An unconventional News Portal.

ಕಚ್ಚಾ ತೈಲ ದರ ಇನ್ನಷ್ಟು ಇಳಿಕೆ ಸಾಧ್ಯತೆ: ನಿಜಕ್ಕೂ ಪೆಟ್ರೋಲ್ ಬೆಲೆ ಎಷ್ಟಾಗಬೇಕು ಗೊತ್ತಾ?

ಕಚ್ಚಾ ತೈಲ ದರ ಇನ್ನಷ್ಟು ಇಳಿಕೆ ಸಾಧ್ಯತೆ: ನಿಜಕ್ಕೂ ಪೆಟ್ರೋಲ್ ಬೆಲೆ ಎಷ್ಟಾಗಬೇಕು ಗೊತ್ತಾ?

ಕತಾರ್ ರಾಜಧಾನಿ ದೋಹಾದಲ್ಲಿ ಭಾನುವಾರ ನಡೆದ ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಮಾತುಕತೆ ಮುರಿದು ಬಿದ್ದಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ಗೆ ಇನ್ನಷ್ಟು ಕುಸಿಯುವ ಲಕ್ಷಣಗಳು ಗೋಚರಿಸಿವೆ.

ಕಚ್ಚಾ ತೈಲದ ಉತ್ಪಾದನೆಯ ಮೇಲೆ ಕಡಿವಾಣ ಹಾಕುವ ಕುರಿತು ಕಳೆದ ಹಲವು ತಿಂಗಳುಗಳಿಂದ ಕಸರತ್ತುಗಳು ಮುಂದುವರಿದಿವೆ. ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಇರಾನ್ ಕಚ್ಚಾ ತೈಲ ಉತ್ಪಾದನೆಗೆ ಇದ್ದ ಕಡಿವಾಣಗಳು ಕಳಚಿಹೋಗಿವೆ. ಇದೇ ವೇಳೆ, ಸೌದಿ ಅರೇಬಿಯಾ ಕೂಡ ತನ್ನ ಉತ್ಪಾದನೆಯನ್ನು ತಗ್ಗಿಸುವುದಕ್ಕೆ ಹಿಂಜರಿಯುತ್ತಿದೆ. ಒಂದು ವೇಳೆ, ತನ್ನ ಉತ್ಪಾದನೆಗೆ ಕಡಿವಾಣ ಹಾಕಿದರೆ, ಸೌದಿಗಿರುವ ಗಿರಾಕಿಗಳು ಒಪೆಕ್ ಹೊರಗಿರುವ ಅಮೆರಿಕಾ ಪಾಲಾಗಬಹುದು ಎಂಬ ಆತಂಕವನ್ನು ಅದು ವ್ಯಕ್ತಪಡಿಸಿದೆ.

ಭಾನುವಾರ ನಡೆದ ಒಪೆಕ್ ಸಭೆಗೆ ಸೌದಿ ಗೈರುಹಾಜರಾಗಿತ್ತು. ಇರಾನ್ ಯಾವುದೇ ಒಪ್ಪಿಗೆ ಸೂಚಿಸದೆ ಸಭೆಯಿಂದ ಹೊರನಡೆದಿದೆ. ಈ ಹಿನ್ನೆಲೆಯಲ್ಲಿ, ಕಚ್ಚಾ ತೈಲ ಉತ್ಪಾದನೆ ಮೇಲೆ ಕಡಿವಾಣ ಹಾಕಿಯೇ ತೀರಬೇಕು ಎಂದು ಹೊರಟಿದ್ದ ಒಪೆಕ್ ನಡೆಗೆ ಭಾರಿ ಹಿನ್ನಡೆಯಾಗಿದೆ. ಮತ್ತೆ ಜೂನ್ ತಿಂಗಳಿನಲ್ಲಿ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ.

ಕಚ್ಚಾ ತೈಲ ಉತ್ಪಾದನೆಯಲ್ಲಿ ಕಡಿವಾಣಗಳಿಲ್ಲದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿಯಲು ಶುರು ಮಾಡಿದೆ. ಇದು ಈಕ್ವೆಡಾರ್ ಹಾಗೂ ವೆನಿಝುವೆಲಾ ದೇಶಗಳ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರಿದೆ. 1940ರಿಂದ ಈಚೆಗೆ ಚೇತರಿಸಿಕೊಂಡಿದ್ದ ವೆನಿಝುವೆಲಾದ ಆರ್ಥಿಕತೆ ಈ ವರ್ಷ ಶೇ. 10ರಷ್ಟು ಕುಸಿಯಬಹುದು ಎಂದು ಅಂದಾಜಿಸಲಾಗಿದೆ.

