An unconventional News Portal.

ಪನಾಮ ಪೇಪರ್ಸ್: ‘ಬೆಂಗಳೂರು’ ಹಾಗೂ ‘ಕರ್ನಾಟಕ’ ಹೆಸರಿನಲ್ಲೂ ಕಂಪನಿ ತೆರೆದ ಚಾಣಾಕ್ಯರು!

ಪನಾಮ ಪೇಪರ್ಸ್: ‘ಬೆಂಗಳೂರು’ ಹಾಗೂ ‘ಕರ್ನಾಟಕ’ ಹೆಸರಿನಲ್ಲೂ ಕಂಪನಿ ತೆರೆದ ಚಾಣಾಕ್ಯರು!

ಕಳೆದ ತಿಂಗಳು ಭಾರಿ ಸದ್ದು ಮಾಡಿದ್ದ ‘ಪನಾಮ ಪೇಪರ್ಸ್’ ಹಗರಣದಲ್ಲಿ ಸೋಮವಾರ ಬಿಡುಗಡೆ ಮಾಡಿದ ಮತ್ತೊಂದು ಸುತ್ತಿನ ದಾಖಲೆಗಳು ‘ಬೆಂಗಳೂರು’ ಮತ್ತು ‘ಕರ್ನಾಟಕ’ ಎಂಬ ಹೆಸರಿನ ಕಂಪನಿಗಳು ಅಸ್ಥಿತ್ವದಲ್ಲಿ ಇದ್ದದ್ದನ್ನು ಬಯಲಿಗೆಳೆದಿವೆ.

ಪನಾಮ ಮೂಲದ ‘ಮೊಸೆಕ್ ಫೋನ್ಸೆಕಾ’ ಕಂಪನಿಯ ಸುಮಾರು 11. 5 ಮಿಲಿಯನ್ ದಾಖಲೆಗಳನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಹಂತಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸೋಮವಾರ ಸುಮಾರು 2 ಲಕ್ಷ ದಾಖಲೆಗಳನ್ನು ಒಕ್ಕೂಟ ತನ್ನ ವೆಬ್ ತಾಣದಲ್ಲಿ ಪ್ರಕಟಿಸಿದೆ. ಇದರಲ್ಲಿ ಭಾರತೀಯ ಮೂಲದ 2 ಸಾವಿರಕ್ಕೂ ಹೆಚ್ಚು ವ್ಯಕ್ತಿಗಳು, ಕಂಪನಿಗಳು ಹಾಗೂ ವಿಳಾಸಗಳಿವೆ ಎಂದು ವರದಿಯಾಗಿದೆ.

ಐಸಿಐಜೆ ಪ್ರಕಟಿಸಿದ ದಾಖಲೆಗಳಲ್ಲಿ ‘ಬೆಂಗಳೂರು’ ಹಾಗೂ ‘ಕರ್ನಾಟಕ’ ಹೆಸರಿನಲ್ಲಿ ಬ್ರಿಟಿಷ್ ವರ್ಜೀನಿಯಾ ಐಲ್ಯಾಂಡ್ ಹಾಗೂ ಇತರೆ ಕಡೆಗಳಲ್ಲಿ ಕಂಪನಿಗಳನ್ನು ವಿದೇಶಿಯರ ಹೆಸರು ಹಾಗೂ ವಿಳಾಸದಲ್ಲಿ ಸ್ಥಾಪಿಸಿರುವುದು ‘ಸಮಾಚಾರ’ದ ಹುಡುಕಾಟದಲ್ಲಿ ಪತ್ತೆಯಾಗಿದೆ.

ಯಾವ ಕಂಪನಿಗಳು?:

ಎರಡನೇ ಸುತ್ತಿನಲ್ಲಿ ಐಸಿಐಜೆ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಬೆಂಗಳೂರು ಎಂಟರ್ ಪ್ರೈಸಸ್ ಲಿ., ಹೆಸರಿನ ಕಂಪನಿಯೊಂದು 2014ರ ಜೂನ್ 25ರಂದು ಸ್ಥಾಪನೆಯಾದ ಕುರಿತು ಮಾಹಿತಿ ಲಭ್ಯವಾಗಿದೆ. ಈ ಹೆಸರಿನ ಕಂಪನಿಯನ್ನು ಎರಡು ಪ್ರತ್ಯೇಕ ವಿಳಾಸಗಳನ್ನು ನೀಡಿ, ಬ್ರಿಟಿಷ್ ವರ್ಜೀನಿಯಾದಲ್ಲಿ ನೋಂದಣಿ ಮಾಡಿಸಲಾಗಿದೆ.   ಇದನ್ನು ಮಧ್ಯವರ್ತಿ ಕಂಪನಿ ಜಂಬೋ ಸ್ಟಾರ್ ಗ್ರೂಪ್ ಲಿ., ಗಾಗಿ ಸ್ಥಾಪಿಸಿರುವುದಾಗಿ ದಾಖಲೆಗಳು ಹೇಳುತ್ತಿವೆ.

