An unconventional News Portal.

ಕನಕ ನಡೆಗೆ ದಲಿತ- ದಮನಿತರ ‘ಪರ್ಯಾಯ’: ಮತ್ತೊಂದು ಸಂಘರ್ಷಕ್ಕೆ ಸಾಕ್ಷಿಯಾಗಲಿದೆಯಾ ಉಡುಪಿ?

ಕನಕ ನಡೆಗೆ ದಲಿತ- ದಮನಿತರ ‘ಪರ್ಯಾಯ’: ಮತ್ತೊಂದು ಸಂಘರ್ಷಕ್ಕೆ ಸಾಕ್ಷಿಯಾಗಲಿದೆಯಾ ಉಡುಪಿ?

ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸೈದ್ಧಾಂತಿಕ ಸಂಘರ್ಷಕ್ಕೆ ಉಡುಪಿ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ಪ್ರತಿಕ್ರಿಯೆ ರೂಪದಲ್ಲಿ ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತಂಡ ನೀಡಿದ್ದ ‘ಕನಕ ನಡೆ’ಗೆ ವಿರುದ್ಧವಾಗಿ ‘ದಲಿತ ಧಮನಿತರ ಹೋರಾಟ ಸಮಿತಿ’ ‘ಸ್ವಾಭಿಮಾನಿ ನಡೆ’ ಮಾಡುವುದಾಗಿ ಬುಧವಾರ ಘೋಷಿಸಿದೆ. ಹೀಗಾಗಿ ಇದೇ 23ನೇ ತಾರೀಖು, ಉಡುಪಿಯಲ್ಲಿ ಸೈದ್ಧಾಂತಿಕ ವಿಚಾರಗಳಲ್ಲಿ ವಿರುದ್ಧ ದ್ರುವಗಳಾಗಿರುವ ಎರಡು ತಂಡಗಳು ಒಟ್ಟಿಗೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿವೆ. ಸಹಜವಾಗಿಯೇ, ಇದು ಸಾಮಾಜಿಕ ಜಾಲತಾಣಗಳ ಆಚೆಗೆ, ವಾಸ್ತವದಲ್ಲಿ ಪರ ಮತ್ತು ವಿರೋಧದ ನೆಲೆಗಳನ್ನು ತಳಮಟ್ಟದಲ್ಲಿ ಮುಖಾಮುಖಿಯಾಗಿಸುವ ಸಾಧ್ಯತೆಗಳನ್ನು ಮುಂದೆ ಮಾಡಿದೆ.

ಹಿನ್ನೆಲೆ:

ಅಕ್ಟೋಬರ್ 9 ರಂದು ಉಡುಪಿಯಲ್ಲಿ ‘ಆಹಾರ ನಮ್ಮ ಆಯ್ಕೆ – ಭೂಮಿ ನಮ್ಮ ಹಕ್ಕು’ ಘೋಷ ವಾಕ್ಯದೊಂದಿಗೆ ದಲಿತ ದಮನಿತರ ಹೋರಾಟ ಸಮಿತಿ ‘ಚಲೋ ಉಡುಪಿ’ ಸಮಾವೇಶ ನಡೆಸಿತ್ತು. ಇದಕ್ಕೆ ಎರಡು ದಿನಗಳ ಮೊದಲು ಚಕ್ರವರ್ತಿ ಸೂಲಿಬೆಲೆ, ‘ಸುಂದರ ಉಡುಪಿ ಸದ್ಯದಲ್ಲೇ ಕೊಳಕಾಗುವ ಲಕ್ಷಣಗಳು ದಟ್ಟವಾಗಿವೆ. ಆದಷ್ಟು ಬೇಗ, #ಸ್ವಚ್ಛ_ಉಡುಪಿ ಮಾಡಬೇಕಾದ ಅವಶ್ಯಕತೆ ಇದೆ. ಜೊತೆಯಾಗುವಿರಾ?” ಎಂಬ ಫೇಸ್ಬುಕ್ಕಿನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆಗಳು ‘ಚಲೋ ಉಡುಪಿ’ ಸಮಾರೋಪದ ವೇದಿಕೆಯಲ್ಲಿ ಬಂದಿತ್ತು. ಇದಾದ ನಂತರ ‘ಯುವ ಬ್ರಿಗೇಡ್’ ವತಿಯಿಂದ ‘ಕನಕ ನಡೆ’ ಹಮ್ಮಿಕೊಂಡಿತು. ಈ ಸಮಯದಲ್ಲಿ ‘ಸಮಾಚಾರ’ದ ಜತೆ ಮಾತನಾಡಿದ್ದ ಸೂಲಿಬೆಲೆ, ‘ಕನಕ ನಡೆ ಯಾರ ವಿರುದ್ಧವೂ ಅಲ್ಲ; ಉಡುಪಿಯನ್ನು ಸ್ವಚ್ಚ ಮಾಡುವ ಕೆಲಸ’ ಎಂಬ ಅರ್ಥದಲ್ಲಿ ಪ್ರತಿಕ್ರಿಯೆ ನೀಡಿದ್ದರು. ನಂತರ ಟಿವಿ ಮಾಧ್ಯಮಗಳಲ್ಲಿ ‘ಚಲೋ ಉಡುಪಿ’, ಪಂಕ್ತಿ ಭೇದ, ಕನಕ ನಡೆಗಳ ಕುರಿತು ಪ್ರೈಂ ಟೈಮ್ ಚರ್ಚೆಗಳು ನಡೆದಿದ್ದವು.

