An unconventional News Portal.

ದ್ರಾವಿಡ ಗದ್ದುಗೆಗಾಗಿ ಪೈಪೋಟಿ: ನಾಟಕಕ್ಕೆ ಅಂಕ ಸರಿಸಿದ ‘ಅಮ್ಮನ ಆತ್ಮ’ ಮತ್ತು ಓಪಿಎಸ್!

ದ್ರಾವಿಡ ಗದ್ದುಗೆಗಾಗಿ ಪೈಪೋಟಿ: ನಾಟಕಕ್ಕೆ ಅಂಕ ಸರಿಸಿದ ‘ಅಮ್ಮನ ಆತ್ಮ’ ಮತ್ತು ಓಪಿಎಸ್!

ನೆರೆಯ ರಾಜ್ಯ ತಮಿಳುನಾಡಿನಲ್ಲಿ ಕಳೆದ 23 ಗಂಟೆಗಳಿಂದ ನಡೆಯುತ್ತಿರುವ ರಾಜಕೀಯ ಹೈ ಡ್ರಾಮಕ್ಕೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇವತ್ತಿಗೆ ಕಾಣಿಸುತ್ತಿಲ್ಲ.

ಮಂಗಳವಾರ ರಾತ್ರಿ 9 ಗಂಟೆಗೆ ಮರೀನಾ ಬೀಚ್‌ ಪಕ್ಕದಲ್ಲಿ ಸ್ಥಾಪಿತಗೊಂಡಿರುವ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪಕ್ಷದ ಅಧಿನಾಯಕಿ ಜಯಲಲಿತಾ ಸಮಾಧಿ ಸ್ಥಳಕ್ಕೆ ಉಸ್ತುವಾರಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ನಡೆದು ಬಂದರು. ಮಣ್ಣಲ್ಲಿ ಮಣ್ಣಾಗಿ ಹೋಗಿರುವ ಅಮ್ಮನ ಶವದ ಪದತಲದಲ್ಲಿ ಕುಳಿತ ಓಪಿಎಸ್ ಖ್ಯಾತಿಯ ಸೆಲ್ವಂ, ಮುಂದಿನ 40 ನಿಮಿಷಗಳ ಕಾಲ ಮೌನಕ್ಕೆ ಶರಣಾದರು. ಮೊಬೈಲ್ ಕ್ಯಾಮೆರಾಗಳು ನಂತರ ದೃಶ್ಯಮಾಧ್ಯಮಗಳ ಹೈ- ಎಂಡ್ ಕ್ಯಾಮೆರಾಗಳು ಅವರೆಡೆಗೆ ಫೋಕಸ್ ಮಾಡುತ್ತಿದ್ದಂತೆ ಓಪಿಎಸ್ ತಮ್ಮ ಕಣ್ಣಂಚಿನ ನೀರನ್ನು ಒರೆಸಿಕೊಂಡು ಎದ್ದು ಹೊರಬಂದರು.

“ನಾನು ಅಮ್ಮನ ಆತ್ಮದ ಜತೆ ಮಾತನಾಡಿದ್ದೇನೆ. ಅವರು ಪಕ್ಷವನ್ನು ರಕ್ಷಿಸು ಎಂದು ನನ್ನ ಕೈ ಹಿಡಿದುಕೊಂಡು ಕೇಳಿಕೊಂಡಿದ್ದರು. ನನ್ನಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆಯನ್ನು ಪಡೆಯಲಾಗಿದೆ. ಈಗಲೂ ಜನ ಮತ್ತು ಪಕ್ಷದ ಶಾಸಕರು ಒಪ್ಪಿದರೆ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ,” ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಈ ಮೂಲಕ ತಮಿಳುನಾಡಿನ ರಾಜಕೀಯದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಬಹುದೊಡ್ಡ ನಾಕಟವೊಂದರ ಅಂಕದ ಪರದೆಯನ್ನು ಅವರು ಸರಿಸಿದರು.

pannir-selvam-5

ಅಮ್ಮ ಸಮಾಧಿ ಮುಂದೆ ಓ. ಪನ್ನೀರ್ ಸೆಲ್ವಂ.

