An unconventional News Portal.

ಬರಿಗೈಯಲ್ಲಿ ಬಂದು ಕೋಟ್ಯಾಧಿಪತಿಯಾದ ಪತ್ರಕರ್ತೆ ಓಪ್ರಾಳ ಬದುಕಿನ ಕತೆ

ಬರಿಗೈಯಲ್ಲಿ ಬಂದು ಕೋಟ್ಯಾಧಿಪತಿಯಾದ ಪತ್ರಕರ್ತೆ ಓಪ್ರಾಳ ಬದುಕಿನ ಕತೆ

ನಮ್ಮಲ್ಲಿ ಕಳೆದ ಹತ್ತು ವರ್ಷಗಳ ಅಂತರದಲ್ಲಿ ಪತ್ರಿಕೋದ್ಯಮ ಹುಟ್ಟಿಸಿದ ಕನಸುಗಳ ಪೈಕಿ ನಿರೂಪಕರಾಗಬೇಕು ಎಂಬುದು ಪ್ರಥಮ ಸ್ಥಾನದಲ್ಲಿದೆ. ಈಗಷ್ಟೆ ಕಾಲೇಜು ಮುಗಿಸಿ, ಪತ್ರಿಕೋದ್ಯಮಕ್ಕೆ ಬರುವವರ ಆಸಕ್ತಿ ಏನು ಎಂದು ಕೇಳಿದರೆ, ಆ್ಯಂಕರ್ ಆಗಬೇಕು ಎಂಬುದು. ಕನಸು ಕಾಣುವುದು ತಪ್ಪಲ್ಲ. ಆದರೆ, ಅದರ ಜತೆಗೆ ಅಂತಹ ಕನಸುಗಳನ್ನು ಕಾಣುವಾಗ ವಾಸ್ತವಗಳನ್ನು ಎದುರಿಸುಲೂ ಮನಸ್ಸು ಗಟ್ಟಿಯಾಗಿರಬೇಕು. ಹೀಗಾಗಿಯೇ, ಜಗತ್ತಿನ ಶ್ರೇಷ್ಠ ಅಂತ ಕರೆಯಬಹುದಾದ, ಅದೇ ವೇಳೆ, ಅಷ್ಟೆ ಪ್ರಮಾಣದ ಜನಪ್ರಿಯತೆಯನ್ನೂ ಬೆನ್ನಿಗಿಟ್ಟುಕೊಂಡಿರುವ ಆ್ಯಂಕರ್ ಒಬ್ಬರ ಕತೆಯನ್ನು ಇಲ್ಲಿ ನಿರೂಪಿಸುತ್ತಿದ್ದೇವೆ.

ಹೌದು, ಇದು ನೀವು ಕೇಳಿರುವ ಓಪ್ರಾ ವಿನ್ ಫ್ರೇ ಎಂಬ ಟಿವಿ ನಿರೂಪಕಿಯ ಬದುಕಿನ ಕತೆ. ಆಕೆ ಬೆಳದು ಬಂದ ಹಾದಿಯಲ್ಲಿ ಪಟ್ಟ ಕಷ್ಟಗಳ ವ್ಯಥೆ. ಎಲ್ಲವನ್ನೂ ಎದುರಿಸಿ ಸ್ವತಂತ್ರ ಮಾಧ್ಯಮ ಸಂಸ್ಥೆಗಳನ್ನು ಕಟ್ಟುವ ಮಟ್ಟಕ್ಕೆ ಬೆಳೆದ ಕಪ್ಪು ಹೆಣ್ಣುಮಗಳೊಬ್ಬಳ ಬದುಕಿನ ಸ್ಫೂರ್ತಿಯ ಸೆಲೆ ಇದರಲ್ಲಿದೆ.

ತಳಹಂತದಿಂದ ಎದ್ದು ಬಂದವಳು ಈಕೆ. ಓಪ್ರಾ ಬಾಲ್ಯ ನರಕವಾಗಿತ್ತು. ಈಕೆ ಹುಟ್ಟಿದ್ದು ಅಮೆರಿಕಾದ ಮಿಸ್ಸಿಸ್ಸಿಪ್ಪಿಯಲ್ಲಿ. ಈಕೆಯನ್ನು ಹೆತ್ತಾಗ ಓಪ್ರಾ ತಾಯಿಗಿನ್ನೂ ಹೈಸ್ಕೂಲಿಗೆ ಹೋಗುವ ವಯಸ್ಸು. ಅದಾಗಲೇ ಗಂಡ ಕೈ ಕೊಟ್ಟು ಓಡಿ ಹೋಗಿದ್ದ. ಈಕೆಯ ತಾಯಿ ಕಡು ಬಡತನದಲ್ಲೇ ಓಪ್ರಾಳನ್ನು ಬೆಳೆಸುವ ಹೊಣೆ ಹೊತ್ತೊಕೊಂಡಳು. ಓಪ್ರಾಳ ಬಾಲ್ಯವೂ ತನ್ನ ತಾಯಿಗಿಂತ ಭಿನ್ನವಾಗಿರಲಿಲ್ಲ. ಪ್ರೌಢಾವಸ್ಥೆಗೆ ಬರುವಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪರಿಣಾಮ 14 ತುಂಬುವಾಗಲೇ ಕಂಕುಳಲ್ಲೊಂದು ಮಗು ನಗುತ್ತಿತ್ತು. ಆದರೆ ಆ ಮಗು ಬಲು ಬೇಗ ಸಾವನ್ನಪ್ಪಿತು. ಬಾಲ್ಯದಲ್ಲಿಯೇ ಬದುಕು ಲಯ ತಪ್ಪಿಸಿಕೊಂಡಾಗಿತ್ತು.