ತೈಲ ಉತ್ಪಾದನಾ ರಾಷ್ಟ್ರಗಳಾದ ಅಲ್ಜೇರಿಯಾ, ಅಂಗೋಲ, ಈಕ್ವೆಡಾರ್, ಇಂಡೋನೇಷಿಯಾ, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ಕತಾರ್, ಸೌದಿ ಅರೇಬಿಯಾ, ಯುಎಇ ಹಾಗೂ ವೆನಿಝುವೇಲಾ ಒಪೆಕ್ ಸೇರಿದ ರಾಷ್ಟ್ರಗಳು.

ಬೆಲೆ ಇಳಿಕೆ:

opec-oil-prices-down

ತೈಲ ಉತ್ಪಾದನಾ ದೇಶಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಆದಾಯ ಕಡಿಮೆಯಾದರೂ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ದಿನದಿಂದ ದಿನಕ್ಕೆ ಕುಸಿಯಲು ಶುರುಮಾಡಿದೆ. ಜನವರಿಯಿಂದ ಈಚೆಗೆ, ಪ್ರತಿ ಬ್ಯಾರೆಲ್ಗೆ 20ರಿಂದ 40 ಡಾಲರ್ ನಡುವೆ ಬೆಲೆ ಹೋಯ್ದಾಡುತ್ತಿದೆ. ಭಾನುವಾರದ ಒಪೆಕ್ ಮಾತುಕತೆ ಮುರಿದು ಬಿದ್ದ ಹಿನ್ನೆಲೆಯಲ್ಲಿ, ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 35 ಡಾಲರ್ ಅಥವಾ ಅದಕ್ಕಿಂತ ಕಡಿಮೆಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯದ ಲೆಕ್ಕಾಚಾರ:

ಸದ್ಯದ ಜಾಗತಿಕ ತೈಲ ಮಾರುಕಟ್ಟೆಯ ಕಚ್ಚಾತೈಲ ಬೆಲೆಯನ್ನು ಆಧಾರವಾಗಿಟ್ಟುಕೊಂಡು ನೋಡಿದರೆ, ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆಯಲ್ಲಿ ಭಾರಿ ಕಡಿತವಾಗಬೇಕಾದ ಅಗತ್ಯವಿದೆ.

ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 35 ಡಾಲರ್ ಅಂದುಕೊಂಡರೆ ಭಾರತೀಯ ರೂಪಾಯಿಗಳಲ್ಲಿ, 2380 ರೂಪಾಯಿಗಳಾಗಬಹುದು. ಒಂದು ಬ್ಯಾರಲ್ ಕಚ್ಚಾ ತೈಲದಿಂದ 40 ಲೀ. ಪೆಟ್ರೋಲ್,  54 ಲೀಟರ್ ಡೀಸೆಲ್, 85.5 ಲೀ. ಗ್ಯಾಸೋಲಿನ್, 16 ಲೀ. ಜಟ್ ಫ್ಯೂಯಲ್, 50 ಲೀಟರ್ ಸೀಮೆಎಣ್ಣೆ ಮತ್ತಿತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಸ್ಕರಿಸಲಾಗುತ್ತದೆ ಎಂಬುದು ಅಂದಾಜು.

ಇದಕ್ಕೆ ಆಮದು ಸುಂಕ, ಸಂಸ್ಕರಣಾ ವೆಚ್ಚ, ಸಾಗಣೆ ವೆಚ್ಚ, ಕೇಂದ್ರ ಹಾಗೂ ರಾಜ್ಯದ ತೆರಿಗೆಗಳು ಸೇರಿಕೊಂಡರೂ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆ ಆಗಬೇಕಿರುವುದನ್ನು ಈ ಲೆಕ್ಕಾಚಾರ ಹೇಳುತ್ತಿದೆ.

ಆದರೂ, ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳಲ್ಲಿ ಹೇಳಿಕೊಳ್ಳುವಂತಹ ಇಳಿಕೆ ಕಾಣಿಸದಿರುವುದೇ ಅಚ್ಚರಿ ಮೂಡಿಸುವಂತಿದೆ.

Top