'ಚಲೋ ಉಡುಪಿ' ಸಮಾವೇಶಕ್ಕೆ ಮೊದಲು ಸೂಲಿಬೆಲೆ ಹಾಕಿದ ಪೋಸ್ಟ್

‘ಚಲೋ ಉಡುಪಿ’ ಸಮಾವೇಶಕ್ಕೆ ಮೊದಲು ಸೂಲಿಬೆಲೆ ಹಾಕಿದ ಪೋಸ್ಟ್

ಆರಂಭದಲ್ಲಿ ‘ಕನಕ ನಡೆ’ ಕಮ್ಯೂನಿಷ್ಟರ ವಿರುದ್ಧ ಮಾತ್ರ ಎಂದಿದ್ದ ಸೂಲಿಬೆಲೆ, “ಉಡುಪಿ ಸ್ವಚ್ಛಗೊಳಿಸುವುದಷ್ಟೇ ನಮ್ಮ ಉದ್ದೇಶ” ಎಂದಿದ್ದರು. ಮತ್ತೆ ಟಿವಿ ಚರ್ಚೆಗಳಲ್ಲಿ ಸೂಲಿಬೆಲೆ ಹಾಗೆ ಹೇಳಿಯೇ ಇಲ್ಲ ಎಂದಿದ್ದ ಅವರ ಹಿಂಬಾಲಕರು “ಇದು ಕಮ್ಯೂನಿಷ್ಟರ ವಿರುದ್ಧ ನಡೆಯುತ್ತಿರುವ ಅಭಿಯಾನ,” ಎಂದಿದ್ದರು. ಕನಕ ನಡೆಯನ್ನು ನಡೆಸುವುದಾಗಿ ಘೋಷಿಸಿದ್ದರು.

ಬುಧವಾರದ ಬೆಳವಣಿಗೆಗಳು:

ಬುಧವಾರ ‘ದಲಿತ ದಮನಿತರ ಹೋರಾಟ ಸಮಿತಿ’ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಭೇಟಿಯಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ನೀಡಿದೆ. “ಸೂಲಿಬೆಲೆ ಮೊದಲಾದವರು ‘ಸಂಘಟಿತ ಮತ್ತು ಘೋಷಿತಾ ಅಸ್ಪೃಷ್ಯತೆ ಆಚರಣೆ’ ನಡೆಸುತ್ತಿದ್ದಾರೆ. ‘ಕನಕ ನಡೆ’ ಕಾನೂನುಬಾಹಿರ, ಸಂವಿಧಾನ ಬಾಹಿರ ಕೃತ್ಯವಾಗಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ಕೊಡಬಾರದು. ಕನಕದಾಸರ ಹೆಸರಿನಲ್ಲಿ ‘ಕನಕ ನಡೆ’ ನಡೆಸಿ ಕನಕದಾಸರನ್ನು ಅವಮಾನಿಸುವ ಕ್ರಮವನ್ನು ಖಂಡಿಸಿ ಅದೇ ದಿನ ‘ದಲಿತರ ಸ್ವಾಭಿಮಾನಿ ನಡೆ’ ಹಮ್ಮಿಕೊಂಡಿದ್ದೇವೆ. ಇದಕ್ಕೆ ಪ್ರಮೋದ್ ಮುತಾಲಿಕ್, ದಿನೇಶ್ ಮೆಂಡನ್, ವಿಲಾಸ್ ನಾಯಕ್ ಸೇರಿದಂತೆ ಹಲವರಿಂದ ಬೆದರಿಕೆ ಇದ್ದು ಇವರುಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆ, ಸಂವಿಧಾನ ವಿರೋಧಿ ನಡೆ, ಮತ್ತು ಕೊಲೆ ಬೆದರಿಕೆ ಆಪಾದನೆಯ ಮೇಲೆ ಪ್ರಕರಣಗಳನ್ನು ದಾಖಲಿಸಿ ಬಂಧಿಸಬೇಕು,” ಎಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ. ಜತೆಗೆ ‘ದಲಿತರ ಸ್ವಾಭಿಮಾನಿ ನಡೆ’ಗೆ ಸೂಕ್ತ ಭದ್ರತೆ ಒದಗಿಸುವಂತೆಯೂ ಕೋರಿದ್ದಾರೆ.