ವಯಸ್ಸಲ್ಲದ ವಯಸ್ಸಿನಲ್ಲಾದ ಈ ನೋವಿನ ಘಟನೆಗಳಿಂದ ಆಕೆಗೆ ತಕ್ಷಣ ಚೇತರಿಸಿಕೊಳ್ಳಲಾಗಲಿಲ್ಲ. ಇದರಿಂದ ಹೊರಬರುವ ಮಾರ್ಗವಾಗಿಯೋ ಏನೋ, ಓಪ್ರಾ ಹೊಸ ಸಂಬಂಧಗಳನ್ನು ಅರಸತೊಡಗಿದವಳು. ಆದರೆ ಅದ್ಯಾವೂ ಕೈ ಹಿಡಿಯಲಿಲ್ಲ. ಆಕೆ ಸಿಕ್ಕ ಎಲ್ಲಾ ಸಂಬಂಧಗಳೂ ಬಲುಬೇಗ ಮುರಿದು ಬೀಳುತ್ತಿತ್ತು. ಕೊನೆಗೆ ಓಪ್ರಾ ಟಿವಿ ಚಾನಲ್ ಸೇರಿದಳು. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಈಕೆಯ ವಯಸ್ಸು 19. ಆದರೆ ಇನ್ನೂ ಮಾಗದ ವಯಸ್ಸಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟವಳು ನೋಡಿ. ಭಾವನಾತ್ಮಕವಾಗಿ ಆಕೆಗೆ ತನ್ನ ವೃತ್ತಿಯಿಂದ ಬೇರೆಯಾಗುವುದು ಸಾಧ್ಯವಾಗುತ್ತಿರಲಿಲ್ಲ. ವರದಿ ಮಾಡುತ್ತಿದ್ದವಳು ಭಾವನಾತ್ಮಕ ವಿಷಯಗಳು ಬಂದಾಗ ಅತ್ತು ಬಿಡುತ್ತಿದ್ದಳು. ಆಕೆಯ ಗುಂಗುರು ಕೂದಲು, ಆಕೆಯ ‘ಸೌಂದರ್ಯ’ದ ಬಗ್ಗೆ ಚಾನಲ್ನಲ್ಲೇ ಅಪಸ್ವರಗಳಿದ್ದವು.

ಪತ್ರಿಕೋದ್ಯಮದಲ್ಲಿ ಹೊಸ ಸಂಬಂಧವೊಂದು ಬೆಳೆಯಿತು. ಕೊನೆಗೊಂದು ದಿನ ಆತ ಬಿಟ್ಟು ಹೋದಾಗ ಸುಸೈಡ್ ನೋಟ್ ಬರೆದು ಸಾಯಲು ಹೊರಟು ಬಿಟ್ಟಳು ಓಪ್ರಾ. ತೀವ್ರ ಒತ್ತಡದಿಂದ, ಲಯ ತಪ್ಪಿ ದಿನಚರಿಯಿಂದಾಗಿ 100 ಕೇಜಿಗೂ ಹೆಚ್ಚು ತೂಗುವ ದಢೂತಿಯಾದಳು. ‘ಕೊಕೇನ್’ ದಾಸಳಾದಳು. ಮಾದಕ ಪದಾರ್ಥ ಸೇವೆನೆ, ಸಿಕ್ಕ ಸಿಕ್ಕ ಗಂಡಸರೊಂದಿಗೆ ಸಂಪರ್ಕ ಆಕೆಯ ಬದುಕನ್ನು ಮೂರಾಬಟ್ಟೆ ಮಾಡಿತ್ತು. ಆದರೂ ಆಕೆಯಲ್ಲಿ ಪ್ರತಿಭೆ ಇತ್ತು. ಟಿವಿ ನಿರೂಪಣೆಯ ಕಲೆ ಆಕೆಗೆ ಒಲಿದು ಬಂದಿತ್ತು.

