An unconventional News Portal.

21ದಿನದ ಮಳೆಗೆ 150ಕ್ಕೂ ಹೆಚ್ಚು ಸಾವು; ಮೇಘಧಾರೆಗೆ ಉತ್ತರ ತತ್ತರ; ನಮ್ಮಲ್ಲಿ ನಿರುತ್ತರ!

21ದಿನದ ಮಳೆಗೆ 150ಕ್ಕೂ ಹೆಚ್ಚು ಸಾವು; ಮೇಘಧಾರೆಗೆ ಉತ್ತರ ತತ್ತರ; ನಮ್ಮಲ್ಲಿ ನಿರುತ್ತರ!

ಉತ್ತರ ಭಾರತ ಜಲಾವೃತವಾಗಿದೆ. ಮೂರು ವಾರಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಅಸ್ಸಾಂ ಮತ್ತು ಬಿಹಾರ ಕೊಚ್ಚಿ ಹೋಗಿದೆ. ಈವರೆಗೆ 150ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು ಪರಿಸ್ಥಿತಿ ಕೈಮೀರುತ್ತಿದೆ.

ಉತ್ತರ ಭಾರತ ಸುತ್ತ ಮುತ್ತ ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.  ಒಟ್ಟಾರೆ ಈ ವರೆಗೆ ಮಳೆ ಸಂಬಂಧಿತ ಅವಘಡಗಳಿಂದ 152 ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಹದಿಂದಾಗಿ ಲಕ್ಷಾಂತರ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ನಡುಗಡ್ಡೆಯಾದ ಅಸ್ಸಾಂ

ಈಶಾನ್ಯ ರಾಜ್ಯ ಅಸ್ಸಾಂ ಮಳೆಯಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದು ಈವರೆಗೆ 34 ಜನ ಅಸುನೀಗಿದ್ದಾರೆ. 11 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಒಟ್ಟು 37 ಲಕ್ಷ ಜನ ಮಳೆಯಿಂದ ಸಮಸ್ಯೆಗೆ ಸಿಲುಕಿದ್ದಾರೆ.

ಅಸ್ಸಾಂನ ಜೀವ ನದಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಜೀವಹಾನಿ ಉಂಟು ಮಾಡಿದೆ. ಪ್ರವಾಹದಿಂದಾಗಿ ಗದ್ದೆಗಳೆಲ್ಲಾ ಮುಳುಗಿ ಹೋಗಿದ್ದು, ಬೆಳೆ ಹಾನಿ ಸಂಭವಿಸಿದೆ. ಪ್ರವಾಹಕ್ಕೆ ಜನರೊಂದಿಗೆ, ದೊಡ್ಡ ಸಂಖ್ಯೆಯಲ್ಲಿ ಜಾನುವಾರುಗಳೂ ಕೊಚ್ಚಿ ಹೋಗಿವೆ.

ಲಕ್ಷಾಂತರ ಜನ ನಿರಾಶ್ರಿತರಾಗಿದ್ದು 500 ಕ್ಕೂ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಸಂಪರ್ಕ ರಸ್ತೆಗಳೆಲ್ಲಾ ನೀರಿನಲ್ಲಿ ಮುಳುಗಿದ್ದು, ಕೆಲವು ಪ್ರದೇಶಗಳು ನಡುಗಡ್ಡೆಗಳಾಗಿ ಮಾರ್ಪಟ್ಟಿವೆ.

ಇಲ್ಲಿನ ಕಾಜೀರಂಗ ಅಭಯಾರಣ್ಯದ ಶೇಕಡಾ 80 ಭಾಗ ನೀರಿನಲ್ಲಿ ಮುಳುಗಿದ್ದು ಇಲ್ಲಿರುವ ಪ್ರಾಣಿಗಳು ಎತ್ತರದ ಸ್ಥಳಗಳಿಗೆ ಹೋಗಿ ಜೀವ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಈವರೆಗೆ 100 ಕ್ಕೂ ಹೆಚ್ಚು ಪ್ರಾಣಿಗಳು ಸತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಾರ್ಕಿನಲ್ಲಿ ವಿಶ್ವದಲ್ಲೇ ಅಪರೂಪದ ಪ್ರಾಣಿಗಳಾದ ಒಂಟಿ ಕೊಂಬಿನ 17 ಘೇಂಡಾಮೃಗಗಳೂ ಪ್ರಾಣ ತೆತ್ತಿವೆ. ಅಧಿಕಾರಿಗಳು ಪ್ರಾಣಿಗಳ ರಕ್ಷಣೆಗೆ ಒದ್ದಾಡುತ್ತಿದ್ದಾರೆ.North Flood