ಮಾತ್ರವಲ್ಲ, ನಾಳೆಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಕನಕ ನಡೆ’ಯ ಆಯೋಜಕರ ವಿರುದ್ಧ ದೂರು ನೀಡುವಂತೆ ‘ದಲಿತ ದಮನಿತರ ಹೋರಾಟ ಸಮಿತಿ’ ಕರೆಯನ್ನೂ ನೀಡಿದೆ.

ಡಿಜಿಪಿ ಓಂಪ್ರಕಾಶ್ ಗೆ 'ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ' ನೀಡಿದ ಮನವಿ ಪತ್ರ

ಡಿಜಿಪಿ ಓಂಪ್ರಕಾಶ್ ಗೆ ‘ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ’ ನೀಡಿದ ಮನವಿ ಪತ್ರ

ಈ ಹಿನ್ನಲೆಯಲ್ಲಿ ‘ಸಮಾಚಾರ’ ಜತೆ ಸೂಲಿಬೆಲೆ, “ಅವರೂ ಬರುವುದಿದ್ದರೆ ಸಂತೋಷ. ಒಟ್ಟಾಗಿ ಸ್ವಚ್ಛ ಮಾಡುತ್ತೇವೆ,” ಎಂದು ಹೇಳಿದ್ದಾರೆ. ಈ ಮೂಲಕ ‘ಸ್ವಾಭಿಮಾನ ಜಾಥ’ವನ್ನು ಅವರು ಸ್ವಾಗತಿಸಿದ್ದಾರೆ. 23ನೇ ತಾರೀಖಿನಂದು ಉಡುಪಿಯಲ್ಲಿ ಎರಡೂ ಭಿನ್ನ ನೆಲೆಯ ವಿಚಾರಗಳು ಒಂದಾಗುವ ಸಾಧ್ಯತೆಗಳಿಗೆ ಅವರು ಮುಕ್ತ ಅಹ್ವಾನ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ‘ದಲಿತ ದಮನಿತರ ಹೋರಾಟ ಸಮಿತಿ’ಯ ಸಂಘಟಕರಲ್ಲಿ ಒಬ್ಬರಾದ ಭಾಸ್ಕರ್ ಪ್ರಸಾದ್, “ನಾವು ನಮ್ಮ ಹಕ್ಕಿಗಾಗಿ, ತುಂಡು ಭೂಮಿಗಾಗಿ ಉಡುಪಿಗೆ ಹೋಗಿ ಚಳುವಳಿ ಮಾಡಿದ್ದೇವೆ. ಮಾನವ ವಿರೋಧಿ ಪಂಕ್ತಿಬೇಧ ಖಂಡಿಸಿ, ಅದನ್ನು ನಿಲ್ಲಿಸಬೇಕು ಎಂದು ಹೇಳಿದ್ದೇವೆ. ಇದಕ್ಕೆ ನಾವು ಉಪವಾಸ ಕೂರುತ್ತೇವೆ, ಶುಚಿಗೊಳಿಸ್ತೇವೆ ಎಂದು ಹೇಳಿದರೆ ಅದನ್ನು ‘ಸಂಘಟಿತ ಅಸ್ಪೃಷ್ಯತೆಯ ಆಚರಣೆ’ ಎಂದೇ ಕರೆಯಬೇಕಾಗುತ್ತದೆ. ಅಂಬೇಡ್ಕರ್ ಭಾವ ಚಿತ್ರ ಇಟ್ಟುಕೊಂಡು, ನೀಲಿ ಬಾವುಟದ ಅಡಿಯಲ್ಲಿ ನಮ್ಮ ಹಕ್ಕುಗಳಿಗಾಗಿ ನಾವು ಹೋಗಿ ಬಂದ ಜಾಗವನ್ನು ಸ್ವಚ್ಛ ಮಾಡುತ್ತೇವೆ ಎಂದು ಹೇಳಿದರೆ ಸುಮ್ಮನೆ ಇರುವುದಕ್ಕೆ ಸಾಧ್ಯವಿಲ್ಲ,” ಎನ್ನುತ್ತಾರೆ ಅವರು.

