An unconventional News Portal.

‘ಬಸ್ ಬಂದ್’: ವೃತ್ತಿಪರತೆ ಮೆರೆದ ಆಟೋ ಚಾಲಕರು; ‘ಓಲಾ’, ‘ಉಬರ್’, ‘ರೆಡ್ ಬಸ್’ಗಳಿಗೂ ದಕ್ಕದ ಲಾಭ!

‘ಬಸ್ ಬಂದ್’: ವೃತ್ತಿಪರತೆ ಮೆರೆದ ಆಟೋ ಚಾಲಕರು; ‘ಓಲಾ’, ‘ಉಬರ್’, ‘ರೆಡ್ ಬಸ್’ಗಳಿಗೂ ದಕ್ಕದ ಲಾಭ!

ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಸೋಮವಾರದ ಬಂದ್ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿತು.

ಆದರೆ ಇಂತಹ ಸಂದರ್ಭಗಳಲ್ಲಿ ‘ಸುಲಿಗೆ’ಗೆ ಇಳಿಯುತ್ತಾರೆ ಎಂದು ಈವರೆಗೆ ಆರೋಪ ಹೊತ್ತುಕೊಂಡಿದ್ದ ಆಟೋ ಚಾಲಕರು ಸಮಚಿತ್ತದ ನಡವಳಿಕೆ ಗಮನಾರ್ಹವಾಗಿತ್ತು. ‘ಸುಲಿಗೆ’ಗೆ ಅನ್ವರ್ಥ ನಾಮ ಎಂದೇ ಗುರುತಿಸಿಕೊಂಡಿದ್ದ ಆಟೋ ಚಾಲಕರು ಎಂದಿನ ದರದಲ್ಲಿ ರಿಕ್ಷಾ ಓಡಿಸಿ ಮಾನವೀಯತೆ ಮೆರೆದರೆ, ಉಳಿದ ಖಾಸಗಿ ಸಾರಿಗೆಗಳೂ ಇದೇ ದಾರಿ ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಈ ಬಾರಿಯ ಬಂದ್ ವಿಶೇಷ.

ಸೋಮವಾರ ಬೆಳಗ್ಗೆ ಬೆಂಗಳೂರಿನ ರಸ್ತೆಗಳಿಗೆ ಇಳಿದವರಿಗೆ ಬಸ್ಸುಗಳ ಬದಲಾಗಿ ಎಲ್ಲಿ ನೋಡಿದರೂ ಆಟೋಗಳೇ ಕಾಣಿಸುತ್ತಿದ್ದವು. ದೂರದೂರುಗಳಿಂದ ಬಂದು ಇಳಿಯುತ್ತಿದವರಿಗೆ ಆಟೋ ಚಾಲಕರು ಮುಗಿ ಬೀಳುತ್ತಿದ್ದ ದೃಶ್ಯಗಳು ಕಂಡು ಬಂತು.

ಬೇಡಿಕೆ ಸೃಷ್ಟಿಯಾದಾಗೆಲ್ಲಾ ಸುಲಿಗೆಗೆ ಇಳಿಯುತ್ತಾರೆ ಎಂದೇ ಕರೆಸಿಕೊಳ್ಳುತ್ತಿದ್ದ ಆಟೋ ಚಾಲಕರು ಸೋಮವಾರ ಮಾತ್ರ ಸುಲಿಗೆಯಿಂದ ಮಾರು ದೂರವೇ ಉಳಿದು ಬಿಟ್ಟರು. ಮೆಜೆಸ್ಟಿಕ್ ಸುತ್ತ ಮುತ್ತ ಗ್ರಾಹಕರಿಗೆ ಒಂದೂವರೆ ಪಟ್ಟು, ದುಪ್ಪಟ್ಟು ದರ ಏರಿಸಿದ್ದು ಬಿಟ್ಟರೆ ಉಳಿದೆಡೆ ಮಾಮೂಲಿ ದರದಲ್ಲೇ ಚಾಲಕರು ಆಟೋ ಓಡಿಸಿದರು. ಆಟೋ ಚಾಲಕರ ಈ ನಿಲುವಿಗೆ ಸಾರ್ವಜನಿಕರೂ ಪ್ರಶಂಸೆ ವ್ಯಕ್ತಪಡಿಸಿದರು. ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಸಿಲಿಕಾನ್ ಸಿಟಿ ಆಟೋ ಚಾಲಕರನ್ನು ಮುಕ್ತ ಪದಗಳಿಂದ ಶ್ಲಾಘಿಸಿದರು.

