An unconventional News Portal.

‘ಸೋ ಕಾಲ್ಡ್ ಅಭಿವೃದ್ಧಿ’ ಮತ್ತು ಇವತ್ತಿಗೂ ಕನಸಾಗಿಯೇ ಉಳಿದಿರುವ ನಿಕಾರಗುವಾದ ಕಾಲುವೆ ಯೋಜನೆ!

‘ಸೋ ಕಾಲ್ಡ್ ಅಭಿವೃದ್ಧಿ’ ಮತ್ತು ಇವತ್ತಿಗೂ ಕನಸಾಗಿಯೇ ಉಳಿದಿರುವ ನಿಕಾರಗುವಾದ ಕಾಲುವೆ ಯೋಜನೆ!

’16ನೇ ಶತಮಾನದಲ್ಲಿ ಸ್ಪಾನಿಶ್ ಸಂಶೋಧಕನೊಬ್ಬ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರಗಳನ್ನು ಜೋಡಿಸಲು ಇರುವ ಸಾಧ್ಯತೆಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಂಡ. ಫ್ರಾನ್ಸ್ ದೊರೆ ನೆಪೋಲಿಯನ್ 3, ಎರಡು ಸಮುದ್ರಗಳನ್ನು ಜೋಡಿಸಲು ಕಾಲುವೆಯೊಂದನ್ನು ಕಟ್ಟುವ ಕನಸು ಕಂಡಿದ್ದ. ಬೃಹತ್ ಪ್ರಮಾಣದಲ್ಲಿ ರೈಲು ಹಳಿ ಕಂಪನಿಯೊಂದನ್ನು ಬೆಳೆಸಿದ್ದ ಉದ್ಯಮಿ ಕಾರ್ನಿಯಸ್ ವೆಂಡರ್ಬಿಲ್ಟ್ ಒಂದು ಹಂತದಲ್ಲಿ ಕಾಲುವೆ ಕಟ್ಟಲು ಹಕ್ಕುಗಳನ್ನು ಪಡೆದುಕೊಂಡಿದ್ದ. ನಿಕಾರಗುವಾ (ಲ್ಯಾಟಿನ್ ಅಮೆರಿಕಾ ದೇಶ) ಇತಿಹಾಸ ಇಂತಹ 12ಕ್ಕೂ ಹೆಚ್ಚು ಕಾಲುವೆ ನಿರ್ಮಾಣ ಯೋಜನೆಗಳ ವಿಫಲತೆಗೆ ಸಾಕ್ಷಿಯಾಗಿದೆ…’

ಹೀಗಂತ ‘ನ್ಯೂ ಯಾರ್ಕ್ ಟೈಮ್ಸ್’ ಪತ್ರಿಕೆಗೆ ನಿಕಾರಗುವಾದ ಹೊಸ ಕಾಲುವೆ ಯೋಜನೆ ಕುರಿತು ತಮ್ಮ ವರದಿಯನ್ನು ಆರಂಭಿಸುತ್ತಾರೆ ಪತ್ರಕರ್ತೆ ಸುಝಾನೆ ಡಾಲಿ. ಅಲ್ಲಿ ಇವತ್ತಿಗೂ ಕಾಲುವೆ ಯೋಜನೆ ವಿರುದ್ಧ ಪ್ರತಿಭಟನೆ ನಡೆಯುತ್ತಲೇ ಇದೆ.

ಏನಿದು ಯೋಜನೆ- ಆಲೋಚನೆ?:

ಈ ಬಾರಿ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದು ಚೈನಾದ ಕೋಟ್ಯಾಧಿಪತಿ ವ್ಯಾಂಗ್ ಜಿಂಗ್. ಹೀಗಾಗಿ, ಬಹು ನಿರೀಕ್ಷಿತ ಅಭಿವೃದ್ಧಿ ಯೋಜನೆಯೊಂದರ ಅನುಷ್ಠಾನಕ್ಕೆ ಲ್ಯಾಟಿನ್ ಅಮೆರಿಕಾ (ಇವತ್ತಿನ ಅಮೆರಿಕಾಸ್) ಭೂ ಭಾಗದಲ್ಲಿರುವ ಪುಟ್ಟ ದೇಶ ನಿಕಾರಗುವಾ ಅಣಿಯಾಗಿದೆ. ಆಡಳಿತ ವ್ಯವಸ್ಥೆ ಪ್ರತಿಭಟನೆಗಳ ಆಚೆಗೂ, ಜನ ಮನ್ನಣೆಯನ್ನು ಉಳಿಸಿಕೊಂಡು ಮುಂದುವರಿಯುವ ಪ್ರಯತ್ನ ಮಾಡುತ್ತಿದೆ.

nicaragua-canel-earth-grab

ಕಾರಣ ಇಷ್ಟೆ, ಇದೊಂದು ಕಾಲುವೆ ನಿರ್ಮಾಣವಾದರೆ ಲ್ಯಾಟಿನ್ ಅಮೆರಿಕಾ ದೇಶಗಳ ಪೈಕಿ ಬಡತನ ರೇಖೆಯಲ್ಲಿ 2ನೇ ಸ್ಥಾನದಲ್ಲಿರುವ ದೇಶ ನಿಕಾರಗುವಾ ‘ಅಭಿವೃದ್ಧಿ’ ಹೊಂದುತ್ತದೆ ಎಂಬ ಭಾವನೆ ಅಲ್ಲಿನ ಜನರಲ್ಲಿ ಹಾಗೂ ಸರಕಾರದಲ್ಲಿದೆ. ಇದಕ್ಕೆ ಕಾರಣ ಅಲ್ಲೇ ಪಕ್ಕದಲ್ಲಿರುವ ವಿಶ್ವವಿಖ್ಯಾತ ಪನಾಮ ಕಾಲುವೆ. ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಮಹಾಸಾಗರವನ್ನು ಮಧ್ಯದಲ್ಲಿ ತುಂಡರಿಸಿ, ಜೋಡಿಸಿರುವ ಈ ಕಾಲುವೆ ಇವತ್ತು ಅಂತಾರಾಷ್ಟ್ರೀಯ ಸಮುದ್ರ ಉದ್ಯಮದ ಪ್ರಮುಖ ಅಂಗವಾಗಿದೆ. ಇಲ್ಲಿ ಪ್ರತಿ ವರ್ಷ ಸಾವಿರಾರು ಬೃಹತ್ ಪ್ರಮಾಣದ ಹಡಗುಗಳು ಹಾದು ಹೋಗುತ್ತವೆ. ಭಾರಿ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇದನ್ನು ಹಿಂದೆ ಅಮೆರಿಕಾ ಹಾಗೂ ಪನಾಮ ಸರಕಾರ  ನಿರ್ವಹಿಸುತ್ತಿದ್ದವು. ಇತ್ತೀಚೆಗಷ್ಟೆ ಪನಾಮ ಸರಕಾರವೇ ಅದನ್ನು ವಹಿಸಿಕೊಂಡು ನಡೆಸುತ್ತಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ನಿಕಾರಗುವಾ ಕಾಲುವೆ ನಿರ್ಮಾಣ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ. ಗಮನಾರ್ಹ ಸಂಗತಿ ಏನೆಂದರೆ ಇದರ ಹಿಂದಿರುವುದು ಚೈನಾ ಮೂಲದ ಉದ್ಯಮಿ.

ರಾಜಕೀಯದ ಆಚೆಗೆ: 