ಈ ಜಂಬೋ ಸ್ಟಾರ್ ಗ್ರೂಪ್ ಕಂಪನಿಯು, ಸ್ಟಾರ್ ಟಿವಿ ಮಾತೃ ಸಂಸ್ಥೆಗೆ ಸೇರಿದ್ದು ಎಂಬುದು ಹೆಚ್ಚುವರಿ ಮಾಹಿತಿ. ಆದರೆ, ಬೆಂಗಳೂರು ಹೆಸರಿನಲ್ಲಿ ಯಾಕೆ ಕಂಪನಿಯನ್ನು ಶುರು ಮಾಡಿದರು? ಇದರ ಹಿಂದೆ ಸ್ಥಳೀಯರ ನೆರವು ಇದೆಯಾ? ಎಂಬುದರ ಕುರಿತು ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ. panama-papers-1


‘ಬೆಂಗಳೂರು ಬಿಜಿನೆಸ್ ಎಸ್. ಎ’ ಎಂಬ ಹೆಸರಿನ ಮತ್ತೊಂದು ಸಂಸ್ಥೆಯನ್ನು ಮೇ. 2010ರಲ್ಲಿ ನೋಂದಣಿ ಮಾಡಿಸಿ, ಮರು ವರ್ಷ 2011ರ ಜೂನ್ ತಿಂಗಳಿನಲ್ಲಿ ಮುಚ್ಚಲಾಗಿದೆ ಎಂಬುದನ್ನು ‘ಪನಾಮ ಪೇಪರ್ಸ್’ ಬಯಲಿಗೆಳೆದಿದೆ. ಕಂಪನಿಯು ಸ್ವಿಡ್ಜರ್ಲ್ಯಾಂಡ್ ವಿಳಾಸವನ್ನು ನೀಡಿದ್ದು, ಮಧ್ಯವರ್ತಿ ಕಂಪನಿಗಳೂ ಕೂಡ ಅದೇ ದೇಶದ ಹಿನ್ನೆಲೆಯನ್ನು ತೋರಿಸುತ್ತಿವೆ.

panama-papers-2


ಬೆಂಗಳೂರು ಹೆಸರನ್ನು ಇಟ್ಟುಕೊಂಡ ಮೂರನೇ ಕಂಪನಿ, ‘ಪ್ರಿಮ್ಯುಲರ್ ಬೆಂಗಳೂರು ಲಿಮಿಟೆಡ್’. ಇದು ಹಾಂಕಾಂಗ್ ಮೂಲದ ಓರಿಯನ್ ಹೌಸ್ ಸರ್ವಿಸಸ್ ಲಿ. ಎಂಬ ಕಂಪನಿಗೆ ಮಧ್ಯವರ್ತಿ ಸಂಸ್ಥೆಯಾಗಿ ಬ್ರಿಟಿಷ್ ಆಂಗ್ಯುಲಾದಲ್ಲಿ 2012ರ ಮೇ ತಿಂಗಳಿನಲ್ಲಿ ನೋಂದಣಿಯಾಗಿದೆ. ಇದರ ಬಗ್ಗೆಯೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

panama-papers-3


2002ರ ಫೆಬ್ರವರಿಯಲ್ಲಿ ‘ಕರ್ನಾಟಕ ಲಿಮಿಟೆಡ್’ ಹೆಸರಿನ ಕಂಪನಿಯೊಂದನ್ನು ನೋಂದಣಿ ಮಾಡಿಸಲಾಗಿತ್ತು ಎಂಬ ಮಾಹಿತಿಯನ್ನು ‘ಪನಾಮ ಪೇಪರ್ಸ್’ ನೀಡುತ್ತಿದೆ. 2006ರ ಅಕ್ಟೋಬರ್ ತಿಂಗಳವರೆಗೂ ಅಸ್ಥಿತ್ವದಲ್ಲಿದ್ದ ಕಂಪನಿಯನ್ನು ಬ್ರಿಟಿಷ್ ವರ್ಜೀನಿಯಾದಲ್ಲಿ ರಿಜಿಸ್ಟರ್ ಮಾಡಿಸಲಾಗಿತ್ತು. ಇದು ಯುಕೆ ಮೂಲಕ ಕಿಂಗ್ಸ್ ಗೇಟ್ ಪ್ರೈ ಲಿ., ಎಂಬ ಕಂಪನಿಯ ಮಧ್ಯವರ್ತಿ ಕಂಪನಿಯಾಗಿತ್ತು. ಕಿಂಗ್ಸ್ ಗೇಟ್ಗೆ ಬೆಂಗಳೂರಿನ ಕೆಲವು ಲಿಂಕ್ಗಳಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಸಬೇಕಿದೆ.

panama-papers-4


ಇದು ಎರಡನೇ ಸುತ್ತಿನಲ್ಲಿ ‘ಪನಾಮ ಪೇಪರ್ಸ್’ ಹಗರಣದಲ್ಲಿ ಹೊರಬಿದ್ದಿರುವ, ಸ್ಥಳೀಯತೆಗೆ ಹತ್ತಿರ ಇರುವ ಮಾಹಿತಿ. ಈಗಾಗಲೇ ಬೆಂಗಳೂರು ಮೂಲದ ಉದ್ಯಮಿಗಳು ಹಾಗೂ ರಾಜ್ಯದ ಸಚಿವರ ಸಂಬಂಧಿಕರ ಹೆಸರುಗಳು ಈ ಪ್ರಕರಣದಲ್ಲಿ ಈ ಹಿಂದೆ ಕೇಳಿ ಬಂದಿದ್ದವು. ಎರಡನೇ ಸುತ್ತಿನಲ್ಲಿ ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಇನ್ನಷ್ಟು ಹೆಸರುಗಳು ಹೊರಬರುವ ನಿರೀಕ್ಷೆ ಇದೆ.

‘ಪನಾಮ ಪೇಪರ್ಸ್’ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ, ಇಲ್ಲಿ, ಇಲ್ಲಿ ಸಿಗುತ್ತವೆ.

Top