An unconventional News Portal.

‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

‘ಗೂಢಚರ್ಯೆ ಆರೋಪ’: ಪಾಕಿಸ್ತಾನ ರಾಯಭಾರಿ ಕಚೇರಿ ಸಿಬ್ಬಂದಿ ಬಂಧನ!

ಭಾರತ-ಪಾಕಿಸ್ತಾನ ಮಧ್ಯೆ ಕಾವೇರಿದ ವಾತಾವರಣ ಜಾರಿಯಲ್ಲಿರುವ ಹೊತ್ತಲ್ಲೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರನ್ನು ಗುರುವಾರ ಬೆಳಿಗ್ಗೆ ಬಂಧಿಸಲಾಗಿದೆ. ಗೂಢಚರ್ಯೆ ಆರೋಪದ ಮೇಲೆ ರಾಯಭಾರ ಕಚೇರಿ ಸಿಬ್ಬಂದಿ ಮೆಹ್ಮೂದ್ ಅಖ್ತರ್ ರನ್ನು ವಿಚಾರಣೆಗಾಗಿ ಅರೆಸ್ಟ್ ಮಾಡಲಾಗಿದೆ.

ಡಿಪ್ಲೊಮ್ಯಾಟಿಕ್ ಪಾಸ್ ಪೋರ್ಟ್ ಹೊಂದಿರುವ ಮೆಹ್ಮೂದ್ ಅಖ್ತರ್ ರನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದು ಸದ್ಯ ಚಾಣಾಕ್ಯಪುರಿ ಜೈಲಿನಲ್ಲಿಅಖ್ತರ್ ವಿಚಾರಣೆ ನಡೆಯುತ್ತಿದೆ.

ಮೂಲಗಳ ಪ್ರಕಾರ ಅಖ್ತರ್ ಬಳಿಯಲ್ಲಿ ಭಾರತದ ರಕ್ಷಣಾ ಇಲಾಖೆಗೆ ಸೇರಿದ ರಣತಂತ್ರಗಳ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ. ಅಖ್ತರ್ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಕ್ಷಣಾ ಇಲಾಖೆಯ ಕೆಲವು ವ್ಯಕ್ತಿಗಳೇ ಇಲಾಖೆಯ ಯೋಜನೆಗಳು, ರಣತಂತ್ರಗಳು ಮತ್ತು ಮಾಹಿತಿಗಳನ್ನು ಸೋರಿಕೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಸ್ಪಷ್ಟವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನದಲ್ಲೂ ಇಬ್ಬರನ್ನು ಬಂಧಿಸಲಾಗಿದೆ. ಇವರೇ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಗೆ ದಾಖಲೆಗಳನ್ನು ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಭಾರತದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್

ಭಾರತದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್

ಸಿಬ್ಬಂದಿ ಬಂಧನವಾಗುತ್ತಿದ್ದಂತೆ ವಿದೇಶಾಂಗ ಸಚಿವಾಲಯ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್’ಗೆ ಸ್ಪಷ್ಟನೆ ನೀಡುವಂತೆ ಸಮನ್ಸ್ ಜಾರಿಮಾಡಿದೆ. ಕಾಶ್ಮೀರದ ಆರ್.ಎಸ್.ಪುರಿಯಲ್ಲಿ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಗಡಿ ರಕ್ಷಣಾ ಪಡೆಯ ಮುಖ್ಯ ಪೇದೆಯೊಬ್ಬರು ಗುರುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸುತ್ತಿರುವ ಅಪ್ರಚೋದಿತ ಗುಂಡಿನ ದಾಳಿ ಬಗ್ಗೆಯೂ ಭಾರತದ ಅಧಿಕಾರಿಗಳು ಪಾಕಿಸ್ತಾನ ರಾಯಭಾರಿಯೊಂದಿಗೆ ಚರ್ಚೆ ನಡೆಸಲಿದ್ದಾರೆ.

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ದಲ್ಲಿ ಭಾರತೀಯ ಸೇನೆ ವಿವಾದಿತ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ನಂತರ ಈ ಎಲ್ಲಾ ಗಮನಾರ್ಹ ಬೆಳವಣಿಗೆಗಳು ನಡೆಯುತ್ತಿವೆ.

Top