ಹೀಗೆ, ಪನ್ನೀರ್ ಸೆಲ್ವಂ ನೀಡಿದ ಅನಿರೀಕ್ಷಿತ ತಿರುವಿನ ಮೂಲಕ ಆರಂಭವಾಗಿರುವ ಇಲ್ಲಿನ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮುನ್ನಾರ್‌ಗುಡಿಯ ಚಿನ್ನಮ್ಮ ಕೂಡ ‘ಸಂಘರ್ಷ’ದ ನಡುವೆಯೇ ಎಐಎಡಿಎಂಕೆ ಪಕ್ಷದ ಮುಂದಿನ ಅಧಿನಾಯಕಿ ತಾನು ಎಂದು ಸಾರಿ ಹೇಳಲು ಹೊರಟಿದ್ದಾರೆ. ರಾಜ್ಯಪಾಲ ವಿದ್ಯಾಸಾಗರ್ ರಾವ್‌ ತೆಗೆದುಕೊಳ್ಳದ ಸಾಂವಿಧಾನಿಕ ನಡೆಗಳು ಅನುಮಾನಗಳನ್ನು ಹುಟ್ಟು ಹಾಕಿವೆ. ತಮಿಳುನಾಡಿನಲ್ಲಿ ಖಾತೆಯನ್ನೂ ತೆರೆಯಲು ಸಾಧ್ಯವಾಗದ ಬಿಜೆಪಿಯ ಹಿಂಬಾಗಿಲ ರಾಜಕೀಯದ ನಡೆಗಳಿವು ಎಂಬ ವಿಶ್ಲೇಷಣೆಗಳು ಶುರುವಾಗಿವೆ. ಹೀಗಿರುವಾಗಲೇ, ಚೆನ್ನೈನ ಮರೀನಾ ಬೀಚಿನಲ್ಲಿ ಸೂರ್ಯ ಮುಳುಗಿದ್ದಾನೆ. ಆದರೆ ದ್ರಾವಿಡ ಚಳವಳಿ ಹೂರಣವನ್ನು  ಮೈಗೂಡಿಸಿಕೊಂಡು ಬೆಳೆದು ಬಂದ  ರಾಜಕೀಯ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿವೆ.

ಚಿನ್ನಮ್ಮ ನಡೆಗಳು:

ಒಂದು ಕಡೆ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಭೇಟಿ ಮಾಡಿ ಬಂದ ಪನ್ನೀರ್ ಸೆಲ್ವಂ ಅಮ್ಮನ ಆತ್ಮದ ಹೆಸರಿನಲ್ಲಿ ರಾಜಕೀಯ ದಾಳ ಉರುಳಿಸುತ್ತಿದ್ದ ಹಾಗೆ ಮುಖ್ಯಮಂತ್ರಿ ಖುರ್ಚಿಯತ್ತ ಕಣ್ಣಿಟ್ಟಿರುವ ಶಶಿಕಲಾ ನಟರಾಜನ್ ಕೂಡ ಪಕ್ಷದೊಳಗಿನ ತಮ್ಮ ಬಲ ಪ್ರದರ್ಶನಕ್ಕೆ ಮುಂದಾದರು. ಜಯಲಲಿತಾ ನಿವಾಸವಾಗಿದ್ದ ಪಿಯುಸ್ ಗಾರ್ಡನ್ ಮನೆಯಲ್ಲಿ ತುರ್ತು ಸಭೆ ಕಡೆದರು. ಮೂರು ಗಂಟೆಗಳು ಸುದೀರ್ಘ ಸಭೆಯ ನಂತರ ಓಪಿಎಸ್‌ರನ್ನು ಪಕ್ಷದ ಖಜಾಂಚಿ ಸ್ಥಾನದಿಂದ ಕಿತ್ತುಹಾಕಿದರು. ಜತೆಗೆ ಇದು ಪ್ರತಿಪಕ್ಷ ಡಿಎಂಕೆ ಪಕ್ಷ ನಡೆಸುತ್ತಿರುವ ಕುತಂತ್ರ ಎಂದು ಆರೋಪಿಸಿದರು. ಇದಕ್ಕೆ ಅರ್ಧರಾತ್ರಿಯಲ್ಲಿ ಪ್ರತಿಕ್ರಿಯೆ ನೀಡಿದ ಪನ್ನೀರ್ ಸೆಲ್ವಂ, “ನನ್ನ ನೇಮಕಾತಿ ಮಾಡಿದ್ದು ಅಮ್ಮ. ಅವರನ್ನು ಬಿಟ್ಟರೆ ಇನ್ಯಾರು ಕಿತ್ತುಹಾಕಲು ಸಾಧ್ಯವಿಲ್ಲ,” ಎಂದರು.

ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಓಪಿಎಸ್‌ಗೆ ಭರ್ಜರಿ ಬೆಂಬಲ ಸಿಗತೊಡಗಿತು. ಚೆನ್ನೈನ ಅವರ ನಿವಾಸದ ಮುಂದೆಯೂ ಜನ ನೆರೆಯತೊಡಗಿದರು. ಮತ್ತೊಂದೆಡೆ ಶಶಿಕಲಾ ಪಕ್ಷದ ಶಾಸಕರನ್ನು ತನ್ನಡೆಗೆ ಸೆಳೆದುಕೊಳ್ಳುವ ತಂತ್ರಕ್ಕೆ ಮೊರೆಹೋದರು. ಒಬ್ಬರು ಜನರ ಬೆಂಬಲವನ್ನು ಮುಂದಿಟ್ಟರೆ ಮತ್ತೊಬ್ಬರು ಪಕ್ಷದೊಳಗಿನ ಬೆಂಬಲದ ಮೊರೆಹೋಗಿದ್ದು ಈ ಸಮಯದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ಅಮ್ಮನ ಚಿಕಿತ್ಸೆ ದಾಳ:

ಬುಧವಾರ ಮುಂಜಾನೆ ಆರಂಭವಾಗುತ್ತಿದ್ದಂತೆ ಓಪಿಎಸ್ ಕಡೆಯಿಂದ ಮತ್ತೊಂದು ದಾಳ ಉರುಳಿತು. “ಅಮ್ಮ ಜಯಲಲಿತಾ ಚಿಕಿತ್ಸೆ ಬಗ್ಗೆ ಹಾಗೂ ದಿಢೀರ್ ಅನಾರೋಗ್ಯಕ್ಕೆ ಒಳಗಾದ ಬಗ್ಗೆ ತನಿಖೆ ನಡೆಸಲಾಗುವುದು,” ಎಂದರು. ಈ ಮೂಲಕ ಅವರ ಅವರ ಸಾವಿಗೆ ಶಶಿಕಲಾ ಕಾರಣ ಎಂಬ ಸಂದೇಶವನ್ನು ಕಳುಹಿಸುವ ಪ್ರಯತ್ನ ಮಾಡಿದರು.

ಜತೆಗೆ, ರಾಜ್ಯಪಾಲ ವಿದ್ಯಾಸಾಗರ್ ರಾವ್‌ ಅವರನ್ನು ಭೇಟಿ ಮಾಡಿ ತಮಗೆ ಪಕ್ಷದೊಳಗೆ ಇರುವ ಬೆಂಬಲವನ್ನು ಪ್ರದರ್ಶಿಸುವುದಾಗಿಯೂ ಹೇಳಿದರು. ತಮ್ಮ ಜತೆ 50ಕ್ಕೂ ಹೆಚ್ಚು ಎಐಎಡಿಎಂಕೆ ಪಕ್ಷದ ಶಾಸಕರು ಇದ್ದಾರೆ ಎಂದು ಅವರು ತಿಳಿಸಿದರು.

ಇದರ ಜತೆಗೆ ಇಡೀ ಸ್ಟೋರಿಗೆ ತಿರುವು ನೀಡಿದ್ದು ಚುನಾವಣಾ ಆಯೋಗ. ಅದು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರನ್ನು ಆಯ್ಕೆ ಮಾಡುವಾಗ ಮಾನದಂಡಗಳನ್ನು ಅನುಸರಿಸಲಿಲ್ಲ ಎಂದು ಜರಿಯಿತು. ಹೀಗಾಗಿ ಪನ್ನೀರ್‌ ಸೆಲ್ವಂ ಅವರನ್ನು ಖಜಾಂಚಿ ಸ್ಥಾನದಿಂದ ಕಿತ್ತುಹಾಕಲು ಶಶಿಕಲಾಗೆ ಅರ್ಹತೆಗಳಿಲ್ಲ ಎಂದು ಹೇಳಿತ್ತು.

ಇಷ್ಟೆಲ್ಲಾ ಬೆಳವಣಿಗಳ ನಡುವೆ ಪಕ್ಷದ ಶಾಸಕರು ಮತ್ತು ಪದಾಧಿಕಾರಿಗಳ ಜತೆ ಸುದೀರ್ಘ ಮಾತುಕತೆ ನಡೆಸಿದ ಶಶಿಕಲಾ ಕೊನೆಗೆ ಮಾಧ್ಯಮಗಳನ್ನು ಮುಂದೆ ತಮ್ಮ ಹೊಸ ದಾಳ ಉರುಳಿಸಿದರು. “ಪನ್ನೀರ್ ಸೆಲ್ವಂ ಒಬ್ಬ ದ್ರೋಹಿ,” ಎನ್ನುವ ಮೂಲಕ ಅರ್ಧರಾತ್ರಿಯಲ್ಲಿ ಬಂಡಾಯ ಘೋಷಿಸಿದ ಓಪಿಎಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸಂಜೆ ವೇಳೆ ಸುಮಾರು 130 ಎಐಎಡಿಎಂಕೆ ಶಾಸಕರನ್ನು ಮೂರು ಬಸ್‌ಗಳಲ್ಲಿ ಅಜ್ಞಾತ ಸ್ಥಳಕ್ಕೆ ಶಶಿಕಲಾ ಅವರ ಗ್ಯಾಂಗ್ ಸ್ಥಳಾಂತರಿಸಿತು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ತಮಿಳುನಾಡು ರಾಜಭವನ ಮತ್ತು ಇನ್ನೆರಡು ದಿನಗಳಲ್ಲಿ ಸುಪ್ರಿಂ ಕೋರ್ಟ್ ನೀಡುವ ತೀರ್ಪು ಇಡೀ ನಾಟಕಕ್ಕೆ ಮೊದಲ ಹಂತದ ತಾರ್ಕಿಕ ಅಂತ್ಯ ನೀಡಬಹುದು ಎಂದು ನಿರೀಕ್ಷೆ ಇದೆ.

