An unconventional News Portal.

‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

‘ಸಂಗೀತದಿಂದ ಧರ್ಮದೆಡೆಗೆ’: ಪಾಕ್ ವಿಮಾನ ಅಪಘಾತದಲ್ಲಿ ಸಾವಿಗೀಡಾದವರ ಪೈಕಿ ಬಹುಮುಖ ಪ್ರತಿಭೆ ಜುನೈದ್

ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಎಲ್ಲಾ 48 ಪ್ರಯಾಣಿಕರೂ ಸಾವಿಗೀಡಾಗಿದ್ದಾರೆ ಎಂದು ಪಾಕ್ ಏರ್ಲೈನ್ಸ್ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ)ಗೆ ಸೇರಿದ ಪಿಕೆ 661 ಸ್ಥಳೀಯ ನಾಗರಿಕ ವಿಮಾನ ಚಿತ್ರಾಲ್ ನಗರದಿಂದ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು. ಖೈಬರ್ ಪ್ರಾಂಥ್ಯದ ಹವಾಲಿಯನ್ ನಗರದ ಸಮೀಪ ಬರುತ್ತಿದ್ದಂತೆ ವಿಮಾನ ಮಾರ್ಗಮಧ್ಯದಲ್ಲಿಯೇ ಪತನವಾಯಿತು.

ಪಾಕಿಸ್ತಾನದಲ್ಲಿ ಪ್ರತಿ ವಿಮಾನವೂ 500 ಗಂಟೆಗಳ ಹಾರಾಟ ನಡೆಸಿದ ನಂತರ ತಪಾಸಣೆಗೆ ಒಳಗಾಗಬೇಕು ಎಂಬ ನಿಯಮವಿದೆ. ದುರಂತ ಅಂತ್ಯ ಕಂಡ ವಿಮಾನ ಕೂಡ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ತಪಾಸಣೆಗೆ ಒಳಪಟ್ಟು ‘ಎ- ಚೆಕ್’ ಪ್ರಮಾಣ ಪತ್ರವನ್ನೂ ಪಡೆದುಕೊಂಡಿತ್ತು.

“ವಿಮಾನ ಪತನದ ಹಿಂದೆ ಮನುಷ್ಯರ ಅಥವಾ ತಾಂತ್ರಿಕ ದೋಷ ಇರುವಂತೆ ಕಾಣುತ್ತಿಲ್ಲ. ಈ ಕುರಿತು ತನಿಖೆ ನಡೆಸಬೇಕಿದೆ,” ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಸ್ಥಳದಿಂದ 40 ದೇಹಗಳ ಅವಶೇಷಗಳನ್ನು ಕಲೆ ಹಾಕಲಾಗಿದೆ. ಇದಕ್ಕಾಗಿ 500 ಸೈನಿಕರು ಮತ್ತು ವೈದ್ಯರನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ ಎಂದು ಪಾಕ್ ಸೇನೆ ತಿಳಿಸಿದೆ. ಬುಧವಾರ ಸಂಜೆ ಅಫ್ಘಾನಿಸ್ತಾನದ ಸರಹದ್ದಿನಲ್ಲಿ ಬರುವ ಚಿತ್ರಾಲ್ ನಗರದಿಂದ ಸ್ಥಳೀಯ ಕಾಲಮಾನ 3. 30ಕ್ಕೆ ವಿಮಾನ ಇಸ್ಲಾಮಾಬಾದ್ ಕಡೆಗೆ ಹೊರಟಿತ್ತು.

ಮೃತರಲ್ಲಿ ಬಹುಮುಖಿ ಪ್ರತಿಭೆ:

ವಿಮಾನ ದುರಂತದಲ್ಲಿ ಮೃತಪಟ್ಟವರ ಪೈಕಿ ಪಾಕಿಸ್ತಾನದ ಪ್ರಖ್ಯಾತ ರಾಕ್ ಸಂಗೀತಗಾರ, ಇತ್ತೀಚೆಗೆ ಧರ್ಮಗುರುವಾಗಿ ಬದಲಾಗಿದ್ದ ಜುನೈದ್ ಜೇಮ್ಶೆಡ್ ಕೂಡ ಸೇರಿದ್ದಾರೆ.

ಜುನೈದ್ ಪಾಕಿಸ್ತಾನ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತದಿಂದಾಗಿ ಹೆಸರುವಾಸಿಯಾಗಿದ್ದವರು. ಲಾಹೋರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದ ಅವರು ಪಾಕ್ ವಾಯುಸೇನೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ನಂತರ ಅವರು ಸಂಗೀತದ ಕಡೆಗೆ ವಾಲಿದ್ದರು. 1987ರಲ್ಲಿ ಅವರ ಮೊದಲ ಆಲ್ಬಂ ‘ವೈಟಲ್ ಸೈನ್ಸ್’ ಬಿಡುಗಡೆಗೊಂಡು ಭಾರಿ ಜನಪ್ರಿಯತೆಯನ್ನು ಗಳಿಸಿತ್ತು. ಅದು ಪಾಕಿಸ್ತಾನದಲ್ಲಿ ರಾಕ್ ಮ್ಯೂಸಿಕ್ ಅಲೆಗೆ ನಾಂದಿ ಹಾಡಿತ್ತು. ಪಾಕ್ ಸೇನೆಗೂ ಕೂಡ ಜುನೈದ್ ಹಲವು ಹಾಡುಗಳನ್ನು ಹಾಡಿದ್ದಾರೆ. ಟಿವಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ.

