ್ಬಂದಿಯ ಮನವೊಲಿಸುವ ಕೆಲಸವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಮಾಡಿದ್ದಾರೆ. ನಮ್ಮ ಮನವಿಯನ್ನು ಸಿಬ್ಬಂದಿ ಒಪ್ಪಿಕೊಳ್ಳುವ ಭರವಸೆ ಇದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ರಜೆ ಕೋರಿ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಎಷ್ಟು ಜನ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇಲ್ಲ,” ಎಂದರು.

ವೇತನ ಪರಿಷ್ಕರಣೆ:

ನೆರೆಯ ರಾಜ್ಯಗಳಲ್ಲಿ ಪೊಲೀಸರಿಗೆ ಹೆಚ್ಚಿನ ವೇತನ ಇದೆ ಎಂಬ ವಿಚಾರ ಪ್ರತಿಭಟನೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, “ಪಕ್ಕದ ರಾಜ್ಯಗಳಲ್ಲಿರುವ ಪೊಲೀಸರ ವೇತನದ ಮಾಹಿತಿಯನ್ನು ತರಿಸಿಕೊಂಡಿದ್ದೇನೆ. ನಮ್ಮಲ್ಲಿ ಅವರಿಗಿಂತ ಕಡಿಮೆ ಸಂಬಳ ಇದೆ. ಆದರೆ ಕೆಲವು ಆರೋಗ್ಯ ಭಾಗ್ಯ, ಕ್ಯಾಂಟೀನ್ ವ್ಯವಸ್ಥೆ, ವಸತಿ ಮತ್ತು ಶಿಕ್ಷಣಕ್ಕೆ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಇಲಾಖೆಗೆ ಸಿಬ್ಬಂದಿ ಭರ್ತಿ ಕುರಿತು ಕ್ರಮ ಕೈಗೊಳ್ಳಲಾಗಿದೆ,” ಎಂದರು.

“ಪೊಲೀಸ್‌ ಇಲಾಖೆಗೆ ಮಂಜೂರಾಗಿರುವ ಹುದ್ದೆಗಳಲ್ಲಿ 25 ಸಾವಿರ ಹುದ್ದೆಗಳು ಖಾಲಿ ಇವೆ. ಮೂರು ವರ್ಷಗಳಲ್ಲಿ 8,500 ಸಿಬ್ಬಂದಿ ನೇಮಕ ಮಾಡಲಾಗಿದೆ. ಐದೂವರೆ ಸಾವಿರ ಕಾನ್‌ಸ್ಟೆಬಲ್‌ಗಳ ನೇಮಕ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ವರ್ಷ ಹೊಸದಾಗಿ 3,500 ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಲಾಗಿದೆ. ಇನ್ನೂ 15 ಸಾವಿರ ಸಿಬ್ಬಂದಿ ನೇಮಕಕ್ಕೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ನೇಮಕಾತಿ ನಡೆದರೆ ಕೆಲಸದ ಒತ್ತಡ ಕಡಿಮೆಯಾಗಲಿದೆ,” ಎಂದು ಮಾಹಿತಿ ನೀಡಿದರು.

“ಪೊಲೀಸ್‌ ಸಿಬ್ಬಂದಿಗೆ ಈ ವರ್ಷ ಎರಡು ಮಲಗುವ ಕೋಣೆಗಳ 4,800 ಫ್ಲ್ಯಾಟ್‌ ನಿರ್ಮಿಸಲಾಗುವುದು. ಪೊಲೀಸ್‌ ಕ್ಯಾಂಟೀನ್‌ ಮೂಲಕ ಪೂರೈಸುತ್ತಿರುವ ಆಹಾರ ಪದಾರ್ಥಗಳನ್ನು ಮೌಲ್ಯವರ್ಧಿತ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡಲು ಸಾಧ್ಯವಾಗಲಿದೆ,” ಎಂದರು.

Top