ಸಂಖ್ಯಾಬಲದ ಕಾರಣಕ್ಕೆ:

ಜಯಲಲಿತಾ ಶವದ ಮುಂದೆ ಮೋದಿ, ಪನ್ನೀರ್ ಸೆಲ್ವಂ. ಶಶಿಕಲಾ.

ಜಯಲಲಿತಾ ಶವದ ಮುಂದೆ ಮೋದಿ, ಪನ್ನೀರ್ ಸೆಲ್ವಂ. ಶಶಿಕಲಾ.

ಹೀಗೆ, ತಮಿಳುನಾಡು ರಾಜಕೀಯದಲ್ಲಿ ದಿಢೀರ್ ಬೆಳವಣಿಗೆಗಳು  ನಡೆಯುತ್ತಿದ್ದರೆ, ರಾಷ್ಟ್ರೀಯ ಮಟ್ಟದಲ್ಲಿ  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಕಡೆಗೆ ಎಲ್ಲರ ಅನುಮಾನದ ಮುಳ್ಳು ನೆಟ್ಟಿದೆ. ಇದಕ್ಕೆ ಕಾರಣ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಹೊಂದಿರುವ ಸಂಖ್ಯಾಬಲ. ಕೆಲವು ಪ್ರಮುಖ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಬಿಜೆಪಿ ಅಂಗೀಕಾರಗೊಳ್ಳುವಂತೆ ನೋಡಿಕೊಳ್ಳಬೇಕಿದೆ. ಜತೆಗೆ, ಮುಂದಿನ ವರ್ಷ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿಯೂ ಬೆಂಬಲದ ಅಗತ್ಯ ಇದೆ. ಒಂದು ವೇಳೆ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಗುರಿ ಮುಟ್ಟದಿದ್ದರೆ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಬೆಂಬಲ ನಿರ್ಣಾಯಕವಾಗಲಿದೆ.

ಹೀಗಾಗಿ, ಮೋದಿ ತಮ್ಮ ಆಪ್ತ ವರ್ಗಕ್ಕೆ ಬಂದ ಪನ್ನೀರ್‌ ಸೆಲ್ವಂ ಅವರನ್ನೇ ತಮಿಳುನಾಡಿನ ಅಧಿಕಾರ ಕೇಂದ್ರದಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಹೀಗೆ ದಿಢೀರ್ ಬಂಡಾಯ ಎಬ್ಬಿಸಿದ್ದಾರೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.

ಕಳೆದ 23 ಗಂಟೆಗಳಲ್ಲಿ ತಮಿಳುನಾಡು ಮತ್ತೆ ರಾಜಕೀಯ ನಾಟಕದ ಕಾರಣಕ್ಕೆ ಸದ್ದು ಮಾಡುತ್ತಿದೆ. ಜಯಲಲಿತಾ ಅನಾರೋಗ್ಯದಿಂದ ಆರಂಭವಾದ ಈ ರಾಜ್ಯ ಬೆಳವಣಿಗೆಗಳು ಜಲ್ಲಿಕಟ್ಟು, ಸಮುದ್ರದಲ್ಲಿ ತೈಲ ಸೋರಿಕೆ ಮತ್ತು ಪನ್ನೀರ್‌ ಸೆಲ್ವಂ ಬಂಡಾಯಗಳಿಂದಾಗಿ ರಾಜ್ಯದಲ್ಲಿ ಪ್ರಕ್ಷುಬದ್ಧತೆಯನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿದೆ. ಚೆನ್ನೈ ಸಮುದ್ರ ದಂಡೆಯಲ್ಲಿ ಅಲೆಗಳ ಹೋಯ್ದಾಟ ಜಾರಾಗಿಯೇ ಕೇಳಿಬರುತ್ತಿದೆ.

Leave a comment

Top