An unconventional News Portal.

ಒಪೆಕ್ ದೇಶಗಳಲ್ಲಿ ‘ಕದನ ವಿರಾಮ’ ಘೋಷಣೆ: ಕಚ್ಚಾ ತೈಲದ ಬೆಲೆ ಏರಿಕೆಯ ಮುನ್ಸೂಚನೆ!

ಒಪೆಕ್ ದೇಶಗಳಲ್ಲಿ ‘ಕದನ ವಿರಾಮ’ ಘೋಷಣೆ: ಕಚ್ಚಾ ತೈಲದ ಬೆಲೆ ಏರಿಕೆಯ ಮುನ್ಸೂಚನೆ!

ಎರಡೂವರೆ ವರ್ಷಗಳ ನಂತರ ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ (ಒಪೆಕ್)ದಲ್ಲಿ ಒಮ್ಮತ ಮೂಡಿದೆ.

ಪೈಪೋಟಿಯಲ್ಲಿ ಕಚ್ಚಾ ತೈಲವನ್ನು ಉತ್ಪಾದನೆ ಮಾಡುತ್ತಿದ್ದ ದೇಶಗಳು, ಕೊನೆಗೂ ತಮ್ಮ ಉತ್ಪಾದನೆಗೆ ಕಡಿವಾಣ ಹಾಕಲು ಬುಧವಾರ ಒಪ್ಪಂದಕ್ಕೆ ಬಂದಿವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪೆಟ್ರೋಲ್ ಸೇರಿದಂತೆ ಇಂಧನ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಲಿದೆ. ಸಹಜವಾಗಿಯೇ ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಮುನ್ಸೂಚನೆ ಸಿಕ್ಕಿದೆ.

2008ರಿಂದ ಸೌದಿ ಅರೇಬಿಯಾ ಮತ್ತು ಇರಾನ್ ನಡುವಿನ ತಿಕ್ಕಾಟಗಳ ಕಾರಣಗಳಿಗಾಗಿ ಕಚ್ಚಾ ತೈಲ ಉತ್ಪಾದನೆ ಪೈಪೋಟಿಯಲ್ಲಿ ನಡೆಯಲಾರಂಭಿಸಿತ್ತು. ಇದರಿಂದ ತೈಲ ಉತ್ಪಾದನಾ ರಾಷ್ಟ್ರಗಳು ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸುತ್ತಿದ್ದವು. ಕೆಲವು ದೇಶಗಳ ಆರ್ಥಿಕತೆಯೇ ದಿವಾಳಿಯ ಅಂಚನ್ನು ತಲುಪಿತ್ತು. ಹೀಗಿದ್ದರೂ, ಒಪೆಕ್ ಸಭೆಗಳಲ್ಲಿ ಕಚ್ಚಾ ತೈಲ ಉತ್ಪಾದನೆಗೆ ಕಡಿವಾಣ ಹಾಕುವಲ್ಲಿ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಇರಾನ್ ಮತ್ತು ಸೌದಿ ನಡುವಿನ ಬಿಕ್ಕಟ್ಟು ಇದಕ್ಕೆ ಕಾರಣವಾಗಿತ್ತು. ಇದೀಗ, ಎರಡೂವರೆ ವರ್ಷಗಳ ಹಗ್ಗ ಜಗ್ಗಾಟದ ನಂತರ ಒಕ್ಕೂಟವು ಒಮ್ಮತಕ್ಕೆ ಬರಲು ಒಪ್ಪಿಕೊಂಡಿದೆ.

“ಒಪೆಕ್ ಸಭೆಯಲ್ಲಿ ಅಪರೂಪದ ನಿರ್ಣಯಕ್ಕೆ ಬರಲಾಗಿದೆ. ಎರಡೂವರೆ ವರ್ಷಗಳ ನಂತರ ಒಕ್ಕೂಟವು ಕಚ್ಚಾತೈಲ ಮಾರುಕಟ್ಟೆಯನ್ನು ಸಮೀಕರಣ ಮಾಡಲು ಒಪ್ಪಿಕೊಂಡಿದೆ,” ಎಂದು ಇರಾನ್ ತೈಲ ಸಚಿವ ಬಿಝಾನ್ ಝಾಂಗ್ನೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದಿನ ಸಭೆಗಳಲ್ಲಿ ಬಿಝಾನ್ ಮತ್ತು ಸೌದಿ ಅರೇಬಿಯಾ ನಡುವೆ ಭಾರಿ ತಿಕ್ಕಾಟಗಳು ನಡೆದಿದ್ದವು.

ಸದ್ಯ ಒಟ್ಟಾರೆ ಒಪೆಕ್ ದೇಶಗಳಿಂದ ಒಂದು ದಿನಕ್ಕೆ 33. 24 ಮಿಲಿಯನ್ ಬಿಪಿಡಿ (ಬ್ಯಾರಲ್ ಪರ್ ಡೇ) ಉತ್ಪಾದನೆಯಾಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು 32. 5 ರಿಂದ 33. 00 ಬಿಪಿಡಿಗೆ ಇಳಿಸಲು ಸಭೆ ಒಪ್ಪಿಕೊಂಡಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದರೆ ಪ್ರತಿದಿನ ಸುಮಾರು 7 ಲಕ್ಷ ಬಿಪಿಡಿಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ.

ನವೆಂಬರ್ ತಿಂಗಳಿನಲ್ಲಿ ಮತ್ತೆ ನಡೆಯಲಿರುವ ಒಪೆಕ್ ಸಭೆಯಲ್ಲಿ ಯಾವ ಯಾವ ದೇಶಗಳು ಎಷ್ಟು ಉತ್ಪಾದನೆಗೆ ಕಡಿವಾಣ ಹಾಕಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಜತೆಗೆ, ಒಪೆಕ್ ಹೊರಗಿರುವ ತೈಲ ಉತ್ಪಾದನಾ ದೇಶ ರಷ್ಯಾಗೂ ಉತ್ಪಾದನೆ ಮೇಲೆ ಕಡಿವಾಣ ಹಾಕುವಂತೆ ಕರೆ ನೀಡಲಾಗಿದೆ.

 

“ಕಚ್ಚಾ ತೈಲು ಉತ್ಪಾದನೆ ಸುತ್ತ ನಡೆಯುತ್ತಿದ್ದ ಯುದ್ಧಕ್ಕೆ ವಿರಾಮ ಬಿದ್ದಿದೆ. ಇದು ಒಪೆಕ್ ಗೆಲುವು,” ಎಂದು ತೈಲ ಮಾರುಕಟ್ಟೆಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ಮುನ್ಸೂಚನೆ ನೀಡಿದೆ. ಇದು ಭಾರತದಲ್ಲಿಯೂ ಇಂಧನ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನು ಮುಂದಿಟ್ಟಿದೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದರೂ, ಭಾರತದಲ್ಲಿ ಮಾತ್ರ ಇಂಧನ ಬೆಲೆ ಇಳಿಕೆಯಾಗಿರಲಿಲ್ಲ. ಈ ಕುರಿತು ಇನ್ನೊಂದು ವರದಿ ಇಲ್ಲಿದೆ ನೋಡಿ.

 

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top