ಸಾಮಾನ್ಯವಾಗಿ ಎಲ್ಲಿಯೇ ‘ಅಭಿವೃದ್ಧಿ’ ಹೆಸರಿನ ಯೋಜನೆ ಜಾರಿಯಾದರೂ ರಾಜಕೀಯದ ವಾಸನೆ ಮೂಗಿಗೆ ಬಡಿಯುತ್ತದೆ. ನಮ್ಮಲ್ಲಿಯೇ ‘ಉಕ್ಕಿನ ಮೇಲು ಸೇತುವೆ’ ವಿಚಾರ ಕೂಡ ಪರ ಮತ್ತು ವಿರೋಧಕ್ಕೆ, ರಾಜಕೀಯಕ್ಕೆ, ಅನುಮಾನಗಳಿಗೆ ಕಾರಣವಾಗಿದೆ. ಇದರ ಆಚೆಗೆ, ಪರಿಸರ ಮತ್ತು ಅದರ ಸುತ್ತಲಿನ ವೈಜ್ಞಾನಿಕ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕಾದ ವಿಜ್ಞಾನಿಗಳ ವಲಯದಲ್ಲಿ ಕೆಲಸ ಮಾಡುತ್ತಿರುವವರು ದಿಕ್ಕು ತಪ್ಪಿದಂತಾಗಿದ್ದಾರೆ. ಹಾಗೆ ನೋಡಿದರೆ, ಈ ಬಾರಿ ನಿಕರಗುವಾದ ಕಾಲುವೆ ವಿಚಾರ ರಾಜಕೀಯದ ಆಚೆಗೂ ಮಹತ್ವ ಪಡೆದುಕೊಂಡಿದೆ. ಅದಕ್ಕೆ ಕಾರಣ, ಅಲ್ಲಿನ ರಮ್ಯ, ಮನೋಹರ ನಿಸರ್ಗ ಸೌಂದರ್ಯ.

ಇವತ್ತಿನ ಆರ್ಥಿಕತೆ ಮಾನದಂಡಗಳನ್ನು ಇಟ್ಟುಕೊಂಡು ನೋಡಿದರೆ, ಲ್ಯಾಟಿನ್ ಅಮೆರಿಕಾ ದೇಶಗಳ ಪೈಕಿ ನಿಕಾರಗುವಾ ಬಡತನ ರೇಖೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ, ಇಲ್ಲಿನ ನಿಸರ್ಗ ಸೌಂದರ್ಯ, ಮನಸೆಳೆಯುವ ಸಮುದ್ರ ತೀರಗಳು ಬೆಲೆ ಕಟ್ಟಲಾದ ಪ್ರಾಕೃತಿಕ ಪರಿಸರವನ್ನು ಈ ದೇಶಕ್ಕೆ ನೀಡಿದೆ. ಹೀಗಾಗಿಯೇ, ಕಾಲುವೆ ನಿರ್ಮಾಣದ (ಪನಾಮಾಕ್ಕಿಂತ ಮೂರು ಪಟ್ಟು ದೊಡ್ಡದು) ಯೋಜನೆ ಬಂದಾಗಲೆಲ್ಲಾ ವಿರೋಧಗಳು ಹುಟ್ಟಿಕೊಳ್ಳುತ್ತಿವೆ.

ಮಾಧ್ಯಮಗಳಿಗೆ ನಿರ್ಬಂಧ:

ಪ್ರತಿ ಸಾರಿಯೂ ಯೋಜನೆ ವಿಚಾರದಲ್ಲಿ ಜನ ವಿರೋಧ ವ್ಯಕ್ತವಾದ ಇತಿಹಾಸವನ್ನು ಬಲ್ಲ ಅಲ್ಲಿನ ಸರಕಾರ ಈ ಬಾರಿ, ಯೋಜನೆ ಆರಂಭಕ್ಕೆ ಮುನ್ನವೇ ಅಲ್ಲಿ ಮಾಧ್ಯಮಗಳ ಮೇಲೆ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತಂದಿದೆ. ವಿಶೇಷವಾಗಿ ಕಾಲುವೆ ವಿಚಾರದಲ್ಲಿ ನಕಾರಾತ್ಮಕ ಮಾಹಿತಿ ಹೊರಬೀಳದಂತೆ ತಡೆಯುವ ಪ್ರಯತ್ನ ಮಾಡುತ್ತಿದೆ. ಹೀಗಿದ್ದೂ, ಅಲ್ಲಿನ ಸ್ಥಳೀಯ ಮಾಧ್ಯಮ ‘ಕಾನ್ಫಿಡೆನ್ಝಿಯಲ್’ ಕಾಲುವೆ ಕಾಮಗಾರಿಯ ಕುರಿತು ವೈಜ್ಞಾನಿಕ ತನಿಖಾ ವರದಿಯೊಂದನ್ನು ಮಾಡಿತು.

nicaragua-canel-media-study-gfx

ಕೃಪೆ: ಆಲ್ ಜಝೀರಾ.

