An unconventional News Portal.

ಈ ಬಾರಿ ‘ಆಸ್ಕರ್ ನಾಟ್ ಸೋ ವೈಟ್’: ಪ್ರಶಸ್ತಿ ರೇಸಿನಲ್ಲಿ ಡೆನ್ಸಿಲ್ ವಾಷಿಂಗ್ಟನ್, ದೇವ್ ಪಟೇಲ್

ಈ ಬಾರಿ ‘ಆಸ್ಕರ್ ನಾಟ್ ಸೋ ವೈಟ್’: ಪ್ರಶಸ್ತಿ ರೇಸಿನಲ್ಲಿ ಡೆನ್ಸಿಲ್ ವಾಷಿಂಗ್ಟನ್, ದೇವ್ ಪಟೇಲ್

oscar-awardಈ ವರ್ಷದ ಆಸ್ಕರ್ ಪ್ರಶಸ್ತಿಗಾಗಿ ನಾಗಾಲೋಟ ಆರಂಭವಾಗಿದೆ. ಗುರುವಾರ ಬಿಡುಗಡೆಗೊಂಡಿರುವ ಪಟ್ಟಿ, ಕಳೆದ ವರ್ಷಕ್ಕೆ ಹೋಲಿಸಿದರೆ ಎಲ್ಲಾ ಜನಾಂಗಗಳಿಗೂ, ಭಿನ್ನ ಹಿನ್ನೆಲೆಯ ಕಲಾವಿದರು ಮತ್ತು ತಂತ್ರಜ್ಞರಿಗೆ ಅವಕಾಶ ನೀಡಿದೆ. ಕಳೆದ ವರ್ಷ ಕೇಳಿಬಂದ ಟೀಕೆಗಳಿಗೆ ಅಕಾಡೆಮಿ ತಲೆಬಾಗಿದಂತೆ ಕಾಣಿಸುತ್ತಿದೆ.

89ನೇ ಅಕಾಡೆಮಿ ಪ್ರಶಸ್ತಿಗಾಗಿ ಸಿದ್ಧಗೊಂಡಿರುವ ಪಟ್ಟಿಯಲ್ಲಿ ಬಿಳಿಯ ಜನಾಂಗದ ನಟರು ಹಾಗೂ ನಿರ್ದೇಶಕರನ್ನು ಹೊರತು ಪಡಿಸಿ, ಈ ಬಾರಿ ಹಲವರು ಸ್ಥಾನ ಪಡೆದುಕೊಂಡಿದ್ದಾರೆ. ಅಭಿನಯದ ವಿಭಾಗದಲ್ಲಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 20 ಜನರಲ್ಲಿ 9 ಬಿಳಿಯ ವರ್ಣದವರಲ್ಲ ಎಂಬುದು ಗಮನಾರ್ಹ.

ಡೆನ್ಸಿಲ್ ವಾಷಿಂಗ್ಟನ್, ರುತ್ ನೆಗ್ಗಾ, ಮಹೆರ್ಶಾಲ ಅಲಿ, ಭಾರತ ಮೂಲದ ದೇವ್ ಪಟೇಲ್, ವಿಯೋಲಾ ಡೇವಿಸ್, ನೌಮಿ ಹ್ಯಾರೀಸ್ ಮತ್ತು ಆಕ್ಟೋವಿಯಾ ಸ್ಪೆನ್ಸರ್ ಹೆಸರುಗಳು ಅತ್ತುತ್ತಮ ಕಲಾವಿದರ ಪಟ್ಟಿಯಲ್ಲಿದೆ. ಜತೆಗೆ, ಬ್ಯಾರಿ ಜಕ್ಸಿನ್, ರೌಲ್ ಪೆಕ್, ಹರ್ಬರ್ಟ್ ಪೆಕ್ ಮತ್ತು ಅವಾ ದು’ ವೆರ್ನಯ್ ಹೆಸರುಗಳು ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಅತ್ಯುತ್ತಮ ಚಿತ್ರದ ಪಟ್ಟಿಯಲ್ಲಿ ಆಫ್ರಿಕನ್- ಅಮೆರಿಕನ್ ಗಣಿತಶಾಸ್ತ್ರಜ್ಞ ಕತೆಯನ್ನು ಆಧರಿಸಿರುವ ಹಿಡನ್ ಫಿಗರ್ಸ್, ಅಮೆರಿಕಾದ ಕಪ್ಪು ಕುಟುಂಬವೊಂದರ ಕತೆಯನ್ನಾಧರಿಸಿರುವ ಫೆನ್ಸೆಸ್ ಚಿತ್ರಗಳು ಸ್ಥಾನ ಪಡೆದಿವೆ.