oprahಹಾಗೆ ನೋಡಿದರೆ ಆಕೆಯ ದೇಹ ಪ್ರಕೃತಿ ನಿರೂಪಕರ ಸಿದ್ಧ ಮಾದರಿಯ ಚೌಕಟ್ಟುಗಳಿಗೆ ಸವಾಲೆಸೆಯುವಂತಿದ್ದವು. ಬೆಳ್ಳಗೆ, ತೆಳ್ಳಗೆ.. ಉಹುಂ, ಆಕೆ ಆ ಯಾವ ಮಾನದಂಡಗಳಿಗೂ ಹೋಲಿಕೆಯಾಗುತ್ತಿರಲಿಲ್ಲ. ಹೀಗಿದ್ದೂ 1985ರಲ್ಲಿ ಈಕೆಯ ‘ಚಿಕಾಗೋ ಟಾಕ್ ಶೋ’ ಆರಂಭವಾದಾಗ ಜನ ಹುಚ್ಚೆದ್ದು ನೋಡಲು ಆರಂಭಿಸಿದರು. ಯಾವ ಮಟ್ಟಿಗೆ ಅಂದರೆ ಇವತ್ತಿಗೂ ಟಾಕ್ ಶೋ ವಿಭಾಗದಲ್ಲಿ ಅತೀ ಹೆಚ್ಚಿನ ಟಿಆರ್ಪಿ ದಾಖಲೆ ಇರುವುದು ಈಕೆಯ ಹೆಸರಿನಲ್ಲೇ.

ಆ ಹಂತಕ್ಕೆ ತಲುಪಿದ ನಂತರ ಆಕೆ ಹಿಂತಿರುಗಿ ನೋಡಿಲ್ಲ. ತನ್ನದೇ ಪ್ರೊಡಕ್ಷನ್ ಹೌಸ್ ಆರಂಭಿಸಿದಳು. ತನ್ನ ಬದುಕನ್ನು ತಾನೇ ಕಟ್ಟುತ್ತಾ ಹೋದಳು. ಸುದ್ದಿ ನಿರೂಪಣೆಯ ಆಚೆಗೂ ಸಾಧ್ಯತೆಗಳನ್ನು ತಡಕಾಡಿದಳು. ಸಾಹಿತ್ಯ, ಆಧ್ಯಾತ್ಮಿಕ, ಮನೋ ವಿಕಸನಗಳ ಶೋ ನಡೆಸಿ ಕೊಡಲಾರಂಭಿಸಿದಳು. ಆಕೆಯ ಭಾವನಾತ್ಮಕ ನಿರೂಪಣೆ ಶೈಲಿ, ಧ್ವನಿ, ಆಕೆಯ ಜ್ಞಾನದ ಮುಂದೆ ಋಣಾತ್ಮಕ ಅಂಶಗಳೆಲ್ಲಾ ಗೌಣವಾದವು.

ಒಂದೊಂದೇ ಮೆಟ್ಟಿಲು ಹತ್ತುತ್ತಾ ಬಂದವಳು 2008ರ ಹೊತ್ತಿಗೆ ವಿಶ್ವದಲ್ಲಿ ಯಾವ ಟಿವಿ ನಿರೂಪಕರೂ ಪಡೆಯದಷ್ಟು ಸಂಬಳ ಪಡೆಯುತ್ತಿದ್ದಳು. ಅವತ್ತು ಆಕೆ ವರ್ಷವೊಂದಕ್ಕೆ ಪಡೆಯುತ್ತಿದ್ದದ್ದು 1800 ಕೋಟಿ. ಕೊನೆಗೊಮ್ಮೆ ತನ್ನದೇ ಓಪ್ರಾ ವಿನ್’ಫ್ರೇ ನೆಟ್’ವರ್ಕ್ ಹೆಸರಿನಲ್ಲಿ ಚಾನಲ್ ಕಟ್ಟಿದಳು. ಓಪ್ರಾ ಡಾಟ ಕಾಂ, ಓಪ್ರಾ ರೇಡಿಯೋ ಹೀಗೆ ಒಂದೊಂದೇ ಕಂಪೆನಿ ಆರಂಭಿಸಿದಳು. ಇವತ್ತು ವಿಶ್ವದ ಶ್ರೀಮಂತ ಪತ್ರಕರ್ತರ ಪಟ್ಟಿಯಲ್ಲಿ ಈಕೆಗೂ ಒಂದು ಸ್ಥಾನ ಮೀಸಲಿದೆ. ಬಡತನಲ್ಲೇ ಮೇಲೆದ್ದು ಬಂದ ಓಪ್ರಾಳ ಇವತ್ತಿನ ಆಸ್ತಿ ಸುಮಾರು 20 ಸಾವಿರ ಕೋಟಿ.

ಪ್ರತಿಭೆಯನ್ನು ಬೆನ್ನಿಗಿಟ್ಟುಕೊಂಡು ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುವ ಹೆಸರು ಓಪ್ರಾ ವಿನ್’ಫ್ರೇ. ಮಾಧ್ಯಮಗಳಲ್ಲಿ ಭವಿಷ್ಯವಿಲ್ಲ, ಎಷ್ಟು ಮಾಡಿದರೂ ಅಷ್ಟೇ ಎಂದು ಆಸಕ್ತಿ ಕಳೆದುಕೊಳ್ಳುವ ಆತ್ಮಗಳಿಗೆ ಓಪ್ರಾ ವಿನ್’ಫ್ರೇ ಬತ್ತದ ಉತ್ಸಾಹದ ಚಿಲುಮೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top