ಇದು ‘ಕಾನ್ಫಿಡೆನಝಿಯಲ್’ ವರದಿ ನೀಡಿದ ಅಂಕಿ ಅಂಶಗಳು. ಪನಾಮಾ ಕಾಲುವೆ ರೀತಿಯಲ್ಲಿಯೇ ಇಲ್ಲಿಯೂ ಕಾಲುವೆ ನಿರ್ಮಿಸಬೇಕಾದ ಬೃಹತ್ ಹಡಗುಗಳಿಗೆ ಹಾದು ಹೋಗುವ ಅವಕಾಶವನ್ನು ನೀಡಬೇಕಾಗುತ್ತದೆ. ಅಂತಹ ಹಡಗುಗಳಿಗೆ ಸಮುದ್ರ ಕನಿಷ್ಟ 30 ಮೀಟರ್ ಆಳ ಇರಬೇಕಾಗುತ್ತದೆ. ಆದರೆ, ನಿಕಾರಗುವಾದಲ್ಲಿ ಸಮುದ್ರದ ಮಟ್ಟ ಹಲವು ಕಡೆಗಳಲ್ಲಿ ಅದಕ್ಕಿಂತ ಕಡಿಮೆ ಇದೆ ಎಂದು ಮಾಧ್ಯಮ ಸಂಸ್ಥೆ ಸಂಶೋಧನಾ ವರದಿ ಮಾಡಿತು.

ಮುಂದುವರಿದ ಹೋರಾಟ:

ಸಧ್ಯದಲ್ಲಿಯೇ ನಿಕಾರಗುವಾದಲ್ಲಿ ಕಾಲುವೆ ಕಾಮಗಾರಿ ಶುರುವಾಗಲಿದೆ ಎಂಬ ಅಂದಾಜಿದೆ. ಆದರೆ, ಅದನ್ನು ನಿಲ್ಲಿಸುವ ನಿಟ್ಟಿನಲ್ಲಿ ಸ್ಥಳೀಯ ವಿಜ್ಞಾನಿಗಳು, ವಿಶ್ವವಿದ್ಯಾನಿಲಯಗಳ ತಜ್ಞರು, ಕಾನೂನು ಹೋರಾಟ ಮಾಡುವ ಸಂಸ್ಥೆಗಳು ಮತ್ತು ಕೆಲವು ಮಾಧ್ಯಮಗಳು ಕೆಲಸ ಮುಂದುವರಿಸಿದ್ದಾರೆ. ಇಲ್ಲಿ ಹೋರಾಟಕ್ಕೊಂದು ಸಮಗ್ರತೆ ಇದೆ. ಅದನ್ನು ಕ್ರಿಯಾಶೀಲವಾಗಿ ಮುಂದಿಡುವ ಕೆಲಸ ಆಗುತ್ತಿದೆ. ಮುಂದೊಂದು ದಿನ ನಿಕಾರಗುವಾ ಎಂಬ ದೇಶ, ‘ಸೋ ಕಾಲ್ಡ್ ಅಭಿವೃದ್ಧಿ’ಯ ಪ್ರತೀಕವಾಗಿರುವ ಕಾಲುವೆ ನಿರ್ಮಾಣವನ್ನು ಕೈ ಬಿಟ್ಟು, ಮುಂದಿನ ತಲೆಮಾರಿಗೆ ಅಲ್ಲಿನ ಪ್ರಶಾಂತ ಪರಿಸರವನ್ನು ಉಳಿಸಿಕೊಳ್ಳಲಿದೆಯಾ? ಕಾದು ನೋಡಬೇಕಿದೆ.

For More: 

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top