Auto KSRTC strike

ಆಟೋ ಚಾಲಕರ ಈ ನಿಲುವಿಗೆ ನಿಜವಾದ ಕಾರಣ ಮಾತ್ರ ಬೇರೆಯಾಗಿತ್ತು. ಇವತ್ತು ಎಂದಿಗಿಂತ ಸ್ವಲ್ಪ ಹೆಚ್ಚೇ ಕಮಾಯಿ ಮಾಡಬೇಕು ಎಂದು ಕೆಲವು ಆಟೋ ಚಾಲಕರು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡೇ ರಸ್ತೆಗೆ ಇಳಿದಿದ್ದರು. ಬೆಳಿಗ್ಗೆ ಸಂಜೆ ರಾತ್ರಿ ಎಂದು ಪಾಳಿಯಲ್ಲಿ ಆಟೋ ಓಡಿಸುವವರೆಲ್ಲಾ ಸೋಮವಾರ ಬೆಳಿಗ್ಗೆ ಆರು ಗಂಟೆಗೇ ಕೆಲಸಕ್ಕೆ ಹಾಜರಾಗಿದ್ದರು. ಹೀಗಾಗಿ ಹೆಚ್ಚಿನ ಆಟೋ ರಿಕ್ಷಾಗಳು ಏಕಕಾಲದಲ್ಲಿ ರಸ್ತೆಗಿಳಿದವು. ಆಟೋಗಳ ಸಂಖ್ಯೆಗೆ ತದ್ವಿರುದ್ಧವಾಗಿ ಮಾಧ್ಯಮಗಳ ವಿಪರೀತ ಪ್ರಚಾರದಿಂದಾಗಿ ಅಗತ್ಯ ಕೆಲಸಗಳಿಗಷ್ಟೇ ಜನ ಮನೆಯಿಂದ ಹೊರಬಂದರು; ರಸ್ತೆಗಿಳಿದ ಜನರ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ನಡುವೆ ಸಂಬಂಧವೊಂದು ಕಳೆದು ಹೋಯಿತು.

ಇದರಿಂದ ಬೇಡಿಕೆ ಇಲ್ಲದೇ ಅನಿವಾರ್ಯವಾಗಿ ದರ ಕಡಿಮೆ ಮಾಡಬೇಕಾಯಿತು. “ಸ್ವಲ್ಪ ಜೇಬು ತುಂಬಿಸೋಣ ಎಂದು ಬೆಳಗ್ಗೆಯೇ ಬಂದೆ. ಆದರೆ ಯಾರೂ ಆಟೋ ಹತ್ತಲು ಸಿದ್ದರಿಲ್ಲ. ನಾಲ್ಕು ಜನರಿದ್ದ ಒಬ್ಬರು ಗಿರಾಕಿಗೆ ನಿಯಮದಂತೆ ಒಂದೂವರೆ ಕೊಡಿ ಅಂದರೆ ಇಳಿದು ಹೋದರು. ಬೆಳಗ್ಗೆ ಆರು ಗಂಟೆಯಿಂದ ಕಾಯುತ್ತಿದ್ದೇನೆ. ಒಬ್ಬರೂ ಸಿಕ್ಕಿಲ್ಲ,” ಎಂದು 8 ಗಂಟೆ ಸುಮಾರಿಗೆ ಶಾಂತಿ ನಗರ ಬಸ್ ನಿಲ್ದಾಣದ ಎದುರು ಗಿರಾಕಿ ಕಾಯುತ್ತಿದ್ದ ಜಗದೀಶ್ ನಿರಾಸೆಯಿಂದ ಹೇಳುತ್ತಿದ್ದರು. “ನೋಡಿ ಎಷ್ಟು ಆಟೋಗಳಿವೆ. ಯಾವ ಆಟೋಕ್ಕೆಂದು ಜನ ಹತ್ತುತ್ತಾರೆ. ತಿಮಿಳುನಾಡಿನಿಂದ ಬರುವ ಕೆಲವೇ ಜನರಷ್ಟೇ ನಮ್ಮ ಗಿರಾಕಿಗಳು. ಆಟೋಗಳ ಜನರಿಗಿಂತ ಜಾಸ್ತಿ ಇದೆ ಎಂದರು,” ಲಾಲ್ ಬಾಗ್ ಮುಂಭಾಗ ಗ್ರಾಹಕರನ್ನು ಕಾಯುತ್ತಿದ್ದ ಇಸ್ಮಾಯಿಲ್.