1999ರ ವೇಳೆಗೆ ಜುನೈದ್ ಬದುಕಿನಲ್ಲಿ ಸಾಕಷ್ಟು ತಿರುವುಗಳು ಬಂದಿದ್ದವು. ಅವರ ‘ವೈಟಲ್ ಸೈನ್ಸ್’ ಹಾಡುಗಳು ಅಷ್ಟೊತ್ತಿಗೆ ನಿಧಾನವಾಗಿ ಕಳೆ ಕಳೆದುಕೊಳ್ಳತೊಡಗಿದವು. ಈ ಸಮಯದಲ್ಲಿ ಸ್ಥಳೀಯ ಮಾಧ್ಯಮಗಳು ಜುನೈದ್ ಸಂಗೀತ ಕ್ಷೇತ್ರವನ್ನು ತೊರೆಯಲಿದ್ದಾರೆ ಎಂದು ವರದಿಗಳನ್ನು ಭಿತ್ತರಿಸಿದವು. ಆದರೆ, ‘ವೈಟಲ್ ಸೈನ್ಸ್’ ಬ್ಯಾಂಡ್ ಬಿಟ್ಟು ಹೊರಬಂದ ಜುನೈದ್ ತಮ್ಮದೇ ಸ್ವಂತ ನೆಲೆಯಲ್ಲಿ ಸಂಗೀತದ ಆಲ್ಬಂಗಳನ್ನು ಬಿಡುಗಡೆ ಮಾಡಿದರು. ಆದರೆ ಅವು ಮಾರುಕಟ್ಟೆಯಲ್ಲಿ ಹೇಳುಕೊಳ್ಳುವಂತಹ ಸಾಧನೆ ಮಾಡಲಿಲ್ಲ.

ಹೀಗಿರುವಾಗಲೇ ಅಮೆರಿಕಾ ಮೇಲೆ ನಡೆದ 9/11 ದಾಳಿ ನಂತರ ಜುನೈದ್ ವಿದೇಶಿ ಪ್ರವಾಸಗಳು ಮೊಟಕುಗೊಂಡವು. ಕೊನೆಗೆ ಅವರು ದಿವಾಳಿಯಾಗಿದ್ದೇನೆ ಎಂದು ಬ್ಯಾಂಕ್ ಮುಂದೆ ಅಫಿಡವಿಟ್ ಸಲ್ಲಿಸಿದರು. ಈ ಸಮಯದಲ್ಲಿ ಜುನೈದ್ ಹಿಂಬಾಲಿಸಲು ಕೆಲವು ಮಾಧ್ಯಮ ಸಂಸ್ಥೆಗಳು ‘ಪಪ್ಪಾರಾಝಿ’ಗಳನ್ನು ನೇಮಿಸಿದ್ದರು ಎಂದು ವರದಿಗಳು ಹೇಳುತ್ತವೆ.

2004ರಲ್ಲಿ ಜುನೈದ್ ಇನ್ನು ಮುಂದೆ  ಹಾಡುಗಳನ್ನು ಹಾಡುವುದಿಲ್ಲ ಎಂದು ಘೋಷಿಸಿದರು. ಬದಲಿಗೆ ಇಡೀ ಬದುಕನ್ನು ಧರ್ಮ ಪ್ರಚಾರಕ್ಕೆ ಮೀಸಲಿಡುವುದಾಗಿ ಹೇಳಿದರು. ಹೀಗೆ ಒಬ್ಬ ಸಂಗೀತಗಾರ ಧರ್ಮಗುರುವಾಗಿ ಬದಲಾದರು.

ಬುಧವಾರ ನಡೆದ ವಿಮಾನ ಅಪಘಾತದಲ್ಲಿ ಜುನೈದ್ ಬದುಕು ಅಂತ್ಯವಾಗಿದೆ. ಪತ್ನಿ ಹಾಗೂ ನಾಲ್ವರು ಮಕ್ಕಳನ್ನು ಅವರು ಅಗಲಿದ್ದಾರೆ.

ಪಾಕಿಸ್ತಾನದ ಕರ್ಮಠ ಆಚರಣೆಗಳು ತಳವೂರುತ್ತಿದ್ದ ಸಮಯದಲ್ಲಿಯೇ ಜುನೈದ್ ತಂಡ ಹೊರತಂದ ಈ ಹಾಡು ದೇಶದ ರಾಕ್ ಮ್ಯೂಸಿಕ್ ಕ್ಷೇತ್ರದ ಬೆಳವಣಿಗೆಗೆ ನಾಂದಿ ಹಾಡಿತು.

 

 

 

 

 

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top