ಕಳೆದ ವರ್ಷ ಹಾಗೂ ಅದರ ಹಿಂದಿನ ವರ್ಷ ಆಸ್ಕರ್ ಪ್ರಶಸ್ತಿಗಳಿಗಾಗಿ ಸಿದ್ಧಗೊಂಡ ಪಟ್ಟಿಯಲ್ಲಿ ಎಲ್ಲಾ 20 ಜನ ನಟ- ನಟಿಯರು ಬಿಳಿಯರೇ ಆಗಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗೆ ಒಳಗಾಗಿತ್ತು. ಆಸ್ಕರ್ ಪ್ರಶಸ್ತಿಯನ್ನು ಭಹಿಷ್ಕರಿಸುವ ಮಾತುಗಳು ಕೇಳಿಬಂದಿದ್ದವು. #Oscarsowhite ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.

ವಿರೋಧಗಳಿಂದ ಎಚ್ಚೆತ್ತುಕೊಂಡಿರುವ ಆಸ್ಕರ್ ಅಕಾಡೆಮಿ ಈ ಸಾಲಿನಲ್ಲಿ ಎಲ್ಲಾ ಜನಾಂಗ ಮತ್ತು ಭಿನ್ನ ಹಿನ್ನೆಲೆಯ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಈ ಬಾರಿ ಪಟ್ಟಿಯಲ್ಲಿ ಸ್ಥಾನ ಕಲ್ಪಸಿದೆ. ಈ ಮೂಲಕ ಎಲ್ಲರ ಪ್ರತಿಭೆಗೂ ಮನ್ನಣೆ ನೀಡುವ ಅನಿವಾರ್ಯತೆಯನ್ನು ಒಪ್ಪಿಕೊಂಡಿದೆ.

ಅಕಾಡೆಮಿ ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಈ ಕೆಳಕಂಡ ಚಿತ್ರಗಳಿವೆ:

ಅರೈವಲ್, ಫೆನ್ಸೆಸ್, ಹ್ಹಾಕ್ಸಾ ರಿಡ್ಜ್, ಹೆಲ್ ಆರ್ ಹೈ ವಾಟರ್, ಹಿಡನ್ ಫಿರ್ಗ್ಸ್, ಲಾ ಲಾ ಲ್ಯಾಂಡ್, ಲೈಯನ್, ಮ್ಯಾನ್ಚೆಸ್ಟರ್ ಬೈ ಸೀ, ಮೂನ್ ಲೈಟ್.

ಅತ್ಯುತ್ತಮ ವಿದೇಶಿ ಸಿನೆಮಾಗಳ ಪಟ್ಟಿಯಲ್ಲಿ; ಲ್ಯಾಂಡ್ ಮೈನ್ (ಡೆನ್ಮಾರ್ಕ್, ಎ ಮ್ಯಾನ್ ಕಾಲ್ಡ್ ಓವೆ (ಸ್ವೀಡನ್), ದಿ ಸೇಲ್ಸ್ ಮ್ಯಾನ್ (ಇರಾನ್), ತನ್ನಾ (ಆಸ್ಟ್ರೇಲಿಯಾ) ಮತ್ತು ಟೋನಿ ಎರ್ಡಮನ್ (ಜರ್ಮನಿ) ಚಿತ್ರಗಳು ಸ್ಥಾನ ಪಡೆದುಕೊಂಡಿವೆ.

Top