ಕ್ಯಾಬ್ ಗಳದ್ದೂ ಇದೇ ಪರಿಸ್ಥಿತಿ:

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಓಲಾ ಮತ್ತು ಉಬರ್ ಗೂ ಅಂತಾ ಬೇಡಿಕೆಯೇನೂ ಇರಲಿಲ್ಲ. ಉಳಿದೆಲ್ಲಾ ದಿನಗಳಲ್ಲಿ ಬೇಡಿಕೆ ಇದೆ ಎಂಬ ಕಾರಣ್ಕಕೆ ಯದ್ವಾ ತದ್ವಾ ಸುಲಿಗೆಗೆ ಇಳಿಯುವ ಓಲಾ ಕೂಡ ಸೋಮವಾರ ಬೇಡಿಕೆ ಇಲ್ಲದೆ ನಾರ್ಮಲ್ ದರಗಳಲ್ಲೇ ಸೇವೆ ನೀಡಿದೆ. “ಮಾಮೂಲಿಯಂತೆಯೇ ಬೇಡಿಕೆ ಇದೆ, ದಿನದ ಅಂತ್ಯಕ್ಕೆ ಒಂದೆರಡು ಟ್ರಿಪ್ ಜಾಸ್ತಿ ಸಿಗಬಹುದು. ಅದರಿಂದ ಅಂತಾ ಲಾಭವೇನೂ ಇಲ್ಲ,” ಎನ್ನುವುದು ಓಲಾ ಚಾಲಕ ರಾಜಶೇಖರ್ ಅವರ ಅಭಿಪ್ರಾಯ. ಇನ್ನು ಈ ಕುರಿತು ಮಾಹಿತಿಗಾಗಿ ಓಲಾಗೆ ಕರೆ ಮಾಡಿದರೆ, “ಇವತ್ತು ಬುಕ್ಕಿಂಗ್ಗಳು ಸೋಮವಾರದ ದಿನಗಳಲ್ಲಿ ಇರುವಷ್ಟೇ ಇವೆ. ಬಹುಶಃ ಬಂದ್ ಬಿಸಿಯಿಂದ 3-4 ಶೇಕಡಾ ಜಾಸ್ತಿ ಬುಕ್ಕಿಂಗ್ ಬಂದಿರಬಹುದು,” ಎಂದು ಮಾಹಿತಿ ನೀಡಿದರು. ಸರಿಯಾದ ಚಿತ್ರಣ ದಿನದಂತ್ಯಕ್ಕೆ ಸಿಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಏರದ ಬಸ್ ದರ:

ಸರಕಾರಿ ಬಸ್ಸುಗಳಿಲ್ಲದಾಗ ಬೆಲೆಯನ್ನು ಮನಬಂದಂತೆ ಏರಿಸುವ ಖಾಸಗೀ ಬಸ್ಸುಗಳಿಗೂ ಬಂದ್ ದಿನ ದರ ಏರಿಕೆ ಮಾಡಲು ಸಾಧ್ಯವಾಗಿಲ್ಲ. ಹಲವಾರು ಬಸ್ಸುಗಳು ಹಗಲು ಸರಕಾರಿ ಕಾರ್ಮಿಕರ ಭಯದಿಂದ ರಸ್ತೆಗಿಳಿಯಲು ಹಿಂಜರಿದಿದ್ದು ಕಂಡು ಬಂತು. ಕೇವಲ ರಾತ್ರಿಗಷ್ಟೇ ಖಾಸಗಿ ಬಸ್ಸುಗಳು ಬುಕ್ಕಿಂಗ್ ಪಡೆದಿವೆ. ಆದರೆ ದಕ್ಷಿಣ ಕನ್ನಡದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಕೆಲವು ಭಾಗಗಳಿಗೆ ಉಳಿದ ದಿನಗಳಿಗಿಂತಲೂ ಕಡಿಮೆ ದರವಿದೆ.

ಹಗಲು ಬಸ್ಸು ಓಡಿಸಿದವರೂ ಭಾರೀ ದರ ಏರಿಕೆ ಮಾಡಿದ ಪ್ರಕರಣಳು ಎಲ್ಲೂ ಕೇಳಿ ಬರಲಿಲ್ಲ. ಕೆಲವೆಡೆ ಹೊರೆಯಾಗದಂತೆ ಸ್ವಲ್ಪ ಮಟ್ಟಿಗೆ ಸಹಜ ದರ ಏರಿಕೆ ಮಾಡಲಾಗಿತ್ತು. ಇನ್ನು ಆನ್ಲೈನ್ ಬುಕ್ಕಿಂಗ್ ತೆಗೆದುಕೊಳ್ಳುವ ‘ರೆಡ್ ಬಸ್’ನಲ್ಲೂ ದರಗಳು ಸಾಮಾನ್ಯವಾಗಿದ್ದವು. ಕೆಲವು ಕಡೆಗಳಲ್ಲಂತೂ ಸಾಮಾನ್ಯಕ್ಕಿಂತ ಕಡಿಮೆಯೇ ದರವಿತ್ತು.

ಬಂದ್ ಹಿನ್ನಲೆಯಲ್ಲಿ ರಸ್ತೆಗಿಳಿಯಲು ಜನ ಹಿಂದೇಟು ಹಾಕಿದ್ದೇ ಇದಕ್ಕೆಲ್ಲಾ ಕಾರಣ.

Leave a comment

Top