ಇನ್ನು ಸೂಲಿಬೆಲೆ ಸ್ವಚ್ಛತಾ ಆಹ್ವಾನಕ್ಕೆ ಪ್ರತಿಕ್ರಿಯೆ ನೀಡಿದ ಅವರು “ಒಳ್ಳೆಯದು. ನಾವೂ ಆಹ್ವಾನ ಸ್ವೀಕರಿಸುತ್ತೇವೆ. ಅವರು ಈಗ ‘ಕನಕ ನಡೆ’ ಹೆಸರಿನಲ್ಲಿ ಹೊರಟಿದ್ದಾರೆ. ನಾವು ತುಂಬಾ ವಿಶ್ವಾಸ, ಪ್ರೀತಿ, ಗೌರವದಿಂದ ಕನಕನ ಮೂರ್ತಿಯನ್ನು ತರುತ್ತೇವೆ. ಅದನ್ನು ಶ್ರೀ ಕೃಷ್ಣನ ಪಕ್ಕದಲ್ಲಿ ಪ್ರತಿಷ್ಠಾಪನೆ ಮಾಡಲಿ. ಕೃಷ್ಣ ಗೊಲ್ಲ, ಕನಕ ಕುರುಬ; ಒಬ್ಬ ದನ ಕಾಯೋನು, ಇನ್ನೊಬ್ಬ ಕುರಿ ಮೇಯಿಸೋನು. ಆದರೆ ಇಬ್ಬರೂ ತಮ್ಮ ಸಾಧನೆಗಳ ಮೂಲಕ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂದು ನಂಬಿದ್ದೇವೆ. ಇಬ್ಬರನ್ನು ಒಟ್ಟಿಗೆ ಪ್ರತಿಷ್ಠಾಪನೆ ಮಾಡಲಿ. ಆಗ ಎಲ್ಲವೂ ಶುದ್ಧ ಆಗ್ತದೆ. ರಸ್ತೆ ಶುದ್ಧವಾಗುವುದಕ್ಕಿಂತ ಮನಸ್ಸು ಶುದ್ಧವಾಗಬೇಕು,” ಎಂದರು ಭಾಸ್ಕರ್ ಪ್ರಸಾದ್.

‘ಕನಕ ನಡೆ’ಗ ರಾಘವೇಶ್ವರ ಬೆಂಬಲ:

ಚಲೋ ಉಡುಪಿ ಹಿನ್ನಲೆಯಲ್ಲಿ ನಡೆಯುತ್ತಿರುವ ‘ಕನಕ ನಡೆ’ಗ ವಿವಾದಿತ ಸ್ವಾಮಿ ರಾಮಚಂದ್ರಾಪುರ ಮಠದ ರಾಘವೇಶ್ವರ ಬೆಂಬಲ ಸೂಚಿಸಿದ್ದಾರೆ. ತಮ್ಮ ಮಠದಿಂದ ಕನಕ ನಡೆಗೆ ಸಂಪೂರ್ಣ ಬೆಂಬಲ ಇರುವುದಾಗಿ ವೀಡಿಯೋ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ. ಹೀಗಾಗಿ, ‘ಯುವ ಬ್ರಿಗೇಡ್’ ನಡೆಸುತ್ತಿರುವ ಕನಕ ನಡೆಯ ದಿನದಂದು ಉಡುಪಿಯಲ್ಲಿ ನಡೆಯಲಿರುವ ಬೆಳವಣಿಗೆಗಳು ಸಹಜವಾಗಿಯೇ ಕುತೂಹಲ ಮೂಡಿಸಿವೆ.

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top