ವಿಕೋಪದಲ್ಲಿ ಉತ್ತರ ಭಾರತ

ಅಸ್ಸಾಂ ಮಾತ್ರವಲ್ಲದೇ ಹಿಮಾಚಲ ಪ್ರದೇಶ, ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಮಳೆ ಅಪಾರ ಹಾನಿ ಉಂಟು ಮಾಡಿದೆ. ಮುಖ್ಯವಾಗಿ ಕೃಷಿ ಭೂಮಿ ಮತ್ತು ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

ಈ ರಾಜ್ಯಗಳಿಗೆ ಸೇರಿದ ಘಾಗ್ರಾ, ಭಾಗಮತಿ, ಕೊಶಿ, ಮಹಾನಂದ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 3.39 ಲಕ್ಷ ಹೆಕ್ಟೇರ್ ಭೂಮಿಯನ್ನು ಇವು ನುಂಗಿ ನೀರು ಕುಡಿದಿವೆ.

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿಗೆ ಈವರೆಗೆ 26ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ ಸುಮಾರು 27.5 ಲಕ್ಷ ಜನ ಮಳೆಯಿಂದಾಗಿ ತೊಂದರೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. 12 ಜಿಲ್ಲೆಗಳಲ್ಲಿ ಮಳೆ ಪ್ರವಾಹ ಸೃಷ್ಟಿಸಿದ್ದು, ಬಿಹಾರ ಸರಕಾರ ಜನರನ್ನು ಎತ್ತರದ ಪ್ರದೇಶಗಳಿಗೆ ಕಳುಹಿಸುತ್ತಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಬಿಹಾರ ಮತ್ತು ಅಸ್ಸಾಂನಲ್ಲಿ ಬೀಡು ಬಿಟ್ಟಿದ್ದು ಈವರೆಗೆ 10,000 ಸಾವಿರ ಜನರನ್ನು ರಕ್ಷಿಸಲಾಗಿದೆ.

ಒಡಿಶಾದಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದ್ದು ಅಲ್ಲಿ ಮಳೆ ಮತ್ಯು ಸಿಡಿಲಿಗೆ 41 ಜನ ಸಾವನ್ನಪ್ಪಿದ್ದಾರೆ.

ಇದೇ ಮಳೆ ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿಯೂ ಜೀವ ಹಾನಿ ಮತ್ತು ಆಸ್ತಿ ಹಾನಿಗೆ ಕಾರಣವಾಗಿದೆ.

ನಮ್ಮಲ್ಲೂ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸುರಿದ ಸಣ್ಣ ಮಳೆ ಆತಂಕ ಸೃಷ್ಟಿಸಿತ್ತು. ಬೆಂಗಳೂರಿನ ಹೊರ ಭಾಗಗಳೂ ಸೇರಿ ಹಲವು ಪ್ರದೇಶಗಳು ಮುಳುಗಡೆಯಾಗಿದ್ದವು. ಕೆರೆಗಳು ಒಡೆದು ರಸ್ತೆಯಲ್ಲಿ ಮೀನು ಹಿಡಿಯುವ ಪರಿಸ್ಥಿತಿ ಬಂದಿತ್ತು. ಇದೀಗ ಬಿಬಿಎಂಪಿ ‘ಕಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು’ ಹೊರಟಿದ್ದು ಅವಸರದಲ್ಲಿ ಪರಿಹಾರ ಕಾಮಗಾರಿಗಳನ್ನು ನಡೆಸುತ್ತಿದೆ ಎಂಬ ಸುದ್ದಿ ಇದೆ. ಸಣ್ಣ ಮಳೆಗೇ ಮುಳುಗಿದ ಬೆಂಗಳೂರು, ಬಿಬಿಎಂಪಿ ಕಾಮಗಾರಿಯಿಂದಾಗಿ ಮುಂದಿನ ಮಳೆಯಲ್ಲಿ ಉಳಿಯುತ್ತಾ ನೋಡಬೇಕಷ್ಟೆ.

ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

ಚಿತ್ರ: ದಿ ಹಿಂದೂ ಹಾಗೂ ಬಿಬಿಸಿ.

Leave a comment

Top