An unconventional News Portal.

ನೀರು ಸಿಕ್ತಾ ಪಂಕಜಾ?: ಬರದಲ್ಲೂ ಸೆಲ್ಫೀ ಹುಚ್ಚಿಗೆ ಬಿದ್ದ ಬಿಜೆಪಿ ಸಚಿವೆ

ನೀರು ಸಿಕ್ತಾ ಪಂಕಜಾ?: ಬರದಲ್ಲೂ ಸೆಲ್ಫೀ ಹುಚ್ಚಿಗೆ ಬಿದ್ದ ಬಿಜೆಪಿ ಸಚಿವೆ

ಮಹಾರಾಷ್ಟ್ರದ ಜಲ ಸಂರಕ್ಷಣಾ ಖಾತೆ ಸಚಿವೆ ಪಂಕಜಾ ಮುಂಡೆ ಬರ ಪೀಡಿತ ಸ್ಥಳದಲ್ಲಿ ಸೆಲ್ಫೀ ತೆಗಿಯಲು ಹೋಗಿ ವಿವಾದ ಮೈ ಮೇಲೆಳೆದುಕೊಂಡಿದ್ದಾರೆ.

ಕುಡಿಯುವ ನೀರಿಗಾಗಿ ಹಾಹಾಕಾರ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಯಾಗಿದ್ದ ಮಹರಾಷ್ಟ್ರದ ಲಾಥೋರ್ ಜಿಲ್ಲೆಗೆ ಗ್ರಾಮೀಣಾಭಿವೃದ್ಧಿ ಸಚಿವೆ ಪಂಕಜ್ ಮುಂಡೆ ಸೋಮವಾರ ಭೇಟಿ ನೀಡಿದರು. ಆದರೆ ಈ ಬರ ಪರಿಶೀಲನೆ ತಮ್ಮ ಮೊಬೈಲ್ನಲ್ಲಿ ಸೆಲ್ಫೀ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಲದ್ದು ಅಂತ ಟ್ವೀಟ್ ಬೇರೆ ಮಾಡಿದ್ದಾರೆ.

ಈ ಸೆಲ್ಫಿ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಟೀಕೆಗಳಿಗೆ ಗುರಿಯಾಗಿದೆ. ‘ಸೆಲ್ಫಿ ತೆಗೆದುಕೊಳ್ಳಲು ಇದೇನು ಟೂರಿಸಂ ಸ್ಥಳನಾ? ಅದೂ ಅಲ್ಲದೆ ಇದು ಸೆಲ್ಫಿ ತೆಗೆದುಕೊಳ್ಳುವ ಸಮಯವಾ? ಬಡ ರೈತರು ದಯನೀಯ ಪರಿಸ್ಥಿತಿಯಲ್ಲಿರುವ ಪ್ರದೇಶದಲ್ಲಿ ಕಿಂಚಿತ್ ಸೂಕ್ಷ್ಮ ಸಂವೇದನೆ ಇಲ್ಲದೆ ಸಚಿವೆ ವರ್ತಿಸಿದ್ದಾರೆ ಎಂಬುದು ಜನ ಮಾಡುತ್ತಿರುವ ಆರೋಪಗಳು.

ಪಂಕಜಾ ಅವರ ಈ ನಡೆಗೆ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಕಾಂಗ್ರೆಸ್ ವಕ್ತಾರ ಸುರಜೆವಾಲ ಹೇಳಿಕೆ ನೀಡಿ, “ಬಿಜೆಪಿ ಸರಕಾರದಲ್ಲಿ ಪಂಕಜಾ ಹೊಸದಾಗಿ ಸಚಿವೆ ಆಗಿದ್ದಾರೆ. ಅವರ ಪಾತ್ರ ಮೊದಲಿಂದಲೇ ಸಂದೇಹಾಸ್ಪದವಾಗಿಯೇ ಇದೆ. ಇದಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ಬರ ಬಂದಿದ್ದಾಗ ಅವರು ವಿದೇಶ ಪ್ರವಾಸದಲ್ಲಿದ್ದರು. ಆಕೆ ಬರಗಾಲವನ್ನುಮುಂದಿಟ್ಟು ಅಗ್ಗದ ರಾಜಕಾರಣ ಮಾಡುತ್ತಿದ್ದಾರೆ. ರೈತರ ಕಣ್ಣೀರೊರೆಸುವ ಬದಲು, ಮೃತರಾದ ಕುಟುಂಬಗಳನ್ನು ಸಂತೈಸುವ ಬದಲು ಪಂಕಜಾ ಸೆಲ್ಫಿ ತೆಗೆಯುವುದರಲ್ಲಿ ಬಿಸಿಯಾಗಿದ್ದಾರೆ,” ಎಂದು ಅವರು ಟೀಕಿಸಿದ್ದಾರೆ.

ಈ ಕೋಲಾಹಲದ ಬಳಿಕ ಪಂಕಜಾ ಟ್ವೀಟ್ ಮಾಡಿ “ನಾನು ಇಲಾಖೆ ಮುಖ್ಯಸ್ಥೆ ಎಂಬ ನೆಲೆಯಲ್ಲಿ ಪರಿಸ್ಥಿತಿ ಅಧ್ಯಯನಕ್ಕೆ ಹೋಗಿದ್ದೆ. ನಾನು ಹಾಗೂ ನನ್ನ ಜೊತೆ ಇದ್ದ ಅಧಿಕಾರಿಗಳು ಹಲವು ಜಾಗಗಳಿಗೆ ಹೋದೆವು. ಎಲ್ಲಿಯೂ ನೀರಿರಲಿಲ್ಲ. ಇಲ್ಲಿ ನೀರಿತ್ತು ಇದರಿಂದ ಸಂತೋಷವಾಯಿತು. ಸೆಲ್ಫಿ ಕ್ಲಿಕ್ಕಿಸಿಕೊಂಡೆ” ಎಂದು ಸಮಜಾಯಿಸಿ ನೀಡಿದ್ದಾರೆ.

Top